ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನೈಸ್' ವಿರುದ್ಧ ತನಿಖೆಗೆ ಹೈಕೋರ್ಟ್ ತಡೆ

Last Updated 11 ಡಿಸೆಂಬರ್ 2012, 20:39 IST
ಅಕ್ಷರ ಗಾತ್ರ

ಬೆಂಗಳೂರು: `ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್' (ಬಿಎಂಐಸಿ) ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆ ನಡೆಸಬೇಕು ಎಂಬ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಮಂಗಳವಾರ ನಾಲ್ಕು ವಾರಗಳ ಮಧ್ಯಂತರ ತಡೆ ನೀಡಿದೆ.

`ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್'ನ (ನೈಸ್) ಬಿಎಂಐಸಿ ಯೋಜನೆಯ ಅಕ್ರಮಗಳಿಗೆ ಸಂಬಂಧಿಸಿ 102 ಜನರ ವಿರುದ್ಧ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಸಲ್ಲಿಸಿದ್ದ ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಮಾನ್ಯ ಮಾಡಿ ತನಿಖೆಗೆ ಆದೇಶಿಸಿದ್ದರು.

ಇದನ್ನು ಪ್ರಶ್ನಿಸಿ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್. ಬಿಳ್ಳಪ್ಪ ನೇತೃತ್ವದ ಏಕಸದಸ್ಯ ಪೀಠ, ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶಕ್ಕೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿತು. `ಲೋಕಾಯುಕ್ತ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆ ನಡೆಯುತ್ತಿದೆ. ಹೀಗಿದ್ದರೂ, ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ಜಾರಿ ಮಾಡುತ್ತಿದ್ದಾರೆ' ಎಂದು ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಹಿನ್ನೆಲೆ: ಬಿಎಂಐಸಿ ಯೋಜನೆಗೆ ನೀಡಿರುವ ಭೂಮಿಯಲ್ಲಿ ಒಟ್ಟು 350 ಎಕರೆಯನ್ನು ವಾಪಸ್ ಪಡೆಯಬೇಕು. ಈ ಯೋಜನೆಯ ರಸ್ತೆಗಳಲ್ಲಿ ನೈಸ್ ಸಂಸ್ಥೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ್ದ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಖೇಣಿ ಅರ್ಜಿಯ ವಿಚಾರಣೆ ನಡೆಯುತ್ತಿರುವ ವೇಳೆ ಮಧ್ಯಂತರ ಅರ್ಜಿ ಸಲ್ಲಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು, ಲೋಕಾಯುಕ್ತ ತನಿಖೆಯನ್ನು ರದ್ದು ಮಾಡಬಾರದೆಂದು ಕೋರಿದ್ದರು.

ಈ ಪ್ರಕರಣದಲ್ಲಿ ದೇವೇಗೌಡ, ವಿದೇಶಾಂಗ ಖಾತೆ ಮಾಜಿ ಸಚಿವ ಎಸ್.ಎಂ. ಕೃಷ್ಣ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಖೇಣಿ, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್ ಮತ್ತಿತರರ ವಿರುದ್ಧ ಈಗಾಗಲೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ.

ಮಹಿಳಾ ತನಿಖಾಧಿಕಾರಿ ನೇಮಿಸಿ
ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣಗಳ ವಿಚಾರಣೆಗೆ ಮಹಿಳಾ ತನಿಖಾಧಿಕಾರಿಗಳನ್ನು ನೇಮಕ ಮಾಡಬಹುದು ಎಂದು ಹೈಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿದೆ. ನಗರದಲ್ಲಿ ಇತ್ತೀಚೆಗೆ ಸರಣಿ ಅತ್ಯಾಚಾರ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವಿಜಯ್ ಕುಮಾರ್ ಎಂಬುವವರು, ಮಹಿಳೆಯರಿಗೆ ಸೂಕ್ತ ರಕ್ಷಣೆ ಕಲ್ಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣುಮಕ್ಕಳಿಗೆ ಪರಿಹಾರ ನೀಡಲು ಸೂಕ್ತ ನಿಯಮಾವಳಿಗಳನ್ನು ರೂಪಿಸುವಂತೆ ಸೂಚಿಸಿದೆ. ಅತ್ಯಾಚಾರಕ್ಕೆ ಒಳಗಾದವರಿಗೆ ಪರಿಹಾರ ಕಲ್ಪಿಸುವ ಸಂಬಂಧ ಇದುವರೆಗೆ ಯಾವ ಮಾದರಿ ಅನುಸರಿಸಲಾಗಿದೆ ಎಂದು ನ್ಯಾಯಪೀಠ ಪ್ರಶ್ನಿಸಿ, ವಿಚಾರಣೆ ಮುಂದೂಡಿದೆ.

ಕೊಳೆಗೇರಿ: ಯಥಾಸ್ಥಿತಿಗೆ ಆದೇಶ

ನಗರದ ಬನಶಂಕರಿ ಮೂರನೇ ಹಂತದ ಚಾಮುಂಡಿನಗರ ಕೊಳೆಗೇರಿಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದೆ ಯಥಾಸ್ಥಿತಿ ಕಾಪಾಡಬೇಕು ಎಂದು ಹೈಕೋರ್ಟ್ ಮಂಗಳವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನಿರ್ದೇಶನ ನೀಡಿದೆ.
2.18 ಎಕರೆ ವಿಸ್ತೀರ್ಣದ ಈ ಕೊಳೆಗೇರಿಯಲ್ಲಿನ ನಿವಾಸಿಗಳನ್ನು ಉದ್ಯಾನ ನಿರ್ಮಾಣದ ಹೆಸರಿನಲ್ಲಿ ಒಕ್ಕಲೆಬ್ಬಿಸಬಾರದು ಎಂದು ಪಿ.ಎಂ. ಮಾರ್ಗರೇಟ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ, ಪ್ರತಿವಾದಿಗಳಿಗೆ ನೋಟಿಸ್ ನೀಡಲು ಆದೇಶಿಸಿದೆ.

ಈ ಕೊಳೆಗೇರಿಯನ್ನು ಉದ್ಯಾನವಾಗಿ ಪರಿವರ್ತಿಸುವಂತೆ ಕೋರಿ `ಅಭಯ' ಸಂಸ್ಥೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ವೇಳೆ ವಿಭಾಗೀಯ ಪೀಠಕ್ಕೆ ಹೇಳಿಕೆ ಸಲ್ಲಿಸಿದ ಬಿಡಿಎ, ಕೊಳೆಗೇರಿಯ 1.2 ಎಕರೆ ಜಾಗವನ್ನು ಉದ್ಯಾನವಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿತು. ಈ ಹೇಳಿಕೆ ಆಧರಿಸಿ ಅರ್ಜಿಯನ್ನು 2011ರ ಏಪ್ರಿಲ್‌ನಲ್ಲಿ ಇತ್ಯರ್ಥಗೊಳಿಸಲಾಯಿತು.
ಇದನ್ನು ಮರುಪರಿಶೀಲಿಸಬೇಕು ಎಂದು ಮಾರ್ಗರೇಟ್ ಮತ್ತು ಇತರರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, `ಈ ಕೊಳೆಗೇರಿಯನ್ನು 2010ರ ಜೂನ್ 4ರಂದು ಕೊಳಚೆ ನಿರ್ಮೂಲನಾ ಮಂಡಳಿಗೆ ಹಸ್ತಾಂತರ ಮಾಡಲಾಗಿದೆ. ಹಿಂದಿನ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬಿಡಿಎ ಈ ಸಂಗತಿಯನ್ನು ಮುಚ್ಚಿಟ್ಟಿದೆ' ಎಂದು ನ್ಯಾಯಪೀಠಕ್ಕೆ ತಿಳಿಸಿದರು.

`ಕೊಳೆಗೇರಿಯಲ್ಲಿ ಒಟ್ಟು 424 ಕುಟುಂಬಗಳು 30ಕ್ಕೂ ಹೆಚ್ಚು ವರ್ಷಗಳಿಂದ ವಾಸ ಮಾಡುತ್ತಿವೆ. ಈ ಪೈಕಿ 128 ಕುಟುಂಬಗಳಿಗೆ 35 ಗುಂಟೆ ಜಾಗದಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಕೊಳಚೆ ನಿರ್ಮೂಲನಾ ಮಂಡಳಿ ಹೇಳಿದೆ. ಇನ್ನುಳಿದ ಕುಟುಂಬಗಳ ಪಾಡು ಏನು ಎಂಬುದು ಸ್ಪಷ್ಟವಿಲ್ಲ. ಉಳಿದ ಕುಟುಂಬಗಳಿಗೂ ಪುನರ್ವಸತಿ ಕಲ್ಪಿಸುವುದಾದರೆ, ಉದ್ಯಾನ ನಿರ್ಮಾಣಕ್ಕೆ ಅಭ್ಯಂತರವಿಲ್ಲ' ಎಂದು ವಿವರಣೆ ನೀಡಿದರು. ವಿಚಾರಣೆಯನ್ನು ಜನವರಿ 3ಕ್ಕೆ ಮುಂದೂಡಲಾಗಿದೆ.

`ಅರಮನೆ ಮೈದಾನ ಬಳಕೆಗೆ ನಿಯಮಾವಳಿ'

ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಅರಮನೆ ಮೈದಾನದಲ್ಲಿ ಅವಕಾಶ ನೀಡುವುದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ರೂಪಿಸಲಾಗುವುದು ಎಂದು ರಾಜ್ಯ ಸರ್ಕಾರ ಮಂಗಳವಾರ  ಹೈಕೋರ್ಟ್‌ಗೆ ತಿಳಿಸಿದೆ.

ಮೈದಾನದಲ್ಲಿ ಸರ್ಕಸ್ ಪ್ರದರ್ಶನ ಆಯೋಜಿಸಲು ತನಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಜಂಬೊ ಸರ್ಕಸ್ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿಲೀಪ್ ಭೋಸ್ಲೆ ನೇತೃತ್ವದ ಏಕಸದಸ್ಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ವಿಷಯತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT