ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನೋಟು, ಓಟು, ಊಟ ಕೊಡಿ'

ಯೋಗಾಸನ ಮೂಲಕ ಕೃಷ್ಣಪ್ಪ ಮತ ಪ್ರಚಾರ
Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಶಿವಮೊಗ್ಗ: `ಒಂದು ನೋಟು, ಒಂದು ಓಟು, ಒಂದು ಊಟ ಕೊಡಿ...'- ಹೀಗೆ ಹೇಳಿ ಯೋಗಾಸನದ ಪಟ್ಟು ಹಾಕುತ್ತಾ ಮತ ಕೇಳುತ್ತಿರುವವರು ಜನಪರ ಹೋರಾಟಗಾರ ಟಿ.ಆರ್. ಕೃಷ್ಣಪ್ಪ.

ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆಯ ಕೃಷ್ಣಪ್ಪ ಅವರು ಸಾಗರ ಕ್ಷೇತ್ರದ ಲೋಕಸತ್ತಾ ಪಕ್ಷದ ಅಭ್ಯರ್ಥಿ. ಅವರೀಗ ಸಾರ್ವಜನಿಕ ಸ್ಥಳಗಳಲ್ಲಿ ಯೋಗಾಸನ ಮಾಡಿ ಮತಯಾಚನೆ ಮಾಡುತ್ತಿದ್ದಾರೆ. ಗಾಂಧಿ, ಗೋಪಾಲಗೌಡರ ಹೆಸರು ಹೇಳುತ್ತೇವೆ. ಅವರು ನಡೆದಂತೆ ನಾವೂ ಏಕೆ ಮಾಡಬಾರದೆಂಬ ಚಿಂತನೆಯಿಂದ ಕೃಷ್ಣಪ್ಪ ಮತ ಪ್ರಚಾರಕ್ಕೆ ಭಿನ್ನ ಹಾದಿ ತುಳಿದಿದ್ದಾರೆ.

ದೇಹ ಒಂದು ಪ್ರಜಾಪ್ರಭುತ್ವ ಇದ್ದಂತೆ. ಅದು ಸದೃಢವಾಗಿದ್ದರೆ ಇಡೀ ಸಮಾಜದ ಆರೋಗ್ಯ ಸರಿಯಾಗಿರುತ್ತದೆ. ಹಾಗಾಗಿ, ಪ್ರಜಾಪ್ರಭುತ್ವ ಅಂಗವಿಕಲಗೊಳ್ಳದಂತೆ ತಡೆಯಲು ಮತದಾನದಲ್ಲಿ ಪಾಲ್ಗೊಳ್ಳಿ; ಭ್ರಷ್ಟರನ್ನು ದೂರ ಇಡಿ ಎನ್ನುವ ಸಂದೇಶ ಸಾರುತ್ತಿದ್ದಾರೆ. ಕಣ್ಣು, ಕಿವಿ, ಮೂಗು, ಬಾಯಿ, ಹೊಟ್ಟೆಗೆ ಸಂಬಂಧಿಸಿದ ವ್ಯಾಯಾಮವನ್ನು ಮಾಡುತ್ತಾ ಅವುಗಳ ಮಹತ್ವ ಹೇಳುತ್ತಿದ್ದಾರೆ. ಪಕ್ಕದಲ್ಲಿ ಹೋರಾಟಗಾರ್ತಿ ಮಲಾಲ ಭಾವಚಿತ್ರ ಇಟ್ಟುಕೊಂಡಿದ್ದಾರೆ.  ಹತ್ತು ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸುತ್ತ ಅವುಗಳನ್ನು ಬಗೆಹರಿಸುವ ಭರವಸೆಯನ್ನು  ನೀಡುತ್ತಿದ್ದಾರೆ.

ಚುನಾವಣೆಗೆ ಒಂದು ಪೈಸೆಯನ್ನೂ ಖರ್ಚು ಮಾಡುವುದಿಲ್ಲ ಎಂದು ಕೃಷ್ಣಪ್ಪ ಶಪಥ ಮಾಡಿದ್ದಾರೆ. ನಾಮಪತ್ರ ಸಲ್ಲಿಸಲು 10 ಸಾವಿರ ರೂಪಾಯಿ ಠೇವಣಿಯನ್ನು ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡಿ ಸಂಗ್ರಹಿಸಿಕೊಂಡಿದ್ದರು. ಆನಂದಪುರಂ, ರಿಪ್ಪನ್‌ಪೇಟೆ, ಸಾಗರದ ಬಸ್ ನಿಲ್ದಾಣಗಳಲ್ಲಿ ಪಕ್ಷದ ಚಿಹ್ನೆ `ವಿಷಲ್' ಊದಿ ಭಿಕ್ಷೆ ಬೇಡಿದ್ದಾರೆ. ಸಾಕಾಗದ ಹಣವನ್ನು ಸ್ನೇಹಿತರಿಂದ ಹೊಂದಿಸಿಕೊಂಡಿದ್ದಾರೆ.

`ಮಾರಕ ಯೋಜನೆ ಬೈ ಬ್ಯಾಕ್-ಗೋ ಬ್ಯಾಕ್' ಎಂಬ ತಲೆಬರಹದ 10 ಸಾವಿರ ಕರಪತ್ರಗಳನ್ನು ಮುದ್ರಿಸಿರುವ ಕೃಷ್ಣಪ್ಪ, ಕರಪತ್ರಕ್ಕೆ 50 ಪೈಸೆ ನೀಡಿ ಎಂದು ಮತದಾರರನ್ನೇ ಕೇಳುತ್ತಿದ್ದಾರೆ. ನಾಮಪತ್ರದ ಅರ್ಜಿ ನಮೂನೆ ತುಂಬುವಾಗಲೂ ಕೃಷ್ಣಪ್ಪ ಜಾತಿ ಕಾಲಂನಲ್ಲಿ ಮಾನವ ಜಾತಿ ಎಂದು ನಮೂದಿಸಿದ್ದಾರೆ. ನಾಮಪತ್ರ ತಿರಸ್ಕೃತರಾಗುತ್ತದೆಂಬ ಚರ್ಚೆ ಇರುವಾಗಲೇ ಅದು ಸ್ವೀಕೃತಗೊಂಡಿದೆ.

ಈ ಹಿಂದೆ 1985ರಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೃಷ್ಣಪ್ಪ, ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಗೆ ಜಾಗೃತ ಯುವ ಸಮಿತಿ ಅಡಿಯಲ್ಲಿ 9 ಅಭ್ಯರ್ಥಿಗಳ ಜತೆ ನಿಂತು, ಒಬ್ಬರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಈ ಎರಡೂ ಚುನಾವಣೆಯಲ್ಲಿ ಮತದಾರರಿಂದಲೇ ಹಣ ಪಡೆದು, ಅದನ್ನೇ ಚುನಾವಣೆ ಖರ್ಚಿಗೆ ಬಳಸಿ, ಕೊನೆಗೆ ಬಸ್ ನಿಲ್ದಾಣದಲ್ಲಿ ನಿಂತು ಅದರ ಲೆಕ್ಕ ನೀಡಿದ್ದನ್ನು ಕೃಷ್ಣಪ್ಪ ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT