ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ಹಣಾಹಣಿ ನಡುವೆ ಹೆಗಲೇರಿದ ಸೋಲು

Last Updated 10 ಏಪ್ರಿಲ್ 2013, 6:38 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಚುರುಕುಗೊಂಡಿದೆ. ಈಗಾಗಲೇ, ಅಧಿಕೃತವಾಗಿ ಪಕ್ಷದಿಂದ ಹೆಸರು ಘೋಷಣೆಯಾಗಿರುವ ಅಭ್ಯರ್ಥಿಗಳು ಹಾಗೂ ಪಕ್ಷೇತರರಾಗಿ ಕಣಕ್ಕೆ ಇಳಿಯುವ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಭಿಕ್ಷೆ ಕೇಳುತ್ತಿದ್ದಾರೆ.

ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿಗಳು ಪ್ರಚಾರಕ್ಕೆ ಇಳಿಯುವುದು ಸಾಮಾನ್ಯ. ಇದಕ್ಕೆ ಅವರ ಹಿಂಬಾಲಕರ ಬೆಂಬಲವೂ ಇರುತ್ತದೆ. ಆದರೆ, ಎಲ್ಲ ಪ್ರಯೋಗ ಬಳಸಿ ಗೆಲುವಿನ ಸನಿಹ ಬಂದರೂ ಕೆಲವೊಮ್ಮೆ ವಿಜಯಲಕ್ಷ್ಮೀ ಮಾತ್ರ ಕೆಲವರಿಗೆ ಚಂಚಲೆಯಾಗುತ್ತಾಳೆ. ನೇರ ಪೈಪೋಟಿ ನೀಡಿದರೂ ಕೊನೆಯಲ್ಲಿ ಸೋಲು ಹಿಂಬಾಲಿಸುತ್ತದೆ. ಸದ್ಯದ ಮಟ್ಟಿಗೆ ಕನಿಷ್ಠ 10 ಸಾವಿರಕ್ಕಿಂತಲೂ ಹೆಚ್ಚು ಮತ ಪಡೆದು ಗೆಲ್ಲುವುದು ಅಭ್ಯರ್ಥಿಯೊಬ್ಬನ ವರ್ಚಸ್ಸಿಗೆ ಕನ್ನಡಿ ಹಿಡಿಯುತ್ತದೆ.

ಕಡಿಮೆ ಅಂತರದಿಂದ ಜಯಗಳಿಸಿದ ಅಭ್ಯರ್ಥಿಗಳಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡು ವುದಿಲ್ಲ ಎಂದು ಚುನಾವಣಾ ಪೂರ್ವದಲ್ಲಿ ಕೆಲವು ರಾಜಕೀಯ ಪಕ್ಷಗಳು ಘೋಷಿಸಿದ್ದವು. ಆದರೆ, ಅಂತಿಮ ಹಂತದಲ್ಲಿ ಈ ನಿರ್ಧಾರ ಮೂಲೆಗೆ ಸರಿದಿದೆ. ಕೆಲವು ಬಾರಿ ಅಭ್ಯರ್ಥಿಗಳು ಭಾರೀ ಪೈಪೋಟಿ ನೀಡಿದರೂ ಗೆಲುವು ಅವರಿಗೆ ಒಲಿಯುವುದೇ ಇಲ್ಲ.

ಕಳೆದ 6 ದಶಕದ ಜಿಲ್ಲೆಯ ರಾಜಕೀಯ ಇತಿಹಾಸವನ್ನು ಇಣುಕಿ ನೋಡಿದರೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋತು ಕಂಡಿರುವ 15 ಉದಾಹರಣೆ ಸಿಗುತ್ತವೆ. ರಾಜ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಕೆ.ಎಸ್. ನಾಗರತ್ನಮ್ಮ, ಮಾಜಿ ಸಚಿವ ಎಚ್. ನಾಗಪ್ಪ ಕೂಡ ಕಡಿಮೆ ಮತಗಳ ಅಂತರದಿಂದ ಸೋತಿರುವ ನಿದರ್ಶನವಿದೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರಿಗೂ ಮತದಾರರು ಬಿಸಿಮುಟ್ಟಿಸಿದ್ದಾರೆ.

1952ರ ಪ್ರಥಮ ಚುನಾವಣೆಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರ ಎಲ್ಲರ ಕೇಂದ್ರಬಿಂದುವಾಗಿತ್ತು. ಪ್ರಜಾ ಸಮಾಜವಾದಿ ಪಕ್ಷದಿಂದ ಯು.ಎಂ. ಮಾದಪ್ಪ ಹಾಗೂ ಪಕ್ಷೇತರರಾಗಿ ಎಂ.ಸಿ. ಬಸಪ್ಪ ಅದೃಷ್ಟ ಪರೀಕ್ಷೆಗೆ ಇಳಿದರು. ಇಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಮಾದಪ್ಪ 7,509 ಮತ ಪಡೆದರು. 5,263 ಮತ ಪಡೆದ ಬಸಪ್ಪ, 2,246 ಮತಗಳ ಅಂತರದಿಂದ ಸೋಲು ಅನುಭವಿಸಿದರು.

1957ರ ಚುನಾವಣೆಯಲ್ಲಿ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಕಂಡುಬರಲಿಲ್ಲ. 1962ರ ಚುನಾವಣೆಯಲ್ಲಿ ಪಾಳ್ಯ ಕ್ಷೇತ್ರದಲ್ಲಿ(ಈಗ ಹನೂರು) ಜಿ. ವೆಂಕಟೇಗೌಡ ಮತ್ತು ಎಚ್. ನಾಗಪ್ಪ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಪಕ್ಷೇತರರಾಗಿ ಕಣಕ್ಕೆ ಇಳಿ ದಿದ್ದ ವೆಂಕಟೇಗೌಡ 19,132 ಮತ ಪಡೆದರು. ಪ್ರತಿಸ್ಪರ್ಧಿ ಯಾಗಿದ್ದ ನಾಗಪ್ಪ(ಕಾಂಗ್ರೆಸ್) 19,065 ಮತ ಪಡೆದರು. ಕೇವಲ 67 ಮತಗಳ ಅಂತರದಿಂದ ಸೋಲಿನ ರುಚಿಕಂಡರು. ಈ ಫಲಿತಾಂಶ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಇದೇ ಚುನಾವಣೆಯಲ್ಲಿಯೇ ಸಂತೇಮರಹಳ್ಳಿ ಮೀಸಲು ಕ್ಷೇತ್ರದಲ್ಲಿ ಬಿ. ರಾಚಯ್ಯ(ಕಾಂಗ್ರೆಸ್) ಹಾಗೂ ಬಿ. ಬಸವಯ್ಯ(ಪಿಎಸ್‌ಪಿ) ನಡುವೆ ನೇರ ಸ್ಪರ್ಧೆಯಿತ್ತು. ರಾಚಯ್ಯ 16,796 ಮತ ಪಡೆದು ಜಯಗಳಿಸಿದರು. ಬಸವಯ್ಯ 14,240 ಮತಗಳಿಸಿ, 2,556 ಮತಗಳ ಅಂತರದಿಂದ ಸೋಲು ಅನುಭವಿಸಿದರು.

ಆ ವೇಳೆ ಗುಂಡ್ಲುಪೇಟೆ ಕ್ಷೇತ್ರದಲ್ಲೂ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ.ಎಸ್. ನಾಗರತ್ನಮ್ಮ ಹಾಗೂ ಎಚ್.ಕೆ. ಶಿವರುದ್ರಪ್ಪ(ಕಾಂಗ್ರೆಸ್) ಅವರ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿತ್ತು. ನಾಗರತ್ನಮ್ಮ 22,765 ಮತ ಪಡೆದರು. ಶಿವರುದ್ರಪ್ಪಗೆ 20,010 ಮತ ಬಿದ್ದವು. 2,755 ಮತಗಳ ಅಂತರದಿಂದ ಸೋಲು ಒಪ್ಪಿಕೊಂಡರು.

1967ರ ಚುನಾವಣೆಯಲ್ಲಿ ಹನೂರು ಕ್ಷೇತ್ರದಲ್ಲಿ ಎಚ್. ನಾಗಪ್ಪ(ಕಾಂಗ್ರೆಸ್) ಮತ್ತು ಜಿ. ವೆಂಕಟೇಗೌಡ(ಪಕ್ಷೇತರ) ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ನಾಗಪ್ಪ 22,939 ಮತ ಪಡೆದು ಶಾಸನಸಭೆ ಪ್ರವೇಶಿಸಿದರು. ವೆಂಕಟೇಗೌಡ ಪಡೆದ ಮತಗಳ ಸಂಖ್ಯೆ 21,113. ಕೇವಲ 1,826 ಮತಗಳ ಅಂತರದಿಂದ ಸೋಲುಕಂಡರು.

ಇದೇ ಚುನಾವಣೆಯಲ್ಲಿಯೇ ಕೊಳ್ಳೇಗಾಲ ಕ್ಷೇತ್ರದಲ್ಲೂ ಬಿ. ಬಸವಯ್ಯ(ಕಾಂಗ್ರೆಸ್) ಹಾಗೂ ಎಂ. ಸಿದ್ದಮಾದಯ್ಯ ಅವರ ನಡುವಿನ ಕದನ ಕುತೂಹಲ ಮೂಡಿಸಿತ್ತು. ಬಸವಯ್ಯ 16,893 ಮತಗಳಿಸಿ ಜಯಗಳಿಸಿದರು. ಸಿದ್ದಮಾದಯ್ಯ 14,097 ಮತ ಪಡೆದರು. 2,796 ಮತಗಳ ಅಂತರದಿಂದ ಸೋಲು ಅನುಭವಿಸಿದರು.

ಆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲೂ ನೇರ ಸ್ಪರ್ಧೆ ಏರ್ಪಟ್ಟಿತ್ತು. ಎಸ್. ಪುಟ್ಟಸ್ವಾಮಿ(ಪಕ್ಷೇತರ) 17,948 ಮತ ಪಡೆದು ಜಯಗಳಿಸಿ ಶಾಸನಸಭೆ ಪ್ರವೇಶಿ ಸಿದರು. ಕೇವಲ 1,262 ಮತಗಳ ಅಂತರದಿಂದ ಎಂ.ಸಿ. ಬಸಪ್ಪ(ಕಾಂಗ್ರೆಸ್) ಸೋಲು ಅನುಭವಿಸಿದರು. ಅವರಿಗೆ ಬಿದ್ದ ಮತಗಳ ಸಂಖ್ಯೆ 16,686.

1972ರ ಚುನಾವಣೆಯಲ್ಲೂ ಮತ್ತೆ ಎಸ್. ಪುಟ್ಟಸ್ವಾಮಿ ಮತ್ತು ಎಂ.ಸಿ. ಬಸಪ್ಪ ನಡುವೆ ನೇರ ಹಣಾಹಣಿ ನಡೆಯಿತು. ಪುಟ್ಟಸ್ವಾಮಿ 24,218 ಮತ ಪಡೆದರು. ಹಿಂದಿನ ಚುನಾವಣೆಗಿಂತಲೂ ತುಸು ಹೆಚ್ಚಿನ ಮತ ಪಡೆದು ಪುನರಾಯ್ಕೆಯಾದರು. 1,454 ಮತಗಳ ಅಂತರದಿಂದ ಸೋತ ಬಸಪ್ಪ 22,764 ಮತಕ್ಕೆ ತೃಪ್ತಿಪಟ್ಟರು.

1978ರ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಲ್ಲಿ ಎಂ. ಮಾದಯ್ಯ ರಾಮಸಮುದ್ರ(ಕಾಂಗ್ರೆಸ್-ಇಂದಿರಾ) ಹಾಗೂ ಎಸ್.ಎಂ. ಸಿದ್ದಯ್ಯ(ಜನತಾಪಕ್ಷ) ನಡುವೆ ನೇರ ಸ್ಪರ್ಧೆ ಇತ್ತು. ಮಾದಯ್ಯ 23,026 ಮತ ಪಡೆದು ಜಯಭೇರಿ ಬಾರಿಸಿದರು. ಸಿದ್ದಯ್ಯ 21,398 ಮತಗಳಿಗೆ ತೃಪ್ತಿಪಟ್ಟರು. 1,628 ಮತಗಳಿಂದ ಸೋಲು ಅನುಭವಿಸಿದರು.

ಆ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಲ್ಲೂ ಎಚ್.ಕೆ. ಶಿವರುದ್ರಪ್ಪ ಹಾಗೂ ಕೆ.ಎಸ್. ನಾಗರತ್ನಮ್ಮ ಅವರ ನಡುವೆ ಸಮಬಲದ ಸ್ಪರ್ಧೆ ಏರ್ಪಟ್ಟಿತ್ತು. ಈ ಇಬ್ಬರು ಪಕ್ಷೇತ ರರಾಗಿಯೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಅಂತಿಮವಾಗಿ ಶಿವರುದ್ರಪ್ಪ 27,141 ಮತ ಪಡೆದು ಜಯಗಳಿಸಿದರು. ಕೇವಲ 271 ಮತಗಳ ಅಂತರದಿಂದ ಸೋಲು ಅನುಭವಿಸಿದ ನಾಗರತ್ನಮ್ಮ 26,870 ಮತಗಳಿಗೆ ತೃಪ್ತಿಪಟ್ಟರು.

1983ರ ಚುನಾವಣೆಯಲ್ಲಿ ಹನೂರು ಕ್ಷೇತ್ರದಲ್ಲಿ ಕೆ.ಪಿ. ಶಾಂತಮೂರ್ತಿ(ಕಾಂಗ್ರೆಸ್) ಮತ್ತು ಜಿ. ರಾಜೂಗೌಡ (ಪಕ್ಷೇತರ) ನಡುವೆ ನೇರ ಸ್ಪರ್ಧೆ ಏರ್ಪಟ್ಟಿತು. ಶಾಂತಮೂರ್ತಿ 31,357 ಮತ ಪಡೆದರು. ರಾಜೂಗೌಡಗೆ 29,951 ಮತಬಿದ್ದವು. ಕೇವಲ 1,406 ಮತಗಳ ಅಂತರದಿಂದ ಅವರು ಸೋಲು ಅನುಭವಿಸಿದರು.

1985ರ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿ. ಬಸವಯ್ಯ(ಜನತಾಪಕ್ಷ) ಹಾಗೂ ಎಂ. ಸಿದ್ದಮಾದಯ್ಯ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿತು. ಬಸವಯ್ಯ 1,112 ಮತಗಳ ಅಂತರದಿಂದ ಜಯಗಳಿಸಿದರು. ಅವರು ಪಡೆದ ಮತಗಳ ಸಂಖ್ಯೆ 27,149. ಸೋಲು ಅನುಭವಿಸಿದ ಸಿದ್ದಮಾದಯ್ಯ 26,037 ಮತ ಪಡೆದರು.

1989, 1994 ಹಾಗೂ 1999ರ ಚುನಾವಣೆಯಲ್ಲಿ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಕಂಡುಬರಲಿಲ್ಲ. 2004ರ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆರ್. ಧ್ರುವನಾರಾಯಣ(ಕಾಂಗ್ರೆಸ್) ಕೇವಲ ಒಂದು ಮತದ ಅಂತರದಿಂದ ಜಯಭೇರಿ ಬಾರಿಸಿದರು. ಆಗ ಅವರಿಗೆ ಬಿದ್ದಿದ್ದ ಮತಗಳ ಸಂಖ್ಯೆ 40,752. ಪ್ರತಿಸ್ಪರ್ಧಿಯಾಗಿದ್ದ ಎ.ಆರ್. ಕೃಷ್ಣಮೂರ್ತಿ(ಜೆಡಿಎಸ್) 40,751 ಮತ ಪಡೆದು ವಿರೋಚಿತ ಸೋಲುಕಂಡರು.

2008ರ ಚುನಾವಣೆಯಲ್ಲಿ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಮಾತ್ರ ನೇರ ಹಣಾಹಣಿ ಏರ್ಪಟ್ಟಿತು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಎಚ್.ಎಸ್. ಮಹದೇವಪ್ರಸಾದ್(ಕಾಂಗ್ರೆಸ್) 64,824 ಮತ ಪಡೆದು ಜಯಗಳಿಸಿದರು. ಅವರಿಗೆ ಪ್ರಬಲ ಪೈಪೋಟಿ ನೀಡಿದ ಸಿ.ಎಸ್. ನಿರಂಜನ್‌ಕುಮಾರ್(ಬಿಜೆಪಿ) 62,621 ಮತ ಪಡೆದರು. ಕೇವಲ 2,203 ಮತಗಳ ಅಂತರದಿಂದ ಸೋಲುಂಡರು.

ಚಾಮರಾಜನಗರ ಕ್ಷೇತ್ರದಲ್ಲಿ ಸಿ. ಪುಟ್ಟರಂಗಶೆಟ್ಟಿ(ಕಾಂಗ್ರೆಸ್) ಹಾಗೂ ಎಂ. ಮಹದೇವು(ಬಿಜೆಪಿ) ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಒಟ್ಟು 42,017 ಮತ ಪಡೆದ ಪುಟ್ಟರಂಗಶೆಟ್ಟಿ 2,612 ಮತಗಳ ಅಂತರದಲ್ಲಿ ಜಯಗಳಿಸಿ ಮೊದಲ ಬಾರಿಗೆ ಶಾಸನಸಭೆ ಪ್ರವೇಶಿಸಿದರು. ಮಹದೇವು 39,405 ಮತ ಪಡೆದು ಸೋಲುಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT