ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಯ್ಡಾದಲ್ಲಿ ಕಾರ್ಮಿಕರಿಂದ ಹಿಂಸಾಚಾರ

ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ
Last Updated 20 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ಬುಧವಾರ ಆರಂಭಗೊಂಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹರಿಯಾಣಾದಲ್ಲಿ ಕಾರ್ಮಿಕ ನಾಯಕರೊಬ್ಬರು ಬಸ್ ನಿಲ್ಲಿಸಲು ಯತ್ನಿಸುತ್ತಿದ್ದಾಗ ಆಕಸ್ಮಿಕವಾಗಿ ಸತ್ತಿದ್ದಾರೆ. ದೆಹಲಿ ಹೊರವಲಯದ ನೊಯ್ಡಾದಲ್ಲಿ ಹಿಂಸಾಚಾರ ನಡೆದಿದ್ದು, ಕೆಲ ಕಾರ್ಖಾನೆಗಳ ಘಟಕಕ್ಕೆ ಹಾನಿ ಮಾಡಲಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ದೇಶದಾದ್ಯಂತ ಬ್ಯಾಂಕಿಂಗ್ ಸೇವೆ ಸಂಪೂರ್ಣ ಕುಸಿದುಬಿದ್ದಿತ್ತು. ಸಾರ್ವಜನಿಕ ಸಾರಿಗೆ ಅಸ್ತವ್ಯಸ್ತಗೊಂಡಿತ್ತು.

ಮುಷ್ಕರದ ಪರಿಣಾಮ ಕೇರಳ, ತ್ರಿಪುರ ಹಾಗೂ ಬಿಹಾರಗಳಲ್ಲಿ ತೀವ್ರವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಒಡಿಶಾ ಮತ್ತು ಕರ್ನಾಟಕದಲ್ಲಿ ಕಲ್ಲು ತೂರಾಟದಂತಹ ಘಟನೆಗಳು ವರದಿಯಾಗಿವೆ. ದೇಶದ ಹಲವು ನಗರಗಳಲ್ಲಿ ಕಾರ್ಮಿಕ ಸಂಘಟನೆಗಳು ಮೆರವಣಿಗೆ ನಡೆಸಿವೆ.

ಯುಪಿಎ ಸರ್ಕಾರದ ಆರ್ಥಿಕ ನೀತಿ ಹಾಗೂ ಕಾರ್ಮಿಕ ನೀತಿಯನ್ನು ವಿರೋಧಿಸಿ 11 ಕಾರ್ಮಿಕ ಸಂಘಟನೆಗಳು ದೇಶದಾದ್ಯಂತ ಕರೆ ನೀಡಿರುವ ಮುಷ್ಕರದಿಂದಾಗಿ ವಿಮಾನ ಹಾಗೂ ರೈಲು ಸಂಚಾರಕ್ಕೆ ಯಾವುದೇ ವ್ಯತ್ಯಯವಾಗಲಿಲ್ಲ. ಹರಿಯಾಣಾದಲ್ಲಿ `ಎಐಟಿಯುಸಿ' ಖಜಾಂಚಿ ಬಸ್ ಚಾಲಕರಾಗಿರುವ ನರೇಂದ್ರ ಸಿಂಗ್ ಅಂಬಾಲಾ ಡಿಪೋದಿಂದ ಹೊರಡುತ್ತಿದ್ದ ಬಸ್ ತಡೆಯಲು ಯತ್ನಿಸುತ್ತಿದ್ದಾಗ ಸತ್ತಿದ್ದಾರೆ.

ನೊಯ್ಡಾ ಎರಡನೇ ಹಂತದಲ್ಲಿ ಕೆಲ ಕಾರ್ಮಿಕರು ಕೆಲ ಸಿದ್ಧ ಉಡುಪು ಕಾರ್ಖಾನೆ ಮಾಲೀಕರ ಜತೆ ಸಂಘರ್ಷಕ್ಕೆ ಇಳಿದು, ವಾಹನಗಳಿಗೆ ಬೆಂಕಿ ಹಚ್ಚಿದರು. ರೊಚ್ಚಿಗೆದ್ದು, ಆಸ್ತಿಪಾಸ್ತಿಗೆ ಹಾನಿ ಮಾಡಿದರು.

ತೃಣಮೂಲ ಕಾಂಗ್ರೆಸ್ ನೇತೃತ್ವದ ಪಶ್ಚಿಮ ಬಂಗಾಳದಲ್ಲಿ ಮುಷ್ಕರಕ್ಕೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಯಿತು. ಕೋಲ್ಕತ್ತಾ ನಗರದಲ್ಲಿ ಸರ್ಕಾರಿ ಬಸ್‌ಗಳು ಹಾಗೂ ಟ್ರಾಮ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸಿದವು. ಮುಷ್ಕರದ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದು, ಸಚಿವಾಲಯದಲ್ಲಿ ನೌಕರರ ಹಾಜರಿ ಶೇ 100ರಷ್ಟಿತ್ತು ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ.

ಬಸ್ ಹಾಗೂ ಆಟೊ ಸಂಚಾರ ವಿರಳವಾಗಿದ್ದರಿಂದ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸಿದರು. ದೇಶದ ಆರ್ಥಿಕ ಜೀವನಾಡಿ ಮುಂಬೈನಲ್ಲಿ ಬ್ಯಾಂಕ್ ಹಾಗೂ ವಿಮಾ ವಲಯದ ನೌಕರರು ಸಂಪೂರ್ಣವಾಗಿ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಆರ್ಥಿಕ ವಹಿವಾಟು ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT