ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರನೇಮಕಾತಿ:ಆರೋಗ್ಯ ಇಲಾಖೆ ಡಿ ಗ್ರೂಪ್ ನೌಕರರ ಪ್ರತಿಭಟನೆ

Last Updated 14 ಜೂನ್ 2012, 7:05 IST
ಅಕ್ಷರ ಗಾತ್ರ

ಹಾವೇರಿ: ಆರೋಗ್ಯ ಇಲಾಖೆಯಲ್ಲಿ `ಡಿ~ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸಿದ ನೌಕರರಿಗೆ ನೇರ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು. ಇತರ ಎಲ್ಲ ಸೇವೆಗಳ ಹೊರಗುತ್ತಿಗೆ ರದ್ದುಪಡಿಸಿ ನೌಕರರಿಗೆ ಸೇವಾ ಭದ್ರತೆ, ಸಾಮಾಜಿಕ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ರಾಜ್ಯ ಸಂಯುಕ್ತ ಆರೋಗ್ಯ ಇಲಾಖೆ `ಸಿ~ ಮತ್ತು `ಡಿ~ ಗ್ರೂಪ್ ಗುತ್ತಿಗೆ ನೌಕರರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಆಸ್ಪತ್ರೆಯಿಂದ ಮೆರವಣಿಗೆ ಆರಂಭಿಸಿದ ಜಿಲ್ಲೆಯ `ಡಿ~ಗ್ರೂಪ್ ನೌಕರರು.ರಾಜ್ಯ ಸರ್ಕಾರದ ನೌಕರರ ವಿರೋಧಿ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ  ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರವಿ ಪಿ.ಕೊಂಡಿ ಮಾತನಾಡಿ, ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯಲ್ಲಿ 2,323 ಗ್ರೂಪ್ `ಡಿ~ ಹುದ್ದೆಗಳನ್ನು ನೇರ ನೇಮಕ ಮಾಡಲು ಮುಂದಾಗಿರುವುದು ಈಗಾಗಲೇ ಸೇವೆಯಲ್ಲಿರುವ ನೌಕರರ ನಿದ್ದೆಗೆಡಿಸಿದೆ ಎಂದರು.

ನೇರ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಈಗಾಗಲೇ ಸೇವೆಯಲ್ಲಿರುವ ನೌಕರರಿಗೆ ಆದ್ಯತೆ ನೀಡಬೇಕು. ಜತೆಗೆ ವಿದ್ಯಾರ್ಹತೆ, ವಯೋಮಿತಿ ಇತ್ಯಾದಿ ನಿರ್ಬಂಧಗಳನ್ನು ಸಡಿಲಿಸಬೇಕು. ಇಲ್ಲವಾದರೆ, ನೇರ ನೇಮಕಾತಿ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈಗಿರುವ ಅಲ್ಪವೇತನದ ಬದಲಿಗೆ ಐಎಲ್‌ಓ ಮಾನದಂಡದಂತೆ ಜೀವನಯೋಗ್ಯ ವೇತನವನ್ನು ಕನಿಷ್ಠ 10 ಸಾವಿರಕ್ಕಿಂತ ಕಡಿಮೆ ಇರದಂತೆ ನಿಗದಿಪಡಿಸಬೇಕು. ಜೀವನಯೋಗ್ಯ ವೇತನ ನಿಗದಿಯಾಗುವವರೆಗೆ ಕನಿಷ್ಠ ವೇತನವನ್ನು ಕಟ್ಟು ನಿಟ್ಟಿನಿಂದ ಜಾರಿಗೊಳಿಸಬೇಕು.

ವೇತನ, ಭವಿಷ್ಯನಿಧಿ ನೇರವಾಗಿ ನೌಕರ ಖಾತೆಗೆ ಜಮೆಯಾಗಬೇಕು. ವಾರಕ್ಕೊಂದು ರಜೆ, ಪ್ರಾಸಂಗಿಕ ರಜೆ, ವೈದ್ಯಕೀಯ ರಜೆ ಹಾಗೂ ಹೆರಿಗೆ ರಜೆ ಕಡ್ಡಾಯಗೊಳಿಸಬೇಕು. ಕೆಲಸದ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಬೇಕು. ಹೆಚ್ಚುವರಿ ಅವಧಿಯ ಸೇವೆಗೆ ಹೆಚ್ಚುವರಿ ವೇತನ (ಓಟಿ) ನೀಡಬೇಕು. ಎಲ್ಲ ನೌಕರರಿಗೆ ಕಡ್ಡಾಯವಾಗಿ ಉಚಿತ ಸಮವಸ್ತ್ರ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಎಲ್ಲ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ರಾಜ್ಯ ಸರ್ಕಾರಕ್ಕೆ ಐದು ದಿನಗಳ ಗಡುವು ನೀಡಿದ್ದು, ಅಷ್ಟರಲ್ಲಿ ಬೇಡಿಕೆ ಈಡೇರಿಸದಿದ್ದರೆ, ಜೂ. 18 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಅದರಲ್ಲಿ ಜಿಲ್ಲೆಯ ಎಲ್ಲ ನೌಕರರು ಭಾಗವಹಿಸಿ ಬೆಂಬಲ ನೀಡಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರು ಪುಟ್ಟಪ್ಪನವರ, ಖಜಾಂಚಿ ಹನುಮಂತ ನೆಗಳೂರು, ಕೇಶವಮೂರ್ತಿ ಕೆ.ಎನ್. ಅಂಬರ್‌ಖಾನ್ ಪಠಾಣ, ಯಾನೂಷ್ ಪಠಾಣ, ಗೀತಾ ಹುರಳಿಕೊಪ್ಪಿ, ತಿರಕಮ್ಮ ಹಚ್ಚಿಗೇರಿ, ಗೌರಮ್ಮ ಮಂತ್ರಿ, ಗೀತಾ ನಾರಾಯಣ ಮಲ್ಲೂಲ ಅಲ್ಲದೇ ನೂರಕ್ಕೂ ಹೆಚ್ಚು ನೌಕರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT