ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರ್ಮಲ್ಯ ಬಗ್ಗೆ ಗಮನ ಹರಿಸದ ನರಗುಂದ ಪುರಸಭೆ:ದೂರು

Last Updated 19 ಜನವರಿ 2011, 10:55 IST
ಅಕ್ಷರ ಗಾತ್ರ

ನರಗುಂದ: ಪಟ್ಟಣದ ಬಹುತೇಕ ರಸ್ತೆಗಳು, ಚರಂಡಿಗಳು ಹದಗೆಟ್ಟಿದ್ದು, ಕೂಡಲೇ ದುರಸ್ಥಿಗೆ ಆಗ್ರಹಿಸಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ  ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರ ಪರವಾಗಿ ಬಸವರಾಜ ಸಾಬಳೆ ಲೋಕಾಯುಕ್ತ ಎಸ್‌ಪಿಗೆ ದೂರು ಸಲ್ಲಿಸಿದರು.ಪಟ್ಟಣದ ತಾ.ಪಂ. ಸಭಾಭವನದಲ್ಲಿ ಮಂಗಳವಾರ ನಡೆದ ಲೋಕಾಯುಕ್ತರ  ಸಭೆಯಲ್ಲಿ  ದೂರು ಸಲ್ಲಿಸಿದ ಸಾಬಳೆ, ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಸೋಮಾಪೂರದಲ್ಲಿ ಮಹಿಳೆಯರ ಶೌಚಾಲಯ ನಿರ್ಮಾಣಕ್ಕೆ ಜಾಗ ಇದ್ದರೂ ಪುರಸಭೆ ಇಲ್ಲಿಯವರೆಗೂ ಅದರ ನಿರ್ಮಾಣಕ್ಕೆ ಗಮನಹರಿಸಿಲ್ಲ ಎಂದು ದೂರಿದರು.  ಇದಕ್ಕೆ ಸಿಡಿಮಿಡಿಗೊಂಡ ಲೋಕಾಯುಕ್ತ ಎಸ್‌ಪಿ ಜೆ.ಆರ್. ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಲನಕರವರನ್ನು ತರಾಟೆಗೆ ತೆಗೆದುಕೊಂಡರು.‘ಈಗಾಗಲೇ ಪುರಸಭೆ ವಿರುದ್ಧ ಹಲವು ದೂರುಗಳು ಇದ್ದು ಅವುಗಳ ಬಗ್ಗೆಯೂ ಕ್ರಮ ಕೈಗೊಳ್ಳದಿರುವುದು ಸಲ್ಲದು. ಇದಕ್ಕೆ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಪಟ್ಟಣದ ನೈರ್ಮಲ್ಯತೆಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.

‘ಕಳಪೆ ಬೀಜಗಳಿಂದ  ಹತ್ತಿ ಬೆಳೆ  ಇಲ್ಲದಂತಾಗಿದೆ. ಬೀಜ ವಿತರಿಸಿದ  ಕೃಷಿ ಇಲಾಖೆಯನ್ನು ನಂಬುವುದಾದರೂ ಹೇಗೆ’ ಎಂದು ಆರೋಪಿಸಿದ ಸಾಬಳೆ, ಇದಕ್ಕೂ ಕೃಷಿ ಅಧಿಕಾರಿಗಳು  ಸರಿಯಾಗಿ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಇದಕ್ಕೂ ಅಸಮಾಧಾನ ವ್ಯಕ್ತಪಡಿಸಿದ  ಲೋಕಾಯುಕ್ತರು  ಕೃಷಿ ಅಧಿಕಾರಿಗಳನ್ನು ವಿವರ ಕೇಳಿದರು. ಇದಕ್ಕೆ ಉತ್ತರಿಸಿದ ಮಂಜುನಾಥ, ಕಳಪೆ ಬೀಜಕ್ಕೆ ಕಾರಣರಾದ ಕಂಪೆನಿಗಳು ಬಂದು ಬೆಳೆಯನ್ನು ವೀಕ್ಷಣೆ ಮಾಡಿದ್ದು ಅವುಗಳ ವರದಿ ಬಂದ ನಂತರ ಮುಂದಿನ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು. 

ಕಳೆದ ಸಲ ಲೋಕಾಯ್ತುರು ಅಂಗನವಾಡಿಗೆ ಭೇಟಿ ನೀಡಿದ ಸಂದರ್ಭದಲಿ ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ಬಗ್ಗೆ ಕ್ರಮ ಕೈಗೊಳ್ಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿಗಳ ಬಗ್ಗೆ ತೀವ್ರ ಸಿಡಿಮಿಡಿಗೊಂಡ ಲೋಕಾಯುಕ್ತರು ಇದರ ಬಗ್ಗೆ ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದರು. ಜೊತೆಗೆ ಸಭೆಗೆ ಅಧಿಕಾರಿಗಳು ಬರದೇ ಪ್ರತಿನಿಧಿಗಳನ್ನು ಕಳುಹಿಸುವವರ ಬಗ್ಗೆ ಕೂಡಲೇ ಮಾಹಿತಿ ನಿಡುವಂತೆ ಸೂಚಿಸಿದರು. 

ಸರಕಾರಿ ಆಸ್ಪತ್ರೆಗೆ ಭೇಟಿ: ಲೋಕಾಯುಕ್ತ ಎಸ್‌ಪಿ ಜೆ.ಆರ್.ಪಾಟೀಲ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.ಔಷಧ ಕೋಣೆಗೆ ತೆರಳಿದ ಲೋಕಾಯುಕ್ತರು ದಾಖಲಾತಿಗಳನ್ನು ಪರಿಶೀಲಿಸಿದರು. ದಾಖಲಾತಿಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರವುದಕ್ಕೆ ಸ್ಥಳದಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿ  ವೈದ್ಯರು ಮಾಹಿತಿ ನೀಡದೇ ಕಳೆದ ಮೂರು ದಿವಸಗಳಿಂದ ಆಸ್ಪತ್ರೆಗೆ ಬಾರದೇ ಇರುವುದಕ್ಕೆ ತೀವ್ರ ಕೋಪಗೊಂಡು ಎರಡು ವಿಷಯಕ್ಕೆ ಸಂಬಂಧಿಸಿದಂತೆ ತುರ್ತಾಗಿ ವರದಿ ಸಲ್ಲಿಸುವಂತೆ ತಾಪಂ ಅಧಿಕಾರಿಗಳಿಗೆ ಸೂಚಿಸಿದರು. ನಂತರ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.ಲೋಕಾಯುಕ್ತ  ಸಿಪಿಐ ಸಂಗನಗೌಡ್ರ, ತಹಸೀಲ್ದಾರ ಎ.ಎಚ್. ಬದಾಮಿ, ತಾ.ಪಂ. ಅಧಿಕಾರಿ ಬಿ.ವಿ. ಪಾಟೀಲ  ಸೇರಿದಂತೆ ತಾಲ್ಲೂಕ ಸರಕಾರಿ ಆಸ್ಪತ್ರೆ ಸಿಬ್ಬಂದಿ, ವಿವಿಧ ಇಲಾಖಾಧಿಕಾರಿಗಳು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT