ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಂದ ಫಲಾನುಭವಿ ಕುಟುಂಬದ ಪ್ರತಿಭಟನೆ

Last Updated 7 ಏಪ್ರಿಲ್ 2011, 6:15 IST
ಅಕ್ಷರ ಗಾತ್ರ

ಗುತ್ತಲ: ಆಶ್ರಯ ಮನೆಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಡ ಕುಟುಂಬವೊಂದು ಗ್ರಾ.ಪಂ.ನಲ್ಲಿ ವಾಸ್ತವ್ಯ ಹೂಡಿ ಪ್ರತಿಭಟನೆಗಿಳಿದಿರುವ ಘಟನೆ ಸಮೀಪದ ಮರೋಳ ಗ್ರಾ.ಪಂ.ನಲ್ಲಿ ಬುಧವಾರ ನಡೆದಿದೆ. ಮರೋಳ ಗ್ರಾಮದ ದೇವಕ್ಕ ಬೆಳವಿಗಿ ಎಂಬುವರು ತಮ್ಮ ಮೂರು ಮಕ್ಕಳು ಹಾಗೂ ಪತಿಯೊಂದಿಗೆ ಪ್ರತಿಭಟನೆಗಿಳಿದಿದ್ದಾರೆ. 2007ರಲ್ಲಿ ಮಂಜೂರಾದ ಆಶ್ರಯ ಮನೆಯನ್ನು ನಿರ್ಮಿಸಿಕೊಳ್ಳಲು ಒಂದನೇ ಹಂತದಲ್ಲಿ ಕೇವಲ 5 ಸಾವಿರ ರೂಪಾಯಿ ನೀಡಿರುವುದನ್ನು ಬಿಟ್ಟೆರೆ ಗ್ರಾ.ಪಂ. ಅಧಿಕಾರಿಗಳು ಇದುವರೆಗೂ ಹಣ ಮಂಜೂರು ಮಾಡುತ್ತಿಲ್ಲ ಎಂಬುದು ದೇವಕ್ಕ ಅವರ ಆರೋಪ.

ಗ್ರಾ.ಪಂ.ನ ಧೋರಣೆಯಿಂದ ಕಳೆದ ನಾಲ್ಕು ವರ್ಷಗಳಿಂದ ಮನೆ ನಿರ್ಮಿಸಿಕೊಳ್ಳಲು ಪರದಾಡುವಂತಾಗಿದ್ದು, ಮೂರು ಮಕ್ಕಳೊಂದಿಗೆ ಬೀದಿಗೆ ಬರುವಂತಾಗಿದೆ ಎಂದು ದೇವಕ್ಕ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಮನೆಯ ಗೋಡೆಗಳನ್ನು ನಿರ್ಮಿಸಿ ಮೂರು ವರ್ಷಗಳಾಗಿರುವುದರಿಂದ ಗೋಡೆಗಳು ಕುಸಿದು ಬೀಳುವ ಹಂತಕ್ಕೆ ತಲುಪಿವೆ. ಈ ಸಂಬಂಧ ಹಲವು ಬಾರಿ ಮೇಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಯಾರೂ ಸ್ಪಂದಿಸಿಲ್ಲ. ಹೀಗಾಗಿ ಗ್ರಾಪಂನಲ್ಲಿಯೇ ವಾಸ್ತವ್ಯ ಹೂಡಿ ಪ್ರತಿಭಟನೆಗೆ ಇಳಿದಿದ್ದೇನೆ ಎಂದು ಅವರು ಹೇಳಿದ್ದಾರೆ.

ಗೊಂದಲದಲ್ಲಿ ನಿವೇಶನ: ದೇವಕ್ಕ ಬೆಳವಿಗಿ ಮನೆ ನಿರ್ಮಿಸಿಕೊಳ್ಳುತ್ತಿರುವ ಜಾಗವನ್ನು ಗ್ರಾ.ಪಂ. ಗ್ರಂಥಾಲಯಕ್ಕಾಗಿ ಮೀಸಲಿರಿಸಲಾಗಿತ್ತು. ದೇವಕ್ಕ ಮನೆ ನಿರ್ಮಿಸಿಕೊಳ್ಳುವ ನಿವೇಶನ ಅದೇ ರಸ್ತೆಯಲ್ಲಿರುವುದರಿಂದ ಅವರ ನಿವೇಶನವನ್ನು ರಸ್ತೆಗಾಗಿ ಬಳಸಿಕೊಳ್ಳಲು ಉದ್ದೇಶಿಸಿ, ಈ ಕುರಿತು ಹಿಂದಿನ ಆಡಳಿತ ಮಂಡಳಿ ಮೌಖಿಕ ಆದೇಶವನ್ನು ದೇವಕ್ಕರಿಗೆ ನೀಡಿತು. ಈ ಹಿನ್ನೆಲೆಯಲ್ಲಿ ದೇವಕ್ಕ ತಮ್ಮ ನಿವೇಶನವನ್ನು ಬದಲಿಸಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಮನೆ ನಿರ್ಮಿಸಿಕೊಳ್ಳಲು ಮೊದಲ ಹಂತದಲ್ಲಿ 5 ಸಾವಿರ ರೂ.ಹಣವನ್ನು ಗ್ರಾ.ಪಂ. ಈಗಾಗಲೇ ಬಿಡುಗಡೆ ಮಾಡಿದೆ. ಆದರೆ ಈಗಿನ ಆಡಳಿತ ಮಂಡಳಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಮನೆ ನಿರ್ಮಿಸಿಕೊಳ್ಳುತ್ತಿರುವ ನಿವೇಶನವನ್ನು ಗ್ರಂಥಾಲಯಕ್ಕಾಗಿ ಬಿಟ್ಟುಕೊಡುವಂತೆ ಒತ್ತಾಯಿಸುತ್ತಿದೆ. ಆದರೆ ಈಗಾಗಲೇ ಮನೆಯ ಅರ್ಧ ಕಾಮಗಾರಿ ಮುಗಿದ್ದು, ಮತ್ತೆ ಬೇರೆಡೆಗೆ ಮನೆ ನಿರ್ಮಿಸಿಕೊಳ್ಳುವುದಾದರೂ ಹೇಗೆ ಎಂಬುದು ದೇವಕ್ಕ ಅವರ
ಪ್ರಶ್ನೆ.

ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಮನೆ ನಿರ್ಮಿಸಿಕೊಳ್ಳುತ್ತಿರುವ ನಿವೇಶನದ ಪಟ್ಟಾ ವಿತರಣೆ ಮಾಡುವುದರೊಂದಿಗೆ ಹಣ ಮಂಜೂರು ಮಾಡಿ ನ್ಯಾಯ ದೊರಕಿಸಿ ಕೊಡಬೇಕು. ನನಗೆ ನ್ಯಾಯ ಸಿಗುವವರೆಗೂ ಗ್ರಾಮ ಪಂಚಾಯಿತಿಯನ್ನು ತೊರೆಯುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಹಾವೇರಿ ತಾ.ಪಂ. ಇಓ ಡಾ. ಬಸವರಾಜಪ್ಪ ಅವರನ್ನು ಸಂಪರ್ಕಿಸಿದಾಗ, ಮರೋಳ ಗ್ರಾಮ ಪಂಚಾಯಿತಿಯಿಂದ ಸಮಗ್ರ ಮಾಹಿತಿ ತರಿಸಿಕೊಂಡು ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ ಬೆಳವಿಗಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT