ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ನಡೆ, ನುಡಿಯ ಬಂಗಾರಪ್ಪ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ನೇರವಾಗಿ ಮಾತನಾಡುವ ವ್ಯಕ್ತಿತ್ವವುಳ್ಳವರು. ನಿರ್ಧಾರ ಕೈಗೊಳ್ಳುವ ಮುನ್ನ ಅದರ ಲಾಭ, ನಷ್ಟ ಲೆಕ್ಕ ಹಾಕುತ್ತಿರಲಿಲ್ಲ.  ಈ ವ್ಯಕ್ತಿತ್ವ ಬಹುಶಃ ಅವರ ದೌರ್ಬಲ್ಯವೂ ಹೌದು ಎಂದು  ಮೇಲ್ಮನೆಯ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.

ಎಸ್.ಬಂಗಾರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಅವರ ಅಭಿಮಾನಿ ಬಳಗ ಮಂಗಳವಾರ ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ~ನೇರ ನಿರ್ಧಾರಗಳ ಪರಿಣಾಮವಾಗಿಯೇ ಅವರು ಪಕ್ಷಗಳನ್ನು ಬದಲಿಸಿದರು~ ಎಂದರು.

~ಸಾಕಷ್ಟು ಬಾರಿ ಅವರ ಅಭಿಮಾನಿಗಳು, ಬೆಂಬಲಿಗರು ಬಂಗಾರಪ್ಪ ಕಾಂಗ್ರೆಸ್ ಬಿಡಬಾರದಿತ್ತು ಎಂಬ ಭಾವನೆ ವ್ಯಕ್ತಪಡಿಸಿದ್ದೂ ಇದೆ. ಅದೇ ರೀತಿ ಕಾಂಗ್ರೆಸ್ ಪಕ್ಷ ಅವರಿಗೆ ನೀಡಬೇಕಿದ್ದ ಸ್ಥಾನಮಾನ ನೀಡಲಿಲ್ಲವೇನೋ ಎಂಬ ಮಾತುಗಳು ಕೇಳಿಬರುತ್ತಿವೆ~ ಎಂದು ಉಲ್ಲೇಖಿಸಿದರು.

~ಆದರೆ, ಬಂಗಾರಪ್ಪ ಅವರು ತಮ್ಮ ಕೆಲಸಗಳ ಮೂಲಕ ಜನಮಾನಸದಲ್ಲಿ ಉಳಿದರು. ಗ್ರಾಮೀಣ ಕೃಪಾಂಕ, ಆಶ್ರಯ ಯೋಜನೆಯ ಮೂಲಕ ಕಡುಬಡವರಿಗೆ ಮನೆ, ನಿವೇಶನ ಮತ್ತಿತರ ಕಾರ್ಯಕ್ರಮಗಳು ಅವರ ದೂರದೃಷ್ಟಿಗೆ    ನಿದರ್ಶನ~ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಅವರು, ~ಬಂಗಾರಪ್ಪನವರನ್ನು ಮಂಡ್ಯ ಜಿಲ್ಲೆ ಎಂದೂ ಮರೆಯದು. ಕಾವೇರಿ ನೀರಿನ ರಕ್ಷಣೆಗಾಗಿ ಸುಗ್ರೀವಾಜ್ಞೆ ಹೊರಡಿಸುವ ದಿಟ್ಟ ನಿರ್ಧಾರವನ್ನು ಅವರು ಕೈಗೊಂಡಿದ್ದರು. ಕಾವೇರಿ ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಸ್ಥಳೀಯ ಮುಖಂಡರ ಅಭಿಪ್ರಾಯಗಳನ್ನು ಪಡೆದೇ ನಿರ್ಧಾರ ಕೈಗೊಳ್ಳುತ್ತಿದ್ದರು. ಜೊತೆಗೆ, ಏತ ನೀರಾವರಿ ಯೋಜನೆಗಳು, ಕುಡಿಯುವ ನೀರು ಸೌಲಭ್ಯ ಮತ್ತಿತರ ಕ್ರಮಗಳನ್ನು ಕೈಗೊಂಡಿದ್ದರು~ ಎಂದರು.

ವಿಶ್ರಾಂತ ಪ್ರಾಧ್ಯಾಪಕ ಜಿ.ವಿ.ದಾಸೇಗೌಡ ಅವರು, ~ಅವರು ಮಾನವತಾವಾದಿ. ಎಲ್ಲರನ್ನೂ ಆತ್ಮೀಯತೆಯಿಂದ ಮಾತನಾಡಿಸುವ, ಸಾಹಿತ್ಯ ಮತ್ತು ಕ್ರೀಡೆಯ ಒಡನಾಟ ಇಟ್ಟುಕೊಂಡಿದ್ದವರು~ ಎಂದರು.

ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್, ಮಾಜಿ ಅಧ್ಯಕ್ಷರಾದ ವಿಜಯಲಕ್ಷ್ಮಿ, ಹೊನ್ನಯ್ಯ, ಸದಸ್ಯ ಶ್ರೀಧರ್, ಸಿ.ಎಂ.ದ್ಯಾವಪ್ಪ, ಮೈಷುಗರ್ ಮಾಜಿ ಅಧ್ಯಕ್ಷ ಹಾಲಹಳ್ಳಿ ರಾಮಲಿಂಗಯ್ಯ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT