ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜವಾಗಿರಲಿ ವ್ಯಕ್ತಿತ್ವ

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಶಿಕ್ಷಣ ಎಂದರೆ ಕೇವಲ ಪಾಠ ಕಲಿಸುವುದಲ್ಲ, ಜ್ಞಾನಾ­ರ್ಜ­ನೆಯೂ ಅಲ್ಲ. ಬದಲಾಗಿ ಸೂಕ್ತ ಪರಿಪೂರ್ಣ ವ್ಯಕ್ತಿಗಳನ್ನು ರೂಪಿಸುವುದೇ ಆಗಿದೆ. ಈ ಪರಿಪೂರ್ಣತೆಯನ್ನು ಪಡೆಯಲು ನಾವು ಕೇವಲ ಅಕ್ಷರಸ್ಥರಾಗಿದ್ದರೆ ಸಾಲದು. ನಮ್ಮ ಮೂಲಭೂತ ವ್ಯಕ್ತಿತ್ವವನ್ನು ವಿಕಸಿತಗೊಳಿಸಿಕೊಳ್ಳ ಬೇಕಾಗುತ್ತದೆ.

ಇತ್ತೀಚೆಗೆ ವ್ಯಕ್ತಿತ್ವ ವಿಕಸನದ ಪುಸ್ತಕಗಳ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಆದರೆ ಅನೇಕ ಬಾರಿ ವಯಸ್ಕರಿಗೇ ಇದರ ಬಗ್ಗೆ ಸರಿಯಾಗಿ ಗೊತ್ತಿರುವುದಿಲ್ಲ. ವ್ಯಕ್ತಿತ್ವ ಎಂದರೆ ಏನು, ಅದನ್ನು ಆರೋಗ್ಯಕರ ರೀತಿಯಲ್ಲಿ ರೂಪಿಸಿಕೊ­ಳ್ಳುವುದು ಹೇಗೆ ಎಂಬ ಬಗ್ಗೆ ಸಹಜ ಕುತೂಹಲ ಎಲ್ಲರಲ್ಲೂ ಇರುತ್ತದೆ.

ವ್ಯಕ್ತಿತ್ವ ಎಂದರೆ...
ವ್ಯಕ್ತಿತ್ವ ಎಂದರೆ ಒಬ್ಬ ವ್ಯಕ್ತಿಯ ಹೊರ ರೂಪ ಅಷ್ಟೇ ಅಲ್ಲ, ಅವರ ಕಾರ್ಯಶೀಲತೆ, ನಡೆ – ನುಡಿ, ಪರಿಸರದ ಪ್ರಚೋದ­ನೆ­ಗಳಿಗೆ ಅವರು ಸ್ಪಂದಿಸುವ ರೀತಿ, ಅವರ ಉದ್ದೇಶ­ಗಳು, ಆ ಉದ್ದೇಶ ಸಾಧನೆಗಾಗಿ ಅನುಸರಿಸುವ ಮಾರ್ಗ, ವಿಧಾನಗಳು, ಜೀವನಶೈಲಿ, ಇತರರ ಬಗ್ಗೆ ಅವರ ಧೋರಣೆ, ಮನಃಸ್ಥಿತಿ, ಅವರ ನಿಲುವು, ಆಚರಣೆಗಳು, ಕಷ್ಟ– ನಷ್ಟ– ಸೋಲು– ನಿರಾಸೆಗಳಿಗೆ ಒಳಗಾದಾಗ  ಪ್ರತಿಕ್ರಿಯಿಸುವ ರೀತಿ, ಸ್ವೀಕಾರ ಮನೋಭಾವ... ಇವೆಲ್ಲವೂ ಒಟ್ಟಾರೆಯಾಗಿ ‘ವ್ಯಕ್ತಿತ್ವ’ ಎನಿಸಿಕೊಳ್ಳುತ್ತದೆ. ಹೀಗಾಗಿ ಒಬ್ಬ ವ್ಯಕ್ತಿ ಮತ್ತು ಅವರ ವ್ಯಕ್ತಿತ್ವವನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ.

ಸಹಾನುಭೂತಿ ತೋರಿ
ನಾವು ಜೀವನದಲ್ಲಿ ನಾನಾ ಬಗೆಯ ಜನರನ್ನು ನೋಡುತ್ತೇವೆ. ಕೆಲವರು ಸ್ನೇಹಶೀಲರಾದರೆ, ಕೆಲವರು ಜಗಳ­ಗಂಟರು. ಕೆಲವರು ಕೆಲಸವನ್ನು ನಿಯಮ­­ಬದ್ಧವಾಗಿ ಮಾಡಿದರೆ ಮತ್ತೆ ಕೆಲವರು ಅವ್ಯವಸ್ಥೆ­ಯಿಂದ ನಿರ್ವಹಿಸು­ತ್ತಾರೆ. ಈ ರೀತಿ ವ್ಯಕ್ತಿ­ಗಳು ಬೇರೆ ಬೇರೆ ರೀತಿ­ಯಾಕಿರುತ್ತಾರೆ ಎಂಬುದನ್ನು ತಿಳಿದು­ಕೊಂಡರೆ, ಯಾವುದೇ ವ್ಯಕ್ತಿಯ  ವ್ಯಕ್ತಿತ್ವವನ್ನು ಅರ್ಥ ಮಾಡಿ­ಕೊಳ್ಳಲು, ಅಹಿತಕರ ವ್ಯಕ್ತಿತ್ವದವರ ಬಗ್ಗೆ ಕೋಪಿಸಿಕೊಳ್ಳದೇ ಸಹಾನುಭೂತಿ ತೋರಿಸಲು ಸಹ ಸಾಧ್ಯ.

ವಿಕಸನ ಹೇಗೆ?
ಆರೋಗ್ಯಪೂರ್ಣ ವ್ಯಕ್ತಿತ್ವವನ್ನು ಪಡೆಯುವುದೇ ವ್ಯಕ್ತಿತ್ವ ವಿಕಸನ. ಇದನ್ನು ಯಾರೂ  ಒಂದೇ ದಿನದಲ್ಲಿ ಪಡೆಯಲು ಸಾಧ್ಯವಿಲ್ಲ. ಹೇಗೆ ಒಬ್ಬ ವ್ಯಕ್ತಿಯ ಜನನದಿಂದ ಪ್ರೌಢಾವಸ್ಥೆ­ವರೆಗೆ ಅವರ ಮೇಲೆ ನಾನಾ ಅಂಶಗಳು ಪ್ರಭಾವ ಬೀರುತ್ತ­ವೆಯೋ ಅದೇ ರೀತಿ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆದರೆ ಆ ವ್ಯಕ್ತಿತ್ವ ಸಮಾಜಮುಖಿಯಾಗಿ, ಎಲ್ಲರಿಗೂ ಮಾದರಿ ಆಗುವಂಥದ್ದಾಗಿರಬೇಕು. ಇಂತಹ ಉತ್ತಮ ವ್ಯಕ್ತಿತ್ವ ಪಡೆಯಲು ಎಲ್ಲರೂ ಅರ್ಹರು.

ವ್ಯಕ್ತಿತ್ವವು 15–20 ವರ್ಷದ ಅವಧಿಯಲ್ಲಿ ವಿಕಸನವಾಗು­ವಾಗ ಸರಿಯಾದ ರೀತಿಯಲ್ಲಿ ಅದಕ್ಕೆ ಮಾರ್ಗದರ್ಶನ ದೊರೆಯಬೇಕು. ಆಗ ಸುಧಾರಿತ ವ್ಯಕ್ತಿತ್ವ  ರೂಪಿತವಾಗು­ತ್ತದೆ. ವ್ಯಕ್ತಿತ್ವ ದೋಷಪೂರ್ಣ ಆಗದಂತೆ ಎಚ್ಚರ ವಹಿಸ­ಬೇಕು. ಒಬ್ಬ ವಿದ್ಯಾರ್ಥಿ ಸ್ವತಃ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಮಾಜ ಸಹಕರಿಸಬೇಕು. ಪ್ರತಿ ಮಗುವೂ ಪ್ರತ್ಯೇಕ ವ್ಯಕ್ತಿತ್ವ ಹೊಂದಿರುವುದರಿಂದ ಪ್ರತ್ಯೇಕವಾ­ಗಿಯೇ ಪರಿಗಣನೆಗೆ ತೆಗೆದು­ಕೊಳ್ಳಬೇಕು. ವ್ಯಕ್ತಿತ್ವದಲ್ಲಿ ದೋಷ ಕಂಡುಬಂದರೆ ಸರಿಪಡಿ­ಸಲು ಔಷಧಗಳಿಲ್ಲ. ಆದ್ದರಿಂದ ವ್ಯಕ್ತಿತ್ವ ದೋಷಪೂರ್ಣ ಆಗದಂತೆ ನೋಡಿಕೊಳ್ಳುವುದೇ ಪರಿಹಾರ.

ಏನು ಮಾಡಬೇಕು?
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕೆಳಕಂಡ ಅಂಶಗಳು ಪೂರಕ.

* ಜೀವನ ಮೌಲ್ಯಗಳನ್ನು ತಿಳಿಸಬೇಕು.
* ಮೌಲ್ಯಯುತ  ಶಿಕ್ಷಣ, ಸಂಸ್ಕಾರ ಕಲಿಸಬೇಕು.
*ಪಠ್ಯದ ಒಂದು ಪಾಠವಾದರೂ ಸರಿ. ಅದರಲ್ಲಿ ಉದಾತ್ತ ಚಿಂತನೆ ಬೆಳೆಸಬೇಕು.
*ದೋಷಪೂರಿತ ಮತ್ತು ಆರೋಗ್ಯಕರ ವ್ಯಕ್ತಿತ್ವದ ನಡುವಿನ ವ್ಯತ್ಯಾಸ ತಿಳಿಸಬೇಕು.
*ಪಕ್ವಗೊಂಡ ಪೂರ್ಣ ವ್ಯಕ್ತಿತ್ವ ರೂಪುಗೊಳ್ಳುವಾಗಲೇ ಅದಕ್ಕೆ ಉತ್ತಮ ದಾರಿ ತಿಳಿಸಬೇಕು.
*ಪ್ರೌಢಶಾಲಾ, ಕಾಲೇಜು ಹಂತದಲ್ಲೇ ವ್ಯಕ್ತಿತ್ವ ವಿಕಸನ ಮಾಲಿಕೆಗಳ ಪುಸ್ತಕ ಓದಲು ಪ್ರೇರೇಪಿಸಬೇಕು.
*ಸುಳ್ಳು, ಕಪಟ, ಮೋಸದಿಂದ ದೂರ ಇರಬೇಕು.
*ಇತರರನ್ನು ಮೆಚ್ಚಿಸಲು ಸುಳ್ಳು ಗುರಿ / ದಾರಿಯಲ್ಲಿ ಹೋಗಬಾರದು.
*ಆತ್ಮಗೌರವ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು.
*ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕು, ಹಳೆಯ ನಂಬಿಕೆಗಳಿಗೆ ಜೋತು ಬೀಳಬಾರದು.
*ತನ್ನನ್ನು ಹೊಸ ದಾರಿಗಳಲ್ಲಿ ಮುನ್ನಡೆಸಿಕೊಳ್ಳಬೇಕು.
*ಸ್ವಪ್ರಶಂಸೆಯಲ್ಲಿ ನೈಜತೆ ಇರಲಿ.
*ಸಮಯ – ಸಂದರ್ಭಗಳಿಗೆ ಬೆಲೆ ಕೊಡಿ.
*ನಿಮ್ಮ ಸಾಧನೆಯ ಅವಲೋಕನ ಮಾಡಿಕೊಳ್ಳಿ.
* ವಸ್ತುಸ್ಥಿತಿ ಅರಿತು ಪ್ರತಿಕ್ರಿಯಿಸಿ.
*ಜವಾಬ್ದಾರಿ ಹೊತ್ತು ಕರ್ತವ್ಯ ನಿಭಾಯಿಸಿ.
*ಭಾವನೆಗಳ ಮೇಲೆ ನಿಯಂತ್ರಣ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT