ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಾರ್ಟಿಸ್ ಸೋಲು, ಭಾರತದ ಸಾರ್ವಭೌಮತ್ವದ ಗೆಲುವು

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಏಳು ವರ್ಷಗಳಿಂದ ಕಾಯುತ್ತಿದ್ದ ತೀರ್ಪು ಕಡೆಗೂ ಹೊರಬಿದ್ದಿದೆ. ಬೃಹತ್ ಬಹುರಾಷ್ಟ್ರೀಯ ಕಂಪೆನಿಯ ವಿರುದ್ಧದ ಪೇಟೆಂಟ್ ಸಮರದಲ್ಲಿ ಭಾರತೀಯ ಜನತೆ ಗೆದ್ದಿದ್ದಾರೆ. ಇದು ಸಂಭ್ರಮ ಪಡುವ ದಿನವಲ್ಲದೆ ಮತ್ತಿನ್ನೇನು?

ಮನೆಯಲ್ಲೊಬ್ಬರಿಗೆ ಕ್ಯಾನ್ಸರ್ ತಗುಲಿತೆಂದರೆ ಆ ರೋಗಿಯಂತೂ ಮರಣ ಮೃದಂಗ ಕೇಳುತ್ತ ನೆಲ ಹಿಡಿಯುವುದೇ ಸರಿ. ಹುಟ್ಟಿದವ ಸಾಯಲೇಬೇಕೆಂದು ಗೊತ್ತಿದ್ದರೂ, ಸಾವು ಹತ್ತಿರದಲ್ಲೆ ಸುಳಿದಾಡುತ್ತಿದೆ ಎಂಬ ನಿಜದ ಅರಿವು ರೋಗಿಯ ಮನೆಯವರನ್ನು ದಿಕ್ಕೆಡಿಸುತ್ತದೆ. ಬಂಧುವನ್ನು ಬದುಕಿಸಿಕೊಳ್ಳಲು ಹೋರಾಡುವುದು, ರೋಗವನ್ನು, ಸಾವನ್ನು ಗೆಲ್ಲಲು ನೂರೊಂದು ಅಸ್ತ್ರಗಳನ್ನು ಹುಡುಕುವುದು ಜೀವನದ ಗುರಿಯಾಗುತ್ತದೆ. ರೇಡಿಯೇಶನ್, ಕೀಮೋಥೆರಪಿ, ಆಯುರ್ವೇದ, ನಾಟಿ ಎಂದು ಕಂಡಿದ್ದು, ಕೇಳಿದ್ದೆಲ್ಲದರ ಮೊರೆ ಹೋಗುವುದು. ಜೀವಭಿಕ್ಷೆಗೆ ಅಲೆದಾಡುವುದು.

ಒಂದು ಔಷಧ ಜೀವ ಉಳಿಸಬಲ್ಲದು, ಬದುಕಿರುವಷ್ಟು ದಿನ ಹೆಚ್ಚಿನ ತ್ರಾಸು ಇಲ್ಲದೆಯೇ ಬದುಕಬಹುದು ಎಂದು ಗೊತ್ತಾದಾಗ ಮನೆ ಮಂದಿಗೆಲ್ಲ ಮರುಜೀವ. ಪುನರ್ಜೀವನ. ಆದರೆ ಆ ಔಷಧದ ಬೆಲೆ ತಿಂಗಳಿಗೆ ಒಂದು ಲಕ್ಷ 20 ಸಾವಿರ ರೂಪಾಯಿ ಎಂದಾಗ? ಬಂದ ಜೀವ ಮತ್ತೆ ಹೊರಳಿ ಹೋದಂಥ ಅನುಭವ. ಆ ಕುಟುಂಬ ಅನುಭವಿಸುವ ಯಮಯಾತನೆ ಯಾರಿಗೂ ಬೇಡ. ದೇವರೇ, ಈ ಔಷಧ ಕಡಿಮೆ ಬೆಲೆಯಲ್ಲಿ ಸಿಗಬಾರದೇ? ನಮ್ಮ ಕೈಗೆಟುಕಬಾರದೇ? ಸಾವಿನ ಕೇರಿಗೆ ಹೊರಟ ಬಂಧುವನ್ನು ಹಿಂದಕ್ಕೆ ಕರೆಯಲಾಗದೇ?

ಔಷಧವೊಂದಕ್ಕಾಗಿ ನಡೆದ ಹೋರಾಟದ ಕತೆ ಇದು. ಸ್ವಿಸ್ ಮೂಲದ ನೋವಾರ್ಟಿಸ್ ಕಂಪೆನಿಯ ಕಪಿ ಮುಷ್ಟಿಯಲ್ಲಿತ್ತು ಆ ಕ್ಯಾನ್ಸರ್ ಔಷಧ ಗ್ಲೀವೆಕ್. ಅದರ ಉತ್ಪಾದನಾ ಮತ್ತು ಮಾರಾಟದ ಸರ್ವ ಸ್ವಾಮ್ಯವನ್ನೂ ಹೊಂದಿದ್ದ ಕಂಪೆನಿ ಔಷಧದ ಬೆಲೆ ಇಳಿಸಲು ತಯಾರಿಲ್ಲ. ರೋಗ ತಗುಲಿತೇ? ಬಹಳ ಒಳ್ಳೆಯದು. ನಮ್ಮ ಔಷಧವನ್ನೇ ಉಪಯೋಗಿಸಿ. ಬೆಲೆ ಕಡಿಮೆಯೇ? ಅದಾಗದು. ಎಂದಿಗೂ ಆಗದು. ಲಾಭಕ್ಕಾಗಿ ಸಂಶೋಧನೆ ಮಾಡುವವರು ನಾವು. ಜನ ಬದುಕಲಿ ಎಂದಲ್ಲ, ಲಾಭಕ್ಕಾಗಿ ಔಷಧ ತಯಾರಿಸುವವರು ನಾವು. ನಮ್ಮ ಔಷಧ, ನಮ್ಮ ಬೆಲೆ. ತಾಕತ್ತಿದ್ದರೆ ಖರೀದಿಸಿ, ಇಲ್ಲವೇ ಕ್ಯಾನ್ಸರಿನಿಂದ ಸಾಯಿರಿ, ನಮಗೇನು?
ಆ ಔಷಧದ ಹಕ್ಕು ಸ್ವಾಮ್ಯವು ನೋವಾರ್ಟಿಸ್ ಕಂಪನಿಯ ಕೈಯೊಳಗಿರುವ ತನಕವೂ ಯಾರೂ ಏನೂ ಮಾಡುವಂತಿರಲಿಲ್ಲ.

ಕಾನೂನಿನ ರಕ್ಷಣೆಯೇ ಅದಕ್ಕಿತ್ತು.ಆದರೆ ಭಾರತದಲ್ಲಿ ಮಾತ್ರ ವಿಷಯ ಬೇರೆಯಾಗಿತ್ತು. ಇಲ್ಲಿನ ಪೇಟೆಂಟ್ ಕಾಯಿದೆಯ ಬಲದಿಂದ ಇಲ್ಲಿನ ಜನೆರಿಕ್ ಕಂಪನಿಗಳು ರೂ 1,20,000 ದ ಔಷಧವನ್ನು ಕೇವಲ 8000 ರೂಪಾಯಿಗೆ ಉತ್ಪಾದಿಸಿಕೊಟ್ಟವು. ಕಂಪೆನಿಗೆ ಕೈ ಕೈ ಹಿಸುಕಿಕೊಳ್ಳದೆ ಬೇರೆ ದಾರಿ ಇರಲಿಲ್ಲ.

ಒಂದು ವಸ್ತುವನ್ನು ತಯಾರಿಸುವ ವಿಧಾನದ ಮೇಲೆ ಮಾತ್ರ ಸ್ವಾಮ್ಯ ಹಕ್ಕನ್ನು ಪಡೆಯಬಹುದೆಂದಿತ್ತು  ಭಾರತದ ಪ್ರಸಿದ್ದ 1970ರ ಪೇಟೆಂಟ್ ಕಾಯಿದೆ. ಅಸಂಖ್ಯಾತ ನವ ನವೀನ ಉದ್ಯಮಗಳಿಗೆ ಅವಕಾಶ ಕೊಟ್ಟು ಅವು ಬೆಳೆಯಲು ಅನುವು ಮಾಡಿಕೊಟ್ಟಿದ್ದ ಈ ಕಾನೂನಿನ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳು, ಅಮೆರಿಕಾದ ಕೆಂಗಣ್ಣು.

ವಿಶ್ವವ್ಯಾಪಾರ ಒಪ್ಪಂದಗಳ ಒತ್ತಾಯದ ಮೇರೆಗೆ 2005ರಲ್ಲಿ ನಮ್ಮ ಪೇಟೆಂಟ್ ಕಾನೂನನ್ನು ಬದಲಾಯಿಸಲಾಯಿತು. ವಸ್ತುವೇ ಮುಖ್ಯ ಹೊರತು ಅದನ್ನು ತಯಾರಿಸುವ ವಿಧಾನವಲ್ಲ ಎನ್ನುವ `ವಸ್ತು ಪೇಟೆಂಟ್' ವಿಧಾನ ಪೇಟೆಂಟ್‌ನ ಜಾಗವನ್ನಲಂಕರಿಸಿತು.
ತಯಾರಿಕಾ ವಿಧಾನದ ಮೇಲೆ ಮಾತ್ರ ಪೇಟೆಂಟ್ ಇದ್ದರೆ ಬೇರೆ ಬೇರೆಯವರು ಬೇರೆ ಬೇರೆ ವಿಧಾನಗಳಿಂದ ವಸ್ತುಗಳನ್ನು ತಯಾರಿಸಬಹುದು. ಸ್ಪರ್ಧೆ ಹೆಚ್ಚಿ ಆ ವಸ್ತುಗಳ ಬೆಲೆ ಇಳಿಯುವ ಸಾಧ್ಯತೆಗಳಿರುತ್ತಿದ್ದವು. ಆದರೆ ವಸ್ತುವನ್ನೇ ಪೇಟೆಂಟ್ ಮಾಡಿಟ್ಟಾಗ ಅದನ್ನು ಬೇರೆ ಬೇರೆ ವಿಧಾನದಲ್ಲಿ ತಯಾರು ಮಾಡುವ ಎಲ್ಲಾ ದಾರಿಗಳೂ ಮುಚ್ಚಿ ಹೋಗುತ್ತವೆ.

ಇಡೀ ಜಗತ್ತಿಗೇ ಮಾದರಿಯಾಗಿದ್ದ ಭಾರತದ 1970ರ ಪೇಟೆಂಟ್ ಕಾಯಿದೆ 2005ರ ನಂತರ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಹಿಂದೆ ಏಳು ವರ್ಷಗಳಿಗೆ ಮಾತ್ರ ಪೇಟೆಂಟ್ ಅವಧಿ ಇದ್ದುದು ಈಗ 20 ವರ್ಷಗಳಿಗೆ ವಿಸ್ತರಿಸಿಕೊಂಡಿದೆ. ಅಂದರೆ 20 ವರ್ಷಗಳ ತನಕ ಆ ವಸ್ತುವನ್ನು ತಯಾರಿಸಿ ಮಾರಾಟ ಮಾಡುವ ವಿಚಾರವನ್ನೇ ಯಾರೂ ಮಾಡುವಂತಿಲ್ಲ. ಮಾಡಿದರೆ ರಾಯಧನ ಕೊಡಬೇಕು.

ಒಂದು ವಸ್ತು ಎನ್ನುವುದಕ್ಕಿಂತಲೂ ಔಷಧ ಎಂದರೆ ಜನರಿಗೆ ಕಾಯಿಲೆ ಮತ್ತು ಈ ಕಾಯಿದೆಯ ನಡುವಿನ ಸಂಬಂಧ ಹೆಚ್ಚು ಬೇಗ ಅರ್ಥವಾಗಬಹುದು. ಉದಾಹರಣೆಗೆ, ಕ್ಯಾನ್ಸರಿನ ಒಂದು ಔಷಧ ಉತ್ಪಾದನೆ ಆದರೆ ಅದರ ತಯಾರಿಸುವ ವಿಧಾನಕ್ಕೆ ಭಾರತದಲ್ಲಿ ಬೌದ್ಧಿಕ ಸ್ವಾಮ್ಯ ಹಕ್ಕು ಸಿಗುತ್ತಿತ್ತು. ಆ ವಿಧಾನ ಬಿಟ್ಟು ಬೇರೆ ಬೇರೆ ವಿಧಾನಗಳಿಂದ ಅದೇ ಔಷಧವನ್ನು ತಯಾರಿಸಲು ಅದು ಅವಕಾಶ ಮಾಡಿಕೊಟ್ಟಿತ್ತು. ಈಗಿನ ಕಾಯಿದೆಯ ಬಲದಿಂದ ಕ್ಯಾನ್ಸರಿನ ಔಷಧವನ್ನೇ ಪೇಟೆಂಟ್ ಮಾಡಿಕೊಳ್ಳಬಹುದು. ಬೇರೆ ವಿಧಾನದಿಂದಲೂ ಅದನ್ನು ತಯಾರಿಸುವಂತಿಲ್ಲ.

ಭಾರತದ ಪೇಟೆಂಟ್ ಕಾನೂನು ಬದಲಾಗುತ್ತಲೇ ಭಾರತದಲ್ಲಿಯೂ ತನ್ನ ಗ್ಲೀವೆಕ್ ಔಷಧಕ್ಕೆ ಪೇಟೆಂಟ್ ಕೊಡಿ ಎಂದು ಅದೇ ಔಷಧವನ್ನು ಇನ್ನೊಂದು ರೂಪದಲ್ಲಿ ತಯಾರಿಸಿ (ಗುಳಿಗೆ ರೂಪದಲ್ಲಿದ್ದುದನ್ನು ದ್ರವರೂಪಕ್ಕೆ) ಮತ್ತೆ ಭಾರತದಲ್ಲಿ ಸ್ವಾಮ್ಯ ಹಕ್ಕಿನ ನವೀಕರಣಕ್ಕಾಗಿ ಅರ್ಜಿ ಗುಜರಾಯಿಸಿತು. ಕ್ಯಾನ್ಸರ್ ಪೇಷೆಂಟುಗಳು ಮತ್ತವರ ಬಂಧುಗಳ ನೆಮ್ಮದಿಗೆ ಕಿಚ್ಚು ಹತ್ತಿಸಿತು.

ಭಾರತ ಸೇರಿದಂತೆ 140 ದೇಶಗಳಲ್ಲಿ ಔಷಧ ತಯಾರಿಸಿ ಮಾರಾಟ ಮಾಡುವ ಇದರ ಒಟ್ಟೂ ವಾರ್ಷಿಕ ಲಾಭ 2008ರಲ್ಲಿ 41.5 ಶತಕೋಟಿ ಅಮೆರಿಕಾದ ಡಾಲರುಗಳು. 8000 ರೂಪಾಯಿಗೆ ಔಷಧ ಮಾರಿದಾಗಲೂ ಲಾಭವಿದೆ ಎಂದರೆ ರೂ 1,20,000ಕ್ಕೆ ಮಾರುತ್ತಿದ್ದ ನೋವಾರ್ಟಿಸ್ ಪಡೆಯುತ್ತಿದ್ದ ಲಾಭ ಅದೆಷ್ಟಿರಬಹುದು? ಲಾಭದ ರುಚಿ ಇನ್ನೂ ನಾಲಿಗೆಯ ಮೇಲಿತ್ತಲ್ಲವೇ? ಆದರೆ ನೋವಾರ್ಟಿಸ್ ನ ಅರ್ಜಿ ತಿರಸ್ಕೃತವಾಯಿತು. ಅದು ಹೊಸ ರೂಪದಲ್ಲಿರುವ ಹಳೆಯ ಔಷಧ ಮಾತ್ರವೇ ಹೊರತು ಹೊಸತಲ್ಲ ಎಂಬ ಕಾರಣಕ್ಕಾಗಿ ಪೇಟೆಂಟ್ ನಿರಾಕರಿಸಲಾಯಿತು.

ಅದರ ಅರ್ಜಿ ತಿರಸ್ಕೃತವಾದಾಗ ಶುರುವಾಯಿತು ನೋಡಿ, ಕಾನೂನಿನ ಯುದ್ಧ. ಇದು ಹೊಸ ಸಂಶೋಧನೆ. ಯಾಕೆ ನಮಗೆ ಮತ್ತೆ ಪೇಟೆಂಟ್ ಕೊಡುವುದಿಲ್ಲ? ನಿಮ್ಮ ಕಾನೂನೇ ಸರಿ ಇಲ್ಲ ಎಂದು ಕಾಲು ಕೆರೆದು ಜಗಳಕ್ಕೆ ನಿಂತಿತು. ಜೀವರಕ್ಷಕ ಔಷಧದ ಕತೆ ದೇಶದ ಕಾನೂನುಗಳನ್ನೂ ಸುತ್ತಿಕೊಂಡಿದ್ದು ಹೀಗೆ.

ಭಾರತದ ಪೇಟೆಂಟ್ ಕಾನೂನು ತಿದ್ದುಪಡಿ ಆದಾಗ ಜಗತ್ತೇ ಮರುಗಿತ್ತು. ಯಾಕೆಂದರೆ ಜಗತ್ತಿನ 149 ಬಡ ದೇಶಗಳಿಗೆ ಭಾರತದ ಜನೆರಿಕ್ ಔಷಧಗಳದ್ದೇ ಆಸರೆ. ಆಫ್ರಿಕಾ, ಪೂರ್ವ ಏಷ್ಯಾಗಳಲ್ಲಿ ಏಡ್ಸ್ ರೋಗಿಗಳ ಸೇವೆ ಮಾಡುತ್ತಿರುವ `ಡಾಕ್ಟರ್ಸ್ ವಿದೌಟ್ ಬಾರ್ಡರ್' ಸಂಸ್ಥೆಯೇ ಮೊದಲಾದ ಸಂಘಟನೆಗಳಿಗೆ ಭಾರತದ್ದೇ ಔಷಧಗಳ ಸಪ್ಲೈ. ಆ ಎಲ್ಲಾ ಔಷಧಗಳೂ ಪೇಟೆಂಟ್ ಆಧೀನಕ್ಕೊಳಪಟ್ಟರೆ ಅವು ಸಾಮಾನ್ಯ ರೋಗಿಗಳ ಕೈಗೆಟಕುವುದೆಂತು?

ಭಾರತದ ಪೇಟೆಂಟ್ ಕಾಯಿದೆ ಬದಲಾಗಬಾರದೆಂದು ಜಗತ್ತಿನಾದ್ಯಂತ ಜನಾಂದೋಲನಗಳು ನಡೆದವು.ಬಡದೇಶಗಳು ತಮ್ಮ ರೋಗಿಗಳನ್ನು ರಕ್ಷಿಸಿ ಎಂದು ಮೊರೆಯಿಟ್ಟಿದ್ದವು. ಆದರೂ ಏನೂ ಮಾಡಲಾಗಲಿಲ್ಲ. ಆದರೆ ತನ್ನ ಅಪರೂಪದ ಉಪಯುಕ್ತ ಕಾಯಿದೆಗೆ ತಿದ್ದುಪಡಿ ತರುವಾಗ ಭಾರತದ ಕಾನೂನು ತಜ್ಞರು ಹೊಸ ಕಾಯಿದೆಯಲ್ಲಿ  ಸೆಕ್ಷನ್3(ಡಿ) ಎಂಬ ಒಂದು ಪರಿಚ್ಛೇದವನ್ನು ಸೇರಿಸಿದರು. ಅದರ ಪ್ರಕಾರ ಒಂದು (ಘನ ರೂಪದ) ವಸ್ತು ಬೇರೆ(ದ್ರವ) ರೂಪದಲ್ಲಿ ಬಂತೆಂದರೆ ಮತ್ತೆ ಅದಕ್ಕೆ ಪೇಟೆಂಟ್ ಕೊಡಲು ಬರುವುದಿಲ್ಲ.

`ಯಾವುದೇ ವಸ್ತುವಿಗೆ ಹೊಸ ರೂಪು ಕೊಟ್ಟಾಕ್ಷಣ, ಅದರಲ್ಲಿ ಈಗಿರುವುದಕ್ಕಿಂತ ಒಂದೂ ಹೆಚ್ಚಿನ ಗುಣ ಸೇರಿಲ್ಲವೆಂದರೆ, ಅದರಿಂದ ಈಗಿರುವ ವಸ್ತುವಿನ ಪರಿಣಾಮ, ಕೆಲಸದ ವೇಗವು ಹೆಚ್ಚುವುದೇನೂ ಇಲ್ಲ ಎಂದಾದಾಗ ಅದಕ್ಕೆ ಮತ್ತೆ ಪೇಟೆಂಟ್ ಕೊಡಲು ಬರುವುದಿಲ್ಲ ಎಂದು ಸೆಕ್ಷನ್3(ಡಿ) ಹೇಳುತ್ತದೆ. ಅಪ್ರಾಮಾಣಿಕವಾಗಿ ಇನ್ನಾವುದೇ ಪೇಟೆಂಟ್ ಪಡೆಯಲು ಪ್ರಯತ್ನಿಸಿದರೆ ಅಂಥವನ್ನು ಸೆಕ್ಷನ್3 (ಡಿ) ತಡೆದು ಸಂಶೋಧನೆಗೊಂಡ ಉತ್ಪನ್ನಗಳಿಗೆ ಮಾತ್ರವೇ ಪೇಟೆಂಟ್ ಕೊಡುವುದನ್ನು ಎತ್ತಿಹಿಡಿಯುತ್ತದೆ.

2006ರಲ್ಲಿ ನೋವಾರ್ಟಿಸ್ ಕಂಪೆನಿಯು  ಎರಡು ಅರ್ಜಿಗಳನ್ನು ತಮಿಳು ನಾಡು ಹೈ ಕೋರ್ಟ್‌ನಲ್ಲಿ ತನ್ನ ಪೇಟೆಂಟ್ ಅರ್ಜಿ ನಿರಾಕರಿಸಿದ್ದಕ್ಕೆ ಮೇಲ್ಮನವಿ ಮಾಡಿದ್ದಲ್ಲದೆ, ಭಾರತದ ಪಾರ್ಲಿಮೆಂಟು ಪಾಸ್ ಮಾಡಿದ ಪೇಟೆಂಟ್ ಕಾನೂನಿನ ಸೆಕ್ಷನ್3(ಡಿ) ಯಾಕಿರಬೇಕು? ಎಂದು ಪ್ರಶ್ನೆ ಮಾಡಿತು. ಮೂರು ವರ್ಷಗಳ ಕಾಲ ನಡೆದ ಕಾನೂನಿನ ಸಮರದಲ್ಲಿ ನೋವಾರ್ಟಿಸ್ ಕಂಪನಿಯು ಸೋತಿತು. ಸೋತಿದ್ದಕ್ಕೆ ಬಾಲ ಮುದುರಿಕೊಂಡು ಹೋಗಬಾರದೇ?

ಇಲ್ಲ.  ತನ್ನ ಮೀಸೆಯೇನೂ ಮಣ್ಣಾಗಲಿಲ್ಲ ಎಂದು ಅದು ಮತ್ತೆ 2009ರಲ್ಲಿ ಪೇಟೆಂಟ್‌ನ್ನು ನಿರಾಕರಿಸಿದ್ದೇಕೆ ಎಂದು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿದಾವೆ ಹೂಡಿತು. ತನ್ನ ಉದ್ಯಮದ ಲಾಭದ ಮುಂದೆ ಒಂದು ದೇಶದ ಪಾರ್ಲಿಮೆಂಟು ಪಾಸ್ ಮಾಡಿದ ಪೇಟೆಂಟ್ ಕಾನೂನಿನ ಪರಿಚ್ಛೇದವೊಂದನ್ನೇ ಪ್ರಶ್ನೆ ಮಾಡಿತ್ತದು. ರೋಗಿಗಳು ಮತ್ತು ಔಷಧ ಕಂಪೆನಿಯೊಂದರ ಜಗಳ ಪಾರ್ಲಿಮೆಂಟ್ ರಚಿಸಿದ್ದ ಕಾನೂನಿಗೂ ಸುತ್ತಿಕೊಂಡು ಸುಪ್ರೀಂಕೋರ್ಟಿನಂಗಳಕ್ಕೆ ಬಂತು.

ಕಾನೂನಿನ ಹೋರಾಟ ಬದಿಗಿಟ್ಟು ಮತ್ತೆ ಕಾಯಿಲೆ ಬಿದ್ದವರತ್ತ ಮತ್ತೆ ಬರೋಣ. ಸಾವಿನ ನೆರಳಾದ ಕ್ಯಾನ್ಸರ್ ಬಂದಾಗ ಸಾವಿನೊಂದಿಗೆ ಸೆಣಸಾಡಲು ಸಿಗುವ ಒಂದೊಂದು ಸಾಧನವೂ ಕೂಡ ಮಹತ್ವವೇ. ಕ್ಯಾನ್ಸರಿನ ಔಷಧಗಳು ಕೂಡ. ತಿಂಗಳಿಗೆ ಲಕ್ಷಾಂತರ ರೂಗಳ ಔಷಧದ ಬೆಲೆಯೇ,`ನಿನಗೇನೂ ಬದುಕುವ ಯೋಗ್ಯತೆ ಇಲ್ಲ ಎಂದು ಹೇಳಿಬಿಡುತ್ತದೆ ಎಂದರೆ ರೋಗಿಯ ಬದುಕುವ ಮತ್ತು ಸಾವಿನ ನಿರ್ಧಾರವನ್ನು ಒಂದು ಕಂಪೆನಿಗೆ ಬಿಟ್ಟುಕೊಟ್ಟಂತಾಯಿತಲ್ಲವೇ?

ಒಬ್ಬ ಕ್ಯಾನ್ಸರ್ ರೋಗಿ, ಒಂದು ಕುಟುಂಬ, ಸಾರ್ವಜನಿಕ ಆರೋಗ್ಯದಿಂದ ದೇಶದ ಸಾರ್ವಭೌಮತ್ವದವರೆಗೆ ವಿವಿಧ ಪ್ರಶ್ನೆಗಳನ್ನೆತ್ತುತ್ತದೆ `ನೊವಾರ್ಟಿಸ್'ನ ಈ ಕೇಸು. ಬಹುರಾಷ್ಟ್ರೀಯ ಉದ್ದಿಮೆಗಳ ಲಾಭವೊಂದೇ ಗುರಿಯಾಗುಳ್ಳ ಜಾಗತೀಕರಣ ಅಂತರರಾಷ್ಟ್ರೀಯ ಅವಕಾಶದಿಂದ ಇಂದು ನಮ್ಮ ಮನೆ ಮನೆಯವರೆಗೂ ನುಗ್ಗಿ ಒಂದೊಂದು ದೇಶಕ್ಕೂ ತನ್ನ ದೇಶವಾಸಿ, ಕೃಷಿ, ಉದ್ಯೋಗ, ಉದ್ದಿಮೆಗಳನ್ನು ರಕ್ಷಿಸಿಕೊಳ್ಳಲು ತನ್ನದೇ ಆದ ಕಾನೂನು, ನೀತಿಸಂಹಿತೆಗಳನ್ನು ಮಾಡಿಕೊಳ್ಳಲಿಕ್ಕೆ ಕೂಡ ಅವಕಾಶ ಕೊಡುವುದಿಲ್ಲ.

ದೇಶದ ಕೈಗಾರಿಕೆ ಮತ್ತು ಔಷಧ ತಯಾರಿಕೆಗೆ ಬೆಂಬಲವಾಗಿ ನಿಂತಿದ್ದ ಭಾರತದ ಪೇಟೆಂಟ್‌ಕಾಯಿದೆಯನ್ನೂ ತಿದ್ದಿಸಿತ್ತದು. ಆದರೆ ಎಲ್ಲೆಲ್ಲೂ ಸದಾ ಜಯವೇ ಸಿಗುತ್ತದೆಂದು ನಂಬಿದ್ದ ಬಹುರಾಷ್ಟ್ರೀಯ ಕಂಪೆನಿಗಳಿಗೆ `ಸೆಕ್ಷನ್ 3 ಡಿ  ವಿಚಾರದಲ್ಲಿ ಸಿಕ್ಕ ಪರಾಭವ ನಮ್ಮ ಕಾನೂನುಗಳಲ್ಲೂ ಮಾನವೀಯತೆಯ ಮಿಡಿತವಿದೆ ಎಂಬ ಆಶಾಭಾವವನ್ನು ಪುನರ್‌ಸ್ರವಿಸುತ್ತದೆ. ಕ್ಯಾನ್ಸರ್ ರೋಗಿಗೆ ಜೀವದಾನವಷ್ಟೇ ಅಲ್ಲ, ಗಂಡಾಂತರದಲ್ಲಿದ್ದ ದೇಶದ ಸಾರ್ವಭೌಮತ್ವವೂ ಈ ಗೆಲುವಿನಿಂದ ಜೀವ ಪಡೆಯಿತು.

 ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT