ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕ ಪಾರದರ್ಶಕವಾಗಿರಲಿ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕರ್ನಾಟಕದ ಲೋಕಾಯುಕ್ತ ವ್ಯವಸ್ಥೆ ಒಂದು ಮಾದರಿ ಸ್ವರೂಪದ್ದು ಎಂದು ಇತ್ತೀಚಿನವರೆಗೆ ಇಡೀ ದೇಶ ಕೊಂಡಾಡುತ್ತಿತ್ತು. ಬೇರೆ ಕೆಲವು ರಾಜ್ಯಗಳಲ್ಲಿ ಲೋಕಾಯುಕ್ತರಿದ್ದರೂ ಅವರ್ಯಾರೂ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ರೀತಿಯಲ್ಲಿ ದೇಶದ ಮನೆ ಮಾತಾಗಿರಲಿಲ್ಲ. ಅಕ್ರಮ ಗಣಿಗಾರಿಕೆ ಬಗ್ಗೆ ಅವರು ನೀಡಿದ್ದ ವರದಿಯಿಂದಾಗಿ ಮಾಜಿ ಮುಖ್ಯಮಂತ್ರಿಗಳೇ ಇಂದು ನ್ಯಾಯಾಲಯದ ಕಟಕಟೆಗೆ ಬಂದು ನಿಲ್ಲುವಂತಾಗಿದೆ. ಆದರೆ ಇದೇ ಲೋಕಾಯುಕ್ತ ವ್ಯವಸ್ಥೆ ಈಗ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಂಭ್ರಮಾಚರಣೆ ಮಾಡುವ ರೀತಿಯಲ್ಲಿ ದುರ್ಬಲಗೊಳ್ಳುತ್ತಾ ಸಾಗಿದೆ.  ಮೊದಲು ಲೋಕಾಯುಕ್ತರು, ಈಗ ಉಪಲೋಕಾಯುಕ್ತರು ರಾಜೀನಾಮೆ ನೀಡಿದ್ದಾರೆ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಸೇನಾನಿಗಳಂತಿದ್ದ ಪೊಲೀಸ್ ಅಧಿಕಾರಿಗಳಲ್ಲಿ ಬಹಳಷ್ಟು ಮಂದಿ ಈಗ ಲೋಕಾಯುಕ್ತದ ಸೇವೆಯಲ್ಲಿ ಇಲ್ಲ. ಈ ಬೆಳವಣಿಗೆಗಳು ಲೋಕಾಯುಕ್ತದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯ ಇಲ್ಲ. ಇದು ಲೋಕಾಯುಕ್ತರಿಂದಾಗಿ ಬೆತ್ತಲೆಗೊಂಡ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ಷಡ್ಯಂತ್ರ ಎಂದು ಹೇಳುವುದಕ್ಕೆ ಪುರಾವೆಗಳಿಲ್ಲ. ಆದರೆ ಲೋಕಾಯುಕ್ತ ವ್ಯವಸ್ಥೆ ದುರ್ಬಲಗೊಳ್ಳುವುದರಿಂದ ಹೆಚ್ಚಿನ ಲಾಭವಾಗಲಿರುವುದು ಈ ಎರಡು ವರ್ಗಕ್ಕೆ ಎನ್ನುವುದು ಸತ್ಯ.

ಉಪಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಗುರುರಾಜನ್ ಅವರು ರಾಜೀನಾಮೆಗೆ ಅನಾರೋಗ್ಯದ ಕಾರಣವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಆದರೆ ಅವರೇ ಬಹಿರಂಗಪಡಿಸಿರುವ ಸ್ವಂತ ಆಸ್ತಿಯ ವಿವರವನ್ನು ಪರಿಶೀಲಿಸಿದರೆ ರಾಜೀನಾಮೆಗೆ ಅನಾರೋಗ್ಯ ಮಾತ್ರ ಕಾರಣ ಇರಲಾರದು ಎಂದು ಸ್ಪಷ್ಟವಾಗುತ್ತದೆ. ಈ ರಾಜೀನಾಮೆ ತೀರಾ ಅನಿರೀಕ್ಷಿತವಾದುದು ಕೂಡಾ ಅಲ್ಲ, ನ್ಯಾ.ಶಿವರಾಜ್ ಪಾಟೀಲ್ ಅವರು ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದಾಗಲೇ ನ್ಯಾ.ಗುರುರಾಜನ್ ಅವರೂ ಪದತ್ಯಾಗ ಮಾಡಬಹುದೆಂಬ ವದಂತಿ ಹಬ್ಬಿತ್ತು. ವಿವಾದಾತ್ಮಕ ನ್ಯಾಯಾಂಗ ಇಲಾಖೆಯ ನೌಕರರ ಗೃಹನಿರ್ಮಾಣ ಸಹಕಾರ ಸಂಘದಲ್ಲಿ ನಿವೇಶನ ಹೊಂದಿರುವ ಜತೆಯಲ್ಲಿ ಬೇರೊಂದು ಗೃಹನಿರ್ಮಾಣ ಸಂಘದಲ್ಲಿ ಇನ್ನೊಂದು ನಿವೇಶನ ಹೊಂದಿರುವುದನ್ನು ಅವರೇ ಬಹಿರಂಗಪಡಿಸಿರುವುದು ಇದಕ್ಕೆ ಕಾರಣ. ನ್ಯಾಯಮೂರ್ತಿಗಳು ನೀಡಿರುವ ಸಮರ್ಥನೆಗಳೇನೇ ಇದ್ದರೂ ಇದು ಗೃಹನಿರ್ಮಾಣ ಸಂಘಗಳ ಉಪನಿಯಮಗಳ ಉಲ್ಲಂಘನೆ ಆಗಿರುವುದು ಸ್ಪಷ್ಟ. ಕಾನೂನು ಮತ್ತು ನಿಯಮಾವಳಿಗಳ ಪರಿಜ್ಞಾನ ಇರುವ ನ್ಯಾಯಮೂರ್ತಿಗಳಿಂದ ಇಂತಹ ತಪ್ಪುಗಳು ಆಗಬಾರದು.   ಲೋಕಾಯುಕ್ತ-ಉಪಲೋಕಾಯುಕ್ತರ ನೇಮಕದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಿದ್ದರೆ ಈಗಿನ ಮುಜುಗರವನ್ನು ತಪ್ಪಿಸಬಹುದಿತ್ತು. ಇಂತಹ ಪ್ರಮುಖ ಹುದ್ದೆಗಳಿಗೆ ನೇಮಕ ನಡೆಸುವಾಗ ಅರ್ಹತೆ ಮತ್ತು ಪ್ರಾಮಾಣಿಕತೆಗಳಷ್ಟೇ ಮಾನದಂಡಗಳಾಗಬೇಕು. ಈಗಿನ ಅನುಭವದಿಂದಲೂ ಸರ್ಕಾರ ಪಾಠ ಕಲಿತಂತಿಲ್ಲ. `ಲೋಕಾಯುಕ್ತರ ನೇಮಕದ ಬಗ್ಗೆ ವಿರೋಧಪಕ್ಷಗಳ ಸಲಹೆ ಪಡೆಯಬಹುದು, ಅವರ ಸಭೆ ಕರೆಯುವ ಅಗತ್ಯ ಇಲ್ಲ~ ಎನ್ನುವ ಸಂಪ್ರದಾಯ ಇರುವುದು ನಿಜ. ವಿರೋಧಪಕ್ಷಗಳ ನಾಯಕರ ಸಭೆ ಕರೆದು ಚರ್ಚೆ ನಡೆಸುವುದರಿಂದ ಸಮರ್ಥರನ್ನು ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಲು ಸಾಧ್ಯವಾಗುವುದಾದರೆ ಹಳೆಯ ಸಂಪ್ರದಾಯವನ್ನು ಯಾಕೆ ಮುರಿಯಬಾರದು? ಮಾಡುವ ಕೆಲಸ ಪಾರದರ್ಶಕವಾಗಿದ್ದಾಗ ತಪ್ಪುಗಳಾಗುವುದು ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT