ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟ್‌ಬುಕ್ ದುರುಪಯೋಗ: ತನಿಖೆಗೆ ಆದೇಶ

Last Updated 1 ಜೂನ್ 2011, 9:15 IST
ಅಕ್ಷರ ಗಾತ್ರ

ತುಮಕೂರು: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಹಂಚಬೇಕಾದ ನೋಟ್‌ಪುಸ್ತಕಗಳನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ನೀಡಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ವಿರುದ್ಧ ನಡೆದ ತನಿಖೆ ಸಮರ್ಪಕವಾಗಿಲ್ಲದ ಕಾರಣ ಮರು ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಬಡಿಗೊಂಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಹಂಚಲು ನೀಡಲಾಗಿದ್ದ ಪಠ್ಯ ಪುಸ್ತಕಗಳನ್ನು ಶಾಲೆ ಮುಖ್ಯ ಶಿಕ್ಷಕಿ ಸಿದ್ದಗಂಗಮ್ಮ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ವಿವಾದವು ಜಿ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ನಾಂದಿಯಾಡಿತ್ತು.

ಚರ್ಚೆಯ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಸಮಿತಿ ನೇಮಕ ಮಾಡಲಾಗಿತ್ತು. ಮಧುಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗಿತ್ತು. ತನಿಖಾ ತಂಡವು ವರದಿಯನ್ನು ಮಧುಗಿರಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಅವರಿಗೆ ನೀಡಿತ್ತು. ಆದರೆ ವರದಿ ಸಮರ್ಪಕವಾಗಿಲ್ಲ. ಲೋಪ-ದೋಷಗಳಿಂದ ಕೂಡಿದೆ ಎಂದು ತಿಳಿದುಬಂದಿದ್ದು, ಮರುವಿಚಾರಣೆಗೆ ಆದೇಶಿಸಲಾಗಿದೆ. ಮುಂದಿನ ವಾರದಲ್ಲಿ ಮತ್ತೊಂದು ತಂಡ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಮೊಬೈಲ್ ಅಂಗಡಿ ಕಳವು
ತುಮಕೂರು: ನಗರದ ಗಂಗೋತ್ರಿ ರಸ್ತೆಯಲ್ಲಿ ಅಂಗಡಿ ಸರಣಿ ಕಳವಿಗೆ ವಿಫಲ ಯತ್ನ ನಡೆಸಿದ್ದು, ಮೊಬೈಲ್ ಅಂಗಡಿಯಲ್ಲಿ ಕಳವು ನಡೆದಿದೆ.

ಸೋಮವಾರ ರಾತ್ರಿ ಮೆಡಿಕಲ್ ಶಾಪ್, ಕ್ಲಿನಿಕ್ ಸೇರಿದಂತೆ ನಾಲ್ಕು ಅಂಗಡಿಗಳ ಕಳವಿಗೆ ಯತ್ನ ನಡೆದಿದೆ. ವಿಘ್ನೇಶ್ವರ ಎಂಟರ್‌ಪ್ರೈಸಸ್ ಮೊಬೈಲ್ ಅಂಗಡಿಯಲ್ಲಿ 5 ಸಾವಿರ ನಗದು ಮತ್ತು 6 ಮೊಬೈಲ್‌ಗಳನ್ನು ಕಳವು ಮಾಡಲಾಗಿದೆ.

ಅಮೃತಾ ಮೆಡಿಕಲ್ಸ್‌ನ ಎರಡು ಅಂಗಡಿ, ಪಕ್ಕದ ಕ್ಲಿನಿಕ್ ಬೀಗ ಮುರಿಯಲಾಗಿದೆ. ಮೆಡಿಕಲ್ ಶಾಪ್ ಒಡೆಯಲು ಸಾಧ್ಯವಾಗಿಲ್ಲ, ಕ್ಲಿನಿಕ್ ಬೀಗ ಮುರಿದು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಇಲ್ಲಿ ಯಾವುದೇ ವಸ್ತು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT