ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರ್ಮಲ್ಯ ಯೋಜನೆ: ಶೀಘ್ರ ಕೇಂದ್ರಕ್ಕೆ ವರದಿ

Last Updated 21 ಸೆಪ್ಟೆಂಬರ್ 2011, 10:40 IST
ಅಕ್ಷರ ಗಾತ್ರ

ತುಮಕೂರು: ನಗರದ ಕುರಿಪಾಳ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯ ವೈದ್ಯರಿಗೆ, ಸಿಬ್ಬಂದಿಗೆ ನಿತ್ಯ ಹಿಂಸೆ. ಮೂಗು ಮುಚ್ಚಿಕೊಂಡೇ ಕೆಲಸ ನಿರ್ವಹಿಸಬೇಕಾದ ಸ್ಥಿತಿ. ಸರ್ಕಾರಿ ಆಸ್ಪತ್ರೆಯ ಕಟ್ಟಡವನ್ನೇ ಮರೆಯಾಗಿ ಮಾಡಿಕೊಂಡು ಆಸ್ಪತ್ರೆಯ ಹಿಂಬದಿಯ ಜಾಗವನ್ನೇ ಕುರಿಪಾಳ್ಯದ ಜನರು ಬಯಲು ಶೌಚಾಲಯವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಇಲ್ಲಿರುವ ನೂರು ಮನೆಗಳಿಗೂ ಶೌಚಾಲಯವಿಲ್ಲ.

ಇದು ಕುರಿಪಾಳ್ಯದ ಸಮಸ್ಯೆ ಮಾತ್ರವಲ್ಲ. ಹಳ್ಳಿಗಳಂತೆ ಬಯಲು ಬಹಿರ್ದೆಶೆಯಿಂದ ತುಮಕೂರು ನಗರ ಕೂಡ ಹೊರತಾಗಿಲ್ಲ. ನಗರದ ಶೇ 40ಕ್ಕಿಂತ ಹೆಚ್ಚಿನ ಜನರಿಗೆ ಬಯಲೇ ಶೌಚಾಲಯವಾಗಿದೆ.

ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯವು ದೇಶದ 432 ನಗರಗಳನ್ನು ಬಯಲು ಶೌಚ ಮುಕ್ತ ನಗರಗಳನ್ನಾಗಿ ಮಾಡಲು ಪಣ ತೊಟ್ಟಿದ್ದು, ಅದರಲ್ಲಿ ತುಮಕೂರು ನಗರವನ್ನು ಸೇರಿಸಲಾಗಿದೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಂಡರೆ ನಗರ ಸ್ವಚ್ಛ, ಸುಂದರ ನಗರವಾಗಿ ರೂಪುಗೊಳ್ಳಲಿದೆ.

ನೈರ್ಮಲ್ಯ ಯೋಜನೆ ಜಾರಿಗೊಳಿಸುವ ಮುನ್ನ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ನಿರ್ದೇಶನದಂತೆ ನಗರದಲ್ಲಿ ಮನೆ ಮನೆ ಶೌಚಾಲಯ ಸಮೀಕ್ಷೆ, ಶಾಲಾ ಶೌಚಾಲಯಗಳು, ಸಾರ್ವಜನಿಕ ಶೌಚಾಲಯ, ಸಮುದಾಯ ಶೌಚಾಲಯ, ಆಸ್ಪತ್ರೆ ತ್ಯಾಜ್ಯ, ವಾಣಿಜ್ಯ ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ, ಕಸಾಯಿಖಾನೆ ಮೂಲಸೌಕರ್ಯ, ಕೈಗಾರಿಕೆಗಳ ನೀರಿನ ಶುದ್ಧೀಕರಣ ಘಟಕ, ಸರ್ಕಾರಿ ಕಚೇರಿಗಳಲ್ಲಿ ಶೌಚಾಲಯ ವ್ಯವಸ್ಥೆ, ಕೆರೆ- ಬಯಲು ಮಲ ವಿಸರ್ಜನೆ ಹಾಗೂ ನೀರಿನ ಬಳಕೆ ಕುರಿತು ಸಮೀಕ್ಷೆಯಲ್ಲಿ ಅಂಕಿ ಅಂಶ ಸಂಗ್ರಹಿಸಲಾಗಿದೆ.

ಈ ಸಮೀಕ್ಷೆ ನಡೆಸಲು ಹೈದರಾಬಾದ್‌ನ ಎಎಸ್‌ಸಿಐ (ಅಡ್ಮಿನಿಸ್ಟ್ರೇಟಿವ್ ಸ್ಟ್ಯಾಪ್ ಕಾಲೇಜ್ ಆಫ್ ಇಂಡಿಯಾ) ಸಂಸ್ಥೆಗೆ ನೀಡಲಾಗಿತ್ತು. ಈ ಸಂಸ್ಥೆಯು ಮೈಸೂರಿನ `ಭಗೀರಥ~ ಸರ್ಕಾರೇತರ ಸಂಸ್ಥೆಗೆ ಸಮೀಕ್ಷೆ ನಡೆಸಲು ಗುತ್ತಿಗೆ ನೀಡಿದೆ.

`ಭಗೀರಥ~ ಸರ್ಕಾರೇತರ ಸಂಸ್ಥೆಯು ಸಮೀಕ್ಷಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಆರೋಗ್ಯ ಇಲಾಖೆ, ನಗರ ನೀರು ಮತ್ತು ಒಳಚರಂಡಿ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಪ್ರಾಥಮಿಕ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು, ಶೌಚಾಲಯ, ಒಳಚಂರಂಡಿ ಸಂಪರ್ಕದ ನಕ್ಷೆ ರೂಪಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ಸಂಸ್ಥೆ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ನಗರದ ಪ್ರತಿ ಮನೆಗೂ ಶೌಚಾಲಯ, ಒಳಚರಂಡಿ ಸಂಪರ್ಕ ಕಲ್ಪಿಸುವುದು, ಒಳಚರಂಡಿ ನೀರನ್ನು ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸಿ ಶುದ್ಧೀಕರಣಗೊಂಡ ನೀರಿನ ಕೆಲ ಭಾಗವನ್ನು ಕೆರೆ, ಕೃಷಿಗೆ ನೀಡುವುದು, ಮಳೆ ನೀರು ಚರಂಡಿಗಳನ್ನು ಅಭಿವೃದ್ಧಿಗೊಳಿಸುವುದು, ಸ್ವಚ್ಛತೆ, ಶೌಚ ಬಳಕೆ ಬಗ್ಗೆ ಜನರಿಗೆ ಜಾಗೃತಿ ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ. ಯೋಜನೆ ಜಾರಿಯಾದರೆ ನೈರ್ಮಲ್ಯದಲ್ಲಿ ನಗರ ಸುಧಾರಿಸಲಿದೆ ಎಂಬ ಆಶಾಭಾವ ಹೊಂದಲಾಗಿದೆ.

`ಅಂಕಿ ಅಂಶಗಳ ಆಧಾರದ ಮೇಲೆ ಸಮೀಕ್ಷಾ ವರದಿ ನೀಡಲಾಗುತ್ತಿದೆ. ಈ ಹಿಂದಿನ ಜನಗಣತಿ ಅಂಕಿ ಅಂಶಗಳ ಆಧಾರದಲ್ಲಿ ಯೋಜನೆ ನೀಲಿ ನಕ್ಷೆ ಸಿದ್ಧತೆ ಮಾಡಲಾಗುತ್ತದೆ. ಆದರೆ ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಸಿದ್ಧಪಡಿಸಬೇಕಾಗಿದೆ. ಆದರೆ ಈ ಸಂಬಂಧ ಎರಡು ಸಭೆ ನಡೆಸಿರುವುದನ್ನು ಬಿಟ್ಟರೆ ಬೇರೆ ಪ್ರಗತಿಯ ಕುರಿತು ಮಾಹಿತಿ ನೀಡಿಲ್ಲ~ ಎಂದು ನಗರ ನೀರು ನೈರ್ಮಲ್ಯ ಸಮಿತಿ ಸದಸ್ಯರಾದ ಸಯ್ಯದ್ ಮುಜೀಬ್ `ಪ್ರಜಾವಾಣಿ~ಗೆ ತಿಳಿಸಿದರು.

ನಗರದ ಗೂಡ್‌ಶೆಡ್ ಕಾಲೊನಿ, ಈದ್ಗಾ ಮೊಹಲ್, ಲೇಬರ್, ಹೆಗಡೆ, ಎನ್.ಆರ್.ಕಾಲೊನಿ, ಕ್ಯಾತ್ಸಂದ್ರ, ಹೊಸಳಯ್ಯನ ತೋಟ, ಅಣ್ಣಪ್ಪಯ್ಯನ ತೋಟ ಮುಂತಾದ ಕಡೆಗಳಲ್ಲಿ ಬಯಲು ಬಹಿರ್ದೆಶೆ ಎಗ್ಗಿಲ್ಲದೇ ಸಾಗಿದೆ. ನಗರದ ಕೊಳೆಗೇರಿಗಳಲ್ಲಿ ಶೇ 70ರಷ್ಟು ಜನರು ಬಯಲು ಬಹಿರ್ದೆಸೆಗೆ ಹೋಗುತ್ತಾರೆ.

ಅಲ್ಲದೆ ನಗರದಲ್ಲಿ ಗುರುತಿಸಲಾಗಿರುವ 36 ಬಡತನ ರೇಖೆಗಿಂತ ಕೆಳಗಿನ ಜನರಿರುವ ಪ್ರದೇಶಗಳಲ್ಲೂ ಬಯಲು ಬಹಿರ್ದೆಶೆ ಸಾಮಾನ್ಯವಾಗಿದೆ. ಈ ಜನರಿಗೆ ವೈಯಕ್ತಿಕ ಅಥವಾ ಸಮುದಾಯ ಶೌಚಾಲಯದ ಸೌಲಭ್ಯವನ್ನೇ ಈವರೆಗೂ ಕಲ್ಪಿಸಿಲ್ಲ. ಇದು ನಗರಾಡಳಿತದ ವೈಫಲ್ಯ ಎಂದು ಅವರು ಹೇಳಿದರು.

ಈಗಾಗಲೇ ಒಂದು ಕೇಂದ್ರೀಕೃತ ಗುಂಪು ಚರ್ಚೆ ನಡೆಸಲಾಗಿದ್ದು, ಇನ್ನೆರಡು ಗುಂಪು ಚರ್ಚೆ ಕಾಯ್ದಿರಿಸಲಾಗಿದೆ. ಶೀಘ್ರದಲ್ಲೇ ಪ್ರಾಥಮಿಕ ಮಾಹಿತಿಯುಳ್ಳ ಸಮೀಕ್ಷಾ ವರದಿಯನ್ನು ಎಎಸ್‌ಸಿಐಗೆ ಸಲ್ಲಿಸಲಾಗುವುದು. ನಂತರ ಎಎಸ್‌ಸಿಐ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ. ಈ ವರದಿ ಆಧಾರದಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸಲಿದೆ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT