ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸ್ ಯೋಜನೆಗೆ ಭೂಮಿ: ಮಾರುಕಟ್ಟೆ ಬೆಲೆಗೆ ಆಗ್ರಹ

Last Updated 19 ಜೂನ್ 2011, 8:20 IST
ಅಕ್ಷರ ಗಾತ್ರ

ಮಂಡ್ಯ: ಮೈಸೂರು -ಬೆಂಗಳೂರೂ ಹೆದ್ದಾರಿ ಕಾರಿಡಾರ್ ಯೋಜನೆಗೆ (ನೈಸ್) ಭೂಮಿ ಸ್ವಾಧೀನ ಪಡೆಯುವ ಪ್ರಕ್ರಿಯೆಗೆ ರೈತ ಸಮುದಾಯ ಮತ್ತೆ ವಿರೋಧ ವ್ಯಕ್ತಪಡಿಸಿದ್ದು, ಮಾರುಕಟ್ಟೆ ಮೌಲ್ಯ ಆಧರಿಸಿ ಯೋಗ್ಯ ಬೆಲೆ ನೀಡದಿದ್ದರೆ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಎಚ್ಚರಿಸಿದೆ.

ನಗರ ಮತ್ತು ಮದ್ದೂರು ತಾಲ್ಲೂಕು ಗೆಜ್ಜಲೆಗೆರೆ ಸಮೀಪ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದ ರೈತರು, ಸರ್ಕಾರ ನೈಸ್ ಹೆದ್ದಾರಿ ಹೆಸರಿನಲ್ಲಿ ಮನಸೋ ಇಚ್ಚೆ ಭೂಮಿ ಸ್ವಾಧೀನ ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ರೈತ ಸಂಘದ ಜ್ಲ್ಲಿಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು ಅವರು, ನೈಸ್ ವಿಚಾರದಲ್ಲಿ ರೈತರ ಹಿತ ರಕ್ಷಿಸಲು ಸರ್ಕಾರಗಳು ವಿಫಲವಾಗಿವೆ. ಭೂಮಿ ಕಬಳಿಸಲು ಸರ್ಕಾರವು ಪರೋಕ್ಷವಾಗಿ ಉತ್ತೇಜನ ನೀಡುತ್ತಿರುವ ಶಂಕೆ ಇದೆ ಎಂದರು.

ಯೋಜನೆಗಾಗಿ ಪಡೆಯುವ ಭೂಮಿಗೆ ಗುಣಾತ್ಮಕ ಮೌಲ್ಯ ಆಧರಿಸಿ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ರೈತ ಸಮುದಾಯದಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ  ರೈತ ಸಂಘದ ಸುರೇಶ್, ರಾಕೇಶ್, ಬಳ್ಳಾರಿ ಗೌಡ, ಹ್ಲ್ಲಲೆಗೆರೆ ಶಿವರಾಂ, ನಾಗರಾಜ್, ಮಲ್ಲೇಶ್, ಮರಿಚನ್ನೇಗೌಡ ಮತ್ತಿತರರು ಇದ್ದರು.

ಶ್ರೀರಂಗಪಟ್ಟಣ ವರದಿ: ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಸರ್ಕಾರ ಸೂಕ್ತ ಮಾರುಕಟ್ಟೆ ದರ ನೀಡಬೇಕು ಎಂದು ಆಗ್ರಹಿಸಿ ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರು ಹಾಗೂ ರೈತ ಸಂಘದ ಕಾರ್ಯಕರ್ತರು ಶನಿವಾರ ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

  ರಾಜ್ಯ ಸರ್ಕಾರ ನೈಸ್ ಸಂಸ್ಥೆಯ ಪರ ಒಲವು ತೊರುತ್ತಿದ್ದು, ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ಅಷ್ಟೇ ಅಲ್ಲದೆ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಕೂಡ ನೈಸ್ ಸಂಸ್ಥೆಗೆ ಅನುಕೂಲ ಮಾಡಿಕೊಟ್ಟಿವೆ. ಜಮೀನು ವಶಪಡಿಸಿಕೊಳ್ಳುವ ಪ್ರತಿ ಎಕರೆಗೆ ಸರ್ಕಾರ ರೂ.41ಲಕ್ಷ ಬೆಲೆ ನಿಗದಿ ಮಾಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಎಕರೆ ಜಮೀನು ರೂ.1.20 ಕೋಟಿಗೆ ಮಾರಾಟವಾಗುತ್ತಿದ್ದು, ಸರ್ಕಾರ ಅಷ್ಟೇ ಬೆಲೆ ನಿಗದಿ ಮಾಡಬೇಕು ಎಂದು ಕೆ.ಎಸ್. ನಂಜುಂಡೇಗೌಡ ಒತ್ತಾಯಿಸಿದರು.

 ನೈಸ್ ಸಂಸ್ಥೆ ಟೌನ್‌ಶಿಪ್ ಮಾಡುವ ಉದ್ದೇಶ ಹೊಂದಿದ್ದು, ರೈತರು ಹಾಗೂ ಸರ್ಕಾರದಿಂದ ಪಡೆಯುವ ಭೂಮಿ ಇಟ್ಟುಕೊಂಡು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಹುನ್ನಾರ ನಡೆಸಿದೆ. ಅದಕ್ಕೆ ಅವಕಾಶ ನೀಡಬಾರದು ಎಂದು ನೈಸ್ ಯೋಜನೆ ಸಂತ್ರಸ್ತ ರೈತರ ಒಕ್ಕೂಟದ ಅಧ್ಯಕ್ಷ ಮೇಳಾಪುರ ಸ್ವಾಮಿಗೌಡ ಹೇಳಿದರು.

  ತಹಶೀಲ್ದಾರ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಎನ್.ಮಹೇಶ್, ನಂಜುಂಡಪ್ಪ, ಮಲ್ಲೇಶ್, ನಾಗೇಂದ್ರಸ್ವಾಮಿ, ಚಂದಗಾಲು ಪುರುಷೋತ್ತಮ, ಪಾಂಡು, ಕೊಡಿಯಾಲ ಜವರೇಗೌಡ, ಗೋಪಾಲ್, ಕಡತನಾಳು ಕುಮಾರ್, ಡಿಎಸ್‌ಎಸ್ ಮುಖಂಡ ಹೊನ್ನಯ್ಯ, ಅಂಗವಿಕಲರ ಸಂಘದ ಉಪಾಧ್ಯಕ್ಷ ಬಸವರಾಜು ಇತರರು ಪ್ರತಿಭಟನೆಯಲ್ಲಿದ್ದರು.

ಪಾಂಡವಪುರ ವರದಿ: ನೈಸ್ ರಸ್ತೆಗೆ ರೈತರ 1300 ಎಕರೆ ಮತ್ತು ಸ್ಯಾಟ್‌ಲೈಟ್ ಟೌನ್‌ಶಿಫ್ ನಿರ್ಮಾಣಕ್ಕೆ 15,500 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮವನ್ನು ರಾಜ್ಯ ರೈತಸಂಘ ವಿರೋಧಿಸುತ್ತದೆ ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಎನ್.ವಿಜಯಕುಮಾರ್ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರಿಮಂತರಿಗೆ ಅನುಕೂಲವಾಗುವ ನೈಸ್ ರಸ್ತೆ ನಿರ್ಮಾಣಕ್ಕೆ ರೈತರ 1300ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ದೂರಿದರು

ಬೆಂಗಳೂರಿನಲ್ಲಿ ರೈತರಿಂದ ಭೂಮಿ ಕಸಿದುಕೊಳ್ಳುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ  ಎಚ್.ಎಸ್.ದೊರೆಸ್ವಾಮಿ ಇತರರು ಪಾದಯಾತ್ರೆ ಮೂಲಕ ಹೋರಾಟವನ್ನು ಪ್ರಾರಂಭಿಸಿದ್ದಾರೆ. ಈ ಹೋರಾಟಕ್ಕೆ ತಾಲೂಕು ರೈತಸಂಘ ಪೂರ್ಣ ಬೆಂಬಲ ನೀಡುತ್ತದೆ. ಜೂ.19ರಂದು ಭಾನುವಾರ ಈ ಹೋರಾಟಕ್ಕೆ ಪರಿಸರ ಹೋರಾಟಗಾರ್ತಿ ಮೇಧ ಪಾಟ್ಕರ್ ಭಾಗವಹಿಸುತ್ತಿದ್ದು, ರೈತಸಂಘ ಕೂಡ ಸಕ್ರಿಯವಾಗಿ ಭಾಗವಹಿಸಲಿದೆ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT