ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು, ನಾಣ್ಯಗಳ ಕಾರ್ಪ್ ಮ್ಯೂಸಿಯಂ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೇವಸ್ಥಾನಗಳ ನಗರಿ ಉಡುಪಿ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಹೆಸರುವಾಸಿ. ಹಲವು ಬ್ಯಾಂಕ್‌ಗಳ ಮೂಲ ನೆಲೆ ಉಡುಪಿ. ಉಡುಪಿಯ ರಾಷ್ಟ್ರೀಕೃತ  ಕಾರ್ಪೋರೇಶನ್ ಬ್ಯಾಂಕ್ ಈಗ ನಾಣ್ಯ,ನೋಟುಗಳ ಹೆರಿಟೇಜ್ ಮ್ಯೂಸಿಯಂ ಸ್ಥಾಪಿಸಿದೆ.

ಜಗತ್ತಿನ ಹಲವು ದೇಶಗಳಲ್ಲಿ ನಾಣ್ಯ ಹಾಗೂ ನೋಟುಗಳ ವ್ಯವಸ್ಥೆ ನಡೆದು ಬಂದ ಹಾದಿಯನ್ನು ಸಾರ್ವಜನಿಕರಿಗೆ ಪರಿಚಯಿಸುವ ಮಹತ್ವದ ಕೆಲಸಕ್ಕೆ ಕೈಹಾಕಿದೆ. 

ಉಡುಪಿಯ ಖಾನ್ ಬಹದ್ದೂರ್ ಅಬ್ದುಲ್ ಹಾಜಿ ಕಾಶಿಂ ಸಾಹೇಬ್ ಅವರು 1906ರಲ್ಲಿ ಕಾರ್ಪೋರೇಶನ್ ಬ್ಯಾಂಕ್  ಸ್ಥಾಪಿಸಿದರು. ಬ್ಯಾಂಕು ಇತ್ತೀಚೆಗೆ 106ನೇ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಿದೆ. ಅದರ ನೆನಪಿಗೆ ಈ ನಾಣ್ಯ-ನೋಟುಗಳ ಹೆರಿಟೇಜ್ ಮ್ಯೂಸಿಯಂ ಸ್ಥಾಪಿಸಿದೆ.

ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಮೊದಲ ನಾಣ್ಯಗಳ ಮ್ಯೂಸಿಯಂ ರೂಪಿಸಿದ ಹಿರಿಮೆ ಕಾರ್ಪೋರೇಷನ್ ಬ್ಯಾಂಕಿಗೆ ಸಲ್ಲುತ್ತದೆ. ಜಗತ್ತಿನ ವಿವಿಧ ದೇಶಗಳ ಅಪರೂಪದ ನೋಟು, ನಾಣ್ಯಗಳನ್ನು ನೋಡುವ ಅವಕಾಶ ಇಲ್ಲಿದೆ. ಅಷ್ಟೇ ಅಲ್ಲ ಈ ಕುರಿತ ಮಾಹಿತಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಇದು ಬ್ಯಾಂಕ್‌ಗೆ ಸಂಬಂಧಿಸಿದ ಪಾರಂಪರಿಕ ವಸ್ತು ಪ್ರದರ್ಶನ ಕೇಂದ್ರ. ನಾನಾ ದೇಶಗಳ ನಾಣ್ಯಗಳು, ಹಳೇ ಕಾಲದ ಬ್ಯಾಕಿಂಗ್ ವ್ಯವಸ್ಥೆ, ಕಾರ್ಪೋರೇಷನ್ ಬ್ಯಾಂಕಿಂಗ್ ಬೆಳವಣಿಗೆ, ಬ್ಯಾಂಕಿನ ನಿರ್ದೇಶಕರ ಛಾಯಾಚಿತ್ರಗಳು, ಹಳೆಯ ದಾಖಲೆಗಳು, ವಿವಿಧ ಬಗೆಯ `ಕರೆನ್ಸಿ~ಗಳು ಈ ಮ್ಯೂಸಿಯಂನಲ್ಲಿವೆ.
 
ಇನ್ನೊಂದು ವಿಭಾಗದಲ್ಲಿ ಹಣಕಾಸು ಸಂಶೋಧನಾ ಕೇಂದ್ರವಿದೆ. ಇದರಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ನಡೆದ ಸಂಶೋಧನೆಗಳ ಬಗ್ಗೆ ಕುತೂಹಲಕರ ಮಾಹಿತಿಗಳು ಲಭ್ಯವಿವೆ.

ಇಂಡೋ ಗ್ರೀಕ್ ನಾಣ್ಯಗಳು:  ಮ್ಯೂಸಿಯಂನಲ್ಲಿ ಸುಮಾರು 2,600 ವರ್ಷಗಳಿಗೂ ಹಿಂದಿನ ಬೆಳ್ಳಿ, ಸೀಸ, ತಾಮ್ರದ ನಾಣ್ಯಗಳಿಂದ ಹಿಡಿದು 20ನೇ ಶತಮಾನದವರೆಗಿನ ನಾಣ್ಯಗಳ ಮಾದರಿಗಳಿವೆ. ಚಂದ್ರಗುಪ್ತ ಮೌರ್ಯರು, ಶಾತವಾಹನರು, ಕದಂಬರು, ಕುಶಾನರು, ಗುಪ್ತರು, ವಿಜಯನಗರದ ಅರಸರು, ಮೊಘಲರು, ಹೈದರಾಲಿ-ಟಿಪ್ಪುಸುಲ್ತಾನರ ಕಾಲದ ನಾಣ್ಯಗಳು ಇಲ್ಲಿವೆ.

ವಿಜಯನಗರದ ಅರಸರ ಕಾಲದ ದೇವರ ಚಿತ್ರಗಳಿರುವ ನಾಣ್ಯಗಳು ಇಲ್ಲಿನ ವಿಶೇಷ ಆಕರ್ಷಣೆ. ಗರುಡ,ರಾಮ -ಲಕ್ಷ್ಮಣ, ಗಣಪತಿ, ಹನುಮಂತ ದೇವರ ನಾಣ್ಯಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ 110 ದೇಶ, ವಿದೇಶಗಳಿಗೆ ಸೇರಿದ ನಾಣ್ಯಗಳು ಇಲ್ಲಿವೆ.

ಇಷ್ಟೆಲ್ಲ ಅಪರೂಪದ ನಾಣ್ಯಗಳ ಸಂಗ್ರಹದ ಹಿಂದೆ ಕಾರ್ಪೊರೇಶನ್ ಬ್ಯಾಂಕ್‌ನ ಉದ್ಯೋಗಿ ಕುಂಬ್ಳೆ ರಾಧಾಕೃಷ್ಣ ಅವರ ಪರಿಶ್ರಮವಿದೆ. ಹಳೇ ನಾಣ್ಯಗಳು, ಅಪರೂಪದ ನೋಟುಗಳನ್ನು ಅವರು ಬ್ಯಾಂಕ್ ಸೇವೆ ಸಲ್ಲಿಸುತ್ತಲೇ ಸಂಗ್ರಹಿಸಿದ್ದಾರೆ.

ಅವರ ವೈಯಕ್ತಿಕ ಆಸಕ್ತಿಯಿಂದ ಆರಂಭವಾದ ನಾಣ್ಯ, ನೋಟುಗಳ ಸಂಗ್ರಹವೇ ಕಾರ್ಪೋರೇಷನ್ ಬ್ಯಾಂಕಿನ `ಹೆರಿಟೇಜ್ ಮ್ಯೂಸಿಯಂ~ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು.

1975ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ಸೇರಿದ ರಾಧಾಕೃಷ್ಣ ಮೂಲತಃ ಕಾಸರಗೋಡು ಸಮೀಪದ ಕುಂಬ್ಳೆ ಅವರು. ಆದರೆ ಅವರು ಹುಟ್ಟಿದ್ದು, ಓದಿದ್ದು ಎಲ್ಲ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ.

ಬ್ಯಾಂಕಿನ ಉದ್ಯೋಗ ಮಾಡುತ್ತಲೇ ನಾಣ್ಯ, ನೋಟುಗಳ ಸಂಗ್ರಹ ಹವ್ಯಾಸವನ್ನು ಮುಂದುವರಿಸಿಕೊಂಡು ಬಂದರು. ಮಂಗಳೂರಿನಲ್ಲಿನ ಡಾ.ಸಿ.ಎ. ಪಾರ್ಥಸಾರಥಿ ಅವರ ಮಾರ್ಗದರ್ಶನದಲ್ಲಿ ಹಳೇ ನಾಣ್ಯಗಳ ಸಂಗ್ರಹದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು.

ರಾಧಾಕೃಷ್ಣ ಕಳೆದ 23 ವರ್ಷಗಳಿಂದ ಸಂಗ್ರಹಿಸಿದ ನಾಣ್ಯಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಅವರೊಂದಿಗೆ ಬ್ಯಾಂಕಿನ  ನಿವೃತ್ತ ಉದ್ಯೋಗಿ ಹಾಗೂ ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಕಾರ ಕೃಷ್ಣಯ್ಯ ಕೈಜೋಡಿಸಿದ್ದಾರೆ.

ಈ ಇಬ್ಬರು ದೇಶ, ವಿದೇಶಗಳ ನಾಣ್ಯ, ನೋಟುಗಳ ಬಗ್ಗೆ ಅಪಾರ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಆಸಕ್ತರಿಗೆ ವಿವರಣೆಯನ್ನೂ ನೀಡುತ್ತಾರೆ. ಅವರು ಜಗತ್ತಿನ ವಿವಿಧ ದೇಶಗಳ ನಾಣ್ಯ ಪದ್ಧತಿ ಬೆಳೆದು ಬಂದದ್ದನ್ನು ಕುರಿತು ನೀಡುವ ಮಾಹಿತಿ ಮಾಹಿತಿಗಳನ್ನು  ಕೇಳಲು ಖುಷಿಯಾಗುತ್ತದೆ.

`ಮನಿ~ ಹುಟ್ಟಿಕೊಂಡಿದ್ದು ಹೀಗೆ:
`ಮನಿ~ ಎಂಬ ಶಬ್ದವನ್ನು ಹುಟ್ಟುಹಾಕಿದವರು ರೋಮನ್ನರು. ಕ್ರಿ ಪೂರ್ವ 2,065 ರಲ್ಲಿ ರೋಮನ್ನರ `ಮೊನೆಟಾ~ ಹೆಸರಿನ ಆರಾಧ್ಯ ದೇವತೆಯ ಚಿತ್ರವನ್ನು ಆ ಕಾಲದ ನಾಣ್ಯಗಳ ಮೇಲೆ ಮುದ್ರಿಸಲಾಯಿತು. ಅದನ್ನು ರೋಮ್ ದೊರೆ ಕ್ಯಾರಿಸಸ್ `ಮನಿ~ ಎಂದು ಘೋಷಿಸಿದನಂತೆ. ಅಲ್ಲಿಂದ `ಮನಿ~ ಎಂಬ ಶಬ್ದ ಚಾಲ್ತಿಗೆ ಬಂತು ಎಂದು ಅವರು ಹೇಳುತ್ತಾರೆ.

ಹಾಗೆಯೇ  `ರೂಪಾಯಿ~ ಶಬ್ದ ಹುಟ್ಟಿಕೊಂಡಿದ್ದು 16ನೇ ಶತಮಾನದಲ್ಲಿ. ಅದು ಸಂಸ್ಕೃತ ಶಬ್ದ. ಸಂಸ್ಕೃತದಲ್ಲಿ `ರೂಪ್ಯಾ~ ಎಂದರೆ ಬೆಳ್ಳಿ. ಆ ಕಾಲದಲ್ಲಿ ಬೆಳ್ಳಿ ನಾಣ್ಯಗಳು ಚಲಾವಣೆಯಲ್ಲಿದ್ದವು. ಅದು ಮುಂದುವರಿದು ರೂಪಾಯಿಯಾಗಿ ಬದಲಾಯಿತು ಎಂದು ಅವರು ವಿವರಣೆ ನೀಡುತ್ತಾರೆ.

45 ಲಕ್ಷ  ರೂ ಮೌಲ್ಯದ ಸಂಗ್ರಹ: `ನಾನು ಕೆಲಸ ಮಾಡುತ್ತಿದ್ದ ಊರು ಮತ್ತು ಪ್ರವಾಸ ಮಾಡಿದ ಊರುಗಳಲ್ಲಿ ಹಳೆಯ ನಾಣ್ಯಗಳನ್ನು ಹುಡುಕಿಕೊಂಡು ಅಲೆದಾಡುತ್ತಿದೆ. ಅದರಿಂದಾಗಿಯೇ ಇಷ್ಟು ದೊಡ್ಡ ಪ್ರಮಾಣದಲ್ಲಿ  ನಾಣ್ಯ, ನೋಟುಗಳ ಸಂಗ್ರಹ ಸಾಧ್ಯವಾಯಿತು~ ಎನ್ನುತ್ತಾರೆ ರಾಧಾಕೃಷ್ಣ. ಅವರು ಈಗ ನಿವೃತ್ತಿ ಹಂತಕ್ಕೆ ಬಂದಿದ್ದಾರೆ.
ಅವರು ಉಡುಪಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸಂಗ್ರಹದಲ್ಲಿನ ನಾಣ್ಯ, ನೋಟುಗಳ ಅಂದಾಜು ಮೊತ್ತ ಸುಮಾರು 45 ಲಕ್ಷ ರೂ ಮೌಲ್ಯದ್ದು. ಬ್ಯಾಂಕಿನ ವ್ಯವಸ್ಥಾಪಕರ ನೆರವಿನಿಂದ `ಹೆರಿಟೇಜ್ ಮ್ಯೂಸಿಯಂ~ನಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ.

ಮುಂದಿನ ದಿನಗಳಲ್ಲಿ ಈ ನಾಣ್ಯ, ನೋಟುಗಳನ್ನು ರಾಧಾಕೃಷ್ಣರಿಂದ ಬ್ಯಾಂಕ್ ಖರೀದಿಸಿ ಪ್ರದರ್ಶಿಸುವ ಸಾಧ್ಯತೆಗಳಿವೆ. ಈ ಪ್ರದರ್ಶನ ಸಾರ್ವಜನಿಕರಿಗೆ ಮುಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT