ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಂದ ಹೆಣ್ಣುಮಕ್ಕಳಿಗೆ ದಾರಿದೀಪವಾದ ಕುದ್ರೋಳಿ ಕ್ಷೇತ್ರ

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಂಗಳೂರಿನ ಗೋಕರ್ಣನಾಥ ದೇಗುಲದಲ್ಲಿ ನಡೆದ `ವಿಧವೆಗೆ ಮಂಗಳ ಭಾಗ್ಯ~ ವರದಿ ಇತಿಹಾಸ ನಿರ್ಮಿಸಿದ ಖುಷಿ ನೀಡಿದೆ. ಮಹಿಳೆಗೆ ತನ್ನ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವಿದ್ದರೂ ಗಂಡನನ್ನು ಕಳೆದುಕೊಂಡವಳು ಎನ್ನುವ ಏಕಮಾತ್ರ ಕಾರಣಕ್ಕಾಗಿ ಸಮಾಜದ ಮುಖ್ಯವಾಹಿನಿಯಿಂದ ಪರಿತ್ಯಕ್ತಳಂತೆ ಇರುವ ಸ್ಥಿತಿಯನ್ನು ನಿವಾರಿಸಲು ಈ ಕಾರ್ಯಕ್ರಮ ನೆರವಾಗಿದೆ.

ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಇಂಥ ಮಂಗಳ ಕಾರ್ಯಕ್ಕೆ ಚಾಲನೆ ನೀಡಿರುವುದು ಸ್ವಾಗತಾರ್ಹ. ನಮ್ಮನ್ನು ಸಾಕಿ ಸಲುಹಿದ ತಾಯಂದಿರು ಅಮಂಗಳೆಯರಲ್ಲ ಎಂಬುದನ್ನು ತೋರಿಸಿದ ಇಂಥ ಕಾರ್ಯಕ್ರಮಗಳು ಕರ್ನಾಟಕದಾದ್ಯಂತ ನಡೆಯಲಿ. ವಿಧವೆ ಪದದ ಬಳಕೆಯೇ ನಿಲ್ಲಲಿ. 
 - ಶೈಲಜಾ ಅಂಗಡಿ, ಮೈಸೂರು.

ಶ್ಲಾಘನೀಯ
ಮಹಿಳೆ ಜಗತ್ತಿನ ಪ್ರಥಮ ಶೋಷಿತೆ. ಸಂಪ್ರದಾಯದ ಹೆಸರಿನಲ್ಲಿ ಸನಾತನ ಸಂಸ್ಕೃತಿಯನ್ನು ರಕ್ಷಿಸುವ ನೆಪವೊಡ್ಡಿ ಮಹಿಳೆಯನ್ನು ಮೌಢ್ಯದತ್ತ ಸೆಳೆದೊಯ್ಯುವ ನಿರಂತರ ವ್ಯವಸ್ಥಿತ ಪ್ರಯತ್ನವನ್ನು ಮನುವಿನ ಅನುಯಾಯಿಗಳು ನಡೆಸುತ್ತಿರುವಾಗ, ಜನಾರ್ದನ ಪೂಜಾರಿಯವರು ಕುದ್ರೋಳಿ ದೇವಸ್ಥಾನದಲ್ಲಿ ಸಾವಿರಾರು ವಿಧವೆಯರನ್ನು ಆಹ್ವಾನಿಸಿ ಮಂಗಳದ್ರವ್ಯಗಳನ್ನು ನೀಡಿ ಗೌರವಿಸಿದ ಕಾರ್ಯಕ್ರಮ ಶ್ಲಾಘನೀಯ.

ಹೆಣ್ಣು, ಮದುವೆಗೆ ಮುಂಚೆಯೇ ತೊಟ್ಟುಕೊಳ್ಳುವ ಬಳೆ, ಹಚ್ಚಿಕೊಳ್ಳುವ ಕುಂಕುಮವನ್ನು ಅವಳ ಗಂಡ ಸತ್ತಾಗ ಕಿತ್ತುಕೊಳ್ಳುವ ಸಮಾಜ ಅವಳನ್ನು ಮದುವೆ ಮುಂತಾದ ಮಂಗಳಕಾರ್ಯಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.

ಮಹಿಳೆಗೆ ತನ್ನದೇ ಆದ ಆಸ್ತಿತ್ವವೇ ಇಲ್ಲ ಎನ್ನುವ ಸಂಪ್ರದಾಯವಾದಿಗಳ ವಾದಕ್ಕೆ ವ್ಯತಿರಿಕ್ತವಾಗಿ ಕುದ್ರೋಳಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮ ನಿಜಕ್ಕೂ ಅಭಿನಂದನಾರ್ಹ. ಈ ಕಾರ್ಯಕ್ರಮಕ್ಕೆ ಸಹಸ್ರ ಸಂಖ್ಯೆಯಲ್ಲಿ ಧಾವಿಸಿ ಬಂದ ಆ ಅಕ್ಕಂದಿರನ್ನು ನಾಡಿನ ಜನತೆ ಮೆಚ್ಚಬೇಕು. ನಾಡಿನಾದ್ಯಂತ ಇಂತಹ ಕಾರ್ಯಕ್ರಮಗಳು ನಡೆದು ಮಹಿಳೆಗೆ ಸಿಗಬೇಕಾದ ಸ್ಥಾನಗೌರವ ಮರ್ಯಾದೆ ಸಿಗುವಂತಾಗಲಿ. 
 - ತಡಗಳಲೆ ಸುರೇಂದ್ರ, ಬೆಂಗಳೂರು

  ವಿಧವೆ ಎನಿಸಿಕೊಳ್ಳುವುದೇಕೆ?
ಹುಟ್ಟಿದವರು ಒಂದಲ್ಲ ಒಂದು ದಿನ ಸಾಯಲೇ ಬೇಕು. ಪತ್ನಿ ಸತ್ತರೆ ನಿಘಂಟಿನ ಪ್ರಕಾರ ವಿದುರ ಎಂಬ ಹೆಸರಿದೆಯಾದರೂ ಅವರ ಸಾಮಾಜಿಕ ಸ್ಥಾನಮಾನದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಆದರೆ ಪತಿ ಸತ್ತರೆ ಪತ್ನಿ ವಿಧವೆ ಎಂದು ಮಾತ್ರ ಅನಿಸಿಕೊಳ್ಳದೇ ಅಮಂಗಳೆ ಎಂದೂ ಕರೆಸಿಕೊಳ್ಳುತ್ತಾಳೆ.

ಸಾಮಾಜಿಕವಾಗಿ ಸಿಗುತ್ತಿದ್ದ ಸ್ಥಾನಮಾನಗಳಿಂದ ಹೊರ ತಳ್ಳಲ್ಪಡುತ್ತಾಳೆ. ಇಂತಹ ಅಮಾನವೀಯ ಆಚರಣೆಗಳಿಗೆ ಮಂಗಳ ಹಾಡುವ ದಿಸೆಯಲ್ಲಿ ಕುದ್ರೋಳಿ ದೇವಸ್ಥಾನದಲ್ಲಿ ನಡೆದ ಪ್ರಯತ್ನ ಒಂದು ಸಕಾರಾತ್ಮಕ ಹೆಜ್ಜೆ. ಜನಮನ ಪರಿವರ್ತನೆಯ ಇಂಥ ಕ್ರಮಗಳು ಫಲಕಾರಿಯಾಗುತ್ತವೆ.
 - ವಿಮಲಾ. ಕೆ.ಎಸ್. ಬೆಂಗಳೂರು.

ಕ್ರಾಂತಿಕಾರಿ ಹೆಜ್ಜೆ

ಮಂಗಳೂರಿನ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವೆಯರಿಗೆ ಅರಿಶಿನ ಕುಂಕುಮ, ಮಲ್ಲಿಗೆ  ಹೂವಿನೊಂದಿಗೆ ಸೀರೆಯನ್ನು ನೀಡಿ ತೇರು ಎಳೆಯಲು ಅವಕಾಶ ನೀಡಿ ಗೌರವಿಸಿದ ಕ್ರಾಂತಿಕಾರಿ ಕ್ರಮವನ್ನು ಮನುಷ್ಯತ್ವ ಇರುವ ಎಲ್ಲರೂ ಒಪ್ಪಲೇಬೇಕು. ಇಂತಹ ಇಂತಹ ಕ್ರಾಂತಿಕಾರಿ ಕಾರ್ಯಕ್ರಮಗಳು ಧಾರ್ಮಿಕ ಕ್ಷೇತ್ರಗಳಿಂದಲೇ ನಡೆದಲ್ಲಿ ಎಲ್ಲರನ್ನೂ ಒಪ್ಪಿಸಲು ಸುಲಭವಾಗಬಹುದೇನೊ. ವಿಧವೆಯರ ಕೀಳರಿಮೆಯನ್ನು ಮತ್ತು ವಿಧವೆಯರ ಬಗ್ಗೆ ಇರುವ ಮೂಢ ನಂಬಿಕೆಯನ್ನು ದೂರ ಮಾಡಲು ಅವರಿಂದಲೇ ಆರತಿ ಎತ್ತಿಸುವುದು, ಅವರಿಗೆ ಅರಿಸಿನ ಕುಂಕುಮ ಮತ್ತು ಹೂ ಕೊಡುವ ಹೊಸ ಸಾಂಪ್ರದಾಯವನ್ನು ಹುಟ್ಟುಹಾಕಬೇಕಿದೆ.

ಮೊದಲೇ ಗಂಡನನ್ನು ಕಳೆದುಕೊಂಡು ಒಂಟಿ ಬದುಕು ದೂಡುತ್ತಿರುವಾಗ ಎಲ್ಲರಿಂದ ಅವಳನ್ನು ಬೇರ್ಪಡಿಸಿ ಗಂಡ ತೀರಿಹೋದ ನೆನಪನ್ನು ಮರುಕಳಿಸುವಂತೆ ಗಾಸಿಗೊಳಿಸಿ ಮಾನಸಿಕ ರೋಗಿಯನ್ನಾಗಿ ಮಾಡುವುದು ಸರಿಯಲ್ಲ. ಕುಟುಂಬದಲ್ಲಿ ಗಂಡಸಿಗಿಂತ ಹೆಚ್ಚು ಹೊಣೆ ಹೊತ್ತ ಮಹಿಳೆಗೆ ಗಂಡನಿಂದಲೇ ಸಕಲ ಸೌಭಾಗ್ಯ ಎನ್ನಬೇಕಿಲ್ಲ. ಬದುಕು ಅವಳದು. ಬದುಕಿನ ದಾರಿಯೂ ಅವಳದು. ಹಾಗಿದ್ದಾಗ ಅವಳು ಮದುವೆಯಾದ ಮಹಿಳೆ ಇರಲಿ, ಮದುವೆಯಾಗದವಳೇ ಇರಲಿ, ಗಂಡ ಸತ್ತವಳೇ ಆಗಿರಲಿ, ಅವಳು ಹಾಗಿರಬೇಕು ಹೀಗಿರಬೇಕು ಎನ್ನುವ ಗಂಡಸಿಗಿಲ್ಲದ ನಿರ್ಬಂಧಗಳು ಅವಳಿಗೇಕೆ?  
  - ಪಾರ್ವತಿ ಅ.ಪಿಟಗಿ,  ಸುಳೇಭಾವಿ,ಬೆಳಗಾವಿ

ಪ್ರೇರಣೆಯಾಗಲಿ

ಸಮಾಜದಲ್ಲಿನ ಅಂಧ ಆಚರಣೆಗಳನ್ನು ತೊಡೆದುಹಾಕುವಲ್ಲಿ ಕುದ್ರೋಳಿ ದೇವಸ್ಥಾನದಂತಹ ಧಾರ್ಮಿಕ ಕೇಂದ್ರ ಆರಂಭಿಸಿದ ನಡೆಯನ್ನು ಬೆನ್ನುತಟ್ಟಿದಾಗ ಅವರಿಗೂ ಸಮಾಧಾನವಾಗುತ್ತದೆ, ಇನ್ನಷ್ಟು ಇಂತಹ ಕಾರ್ಯ ನಡೆಸಲೂ ಪ್ರೇರಣೆಯಾಗುತ್ತದೆ, ಇದನ್ನೇ ಮಾದರಿಯಾಗಿ ಅನುಸರಿಸಲು ಇತರ ಧಾರ್ಮಿಕ ಕೇಂದ್ರಗಳಿಗೂ ಪ್ರೇರಣೆಯಾಗುತ್ತದೆ. 
 - ಶ್ರೀನಿವಾಸ ಕಾರ್ಕಳ, ಮಂಗಳೂರು

ಐತಿಹಾಸಿಕ ನಿಲುವು

ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಲಿಯು ವಿಧವೆಯರನ್ನು ಮಂಗಳದ್ರವ್ಯಗಳಿಂದ ಗೌರವಿಸಿ ಚಂಡಿಕಾ ಹೋಮದಲ್ಲಿ ಭಾಗವಹಿಸುವಂತೆ ಮಾಡಿ ತೇರನ್ನು ಎಳೆಯುವುದಕ್ಕೆ ಅನುವು ಮಾಡಿಕೊಟ್ಟ ಐತಿಹಾಸಿಕ ನಿಲುವಿಗೆ ಅಭಿನಂದನೆ ಸಲ್ಲಿಸಲೇಬೇಕು.

ತಮ್ಮದಲ್ಲದ ತಪ್ಪಿನಿಂದ ಭೂಮಿಯ ಮೇಲೆ ನರಕ ಯಾತನೆಪಡುವ ಮಹಿಳೆಯರಿಗೆ ಸ್ವಲ್ಪ ಸಾಂತ್ವನ ಕೊಡುವಲ್ಲಿ ಇದು ತಣ್ಣನೆಯ ಲೇಪದಂತಿದೆ. `ವಿಧವೆ~ ಎಂಬ ಪದವನ್ನು ಅಳಿಸಿ ಹಾಕಬೇಕೆಂಬ ಜನಾರ್ದನ ಪೂಜಾರಿ ಅವರ ಹೇಳಿಕೆ ಸಮರ್ಥನೀಯ. ಜಗತ್ತಿನ ಯಾವುದೇ ದೇಶದ ಯಾವುದೇ ಬುಡಕಟ್ಟಿನಲ್ಲಿ ಇಲ್ಲದ ಈ ಅನಿಷ್ಟ ಆಚರಣೆ ಕೊನೆಗೊಳ್ಳಲೇಬೇಕು. ದೇವರ ದೀಪಕ್ಕೆ ಹೂಬತ್ತಿ ಹೊಸೆಯುವುದು, ದೇವರ ಸಾಮಾನು ಸಂರಂಜಾಮನ್ನು ಬೆಳಗುವುದು, ಸಾರಿಸುವುದು, ಗುಡಿಸುವುದು- ಇತ್ಯಾದಿ ಬಿಟ್ಟಿ ಚಾಕರಿಗೆ ಮಾತ್ರ ಸೀಮಿತಗೊಳಿಸಿ ಇವರನ್ನು ಶೋಷಿಸುತ್ತಿದ್ದ ಮಠ ಮಂದಿರಗಳು ತಮ್ಮನ್ನು ಸುಧಾರಿಸಿಕೊಳ್ಳಬೇಕು.

ಸಂಗಾತಿಯನ್ನು ಕಳೆದುಕೊಂಡ ಪ್ರಾಯದ ಹೆಂಗಸರನ್ನು ದುರುಪಯೋಗಗೊಳಿಸಿಕೊಳ್ಳುವ ಚಪಲಗಾರ ಗಂಡಸರಿಂದ ಇವರನ್ನು ರಕ್ಷಿಸುವುದೂ ಸಮಾಜದ ಹೊಣೆ. ಪುಕ್ಕಟೆ ಸಿಕ್ಕಿದ್ದೆಂದು ಲಫಂಗ ಉಢಾಳಿಗಳು ಮೇಯಲು ಹೊರಡದಂತೆ ಕಾಯಿದೆಗಳನ್ನು ಬಲು ಕಠಿಣವಾಗಿಸುವುದೂ ಅತಿ ಅವಶ್ಯಕ.
- ಡಾ. ಈಶ್ವರಶಾಸ್ತ್ರಿ ಮೋಟಿನಸರ, ಮರಾಠಿಕೊಪ್ಪ, ಶಿರಸಿ.

ಕೃಪೆಯಲ್ಲ ಮಾನವೀಯ ಹಕ್ಕು

ವಿಧವೆಯರು ಮಂಗಳೂರಿನ ಗೋಕರ್ಣನಾಥನ ಬೆಳ್ಳಿಯ ತೇರೆಳೆದು `ಮಂಗಳ ಭಾಗ್ಯ~ ಪಡೆದರಂತೆ! ಗಂಡ ಸತ್ತ ಹೆಂಗಸನ್ನು ಅದೇ ಚಿತೆಯಲ್ಲಿ ಸುಟ್ಟು ಬಿಡುವಷ್ಟು ಬರ್ಭರವಾಗಿತ್ತು,  `ಗಂಡು ಸಮಾಜ~; ನಂತರ ಆಕೆ ಓಲೆ-ತಾಳಿ ಕಿತ್ತು ತಲೆ ಬೋಳಿಸಿ, ವಿಕಾರವಾಗಿ ಬದುಕಬಿಡುವಷ್ಟು `ಔದಾರ‌್ಯ~ ತೋರಿತು.

ಈಗೀಗ ಅಂತಹ ಅನ್ಯಾಯವನ್ನು ಪ್ರತಿಭಟಿಸುವಷ್ಟು  `ಮಹಿಳಾಸಬಲೀಕರಣ~ ಆಗಿದೆ. ಗಂಡನಿಲ್ಲದ ಹೆಣ್ಣು, ಸಾಹಿತ್ಯ ಸಮ್ಮೇಳನದಲ್ಲಿ  `ಕಳಸಗಿತ್ತಿ~ಯಾಗುವುದು ಅಮಂಗಳ ಎಂಬ ಮೌಢ್ಯ ತೋರಿದ ಕಸಾಪ ಸ್ಥಳೀಯ ಪದಾಧಿಕಾರಿಗಳು, ನಾಲ್ಕೂ ದಿಕ್ಕಿನಿಂದ ಟೀಕೆ ಬಂದ ನಂತರ ಆ ನಿರ್ಣಯ ಕೈಬಿಟ್ಟದ್ದು ಸಮಾಧಾನಕರ. ಗಂಡನಿಲ್ಲದ ಹೆಂಗಸರು ಈಗ ದೇವರ ತೇರೆಳೆದಿದ್ದಾರೆ.

 ಪತ್ರಿಕೆಗಳಲ್ಲಿ ಇದು ಮುಖಪುಟ ಸುದ್ದಿಯಾಗುವಂತೆ ಮೌಢ್ಯ ನಮ್ಮಲ್ಲಿ ಇನ್ನೂ ಉಳಿದಿರುವುದೇ ಅಚ್ಚರಿ. ಗಂಡನಿರಲಿ, ಇಲ್ಲದಿರಲಿ, ಸಾಂವಿಧಾನಿಕವಾಗಿ ಮಹಿಳೆ ದೇಶದ ಸಮಾನ ಪ್ರಜೆ. ಹಾಗಾಗಿ ಅವರಿಗೆ ಸಲ್ಲಬೇಕಾದ ಸ್ಥಾನಮಾನ ಮತ್ತು ಗೌರವ ಕೃಪೆಯಲ್ಲ. ಅದು ಮಾನವೀಯ ಹಕ್ಕು.
 -ಆರ್. ಕೆ. ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT