ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ನಗದು ವಿರೋಧಿಸಿ ಮಹಿಳೆಯರ ಧರಣಿ

Last Updated 1 ಜನವರಿ 2013, 19:59 IST
ಅಕ್ಷರ ಗಾತ್ರ

ಕಳಸ: ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಕೇಂದ್ರ ಸರ್ಕಾರದ ನೇರ ನಗದು ಯೋಜನೆಯನ್ನು ವಿರೋಧಿಸಿ ಭಾರತೀಯ ಮಹಿಳಾ ಒಕ್ಕೂಟವು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಿತು. ನಾಡ ಕಚೇರಿ ಆವರಣದಿಂದ ಆರಂಭಗೊಂಡ ಮೆರವಣಿಗೆಯು ಕಳಸೇಶ್ವರ ಸ್ವಾಮಿ ದೇವಸ್ಥಾನದವರೆಗೆ ಸಾಗಿ ಅಂಚೆ ಕಚೇರಿ ಬಳಿ ಜಮಾಯಿಸಿತು. ಮೆರವಣಿಗೆಯುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಕೇಳಿಬಂದವು.

ಅಂಚೆ ಕಚೇರಿ ಮುಂದೆ ಎರಡು ಗಂಟೆಗಳ ಕಾಲ ಧರಣಿ ಕುಳಿತ ಪ್ರತಿಭಟನಾಕಾರರು ಆಹಾರ ಧಾನ್ಯದ ಬದಲು ಬಡ ಕುಟುಂಬಕ್ಕೆ ಹಣ ನೀಡಿದರೆ ಅದು ದುಶ್ಚಟಕ್ಕೆ ಅಥವಾ ಬೇರೆ ಉದ್ದೇಶಕ್ಕೆ ಬಳಕೆ ಆಗಬಹುದು. ಈ ಹಿನ್ನೆಲೆಯಲ್ಲಿ ಕೂಡಲೇ ಹಣ ವರ್ಗಾವಣೆ ಯೋಜನೆ ಹಿಂಪಡೆದು ಸೌಲಭ್ಯಗಳ ನೇರ ವಿತರಣೆ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಸಿಪಿಐ ಮುಖಂಡರಾದ ಗೋಪಾಲ ಶೆಟ್ಟಿ, ಅಣ್ಣಪ್ಪ, ಪೆರಿಯಸ್ವಾಮಿ, ಮಹಿಳಾ ಒಕ್ಕೂಟದ ಶಾರದಾ ಶೆಟ್ಟಿ, ಪ್ರಮೀಳಾ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು. ಚಿಕ್ಕಮಗಳೂರಿನಲ್ಲೂ ಪ್ರತಿಭಟನೆ: ಪಡಿತರ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಬೇಕು. ರಿಯಾಯಿತಿ ದರದಲ್ಲಿ ಆಹಾರ ಪದಾರ್ಥ ವಿತರಿಸುವ ವ್ಯವಸ್ಥೆ ಆರಂಭಿಸಬೇಕೆಂದು ಒತ್ತಾಯಿಸಿ  ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟದ ನೇತೃತ್ವದಲ್ಲಿ ಮಹಿಳೆಯರು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ಬಡ ಕುಟುಂಬದಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಿಯಾಯಿತಿ ದರದಲ್ಲಿ ಪಡಿತರ ವಿತರಣೆ ರದ್ದುಗೊಳಿಸುತ್ತಿರುವುದು ಜನವಿರೋಧಿ ನೀತಿ ಎಂದು ಪ್ರತಿಭಟನಾಕಾರರು ದೂರಿದರು. ಮುಖಂಡರಾದ ಬಿ.ಅಮ್ಜದ್, ಒಕ್ಕೂಟದ ಜಿಲ್ಲಾ ಅಧ್ಯಕ್ಷೆ  ರಾಧಾ ಸುಂದರೇಶ್ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದರು. ಉಪಾಧ್ಯಕ್ಷೆ ವೇದಾವತಿ, ಕಾರ್ಯದರ್ಶಿ ಇಂದುಮತಿ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT