ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸ್ ಹಗರಣ: ಸಿಬಿಐ ತನಿಖೆಗೆ ಆಗ್ರಹ

Last Updated 2 ಏಪ್ರಿಲ್ 2013, 18:46 IST
ಅಕ್ಷರ ಗಾತ್ರ

ಬೆಂಗಳೂರು: `ನೈಸ್ ಯೋಜನೆಗೆಂದು ಗುರುತಿಸಿದ್ದ ಭೂಮಿಗಿಂತ 7,709 ಎಕರೆ ಭೂಮಿಯನ್ನು ಸಂಸ್ಥೆಯು ಒತ್ತುವರಿ ಮಾಡಿದೆ' ಎಂದು ಬಿಎಂಐಸಿ (ನೈಸ್) ವಿರುದ್ಧ ಜನಾಂದೋಲನದ ಕಾರ್ಯಕರ್ತ ವಿನಯ್ ಕೆ ಶ್ರೀನಿವಾಸ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನೈಸ್ ಯೋಜನೆಯಲ್ಲಿ ಅನೇಕ ಸಮಸ್ಯೆಗಳಿವೆ. ಯೋಜನೆ ಆರಂಭವಾದಾಗಿನಿಂದ ಅನೇಕ ಹಗರಣಗಳು ನಡೆದಿವೆ' ಎಂದರು.

`ಸರ್ಕಾರ ಮತ್ತು ನೈಸ್ ಕಂಪೆನಿಗೆ ಯೋಜನೆಯ ಬಗೆಗೆ ಕೆಲವು ಮಾಹಿತಿಗಳೇ ತಿಳಿದಿಲ್ಲ. ಸರ್ಕಾರವನ್ನು ಕೇಳಿದರೆ ನೈಸ್ ಕಂಪೆನಿಗೆ ತಿಳಿದಿದೆಯೆಂದು ಕಂಪೆನಿಯವರನ್ನು ಕೇಳಿದರೆ ಸರ್ಕಾರಕ್ಕೆ ಗೊತ್ತಿದೆ ಎಂದು ನುಣುಚಿಕೊಳ್ಳುತ್ತಿದ್ದಾರೆ. ಆದ್ದರಿಂದ, ಅನೇಕ ಜನರ ನೆಮ್ಮದಿ ಕೆಡಿಸಿರುವ ಈ ಯೋಜನೆಯನ್ನು ಈ ಕೂಡಲೇ ನಿಲ್ಲಿಸಬೇಕು. ಇದರಲ್ಲಿ ನಡೆದಿರುವ ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು' ಎಂದು ಆಗ್ರಹಿಸಿದರು.

`ಈ ಯೋಜನೆಯಲ್ಲಿ ಅನೇಕ ಜನರು ತಮ್ಮ ಮನೆ-ಮಠಗಳನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಈ ಯೋಜನೆಯನ್ನು ನಿಲ್ಲಿಸಿ ಭೂಮಿ ಮತ್ತು ಮನೆಯನ್ನು ಕಳೆದುಕೊಂಡವರಿಗೆ ವಾಪಸ್ ನೀಡಬೇಕು' ಎಂದು ಒತ್ತಾಯಿಸಿದರು.

ಬೆಗಾನಹಳ್ಳಿಯ ಸಲೀಂ ಖಾನ್ ಮಾತನಾಡಿ, `ನಮ್ಮೂರಿನಲ್ಲಿ ಸುಮಾರು 9,000 ಮನೆಗಳಿವೆ. ನಮ್ಮ ಮನೆಗಳಿರುವ ಭೂಮಿಯನ್ನು ನೈಸ್ ರಸ್ತೆಗೆಂದು ಗುರುತಿಸಿಲ್ಲ. ಆದರೂ ಈಗ ಏಕಾಏಕಿ ಬಂದು ಬುಲ್ಡೋಜರ್‌ನಿಂದ ಮನೆಗಳನ್ನು ಕೆಡವುತ್ತಿದ್ದಾರೆ. ಇದನ್ನು ಯಾರು ಕೇಳುವವರಿಲ್ಲದಂತಾಗಿದೆ. ನಾವು ಬೀದಿ ಪಾಲಾಗುತ್ತಿದ್ದೇವೆ' ಎಂದು ಮನೆ ಕಳೆದುಕೊಂಡ ಅವರು ತಮ್ಮ ಅಳಲು ತೋಡಿಕೊಂಡರು.

ಚಿಕ್ಕತಾಯೂರಿನ ರಾಮಯ್ಯ ಮಾತನಾಡಿ, `ನಮ್ಮ ಭೂಮಿಯು ನೈಸ್ ರಸ್ತೆಗೆ ಎಂದು ಎಲ್ಲಿಯೂ ನಮೂದಾಗಿಲ್ಲ. ಆದರೆ, ನಮ್ಮ ಹಳ್ಳಿಯ ಸುತ್ತಮುತ್ತಲಿನ 202 ಎಕರೆ ಭೂಮಿ, ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಭೂಮಿಯ ಪಹಣಿಯನ್ನು ಅವರ ಹೆಸರಿಗೆ ಬದಲಾಯಿಸಿಕೊಳ್ಳುತ್ತಿದ್ದಾರೆ. ನಾವು ಬೀದಿ ಪಾಲಾಗುತ್ತಿದ್ದೇವೆ. ನಮ್ಮ ಭೂಮಿ, ಕೆರೆಗಳನ್ನು ಕಬಳಿಸಿದರೆ ನಾವೆಲ್ಲಿ ಹೋಗಬೇಕು' ಎಂದು ತಮ್ಮ ನೋವು ಹೇಳಿಕೊಂಡರು.

`ನನ್ನ ಮನೆ ಮತ್ತು ಭೂಮಿಯನ್ನು ಕಳೆದುಕೊಂಡಿದ್ದೇನೆ. ನಮಗಾಗಿ ಯಾರೂ ಧ್ವನಿ ಎತ್ತುವವರಿಲ್ಲ. ನಾವು ಆರಿಸಿ ಕಳುಹಿಸಿದ ನಮ್ಮ ಪ್ರತಿನಿಧಿಗಳು ನಮ್ಮ ಶೋಷಣೆ ಮಾಡಿ ನಮ್ಮಿಂದ ಎಲ್ಲವನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತಿ ಹೋರಾಡಬೇಕು. ಮೂರು ವರ್ಷಗಳ ಕಾಲ ಸತ್ಯಾಗ್ರಹ ನಡೆಸಿದ್ದೇನೆ. ಈಗ ಆತ್ಮಹತ್ಯೆ ಮಾಡಿಕೊಳ್ಳುವುದು ಮಾತ್ರ ಬಾಕಿ ಉಳಿದಿದೆ' ಎಂದು ಬೆರೆಟೆನ ಅಗ್ರಹಾರದ ಸುಕುಮಾರ್ ಮೆನನ್ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT