ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್ ಆರ್ಥಿಕ ಪ್ರಶಸ್ತಿ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಂ (ಎಎಫ್‌ಪಿ): ಅಮೆರಿಕದ ಆರ್ಥಿಕ ತಜ್ಞರಾದ ಥಾಮಸ್ ಸಾರ್ಜೆಂಟ್ ಮತ್ತು ಕ್ರಿಸ್ಟೋಫರ್ ಸಿಮ್ಸ, 2011ನೇ ಸಾಲಿನ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ಹಂಚಿಕೊಂಡಿದ್ದಾರೆ.

ಅರ್ಥ ವ್ಯವಸ್ಥೆ ಮತ್ತು ಸರ್ಕಾರದ ಆರ್ಥಿಕ ನೀತಿ ನಿರೂಪಣೆಗೆ ಸಂಬಂಧಿಸಿದ ಅಧ್ಯಯನ ಮತ್ತು ಸಂಶೋಧನೆಗಳಿಗಾಗಿ ಇವರಿಬ್ಬರನ್ನು ಆಯ್ಕೆ ಮಾಡಲಾಗಿದೆ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಹಣದುಬ್ಬರ, ಉದ್ಯೋಗ, ಬಂಡವಾಳ ಹೂಡಿಕೆ ಮತ್ತು ಸರ್ಕಾರಗಳ ಆರ್ಥಿಕ ನೀತಿಗಳ ಮಧ್ಯೆ ಇರುವ ಸಂಬಂಧ ಕುರಿತು ಏಳುವ ಪ್ರಶ್ನೆಗಳಿಗೆ ಇವರಿಬ್ಬರೂ ಉತ್ತರ ಕಂಡುಕೊಳ್ಳುವ ಸೂಕ್ತ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.

ಆರ್ಥಿಕ ನೀತಿಯಲ್ಲಿನ ಶಾಶ್ವತ ಬದಲಾವಣೆಗಳನ್ನು ವಿಶ್ಲೇಷಿಸುವ ಆರ್ಥಿಕ ವಿಧಾನಗಳ ಬಗ್ಗೆ ಸಾರ್ಜೆಂಟ್ ಅಧ್ಯಯನ ಕೈಗೊಂಡಿದ್ದರು.  ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕುಟುಂಬಗಳು ಮತ್ತು ಉದ್ದಿಮೆ ಸಂಸ್ಥೆಗಳು ತಮ್ಮ ಹಣಕಾಸಿನ ನಿರೀಕ್ಷೆಗಳನ್ನು ಹೊಂದಾಣಿಕೆ ಮಾಡಿಕೊಳ್ಳುವಲ್ಲಿನ ಆರ್ಥಿಕ ಬಾಂಧವ್ಯ ಅಧ್ಯಯನ ಮಾಡಲು ಈ ವಿಧಾನ ಬಳಸಬಹುದು.

ಆರ್ಥಿಕ ನೀತಿಯಲ್ಲಿ, ಬ್ಯಾಂಕ್ ಬಡ್ಡಿ ದರ ಹೆಚ್ಚಳದಂತಹ  ತಾತ್ಕಾಲಿಕ ಬದಲಾವಣೆಗಳನ್ನು ಮಾಡಿದಾಗ ಅದರಿಂದ ಒಟ್ಟಾರೆ ಅರ್ಥ ವ್ಯವಸ್ಥೆ ಮತ್ತು ಇತರ ವಿದ್ಯಮಾನಗಳ ಮೇಲೆ ಆಗುವ  ಪರಿಣಾಮಗಳನ್ನು ಸಿಮ್ಸ ಅವರ ವಿಧಾನ ವಿವರಿಸುತ್ತದೆ.

ಸಾರ್ಜೆಂಟ್ ಮತ್ತು ಸಿಮ್ಸ ಅವರ ಸಾಧನೆಗಳು ಪ್ರತ್ಯೇಕವಾಗಿದ್ದರೂ  ಅವರಿಬ್ಬರ ಕೆಲಸ ಪರಸ್ಪರ ಪೂರಕವಾಗಿವೆ. ಇವರ ವಿಧಾನಗಳನ್ನು ವಿಶ್ವದಾದ್ಯಂತ ಸಂಶೋಧಕರು ಮತ್ತು ಆರ್ಥಿಕ ನೀತಿ ನಿರೂಪಕರು ಅಳವಡಿಸಿಕೊಂಡಿದ್ದಾರೆ. ಆರ್ಥಿಕ ವಿದ್ಯಮಾನಗಳ ವಿಶ್ಲೇಷಣೆಯಲ್ಲಿ ಇವು ಅಗತ್ಯ ವಿಧಾನಗಳಾಗಿವೆ ಎಂದು ಸಮಿತಿ ತಿಳಿಸಿದೆ.

ಸಾರ್ಜೆಂಟ್, ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಿಮ್ಸ ಅವರು, ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಪ್ರಾಧ್ಯಾಪಕರಾಗಿದ್ದಾರೆ.

ಥಾಮಸ್ ಸಾರ್ಜೆಂಟ್ ಕ್ರಿಸ್ಟೋಫರ್   ಸಿಮ್ಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT