ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿ ಕಡ್ಡಾಯವಲ್ಲದ ದಸ್ತಾವೇಜುಗಳಿಗೆ ಮುದ್ರಾಂಕ ಶುಲ್ಕ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನೋಂದಣಿ ಕಡ್ಡಾಯವಲ್ಲದ ದಸ್ತಾವೇಜುಗಳಿಗೂ ಸರ್ಕಾರ ನಿಗದಿಪಡಿಸಿರುವ ಮುದ್ರಾಂಕ ಶುಲ್ಕವನ್ನು ಸಾರ್ವಜನಿಕರು ಹಾಗೂ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಪೂರ್ಣವಾಗಿ ಪಾವತಿ ಮಾಡಬೇಕು~ ಎಂದು ಕರ್ನಾಟಕ ನೋಂದಣಿ ಮಹಾಪರಿವೀಕ್ಷಕ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಬಿ.ಶಿವಪ್ಪ ಇಲ್ಲಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಉಪ ನೋಂದಣಿ ಕಚೇರಿಗಳಲ್ಲಿ ನೋಂದಣಿಯಾಗುವ ದಸ್ತಾವೇಜುಗಳಿಗೆ ಮಾತ್ರ ಮುದ್ರಾಂಕ ಶುಲ್ಕವನ್ನು ನೀಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಆದರೆ, ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 59 ಹಾಗೂ 67ಬಿ ಅನ್ವಯ ಐಚ್ಛಿಕ ನೋಂದಣಿ ದಸ್ತಾವೇಜುಗಳಿಗೂ ಸಹ ಮುದ್ರಾಂಕ ಶುಲ್ಕ ನೀಡಬೇಕು~ ಎಂದು ಹೇಳಿದರು.

`ಕರ್ನಾಟಕ ಮುದ್ರಾಂಕ ಕಾಯ್ದೆಗೆ 1999ರಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ವಿಷಯ ಬಹುತೇಕ ಸಾರ್ವಜನಿಕರಿಗೆ ತಿಳಿದಿಲ್ಲ. ನಿಯಮಾನುಸಾರ ನೋಂದಣಿಯೇತರ ಹಾಗೂ ಐಚ್ಛಿಕ ದಸ್ತಾವೇಜುಗಳಿಗೂ ಮುದ್ರಾಂಕ ಶುಲ್ಕ ಪಾವತಿ ಮಾಡಲೇಬೇಕಾಗಿದೆ~ ಎಂದರು.

`ಸಾಲದ ಸ್ವೀಕೃತಿ, ಪ್ರಮಾಣ ಪತ್ರಗಳು, ಸಾಮಾನ್ಯ ಕರಾರುಗಳು, ಕ್ರಯ ಪತ್ರದ ಕರಾರುಗಳು, ಹಕ್ಕು ಪತ್ರಗಳ ಠೇವಣಿ ಪತ್ರ, ಷೇರು ಮಾರುಕಟ್ಟೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳು (ಜ್ಞಾಪನಗಳು), ಸರಕುಗಳಿಗೆ ಸಂಬಂಧಿಸಿದ ಬಟವಾಡೆ (ಕೊರಿಯರ್) ಆದೇಶ, ಸ್ಥಿರ ಮತ್ತು ಚರಾಸ್ತಿಗಳ ಗುತ್ತಿಗೆ ಪತ್ರ ಹಾಗೂ ಜೀವ ವಿಮಾ ಪಾಲಿಸಿಗಳೂ ಸೇರಿದಂತೆ ಸುಮಾರು ಹತ್ತು ದಸ್ತಾವೇಜುಗಳಿಗೆ ಮುದ್ರಾಂಕ ಶುಲ್ಕ ಪಾವತಿ ಮಾಡಬೇಕು~ ಎಂದು ಅವರು ಹೇಳಿದರು.

`ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಸರ್ಕಾರಿ ನಿಗಮ ಮಂಡಳಿಗಳು ಹಾಗೂ ಸಂಸ್ಥೆಗಳು ತಮ್ಮ ಕಚೇರಿಗಳಲ್ಲಿ ಲಭ್ಯವಿರುವ ದಸ್ತಾವೇಜುಗಳಿಗೂ ಶುಲ್ಕ ಪಾವತಿ ಮಾಡುವುದು ಕಡ್ಡಾಯ. ತಮ್ಮ ವಶದಲ್ಲಿರುವ ದಸ್ತಾವೇಜುಗಳಿಗೆ ಮುದ್ರಾಂಕ ಶುಲ್ಕ ಪಾವತಿ ಮಾಡದೇ ಇದ್ದಲ್ಲಿ ಕಲಂ 67 `ಬಿ~ ಅನ್ವಯ ದಾಖಲೆಗಳ ಪರಿಶೀಲನೆ, ಶೋಧನೆ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇಲಾಖೆಯ ಆಯುಕ್ತರು, ಉಪ ಆಯುಕ್ತರಿಗೆ ಇದೆ~ ಎಂದು ಸ್ಪಷ್ಟಪಡಿಸಿದರು.

`ಮನೆಗಳನ್ನು ಒಂದು ವರ್ಷದ ಅವಧಿಗೆ ಬಾಡಿಗೆ ಪಡೆಯುವ ಅಥವಾ ಬೋಗ್ಯ (ಲೀಸ್) ನೀಡಲು ನೋಂದಣಿ ಅವಶ್ಯಕತೆ ಇಲ್ಲ. ಆದರೂ ಮುದ್ರಾಂಕ ಶುಲ್ಕ ಪಾವತಿ ಮಾಡುವುದು ಕಡ್ಡಾಯ. ಒಂದು ವರ್ಷ ಮೇಲ್ಪಟ್ಟ ಅವಧಿಗೆ ಪತ್ರಗಳ ನೋಂದಣಿಯನ್ನು ಕಡ್ಡಾಯ ಮಾಡಲಾಗಿದೆ. ಸರಿಯಾದ ಶುಲ್ಕ ಪಾವತಿ ಮಾಡದಿದ್ದಲ್ಲಿ ದಸ್ತಾವೇಜುಗಳು ಕಾನೂನಿನ ಅನ್ವಯ ಊರ್ಜಿತವಾಗಲಿವೆ~ ಎಂದು ಇಲಾಖೆಯ ಸಹಾಯಕ ನೋಂದಣಿ ಮಹಾ ಪರಿವೀಕ್ಷಕ (ಆಡಳಿತ) ಭೋಜನಾಯಕ ತಿಳಿಸಿದರು.

`ಮುಂದಿನ ದಿನಗಳಲ್ಲಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ರಾಜ್ಯದ ಎಲ್ಲಾ ವಿಭಾಗಗಳಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಇಲಾಖೆಗೆ ಸುಮಾರು 1.5 ಸಾವಿರ ಕೋಟಿ ಆದಾಯ ನಿರೀಕ್ಷಿಸಲಾಗಿದೆ~ ಎಂದರು. ಸಾರ್ವಜನಿಕರು ಹಾಗೂ ಸಂಸ್ಥೆಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಗಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯನ್ನು ಸಂಪರ್ಕ ಮಾಡಬಹುದು.

ನಿವೃತ್ತ ಐಎಎಸ್ ಅಧಿಕಾರಿ (ಸಲಹೆಗಾರ) ಕೆ.ರಾಮಣ್ಣ ನಾಯ್ಕ, ನೋಂದಣಿ ಉಪ ಮಹಾಪರಿವೀಕ್ಷಕ (ಜಾಗೃತ ದಳ) ಡಿ. ನಾಗೇಶು, ಸಹಾಯಕ ನೋಂದಣಿ ಮಹಾ ಪರಿವೀಕ್ಷಕ (ಲೆಕ್ಕ ಪರಿಶೋಧನೆ) ಎನ್.ರೆಡ್ಡಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT