ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟದಾಚೆಯ ನಿಸರ್ಗ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಮತಟ್ಟಾದ ನೆಲದಲ್ಲಿ ಎದುರಾಗುವ ಸಣ್ಣಪುಟ್ಟ ಎಡರು ತೊಡರುಗಳನ್ನು ದಾಟಿಕೊಂಡು ಮುನ್ನಡೆಯುವುದೇ ಅಂಧರಿಗೆ ಸವಾಲು. ಅಂಥದ್ದರಲ್ಲಿ ಬೆಟ್ಟ, ಕಣಿವೆಗಳಲ್ಲಿ ನಡೆದು ಅನುಭವವಿಲ್ಲದ ಈ ಅಂಧ ವಿದ್ಯಾರ್ಥಿನಿಯರು ಮೆಟ್ಟಿಲುಗಳ ನೆರವಿಲ್ಲದೆ, ದುರ್ಗಮ ಹಾದಿಯಲ್ಲಿ ನಡೆಯುತ್ತಾ, ಬೃಹತ್‌ ಬಂಡೆಗಳ ನಡುವೆ ನುಸುಳುತ್ತಾ, ತೆವಳುತ್ತಾ, ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ‘ಕುಂತಿಬೆಟ್ಟ’ವನ್ನು ಮೆಟ್ಟಿ ನಿಂತ ರೋಚಕ ಕ್ಷಣ ಪದಗಳಿಗೆ ನಿಲುಕದ್ದು.

ಇಂಥದ್ದೊಂದು ಸಾಹಸಯಾತ್ರೆ ಕೈಗೊಂಡಿದ್ದು ಮೈಸೂರಿನ ಮೇಟಗಳ್ಳಿಯಲ್ಲಿರುವ ರಂಗರಾವ್‌ ಸ್ಮಾರಕ ಅಂಧ ಹೆಣ್ಣು ಮಕ್ಕಳ ವಸತಿ ಶಾಲೆಯಲ್ಲಿ 9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು. ಪ್ರತಿ ವರ್ಷ ಶಾಲೆಯ ವಿದ್ಯಾರ್ಥಿನಿಯರನ್ನು ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ಬಾರಿ ಹೊಸತನವಿರಲಿ ಎಂಬ ಕಾರಣದಿಂದ ಕುಂತಿಬೆಟ್ಟದ ಚಾರಣಕ್ಕೆ ವಿದ್ಯಾರ್ಥಿನಿಯರನ್ನು ಕರೆದೊಯ್ಯೋಣ ಎಂದು ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ತೀರ್ಮಾನಿಸಿದರು. ಇದಕ್ಕೆ ವಿದ್ಯಾರ್ಥಿನಿಯರೂ ಖುಷಿಯಿಂದಲೇ ಸಮ್ಮತಿ ಸೂಚಿಸಿದರು.

ಮೈಸೂರಿನ ಇಂಟರ್‌ನ್ಯಾಷನಲ್‌ ಅಕಾಡೆಮಿ ಆಫ್‌ ಮೌಂಟನೇರಿಂಗ್‌ ಅಂಡ್‌ ಅಲೈಡ್‌ ಸ್ಫೋರ್ಟ್ಸ್ (ಐಎಎಂಎಎಸ್‌) ಸಂಸ್ಥೆ ಸಹಯೋಗದೊಂದಿಗೆ 15ನೇ ನವೆಂಬರ್ 2013ರಂದು, 20 ಅಂಧ ವಿದ್ಯಾರ್ಥಿನಿಯರು, ಇಬ್ಬರು ಶಿಕ್ಷಕರು ಹಾಗೂ ಐಎಎಂಎಎಸ್‌ ಸಂಸ್ಥೆಯ 10 ಸ್ವಯಂ ಸೇವಕರು ಮತ್ತು 6 ಮಾರ್ಗದರ್ಶಕರು 3 ಕುಂತಿಬೆಟ್ಟದ ತಪ್ಪಲನ್ನು ತಲುಪಿದರು. ಅಲ್ಲಿ ವಿದ್ಯಾರ್ಥಿನಿಯರಿಗೆ ಬೆಟ್ಟದ ಭೌಗೋಳಿಕ ಸ್ವರೂಪ, ಹತ್ತುವ ಬಗೆ, ಅನುಸರಿಸಬೇಕಾದ ಕ್ರಮ ಎಲ್ಲವನ್ನೂ ವಿವರವಾಗಿ ಮಾರ್ಗದರ್ಶಕರು ತಿಳಿಸಿಕೊಟ್ಟರು. ಈ ವಿವರಗಳನ್ನು ಕೇಳುತ್ತಾ ಹೋದಂತೆ ಹಲವರ ಮನಸ್ಸಿನಲ್ಲಿ ಮೂಡಿದ್ದು ಒಂದೇ ಪ್ರಶ್ನೆ–ಇದು ನಮಗೆ ಸಾಧ್ಯವೇ?

ಈ ಪ್ರಶ್ನೆಯನ್ನು ಮಾರ್ಗದರ್ಶಕರಲ್ಲಿ ಕೇಳಿದಾಗ ಅವರಿಂದ ಬಂದ ಪ್ರೋತ್ಸಾಹದ ಮಾತುಗಳು ದೃಷ್ಟಿಯ ಕೊರತೆಯನ್ನು ಇಲ್ಲವಾಗಿಸಿತು. ಸ್ವಯಂಸೇವಕರು ವಿದ್ಯಾರ್ಥಿನಿಯರ ಕೈಯನ್ನು ಹಿಡಿದು ಬೆಟ್ಟ ಹತ್ತಿಸಲು 9 ಗಂಟೆಗೆ ಆರಂಭಿಸಿದರು. ಹೆಜ್ಜೆ– ಹೆಜ್ಜೆಗೂ ಸೂಚನೆಗಳನ್ನು ಪಾಲಿಸುತ್ತಾ, ಸುಡುವ ಬಿಸಿಲನ್ನು ಲೆಕ್ಕಿಸದೆ ಸಂಭ್ರಮದಿಂದಲೇ ವಿದ್ಯಾರ್ಥಿನಿಯರು ಹೆಜ್ಜೆ ಇಟ್ಟರು. ಇಲ್ಲಿ ಚೂಪು ಕಲ್ಲಿದೆ, ಅಲ್ಲಿ ಬೃಹತ್‌ ಬಂಡೆಯಿದೆ, ಅತ್ತ ಕಣಿವೆಯಿದೆ, ಇತ್ತ ಮಣ್ಣಿದೆ... ಹೀಗೆ ಪ್ರತಿಯೊಂದನ್ನೂ ಅಡಿಗಡಿಗೆ ವಿವರಿಸುತ್ತಾ, ಜೋಪಾನವಾಗಿ ವಿದ್ಯಾರ್ಥಿನಿಯರನ್ನು ಕರೆದೊಯ್ಯುತ್ತಿದ್ದರು.

ಆರಂಭದಲ್ಲೇ ಸಿಗುವ ಕಲ್ಯಾಣಿಯನ್ನು ದಾಟಿ, ಮುಂದಿರುವ ಆಂಜನೇಯ ಮತ್ತು ಮಲ್ಲಿಕಾರ್ಜುನ ಸ್ವಾಮಿ ಗುಡಿಗಳೆದುರು ಯಾತ್ರೆಯ ಜಯಕ್ಕೆ ಪ್ರಾರ್ಥಿಸಿ ಮುಂದುವರಿದರು. ಕಲ್ಲು, ಮುಳ್ಳು, ತೊಡರುವ ಬಳ್ಳಿ, ಏದುಸಿರು ಬಿಡುವ ದಿಣ್ಣೆ, ಒಂದು ತಪ್ಪು ಹೆಜ್ಜೆಯೂ ಪಾತಾಳಕ್ಕೆ ಕರೆದೊಯ್ಯಬಹುದಾದ ಇಳಿಜಾರುಗಳೆಲ್ಲವೂ ವಿದ್ಯಾರ್ಥಿನಿಯರ ಆತ್ಮವಿಶ್ವಾಸದ ನಡಿಗೆಯ ಮುಂದೆ ಶರಣಾದವು. ಇಡುತ್ತಿದ್ದ ಹೆಜ್ಜೆಯ ಅಂತರದಿಂದಲೇ ವಿದ್ಯಾರ್ಥಿನಿಯರು ನಾವೆಷ್ಟು ಎತ್ತರ ಏರುತ್ತಿದ್ದೇವೆ ಎಂದು ಕಲ್ಪನೆ ಮಾಡಿಕೊಳ್ಳುತ್ತಿದ್ದರು. ಅಲ್ಲಲ್ಲಿ ದಣಿವಾರಿಸಿಕೊಳ್ಳಲು ಕೆಲಕಾಲ ಕುಳಿತು ಬಿಸ್ಕತ್ತು, ಸಿಹಿತಿಂಡಿ ತಿನ್ನುತ್ತಾ, ಅಂತ್ಯಾಕ್ಷರಿ ಹಾಡುತ್ತಾ ಪಯಣವನ್ನು ಮುಂದುವರಿಸುತ್ತಿದ್ದರು. ಸ್ವಲ್ಪ ದೂರ ಹೋದ ನಂತರ ಕೆಲವು ವಿದ್ಯಾರ್ಥಿನಿಯರು ಸ್ವತಂತ್ರವಾಗಿ ನಡೆಯಲು ಆರಂಭಿಸಿದರು. ಒಂದಿಬ್ಬರು ಖುಷಿಯಿಂದ ಓಡಲು ಪ್ರಯತ್ನಿಸಿ ಕೆಲ ಕಡೆ ಜಾರಿ ಬಿದ್ದು ಸಣ್ಣಪುಟ್ಟ ತರಚು ಗಾಯ ಮಾಡಿಕೊಂಡರು.

ಉತ್ಸಾಹದಿಂದ ಸಾಗುತ್ತಿದ್ದ ತಂಡಕ್ಕೆ ಧುತ್ತನೆ ಎದುರಾಗಿದ್ದು 25 ಅಡಿ ಎತ್ತರದ ಅತ್ಯಂತ ಕಡಿದಾದ ಬಂಡೆಗಲ್ಲು. ಬೆಟ್ಟದ ತುದಿ ತಲುಪಬೇಕು ಎಂದರೆ ಈ ಬಂಡೆಯನ್ನು ಹತ್ತಿಯೇ ಮುಂದೆ ಸಾಗಬೇಕು. ಆಗ ಸ್ವಯಂ ಸೇವಕರು ಬಂಡೆಯ ತುದಿಗೆ ಹಗ್ಗ ಕಟ್ಟಿ, ಅದರ ಸಹಾಯದಿಂದ ಮೇಲೇರುವಂತೆ ನೋಡಿಕೊಂಡರು. ಸ್ವಲ್ಪ ಜಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದಲೇ ಸ್ವಯಂ ಸೇವಕರು ಮೈಯೆಲ್ಲಾ ಕಣ್ಣುಗಳಾಗಿ ಎಚ್ಚರವಹಿಸಿದರು. ಈ ಪ್ರಯತ್ನ ಅಂಧ ವಿದ್ಯಾರ್ಥಿನಿಯರಿಗೆ ಬಂಡೆ ಏರುವ ಅನುಭವವನ್ನು ಒದಗಿಸಿತು.

ನೈಸರ್ಗಿಕ ಎ.ಸಿ !
ವಿಶಾಲ ಬಂಡೆಗಳಿಂದ ಆವೃತವಾದ ಗುಹೆಯೊಳಗೆ ಒಬ್ಬೊಬ್ಬರೆ ಒಳಹೊಕ್ಕರು. ಆಶ್ಚರ್ಯವೆಂದರೆ, ಗುಹೆಯೊಳಗೆ ತಂಪಾದ ವಾತಾವರಣ. ಬಿಸಿಲಿನಲ್ಲಿ ಬಳಲಿ ಬೆಂಡಾಗಿದ್ದ ತಂಡಕ್ಕೆ ಗುಹೆ ಸಿಕ್ಕಿದ್ದು, ಮರುಭೂಮಿಯಲ್ಲಿ ಓಯಸಿಸ್‌ ಸಿಕ್ಕಂತಾಯಿತು. ವಿದ್ಯಾರ್ಥಿನಿಯರು ಕೇಕೆ ಹಾಕುತ್ತಾ, ಗೆಳತಿಯರ ಹೆಸರನ್ನು ಕೂಗುತ್ತಿದ್ದರೆ ಗುಹೆಯೂ ಪ್ರತಿಧ್ವನಿ ಹೊರಹೊಮ್ಮಿಸುತ್ತಿತ್ತು. ನಂತರ, 30 ನಿಮಿಷ ಹಾಗೆಯೇ ನಿದ್ದೆಗೆ ಜಾರಿದರು. ಬಳಿಕ ಎದ್ದು ಕುರುಕಲು ತಿಂಡಿಗಳನ್ನು ಮೆಲ್ಲುತ್ತಾ ಬೆಟ್ಟದ ತುದಿ ಏರಲು ಅಣಿಯಾದರು.

ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದ ಚಾರಣಿಗರ ಮನಸನ್ನು ಅರಳಿಸಿದ್ದು ಅಲ್ಲಿನ ವಿಶಿಷ್ಟ ಕಲ್ಲುಬಂಡೆಗಳು. ಏಕೆಂದರೆ ಆ ಬಂಡೆಗಳು ಪ್ರಾಣಿಗಳ ಮುಖವನ್ನು ಹೋಲುತ್ತಿದ್ದವು. ಒಂದೆರೆಡು ಬಂಡೆಗಳಂತು ಜಿಂಕೆಯ ಮತ್ತು ಮಲಗಿರುವ ತೋಳದ ಮುಖದಂತೆ ಕಾಣಿಸಿದವು. ಬೆಟ್ಟದಿಂದ ಕೆಳಕ್ಕೆ ನೋಡುತ್ತಿರುವ ಮೊಸಳೆ ರೂಪದ ಕಲ್ಲೊಂದು ಚಾರಣಿಗರಿಗೆ ಹೊಸ ಅನುಭವ ನೀಡಿತು. ಈ ಬಗ್ಗೆ ಸ್ವಯಂ ಸೇವಕರು ಅಂಧ ವಿದ್ಯಾರ್ಥಿನಿಯರಿಗೆ ವರ್ಣಿಸಿ ಹೇಳಿದರು. ಆಗ ತಮ್ಮ ಕಣ್ಣುಗಳ ರೆಪ್ಪೆಗಳನ್ನು ಪಟ ಪಟನೆ ಬಡಿದು ತಮಗಾದ ಸಂತಸವನ್ನು ವಿದ್ಯಾರ್ಥಿನಿಯರು ವ್ಯಕ್ತಪಡಿಸಿದರು. ಸ್ವಯಂ ಸೇವಕರು ತಾವು ಕಂಡ ನೋಟಗಳನ್ನು, ಅನುಭವಗಳನ್ನು ವಿದ್ಯಾರ್ಥಿನಿಯರ ಮನಸ್ಸಿಗೆ ದಾಟಿಸುತ್ತಿದ್ದರು.

ಎಲ್ಲ ಅಡೆ– ತಡೆಗಳನ್ನು ದಾಟಿ ಸಮುದ್ರಮಟ್ಟದಿಂದ 800 ಅಡಿ ಎತ್ತರದಲ್ಲಿರುವ ಗಿರಿಯ ತುತ್ತ ತುದಿಯನ್ನು ಮಧ್ಯಾಹ್ನ 12.45ಕ್ಕೆ ತಲುಪಿದಾಗ ಚಾರಣಿಗರ ಸಂತೋಷ ನೂರ್ಮಡಿಯಾಯಿತು. ಎಲ್ಲರೂ ಓಹೋ... ಎಂದು ಹರ್ಷೋದ್ಗಾರ ಮಾಡುತ್ತಾ, ಚಪ್ಪಾಳೆ ತಟ್ಟುತ್ತಾ, ಕುಣಿದು ಕುಪ್ಪಳಿಸಿದರು. ಅಲ್ಲಿದ್ದ ಕುಂತಿ ಒನಕೆಯನ್ನು ವಿದ್ಯಾರ್ಥಿನಿಯರು ಸ್ಪರ್ಶಿಸಿ, ತಬ್ಬಿ ಹಿಡಿದರು. ‘ಇಲ್ಲಿಂದ ನೋಡಿದರೆ ಕೆರೆ ಅಂಗೈಯಗಲ ಕಾಣುತ್ತದೆ. ವಿಶಾಲವಾದ ಹೊಲ ಗದ್ದೆಗಳು ಪುಟ್ಟ ಸಸಿ ಮಡಿಗಳಂತೆ ಕಾಣುತ್ತವೆ. ವಾಹನಗಳು ಬೆಂಕಿ ಪೊಟ್ಟಣದಂತೆ ಕಾಣಿಸುತ್ತವೆ... ಹೀಗೆ ತಮಗೆ ಸುತ್ತಲೂ ಕಾಣುತ್ತಿದ್ದ ದೃಶ್ಯಗಳನ್ನು ಗಾತ್ರಗಳಲ್ಲಿ ಹೇಳುವ ಮೂಲಕ ಅಂಧ ವಿದ್ಯಾರ್ಥಿನಿಯರಿಗೆ ನಾವೆಷ್ಟು ಎತ್ತರ ತಲುಪಿದ್ದೇವೆ ಎಂಬುದರ ಕಲ್ಪನೆಯನ್ನು ಮಾರ್ಗದರ್ಶಕರು ಕಟ್ಟಿಕೊಡುತ್ತಿದ್ದರು. ನಂತರ ಎಲ್ಲರೂ ಒಟ್ಟಾಗಿ ಫೋಟೊ ತೆಗೆಸಿಕೊಂಡು, ತಿಂಡಿ ತಿನಿಸುಗಳನ್ನು ತಿಂದು ಒಂದು ಗಂಟೆ ಕಾಲ ಕಳೆದ ನಂತರ ಬೆಟ್ಟವನ್ನು ಇಳಿಯಲು ಅಣಿಯಾದರು.

ಹತ್ತುವಾಗ ಆಸರೆಯಾಗಿ ಬಂಡೆಗಳು ಸಿಗುತ್ತಿದ್ದವು. ಅವುಗಳನ್ನು ತಬ್ಬಿಕೊಂಡು ಹಂತ ಹಂತವಾಗಿ ಯಶಸ್ವಿಯಾಗಿ ಮೇಲೆರಿದ ತಂಡಕ್ಕೆ ಇಳಿಯುವಾಗ ಮತ್ತೆ ಸಮಸ್ಯೆ ಎದುರಾಯಿತು. ಏಕೆಂದರೆ ಕಡಿದಾದ ಇಳಿಜಾರುಗಳಲ್ಲಿ ಅಂಧ ವಿದ್ಯಾರ್ಥಿನಿಯರನ್ನು ಇಳಿಸುವುದು ಸುಲಭ ಕಾರ್ಯವಾಗಿರಲಿಲ್ಲ.

ಸ್ವಯಂ ಸೇವಕರು ವಿದ್ಯಾರ್ಥಿನಿಯರ ತೋಳುಗಳಿಗೆ ಆಸರೆಯಾಗಿ ನಿಂತು ಮೆಲ್ಲಗೆ ಒಂದೊಂದೇ ಹೆಜ್ಜೆ ಇಳಿಸುತ್ತಾ ಕರೆತಂದರು. ಬೆಟ್ಟದ ಮಧ್ಯದಲ್ಲಿರುವ ಪುಟ್ಟ ಬಂಡೆಯಲ್ಲಿ ವಿದ್ಯಾರ್ಥಿನಿಯರನ್ನು ಜಾರುಬಂಡಿ ಆಡಲು ಬಿಟ್ಟು ಅವರಲ್ಲಿನ ಭಯವನ್ನು ಹೋಗಲಾಡಿಸಿದರು. ನಂತರ ಒಂದೊಂದೆ ಬಂಡೆಗಳನ್ನು ಇಳಿಯುತ್ತಾ ಬೆಟ್ಟದ ತಪ್ಪಲನ್ನು ಸೇರಿದಾಗ ಸಮಯ ಮಧ್ಯಾಹ್ನ 3.45. ಅಲ್ಲಿಂದ ವಾಹನಗಳ ಮೂಲಕ ಮೈಸೂರಿನಲ್ಲಿರುವ ವಸತಿ ಶಾಲೆಯನ್ನು ಸಂಜೆ 4.30ಕ್ಕೆ ತಲುಪಿದರು.

ಹೀಗೆ, ಅಂಧ ವಿದ್ಯಾರ್ಥಿನಿಯರನ್ನು ಹೊಸ ಅನುಭವಕ್ಕೆ ತೆರೆದುಕೊಳ್ಳುವಂತೆ ಮಾಡಿದ ಐಎಎಂಎಎಸ್‌ ಸಂಸ್ಥೆಯ ತಂಡದಲ್ಲಿ ಹಿಮಾಲಯ ಸಾಹಸಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಅಂಜಲಿ ವಿ. ಭಟ್‌, ಅರ್ಚಿತಾ ರಾಜಾ, ಅನುಭವಿ ಚಾರಣಿಗರಾದ ಟೈಗರ್‌ ಸೋಲಂಕಿ, ಅನಿಲ್‌ಕುಮಾರ್‌, ಶಂಕರ್‌ ಸುಬ್ರಹ್ಮಣ್ಯ, ರಾಜೀವ್‌ ಮುಂತಾದ ಉತ್ಸಾಹಿಗಳು ಇದ್ದಾರೆ. ವಿದ್ಯಾರ್ಥಿನಿಯರೊಂದಿಗೆ ತೆರಳಿದ್ದ ಶಿಕ್ಷಕಿಯರಾದ ಕವಿತಾ ಮತ್ತು ಶಾಂತಿ ಕೂಡ ಅಂಧರು. ಎನ್‌.ಆರ್. ಫೌಂಡೇಶನ್‌ನ ಹರೀಶ್‌ ಮತ್ತು ವಿಜಯ್‌ಕುಮಾರ್‌ ತಂಡಕ್ಕೆ ಉತ್ತಮ ಸಾಥ್‌ ನೀಡಿದರು.

ಕುಂತಿ’ ಮಾರ್ಗ
ಕುಂತಿಬೆಟ್ಟ ಅವಳಿ ಬೆಟ್ಟಗಳ ಶ್ರೇಣಿಯಾಗಿದೆ. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿ ಕೆಲಕಾಲ ನೆಲೆಸಿದ್ದರು. ಇದರಿಂದ ಈ ಬೆಟ್ಟಕ್ಕೆ ‘ಕುಂತಿಬೆಟ್ಟ’ ಎಂಬ ಹೆಸರು ಬಂದಿದೆ. ಇಲ್ಲಿ ಭೀಮನು ಬಕಾಸುರನನ್ನು ವಧೆ ಮಾಡಿದನು ಎಂಬುದನ್ನು ಪುರಾಣಗಳು ಹೇಳುತ್ತವೆ. ಹೈದರ್‌ ಮತ್ತು ಟಿಪ್ಪುಸುಲ್ತಾನ್‌ ಕಾಲದಲ್ಲಿ ಫ್ರೆಂಚರ ಸೈನ್ಯ ಇಲ್ಲಿ ಬೀಡು ಬಿಟ್ಟಿತ್ತು. ಆ ಕಾರಣ ಇದಕ್ಕೆ ‘ಫ್ರೆಂಚ್‌ ರಾಕ್ಸ್‌’ ಎಂದು ಕರೆಯುತ್ತಾರೆ ಎಂಬುದನ್ನು ಇತಿಹಾಸ ತಿಳಿಸುತ್ತದೆ.

ಈ ಬೆಟ್ಟ ಬೆಂಗಳೂರಿನಿಂದ 130 ಕಿ.ಮೀ, ಪಾಂಡವಪುರದಿಂದ 4 ಕಿ.ಮೀ. ಅಂತರದಲ್ಲಿದೆ. ಮಂಡ್ಯ–ಪಾಂಡವಪುರ ಮಾರ್ಗವಾಗಿ ಸಾಗಿದರೆ ಕುಂತಿಬೆಟ್ಟದ ಗೇಟ್‌ ಸಿಗುತ್ತದೆ. ಅಲ್ಲಿಂದ 1 ಕಿ.ಮೀ. ದೂರದಲ್ಲಿರುವ ಬೆಟ್ಟದ ತಪ್ಪಲು ತಲುಪಲು ಯಾವುದೇ ಬಸ್‌ ಸೌಕರ್ಯವಿಲ್ಲ. ಹೀಗಾಗಿ ಕೆಲವರು ಕಾಲ್ನಡಿಗೆಯಲ್ಲಿ ಮತ್ತೆ ಕೆಲವರು ಖಾಸಗಿ ವಾಹನಗಳಲ್ಲಿ ಸಾಗುತ್ತಾರೆ.

ಸಾಹಸದ ಮೊದಲನೇ ಹೆಜ್ಜೆ


2006ರಲ್ಲಿ ಅಂಧ ಗಂಡು ಮಕ್ಕಳನ್ನು ಹಿಮಾಲಯ ಎಕ್ಸ್‌ಪೆಡಿಷನ್‌ಗೆ ಕರೆದೊಯ್ದಿದ್ದೆವು. ಆದರೆ, ಅಂಧ ಹೆಣ್ಣು ಮಕ್ಕಳನ್ನು ಚಾರಣಕ್ಕೆ ಕರೆದೊಯ್ದದ್ದು ಇದೇ ಮೊದಲು. ಆ ವಿದ್ಯಾರ್ಥಿನಿಯರಲ್ಲಿದ್ದ ಆಸಕ್ತಿ ಮತ್ತು ಹುರುಪೇ ನಮ್ಮ ಯಶಸ್ವಿ ಯಾತ್ರೆಗೆ ಮುನ್ನಡಿಯಾಯಿತು. ಕುಂತಿಬೆಟ್ಟ ಹತ್ತಿರುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಇದು ಸಾಹಸಯಾತ್ರೆಯ ಮೊದಲನೇ ಹೆಜ್ಜೆಯಾಗಿದ್ದು, ಮುಂದಿನ ವರ್ಷ ಹಿಮಾಲಯಕ್ಕೆ ಕರೆದೊಯ್ಯುವ ಯೋಜನೆಯಿದೆ.


ಟೈಗರ್‌ ಸೋಲಂಕಿ, ಗೌರವ ಕಾರ್ಯದರ್ಶಿ,ಐಎಎಂಎಎಸ್‌, ಮೈಸೂರು.

ಚಿತ್ರದುರ್ಗ ಬೆಟ್ಟ ಹತ್ತುವ ಆಸೆ!
ಕಲ್ಲಿನ ಕೋಟೆಯ ನಾಡು ಎನಿಸಿದ ಚಿತ್ರದುರ್ಗ ಜಿಲ್ಲೆಯವಳಾದ ನಾನು ಒಮ್ಮೆಯೂ ಚಿತ್ರದುರ್ಗ ಬೆಟ್ಟವನ್ನು ಹತ್ತಿಲ್ಲ. ಈಗ ಕುಂತಿಬೆಟ್ಟವನ್ನು ಯಶಸ್ವಿಯಾಗಿ ಹತ್ತಿದ್ದರಿಂದ ನನ್ನಲ್ಲಿ ಆತ್ಮವಿಶ್ವಾಸ, ಧೈರ್ಯ ಹೆಚ್ಚಾಗಿದೆ. ಹಾಗಾಗಿ ಮುಂದಿನ ಬಾರಿ ನಮ್ಮೂರಿಗೆ ಹೋದಾಗ ಚಿತ್ರದುರ್ಗ ಬೆಟ್ಟವನ್ನು ಹತ್ತಿಯೇ ಮೈಸೂರಿಗೆ ಬರುತ್ತೇನೆ.
ಕವಿತಾ, 9ನೇ ತರಗತಿ,ರಂಗರಾವ್‌ ಅಂಧ ಹೆಣ್ಣುಮಕ್ಕಳ ವಸತಿ ಶಾಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT