ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಿಸ್ ಹಿಂಪಡೆಯಲು ಜಿ.ಪಂ. ಸದಸ್ಯೆ ಲಲಿತಾ ಆಗ್ರಹ

Last Updated 20 ಅಕ್ಟೋಬರ್ 2012, 9:00 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ಅಭಯಾರಣ್ಯದ ಅಂಚಿನಲ್ಲಿರುವ ಹನಗೋಡು ಹೋಬಳಿಗೆ ಸೇರಿದ ಆರು ಗ್ರಾಮಗಳ 400 ಕುಟುಂಬಗಳನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ನೋಟಿಸ್ ನೀಡಿದ್ದು, ಇದನ್ನು ಕೂಡಲೇ ನೋಟಿಸ್ ಹಿಂದಕ್ಕೆ ಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಲಲಿತಾ ಜಿ.ಟಿ. ದೇವೇಗೌಡ ಆಗ್ರಹಿಸಿದರು.

ನಾಗರಹೊಳೆ ಅಭಯಾರಣ್ಯದ ಅಂಚಿನ ಗ್ರಾಮಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದಲ್ಲಿ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಅವರನ್ನು ಭೇಟಿ ಮಾಡಿದ ನಂತರ, ಮಾಧ್ಯಮದವರೊಂದಿಗೆ ಮಾತನಾಡಿದರು.

ಹನಗೋಡು ಹೋಬಳಿಗೆ ಸೇರಿದ ಕಿಕ್ಕೇರಿಕಟ್ಟೆ, ಹೆಬ್ಬಳ್ಳ, ಕಡೇಮನುಗನಹಳ್ಳಿ, ಉಡವೇಪುರ, ಕಾಳಬೂಚನಹಳ್ಳಿ ಮತ್ತು ಬೆಕ್ಕೆಶೆಡ್ ಗ್ರಾಮಗಳಲ್ಲಿ ನಾಗರಿಕರು 50 ವರ್ಷಗಳಿಂದ ಕೃಷಿ ನಡೆಸಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಗ್ರಾಮಗಳಲ್ಲಿ ವಾಸಿಸುತ್ತಿರುವ 250 ನಾಗರಿಕರಿಗೆ ಮತ್ತು 150           ಗಿರಿಜನರಿಗೆ ಒಕ್ಕಲೆಬ್ಬಿಸುವ ನೋಟಿಸ್ ನೀಡಲಾಗಿದೆ. ಇದರಿಂದ ಕಾಡಂಚಿನ ಜನ ನಿದ್ದೆಗೆಡುವಂತಾಗಿದೆ ಎಂದರು.

ಕಡೇಮನುಗನಹಳ್ಳಿ ಗ್ರಾಮದ ಸರ್ವೆ ನಂಬರ್ 31 ಮತ್ತು 32, ಉಡವೇಪುರ ಗ್ರಾಮದ ಸರ್ವೆ ನಂಬರ್ 7 ಮತ್ತು 8, ಕಾಳಬೂಚನಹಳ್ಳಿ ಗ್ರಾಮದ ಸರ್ವೆ ನಂಬರ್ 15ರಲ್ಲಿ ಕೃಷಿ ಮತ್ತು ಜನ ವಾಸ ಇದೆ. ಆದರೂ ಏಕಾಏಕಿ ಒಕ್ಕಲೆಬ್ಬಿಸುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದರು.

ಈ ಗ್ರಾಮಗಳ ಬಹುಪಾಲು ಜನ ಕೃಷಿ ಮಾಡಿಕೊಂಡಿದ್ದ ಜಾಗಗಳಿಗೆ ಸರ್ಕಾರ ಹಕ್ಕುಪತ್ರ ಕೂಡ ನೀಡಿದೆ. ಆದರೆ, ಅರಣ್ಯ ಇಲಾಖೆ ಇದನ್ನು ಇಲಾಖೆಯ ಸ್ವತ್ತು ಎಂದು ಪರಿಗಣಿಸಿ ತೆರವುಗೊಳಿಸಲು ಮುಂದಾಗಿದೆ. ಆದ್ದರಿಂದ ತಾವು ಸರ್ಕಾರದ ಮೊರೆ ಹೋಗಿ ನೋಟಿಸ್ ಹಿಂಪಡೆಯವಂತೆ ಆಗ್ರಹಿಸುವದಾಗಿ ಲಲಿತಾ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್, ಸುಪ್ರೀಂಕೋರ್ಟ್ 2003ರಲ್ಲಿ ತನ್ನ ಆದೇಶ ಹೊರಡಿಸಿ ಅರಣ್ಯ ಒತ್ತುವರಿ ಮಾಡಿಕೊಂಡು ಸಾಗುವಳಿ ಪತ್ರ ಪಡೆದಿದ್ದರೂ ಆ ಹಕ್ಕುಪತ್ರವನ್ನು ಪರಿಗಣಿಸದೇ, ಅರಣ್ಯ ಭೂಮಿಯನ್ನು ತೆರವುಗೊಳಿಸಬೇಕು ಎಂದು ಆದೇಶಿಸಿದೆ. ಇದಕ್ಕೆ ಸರ್ಕಾರ ನೀಡಿದ ಅನುಮೋದನೆ ಮೇರೆಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.

ತಹಶೀಲ್ದಾರ್ ಲೋಕನಾಥ್, ಹರೀಶ್‌ಗೌಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕಿರಂಗೂರು ಬಸವರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಗಣಪತಿ, ರಮೇಶ್,  ಹನಗೋಡು ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT