ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕ ದಿವಾಳಿತನಕ್ಕೆಬಿಜೆಪಿ ಸಾಕ್ಷಿ

Last Updated 5 ಫೆಬ್ರುವರಿ 2011, 9:25 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಸೂಚಿತಗೊಂಡಿದ್ದ ಪಕ್ಷೇತರ ಅಭ್ಯರ್ಥಿ ಹೂವಪ್ಪ ರಾಠೋಡ ಅವರಿಗೆ ಬಿಜೆಪಿ ಕೊನೆಗಳಿಗೆಯಲ್ಲಿ ಬೆಂಬಲಿಸುವ ಮೂಲಕ ತನ್ನ ನೈತಿಕ ದಿವಾಳಿತನ ಪ್ರದರ್ಶಿಸಿದೆ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಜಿಪಂ ಉಪಾಧ್ಯಕ್ಷರ ಆಯ್ಕೆಯು ಬಿಜೆಪಿಯ ಭಿನ್ನಮತವನ್ನು ಬಹಿರಂಗಗೊಳಿಸಿದೆ ಎಂದರು.

17 ಸದಸ್ಯರ ಬಲ ಹೊಂದಿರುವ ಬಿಜೆಪಿ ತನ್ನದೇ ಅಧಿಕೃತ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಸರಿಸಿ ಹೂವಪ್ಪ ರಾಠೋಡರನ್ನು ಬೆಂಬಲಿಸುವ ಮೂಲಕ ಪಕ್ಷದ ಸದಸ್ಯರ ಮೇಲೆ ಅವಿಶ್ವಾಸವನ್ನು ತೋರ್ಪಡಿಸಿದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಸೌದಾಗರ, ಮಾಜಿ ಸಚಿವರಾದ ಎಚ್.ವೈ.ಮೇಟಿ, ಆರ್.ಬಿ.ತಿಮ್ಮಾಪುರ, ಸಿದ್ದು ನ್ಯಾಮಗೌಡ, ಬಿ.ಬಿ.ಚಿಮ್ಮನಕಟ್ಟಿ, ಮಾಜಿ ಶಾಸಕ ಜೆ.ಟಿ.ಪಾಟೀಲ, ಮುಖಂಡರಾದ ವಿಜಯಾನಂದ ಕಾಶಪ್ಪನವರ, ಕೆಪಿಸಿಸಿ ಸದಸ್ಯ ಎಚ್.ಎಲ್.ರೇಶ್ಮಿ, ಜಿಪಂ ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪಲಿಂಗಣ್ಣವರ, ಮಾಜಿ ಉಪಾಧ್ಯಕ್ಷ ಹನುಮಂತ ಮಾವಿನಮರದ ಬಿಜೆಪಿ ಕಾರ್ಯವೈಖರಿ ಮತ್ತು ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಕುರಿತು ಮಾತನಾಡಿದರು.

ವಿಠ್ಠಲ ಚೌರಿ ನಾಯಕ:ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕನಾಗಿ ಜಮಖಂಡಿ ತಾಲ್ಲೂಕಿನ ವಿಠ್ಠಲ ಚೌರಿ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಎರಡನೇ ಬಾರಿ ಸದಸ್ಯರಾಗಿ ಆಯ್ಕೆಗೊಂಡಿರುವ ವಿಠ್ಠಲ ಚೌರಿ ಅವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಂಡಿದ್ದಕ್ಕೆ ಪಕ್ಷದ ಸದಸ್ಯರು ಹಾಗೂ ಮುಖಂಡರು ಅಭಿನಂದನೆ ಸಲ್ಲಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಯಪ್ಪ ಜೋಗಿನ್ ನಿರೂಪಿಸಿ, ವಂದಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT