ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡೆಲ್ ಅಧಿಕಾರಿಗಳ ಬಣ್ಣ ಬಯಲು

ಹೋಬಳಿ ಭೇಟಿಗೆ ನಿರ್ಲಕ್ಷ್ಯ: 83 ಬರಪರಿಹಾರ ಕಾಮಗಾರಿ ಪೂರ್ಣಕ್ಕೆ ವಿಳಂಬ
Last Updated 12 ಫೆಬ್ರುವರಿ 2013, 8:42 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಬರಗಾಲದ ಪರಿಣಾಮ ಜನ-ಜಾನುವಾರು ಕುಡಿಯುವ ನೀರು ಹಾಗೂ ಮೇವಿಗೆ ಪರದಾಡುವಂತಾಗಿದೆ. ಆದರೆ, ಹೋಬಳಿಗಳಿಗೆ ನೋಡೆಲ್ ಅಧಿಕಾರಿಗಳಾಗಿ ನೇಮಕಗೊಂಡಿರುವ ಜಿಲ್ಲಾಮಟ್ಟದ ಅಧಿಕಾರಿಗಳು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಗೆ ಈ ಸಮಸ್ಯೆ ಮಂಡಿಸುವಲ್ಲಿ ವೈಫಲ್ಯ ಕಂಡಿದ್ದಾರೆ!

ನಗರದ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಬರಪರಿಹಾರ ಕಾಮಗಾರಿ ಹಾಗೂ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೋಡೆಲ್ ಅಧಿಕಾರಿಗಳ ಕಾರ್ಯವೈಖರಿಯ ಪರಿಶೀಲನೆಯೂ ನಡೆಯಿತು. ಕಾಟಾಚಾರಕ್ಕೆ ಹೋಬಳಿಗಳಿಗೆ ಭೇಟಿ ನೀಡುವ ನೋಡೆಲ್ ಅಧಿಕಾರಿಗಳ ಬಣ್ಣವೂ ಬಯಲಿಗೆ ಬಂದಿತು.

ಕೆಲವರು ಹೋಬಳಿಗಳಿಗೆ ಭೇಟಿ ನೀಡಿದ್ದೇವೆ ಎಂದರು. ಆಗಿದ್ದರೆ ನಿಮ್ಮ ಹೋಬಳಿ ವ್ಯಾಪ್ತಿ ಬರಪರಿಹಾರದಡಿ ಎಷ್ಟು ಕುಡಿಯುವ ನೀರು ಪೂರೈಕೆ ಕಾಮಗಾರಿ ನಡೆಯುತ್ತಿವೆ? ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ. ಶಿವರಾಂ ಪ್ರಶ್ನೆ ಮುಂದಿಟ್ಟರು. ಆಗ ನೋಡೆಲ್ ಅಧಿಕಾರಿಗಳು ತಬ್ಬಿಬ್ಬುಗೊಂಡರು. ಬರಗಾಲದ ನಡುವೆಯೂ ಅಧಿಕಾರಿಗಳು ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡುವಲ್ಲಿ ತಳೆದಿರುವ ನಿರ್ಲಕ್ಷ್ಯಕ್ಕೆ ಸಭೆ ಸಾಕ್ಷಿಯಾಯಿತು.

ಉಸ್ತುವಾರಿ ಕಾರ್ಯದರ್ಶಿ ಶಿವರಾಂ ಮಾತನಾಡಿ, `ಬರಪರಿಹಾರದಡಿ ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳನ್ನು ನೋಡೆಲ್ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರವೇ ಬಿಲ್ ಪಾವತಿಸುವಂತೆ ಸೂಚಿಸಿದ್ದೇನೆ. ಆದರೆ, ಯಾರೊಬ್ಬರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ನಿಮ್ಮ ವ್ಯಾಪ್ತಿಗೆ ಬರುವ ಕುಡಿಯುವ ನೀರು ಪೂರೈಕೆ ಕಾಮಗಾರಿಯನ್ನು ಪರಿಶೀಲಿಸಿಲ್ಲ. ಕಡ್ಡಾಯವಾಗಿ ಎಲ್ಲ ಹಳ್ಳಿಗಳಿಗೆ ಭೇಟಿ ನೀಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ನಿರಂತರ ವರದಿ ಸಲ್ಲಿಸಬೇಕು' ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ಸೋಮಶೇಖರಪ್ಪ ಮಾತನಾಡಿ, `ನೋಡೆಲ್ ಅಧಿಕಾರಿಗಳು ಹೋಬಳಿ ವ್ಯಾಪ್ತಿ ಯಾವ ಕಾರ್ಯಕ್ರಮಗಳನ್ನು ಪರಿಶೀಲಿಸಬೇಕು ಎಂಬ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ. ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಪ್ರಥಮ ಆದ್ಯತೆಯಾಗಿ ನೀರಿನ ಸಮಸ್ಯೆ ಪರಿಶೀಲಿಸಿ ವರದಿ ಸಲ್ಲಿಸಬೇಕು' ಎಂದರು.

ಕಾಮಗಾರಿ ವಿಳಂಬ
2011-12 ಮತ್ತು 2012-13ನೇ ಸಾಲಿನಡಿ ಬರಪರಿಹಾರ ಯೋಜನೆಯಡಿ ಜಿಲ್ಲೆಯಲ್ಲಿ 547 ಕುಡಿಯುವ ನೀರು ಪೂರೈಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 464 ಪೂರ್ಣಗೊಂಡಿವೆ. 83 ಕಾಮಗಾರಿ ಪೂರ್ಣಗೊಂಡಿಲ್ಲ. ಒಟ್ಟು 10.72 ಕೋಟಿ ರೂ ಮಂಜೂರಾಗಿದೆ. ಇದರಲ್ಲಿ 6.90 ಕೋಟಿ ರೂ ಬಿಡುಗಡೆಯಾಗಿದೆ.

ಸಭೆಯಲ್ಲಿ ಮಾತನಾಡಿದ ಶಿವರಾಂ, `ಬರಪರಿಹಾರ ಕಾಮಗಾರಿಗಳನ್ನು ವಿಳಂಬ ಮಾಡುವುದು ಸರಿಯಲ್ಲ. ತ್ವರಿತವಾಗಿ ಕುಡಿಯುವ ನೀರು ಪೂರೈಕೆ ಕಾಮಗಾರಿ ಪೂರ್ಣಗೊಳಿಸಬೇಕು' ಎಂದು ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಚ್. ಚಂದ್ರಶೇಖರ್ ಹಾಜರಿದ್ದರು.

136 ವಿದ್ಯುತ್ ಸಂಪರ್ಕ ಬಾಕಿ
ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಕೊರೆದಿರುವ 136 ಕೊಳವೆಬಾವಿಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ!

ಸಭೆಯಲ್ಲಿ ಸೆಸ್ಕ್ ವಿಭಾಗದ ವಿಳಂಬ ಕುರಿತು ಚರ್ಚೆ ನಡೆಯಿತು. ಇಲಾಖೆಗೆ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ಉಪಕರಣ ಪೂರೈಕೆಯಾಗುತ್ತಿಲ್ಲ. ಇದರಿಂದ ನಿಗದಿತ ಅವಧಿಯೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬವಾಗುತ್ತಿದೆ ಎಂದು ಸೆಸ್ಕ್‌ನ ಕಾರ್ಯಪಾಲಕ ಎಂಜಿನಿಯರ್‌ಗಳು ಸಭೆಗೆ ತಿಳಿಸಿದರು.

ಶಿವರಾಂ ಮಾತನಾಡಿ, `ಯಾವ ಉಪಕರಣ ಪೂರೈಕೆಯಾಗಿಲ್ಲ ಎಂಬ ಬಗ್ಗೆ ನನಗೆ ಮಾಹಿತಿ ನೀಡಬೇಕು. ಈ ಕುರಿತು ಸೆಸ್ಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕರೊಂದಿಗೆ ಚರ್ಚಿಸುತ್ತೇನೆ. ಪೂರೈಕೆಯಾಗಿರುವ ಸಾಮಗ್ರಿ ಬಳಸಿಕೊಂಡು ವಿದ್ಯುತ್ ಸಂಪರ್ಕ ಕಲ್ಪಿಸಬೇಕು' ಎಂದು ಸೂಚಿಸಿದರು.

ಬಯೊಮೆಟ್ರಿಕ್ ಹಾಜರಾತಿ ಕಡ್ಡಾಯ
`ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಬಯೊಮೆಟ್ರಿಕ್(ಬೆರಳಚ್ಚು ಮಾಹಿತಿ) ಹಾಜರಾತಿ ಕಡ್ಡಾಯಗೊಳಿಸಲು ಕ್ರಮಕೈಗೊಳ್ಳಬೇಕು' ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವರಾಂ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಕಚೇರಿಗೆ ಹಾಜರಾಗುವುದಿಲ್ಲ. ಇದರಿಂದ ಕುಂದುಕೊರತೆ ಪರಿಹಾರಕ್ಕೆ ಅವಕಾಶವಾಗುತ್ತಿಲ್ಲ. ಜನರ ನಿತ್ಯದ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕಾರ್ಯದರ್ಶಿಗಳು ದಿನಕ್ಕೆ ಎರಡು ಬಾರಿ ಹಾಜರಾತಿ ದಾಖಲಿಸುವ ಬಯೊಮೆಟ್ರಿಕ್ ವ್ಯವಸ್ಥೆ ಅಳವಡಿಕೆಗೆ ಕ್ರಮಕೈಗೊಳ್ಳಬೇಕು ಎಂದರು.

ಬಯೊಮೆಟ್ರಿಕ್ ಹಾಜರಾತಿ ದಾಖಲು ನಿರ್ವಹಣೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಪರಿಶೀಲಿಸಬೇಕು ಎಂದು ಹೇಳಿದರು.

ಜಾನುವಾರುಗಳಿಗೆ ಮೇವು ಕೊರತೆ: ಗೊಂದಲ
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆಯೇ? ಎಂಬ ವಿಷಯ ಸಭೆಯಲ್ಲಿ ಗೊಂದಲ ಸೃಷ್ಟಿಸಿತು.
ಹರವೆ ಹೋಬಳಿಯ ನೋಡೆಲ್ ಅಧಿಕಾರಿ ಮಾತನಾಡಿ, `ನಮ್ಮ ಹೋಬಳಿಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಂಡುಬಂದಿದೆ. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿದ್ದೇನೆ' ಎಂದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೋಮಶೇಖರಪ್ಪ ಮಾತನಾಡಿ, `ಸದ್ಯಕ್ಕೆ ಜಿಲ್ಲೆಯಲ್ಲಿ ಮೇವಿನ ಕೊರತೆಯಿಲ್ಲ' ಎಂದರು. ಈ ನಡುವೆಯೇ ಮಾತನಾಡಿದ ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಸುಂದರರಾಜು, `ಜಿಲ್ಲೆಯ ಕೆಲವೆಡೆ ಸ್ವಲ್ಪಮಟ್ಟಿಗೆ ಕೊರತೆ ಇದೆ. ಹರವೆ ಸಮಸ್ಯೆ ಬಗ್ಗೆ ದೂರು ಬಂದಿಲ್ಲ' ಎಂದರು. ಅಧಿಕಾರಿಗಳ ಅಸಮರ್ಪಕ ಉತ್ತರ ಸಭೆಯಲ್ಲಿ ಗೊಂದಲ ಸೃಷ್ಟಿಸಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಭಾರತಿ ಮಾತನಾಡಿ, `ಜಿಲ್ಲೆಯಲ್ಲಿ 69 ದಿನಕ್ಕೆ ಆಗುವಷ್ಟು ಮೇವು ಲಭ್ಯವಿದೆ. ಯಾವುದೇ, ಕೊರತೆ ಇಲ್ಲ ಎಂದು ಪಶುಪಾಲನಾ ಇಲಾಖೆಯಿಂದ ವರದಿ ಸಲ್ಲಿಕೆಯಾಗಿದೆ' ಎಂದರು.

ಉಸ್ತುವಾರಿ ಕಾರ್ಯದರ್ಶಿ ಶಿವರಾಂ ಮಾತನಾಡಿ, `ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಮುಂಜಾಗ್ರತಾ ವಹಿಸಬೇಕು. ನೋಡೆಲ್ ಅಧಿಕಾರಿಗಳು ಹೋಬಳಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಬೇಕು' ಎಂದರು.

ಸರ್ಕಾರಿ ವೈದ್ಯರ ಮುಷ್ಕರ: ಕಾರ್ಯದರ್ಶಿಗೆ ಗೊತ್ತಿಲ್ಲ!
ಚಾಮರಾಜನಗರ:
ಸರ್ಕಾರಿ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆಯೇ?
-ಹೀಗೆಂದು ಕೇಳಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವರಾಂ, ಪಕ್ಕದಲ್ಲಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಬಳಿ ಖಚಿತಪಡಿಸಿಕೊಂಡಿದ್ದು ಅಚ್ಚರಿ ಮೂಡಿಸಿತು. ಕಳೆದ ನಾಲ್ಕು ದಿನದಿಂದಲೂ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ನೇತೃತ್ವದಡಿ ವೈದ್ಯರು ಮುಷ್ಕರನಿರತರಾಗಿರುವ ಪರಿಣಾಮ ಜಿಲ್ಲೆಯ ಆಸ್ಪತ್ರೆಗಳಲ್ಲಿ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. 

ಶಿವರಾಂ ಮಾತನಾಡಿ, `ಶವಾಗಾರ ಕೊಠಡಿ ವಿಸ್ತರಿಸುವ ಕಾಮಗಾರಿ ನಡೆಯುತ್ತಿದೆಯೇ?' ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ.ಸಂಪತ್‌ಕುಮಾರ್, `ಶವಾಗಾರ ಕೊಠಡಿ ವಿಸ್ತರಣೆ ಕಾಮಗಾರಿಗೆ ಕ್ರಮಕೈಗೊಳ್ಳಲಾಗಿದೆ. ಒಂದು ದಿನ ಮಾತ್ರವೇ ಗಾರೆಕೆಲಸಗಾರರು ಬಂದರು. ನಂತರ ಯಾರೊಬ್ಬರು ಬರುತ್ತಿಲ್ಲ. ಎಲ್ಲರೂ ಕೆಲಸ ಮಾಡಲು ಭಯಪಡುತ್ತಿದ್ದಾರೆ' ಎಂದರು.

ಪ್ರಸ್ತುತ ಎಲ್ಲ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ, ರೋಗಿಗಳಿಗೆ ಚಿಕಿತ್ಸೆ ನೀಡಲು ತೊಂದರೆಯಾಗಿದೆ ಎಂದು ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT