ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಿನ ನೆಲೆ ಸೃಜನಶೀಲ ಸೆಲೆ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚಿಕ್ಕಂದಿನಲ್ಲಿಯೇ ಬದುಕಿನ ಪ್ರತಿಕೂಲಗಳಿಂದ ಎದ್ದ ಎದೆಗಿಚ್ಚನ್ನು ತಣ್ಣಗಿರಿಸಲೆಂದೇ ಕುಂಚ, ಬಣ್ಣ ಹಿಡಿದು ತನ್ನ ನೋವಿನ ಕಿಚ್ಚನ್ನು ತಣಿಸಲೆತ್ನಿಸಿದ, ಆ ನೋವೇ ಸಾಧಾರಣೀಕರಣಗೊಂಡು ಕಲಾಸ್ವಾದಕರ ಕಣ್‌ಮನ ತಣಿಯುವಂತೆ ಮಾಡಲು ಹೆಣಗಾಡಿದ ಕಲಾವಿದ ಎಡ್ವರ್ಡ್ ಮುಂಕ್.
 
ತಾನು ಬದುಕಿದ ಎಂಬತ್ತು ವರ್ಷಗಳ ಅವಧಿಯಲ್ಲಿ ಸುಮಾರು ಅರವತ್ತನಾಲ್ಕು ವರ್ಷಗಳನ್ನು ಕಲೆಗಾಗಿ ಮೀಸಲಾಗಿರಿಸಿದ. ತೈಲ, ಜಲವರ್ಣ, ಮುದ್ರಣ, ರೇಖಾಚಿತ್ರ ಹಾಗೂ ಶಿಲ್ಪಗಳು ಸೇರಿ ಆತನ ಕಲಾ ಸಂಪತ್ತು 20,848ರಷ್ಟು ಸಮೃದ್ಧವಾದುದು. ಅಷ್ಟೆಲ್ಲವನ್ನೂ ತನ್ನ ನಾಡಿನ ಓಸ್ಲೊ ಪಟ್ಟಣಕ್ಕೆ ಕೊಡಲು ಉಯಿಲು ಬರೆದಿಟ್ಟು ಏಕಲಿ ಎಂಬಲ್ಲಿ ಸಾವನ್ನಪ್ಪಿ ಶಾಂತನಾದ.

ವಿಶ್ವ ಕಲಾರಂಗದಲ್ಲಿ ಕಲಾವಿದ ಮುಂಕ್‌ನನ್ನು ಶಾಶ್ವತಗೊಳಿಸಿದ್ದು ಅವನ ಸಾವಿರ ಸಾವಿರ ಕೃತಿಗಳಲ್ಲಿ ಒಂದೇ ಒಂದಾದ ಕಲಾಕೃತಿ Scream’ (ಆರ್ತತೆ). ಇದು `ಭಾವಾಭಿವ್ಯಕ್ತ ಪಂಥ~ದ ಮೊದಲ ಕೃತಿಯೆಂದೇ ಪರಿಗಣಿತ. ಇದು ಅವನ  Soul Paintingಮತ್ತು ಅವನ ಎದೆಯಾಳದ ನರಕ (Inner Hell) ವೇದನೆಯ ಬಿಂಬ. ತನ್ನ ಎದೆಗಿಚ್ಚಿನ ತಳಮಳವನ್ನು ಚಿತ್ರಿಸುತ್ತಲೇ ಆಧುನಿಕ ಜಗತ್ತಿನ ಆಕಾಂಕ್ಷೆಗಳ ಬೆನ್ನಿಗಂಟಿಕೊಂಡೇ ಇರುವ ಮನೋಬಳಲಿಕೆಯ ಚಿತ್ರವನ್ನು ಈ ಕಲಾಕೃತಿಯಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿರುವುದು ಈ ಕಲಾವಿದನ ಹೆಚ್ಚುಗಾರಿಕೆ.

ಎಡ್ವರ್ಡ್ ತನ್ನ ಜೀವಿತದುದ್ದಕ್ಕೂ ಕಾಣುತ್ತಾ, ಅನುಭವಿಸುತ್ತಾ ಬಂದ ಹೃದಯ ಕಲಕುವ ಸಂದರ್ಭಗಳು ಒಂದಲ್ಲ, ಎರಡಲ್ಲ. ಐದು ವರ್ಷದವನಿರುವಾಗಲೇ ಹೆತ್ತ ತಾಯಿ ತೀರಿಕೊಂಡಳು. ಚಿಕ್ಕಮ್ಮ ಆ ಸ್ಥಾನ ತುಂಬಿದಳು. ಆಮೇಲೆ ಸಹೋದರಿ, ತಂದೆ ಹೀಗೆ ತನ್ನ ಕಣ್ಮುಂದೆಯೇ ನಡೆದ ಮೂರು ಸಾವುಗಳು ಸಾವಿನ ಘೋರ ಪರಿಣಾಮ ಬೀರಿದವು.

ನಂತರ ಸ್ವತಃ ತಾನು ಎರಡು ತಿಂಗಳವರೆಗೆ ಸಂದು ನೋವಿನ ಜ್ವರದಿಂದ ಬಳಲಿದ. ಇವು ಖ್ಚ್ಟಛಿಞ ಕೃತಿಗೆ ಹಿನ್ನೆಲೆಯಾದ ಸಂದರ್ಭಗಳು. ಅನಂತರವೂ ಒಬ್ಬ ಸಹೋದರ, ನಂತರ ಇನ್ನೊಬ್ಬ ಸಹೋದರಿ ಮತ್ತೆ ಚಿಕ್ಕಮ್ಮ ಸಾಲಾಗಿ ಸಾವಿಗೀಡಾದರು.

ಸಾಲದೆಂಬಂತೆ ಎದೆ ತಲ್ಲಣಿಸುವ ಪ್ರೇಮ ಪ್ರಕರಣವು ಎಡಗೈ ಬೆರಳಿನ ಒಂದು ಕೀಲನ್ನೇ ಕಳೆಯಿತು. ಅತಿ ಕುಡಿತ, ಮಾನಸಿಕ ಒತ್ತಡ, ವ್ಯಗ್ರತೆ, ಮಾನಸಿಕ ಕುಸಿತ, ಎಂಟು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಉಪಚಾರ. ಬದುಕಿನುದ್ದಕ್ಕೂ ಪೀಡಿಸಿದ ಕಣ್ಣು ಬೇನೆ. ಈ ಎಲ್ಲ ಆಘಾತಗಳೊಂದಿಗೆ ಬಿಡದೇ ಕಾಡಿದ ಏಕಾಕಿತನ.

`ಸ್ಕ್ರೀಮ್~  (Scream) ಕಲಾವಿದನ ಜೀವನದಾರಂಭದ ತಲ್ಲಣ-ತಳಮಳ, ವ್ಯಥೆ-ವ್ಯತ್ಯಯಗಳನ್ನು ತನ್ನಲ್ಲಿ ಅಡಗಿಸಿಕೊಂಡ ಕೃತಿ. ಹಾಗಾಗಿಯೇ ಅದೊಂದು ಬಲಶಾಲಿ ಅಭಿವ್ಯಕ್ತಿ. ಜರ್ಮನಿ ಮತ್ತು ಮಧ್ಯ ಯುರೋಪಿನ ನವ್ಯ ಕಲಾ ಪರಂಪರೆಯ ಹರಿಕಾರರಲ್ಲಿ ಮುಂಕ್‌ನನ್ನು ಒಬ್ಬನನ್ನಾಗಿಸಿದ ಕೃತಿ.

ಈ ಕಲಾಕೃತಿಯಲ್ಲಿ ಆಕಾಶ, ಪ್ರವಾಹ, ಸೇತುವೆ, ದೂರದ ದ್ವೀಪ ಎರಡು ಮಾನವಾಕೃತಿಗಳು, ಪ್ರಧಾನವಾಗಿ ಚಿತ್ರದ ಮಧ್ಯ ತತ್ತರಿಸುತ್ತಾ ನಿಂತ ಒಂದು ಮಾನವಾಕೃತಿ ಇದೆ. ಅದೇ ಈ ಕಲಾಕೃತಿಯ ಕೇಂದ್ರ. ಎಲ್ಲವೂ ಸಂಕ್ಷೇಪ, ಅಸ್ಪಷ್ಟವಾಗಿದ್ದರೂ ಕಲಾವಿದನ ಭಾವಾಭಿವ್ಯಕ್ತಿಯನ್ನು ಚಿತ್ರ ಸ್ಫುಟವಾಗಿ ಚಿತ್ರಿಸುತ್ತದೆ.

ಕಪ್ಪು ಮಿಶ್ರಿತ ಪರ್ಷಿಯನ್ ನೀಲಿ ವರ್ಣವು ಚಿತ್ರದ ಕೆಳ ಮುಕ್ಕಾಲು ಭಾಗವನ್ನು ಆವರಿಸಿದ್ದರೆ, ಉಳಿದ ಮೇಲ್ಭಾಗದಲ್ಲಿ ಬೆಂಕಿ ಕೆಂಪುಮಿಶ್ರಿತ ಹಳದಿ, ತೀರಾ ಕ್ವಚಿತ್ತಾಗಿ ಕಾಣುವ ನೀಲಿ ಹರಡಿದೆ. ಇಡಿಯಾಗಿ ಭಯ, ತಳಮಳ, ಮನದಾಳದ ನೋವನ್ನು ಪ್ರತಿಮಿಸುವ ವರ್ಣಸಂಯೋಜನೆ ಇದೆ. ನೋಟಕ್ಕೆ ವಾಸ್ತವವೂ ಅಲ್ಲದ, ಕಾಲ್ಪನಿಕವೂ ಅಲ್ಲದ- ಒಂದು ವಾಸ್ತವ. ಇದು ಕಲಾವಿದ ಮುಂಕ್‌ನ Psychological Realism.

ಚಿತ್ರದ ಪ್ರಧಾನ ಮಾನವಾಕೃತಿಯೇ ನೋಡುಗನನ್ನು ಎದುರುಗಟ್ಟುತ್ತದೆ. ಅದರ ಕಣ್ಣುಗಳು ಕಾಣಬಯಸದಿರುವುದನ್ನು ಕಂಡಿವೆ. ಸಹಿಸಿಕೊಳ್ಳಲಾಗದ ನೆನಪುಗಳ ಗೊಂದಲವನ್ನು ಕೇಳಿಸಿಕೊಳ್ಳಲಾರದೆ ಎರಡೂ ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡಿದೆ.
 
ತಾನು ಅನುಭವಿಸುತ್ತಲಿರುವ ಮಾನಸಿಕ ತೊಳಲಾಟವನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ತತ್ತರಿಸುತ್ತಿದೆ. ಆ ನೋವು ಅಸಹನೀಯವೆನಿಸಿ ಎದೆಗೆಟ್ಟು ಕಿರುಚಿಕೊಳ್ಳಲು ಬಾಯಿ ತೆರೆದರೂ ಧ್ವನಿಯೇ ಬಾರದ ಆರ್ತತೆಯ ಅನುಭವ ನೀಡುತ್ತದೆ- ಈ ಎಲ್ಲವೂ ಆಕಾರ, ಬಣ್ಣ, ಸಂಕೇತ, ಸಂಯೋಜನೆಯಾಗಿ ಸಾಕಾರವಾಗಿದೆ.

`ಸಂಕೇತವಾದ~ (Symbolism)ಈ ಕಲಾವಿದನ ದೃಷ್ಟಿಯಲ್ಲಿ .nature is formed by one’s state of mind. ಈ ಬಗೆಯ ಸಂಕೇತಗಳ ಒಂದು ಸಂಯೋಜನೆ Scream. ಇಲ್ಲಿ ಅತೀ ರಭಸದಿಂದ ಉಕ್ಕಿ ಹರಿಯುತ್ತಿರುವುದು- ಸಾವು, ಪ್ರೀತಿ, ದೈಹಿಕ ಅನಾರೋಗ್ಯಗಳ ನೆನಪಿನ ನಿಯಂತ್ರಿಸಲಾಗದ ಪ್ರವಾಹ.

ಚಿತ್ರದ ಕೆಳಗಡೆಯ ಬಹು ಭಾಗವನ್ನು ವ್ಯಾಪಿಸಿದ ಸೇತುವೆ, ಸೇತುವೆಯ ಕೈಯಾಸರೆಯು ಮರೆಯಾಗುತ್ತಾ ಹೋಗುವ ಒಂದು ತುದಿ ಕಳೆದುಹೋದ ನೋವಿನದಾದರೆ, ಅಗಲವಾಗಿ ಎದುರಾಗಿ ಆಕ್ರಮಿಸುತ್ತ ಬರುವ ಅದೇ ಸೇತುವೆ, ಸೇತುವೆಯ ಕೈಯಾಸರೆ ಆ ಎಲ್ಲ ನೋವನ್ನು ಮರೆತು ಮುನ್ನಡೆಯಬೇಕೆಂದಿರುವ ಬದುಕಿನ ತುದಿಯಾದೀತು.
 
ಸದ್ಯ ಅದೇ ಉಕ್ಕಿ ಹರಿಯುವ ನೆನಪುಗಳ ಪ್ರಜ್ಞಾ ಪ್ರವಾಹದ ಎಳೆತ ಸೆಳೆತಗಳ ದಾಳಿಯಿಂದ ಪಾರಾಗುವ ಏಕೈಕ ಆಶ್ರಯದ ಸಂಕೇತವಾಗುತ್ತದೆ, ಸಂಯೋಜನೆಯಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ.

ಸೇತುವೆಯ ಮೇಲಿನ ಆ ತುದಿಯ ಮಾನವಾಕೃತಿಗಳು ಪ್ರಧಾನ ಮಾನವಾಕೃತಿಯ ಯಾರೊಂದಿಗೂ ಹಂಚಿಕೊಳ್ಳಲಾಗದ ನೋವನ್ನು, ಆ ವ್ಯಕ್ತಿಯ ಒಂಟಿತನದ ಘೋರ ಅನುಭವವನ್ನು ದೂರದ ಪ್ರೇಕ್ಷಕರಾಗಿ ಮಾತ್ರ ಕಾಣುವಂತಹವುಗಳು.

ಮಾನವಾಕೃತಿಗಳ ಹಿಂದಿನ, ತಲೆ ಮೇಲಿನ ಬೆಂಕಿಕೆಂಪು, ಕೆಂಪುಮಿಶ್ರ ಹಳದಿ ವರ್ಣಗಳು ಆ ವ್ಯಕ್ತಿಯ ದೈಹಿಕ-ಮಾನಸಿಕ ಅಸ್ವಾಸ್ಥ್ಯಕ್ಕೆ ಕಾರಣವಾದ ಒತ್ತಡದ ಅಲೆಗಳು. ಅವು ಗುಡ್ಡದಂತಹ ಗುಡ್ಡದ ಮೇಲೂ ಒತ್ತಡ ಹೇರಿ ನಿಂತಹವುಗಳು. ಇದ್ದಕ್ಕಿದ್ದಂತೆ ಕತ್ತಲು ಕವಿದಂತಹ ವರ್ಣ ವಾತಾವರಣ, ಪ್ರಧಾನ ಮಾನವಾಕೃತಿಯ ಹೊದಿಕೆಯಾದ ಕರಿ ಉಡುಪು, ಚಿತ್ರದ ವಿಷಾದದ ಕಸುವನ್ನು ಹೆಚ್ಚಿಸುತ್ತದೆ.

ಪ್ರಧಾನ ಮಾನವಾಕೃತಿಯ ಅಗಲವಾಗಿ ತೆರೆದುಕೊಂಡ ಕಣ್ಣು, ಉಸಿರಾಡಲು ಅಸಾಧ್ಯವಾದಂತಾಗಿ ಹಿಗ್ಗಿದ ಮೂಗಿನ ಹೊರಳೆಗಳು, ಕಿರುಚಿಕೊಳ್ಳಲು ದೊಡ್ಡದಾಗಿ ತೆರೆದುಕೊಂಡಿರುವ ಬಾಯಿ, ಕಿವಿಮುಚ್ಚಿಕೊಂಡ ಕೈಗಳು- ನೋಡಲು, ಕೇಳಲು, ಹೇಳಲು ಬಾರದ ಅಸಹನೀಯ ದುರವಸ್ಥೆಯ ನೇರ ಅಭಿವ್ಯಕ್ತಿಯಾದರೆ; ಮುಖದ ಮೇಲೆ ಓಡಾಡಿದ ಕೆಂಪು, ಹಳದಿ, ಕರಿಯ ಛಾಯೆಗಳು ಎದೆಗಿಚ್ಚಿನ ಪ್ರಖರತೆಯ ಪ್ರತಿಬಿಂಬ.

ಸೇತುವೆ, ಪ್ರವಾಹ, ನೆಲ, ಆಗಸ ಮುಂತಾಗಿ ಎಲ್ಲೆಡೆಯಲ್ಲಿಯೂ ಅವಸರವಸರವಾಗಿ ಬಳಿದ, ಎಳೆದ ಕುಂಚದ ರಭಸದ ಬೀಸುಗಳು, ಸೇತುವೆಯ ಮೇಲೆ ಮತ್ತು ಚಿತ್ರದ ಅಲ್ಲಲ್ಲಿ ಕಾಣುವ ವೇಗದ ರೇಖೆಗಳು ಚಿತ್ರದ ಮೂಲ ಧ್ವನಿಯಾದ ಮೌನ ಆಕ್ರಂದನದ ವೇಗ ಮತ್ತು ತಲ್ಲಣದ ತೀವ್ರತೆಯ ಅನುಭೂತಿಯನ್ನುಂಟು ಮಾಡುವಂಥವು.
 
ಇಡೀ ಚಿತ್ರವೇ ಮಾನಸಿಕ ತಲ್ಲಣದ ಭೀಕರ ಭಾವನೆಗಳ ಗಾಢ ಮತ್ತು ಪ್ರಭಾವೀ ಅಭಿವ್ಯಕ್ತಿ ಹಾಗೂ ಆ ಭಾವಾಭಿವ್ಯಕ್ತಿಯ ಅನುರಣನವಾಗುತ್ತದೆ. ಇದು ಕಲಾವಿದ ತನ್ನ ಬದುಕಿನುದ್ದಕ್ಕೂ ಧ್ವನಿಯೆತ್ತಿ ಹೇಳಿಕೊಳ್ಳಲಾಗದ, ಕೇಳದ ಕಸಿವಿಸಿಯ ಆಕ್ರಂದನದ ದಟ್ಟ ಅನುಭೂತಿ.

ಇಂಥಹ ಕೇಳದ, ಒಳನೋವಿನ ಅಸಹನೀಯ ಧ್ವನಿಯೇ ಕಲಾವಿದ ಮುಂಕ್‌ನ ಸೃಜನಶೀಲತೆಯ ನೆಲೆ ಮತ್ತು ಸೆಲೆಯಾಗಿದೆ. ನೋಟಕರನ್ನು ಮಾತ್ರ ಬೆನ್ನು ಹತ್ತಿ ಬೇಟೆಯಾಡುವ ಚಿತ್ರವಾಗಿ, ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಅನುಭವದ ಭಾಗವಾಗಿ ಸಾರ್ವಕಾಲಿಕ ಅಸ್ತಿತ್ವ ಪಡೆದುಕೊಳ್ಳುತ್ತದೆ.

ಮುಂಕ್‌ನ ಮನಕಲಕುವ ಚಿತ್ರಗಳ ಹಿಂದಿನ ಅವನ ಭಾವನೆ, ಮಾನಸಿಕ ಒತ್ತಡ, ದುಃಖಾತಿರೇಕ ಹಾಗೂ ಮಾನಸಿಕ ವ್ಯಗ್ರತೆಯ ಭಾವಾಭಿವ್ಯಕ್ತಿಯ ಕಟು ಸತ್ಯವನ್ನು ಅರಗಿಸಿಕೊಳ್ಳಲಾರದ ಅಂದಿನ ಜನತೆ ಅವು ಭಯಂಕರ ಮತ್ತು ಆಘಾತಕಾರಿ ಚಿತ್ರಗಳೆಂಬುದನ್ನು ಮಾತ್ರ ಕಂಡರು.

ಸಮಕಾಲೀನ ವಿಚಾರವಾದಿಗಳ, ನಾಟಕಕಾರರ, ಚಿತ್ರಕಲಾವಿದರ, ದುಡಿಮೆಗಾರ ಸಂಘಟನೆಗಳ ಸಂಪರ್ಕವಿರಿಸಿಕೊಂಡಿದ್ದ ಎಡ್ವರ್ಡ ಮುಂಕ್ ಒಂಟಿಯಾಗಿ ಅನುಭವಿಸಿದ ಯಾತನೆ ನರಕ ಸದೃಶ. ಆದರೆ, ಅದೆಲ್ಲವನ್ನೂ ತನ್ನ ಸೃಜನಶೀಲತೆಯ ಮೂಲವನ್ನಾಗಿಸಿಕೊಂಡುದು ಅನನ್ಯ. ಅದೇ ಈ ಕಲಾವಿದನ ಆತನ ಕಲಾಕೃತಿಗಳ ಸಂದೇಶವೂ ಆದೀತು.

       
ಬಾಗಲಕೋಟೆಯಲ್ಲಿ ನೆಲೆಸಿರುವ ಲೇಖಕರು ಹಿರಿಯ ಕಲಾವಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT