ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವು-ನಲಿವಿನ `ಕ್ಯಾಬ್' ಸವಾರಿ

Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಭಾರತದ ಒಟ್ಟಾರೆ ಸಾರಿಗೆ ಉದ್ಯಮದಲ್ಲಿ ಅತ್ಯಂತ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ವಲಯವೇ `ಕ್ಯಾಬ್ ಸರ್ವಿಸ್ ಉದ್ಯಮ'. ಕ್ಯಾಬ್ ಅಥವಾ ಟ್ಯಾಕ್ಸಿ ಸೇವೆ ಉದ್ಯಮದ ರೂಪ ಪಡೆದು ಹೆಚ್ಚು ಸಮಯವೇನೂ ಆಗಿಲ್ಲ. ಆದರೆ ಭವಿಷ್ಯದಲ್ಲಿ ಇನ್ನೂ ಹೊಸ ಹೊಸ ಆಯಾಮಗಳೊಂದಿಗೆ ಬೆಳೆಯುವ ಸೂಚನೆಗಳನ್ನು ಇದು ಹೊಂದಿರುವುದಂತೂ ಸ್ಪಷ್ಟ.

ಸದ್ಯ ಭಾರತೀಯ ರಸ್ತೆಗಳಲ್ಲಿ ಕಂಡುಬರುವ ಪ್ರತಿ ಐದು ಕಾರುಗಳಲ್ಲಿ ಎರಡು `ಹಳದಿ ಹಲಗೆ'(ಯೆಲ್ಲೊ ಬೋರ್ಡ್) ವಾಹನಗಳೇ ಆಗಿರುತ್ತವೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. 2017ರ ವೇಳೆಗೆ ಈ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ. ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಆಟೊರಿಕ್ಷಾಗಳ ಜಾಗವನ್ನೂ ಆಕ್ರಮಿಸಿಕೊಳ್ಳಲಿರುವ ಈ ವಾಹನಗಳು ಶೇರಿಂಗ್ ವ್ಯವಸ್ಥೆಯ ಮೂಲಕ ಸಾಮಾನ್ಯ ಜನರ ಚಿಕ್ಕ-ಪುಟ್ಟ ಅಗತ್ಯಗಳಿಗೂ ಲಭ್ಯವಾಗುತ್ತವೆ. ಅಲ್ಲದೆ, ಚಕ್ರಗಳ ಮೇಲೆ ನಿಂತಿರುವ ಈ ಉದ್ಯಮ ಸಾರ್ವಜನಿಕ ಸಾರಿಗೆ ಕ್ಷೇತ್ರದ ಸಂಸ್ಥೆಗಳನ್ನೂ ಮೀರಿ ಬೆಳೆಯಲಿದೆ ಎನ್ನುತ್ತಾರೆ ಈ ಉದ್ಯಮದಲ್ಲಿನ ಅನುಭವಿಗಳು.

ಅದೇನೇ ಇರಲಿ, ಈಗ ಹೊರಸ್ಥಳಗಳಿಂದ ವ್ಯವಹಾರ, ಉದ್ಯಮ, ಸಭೆ, ಸಮಾವೇಶ ಅಥವಾ ಪ್ರವಾಸಕ್ಕೆಂದು ಯಾವುದೇ ಮಹಾ ನಗರ ಅಥವಾ ನಗರಗಳಿಗೆ ಬರುವ ಸಾವಿರಾರು ಜನರಿಗೆ ಟ್ಯಾಕ್ಸಿ ಸೇವೆ ಅನಿವಾರ್ಯ ಹಾಗೂ ಅತ್ಯಗತ್ಯವಾಗಿದೆ. ಅಷ್ಟೇ ಅಲ್ಲ, ತಮ್ಮ ಸಿಬ್ಬಂದಿಗೆ ವಾಹನ ಸೌಕರ್ಯ ಒದಗಿಸುವ ಅನೇಕ ಖಾಸಗಿ ಕಂಪೆನಿಗಳು ಸಹ ಇಂತಹ ಕ್ಯಾಬ್‌ಗಳ ಸೇವೆಯನ್ನೇ ಅವಲಂಬಿಸಿವೆ. ಆದರೆ ಈ ಉದ್ಯಮ ಮೇಲ್ನೋಟಕ್ಕೆ ಕಾಣುವಷ್ಟು ಸುಲಲಿತವಾಗಿಲ್ಲ. ಇಲ್ಲಿ ಎಲ್ಲರೂ ಇರುವುದು, ಇದ್ದು ಜಯಿಸುವುದು ಸುಲಭವಲ್ಲ. ಉದ್ಯಮದಲ್ಲಿ ಗೆಲ್ಲುವ ಕುದುರೆಯಾಗಬೇಕಾದರೆ ಸಾಕಷ್ಟು ಪರಿಶ್ರಮ ಬೇಕು, ಪ್ರಯತ್ನ ಬೇಕು, ಚಾಣಾಕ್ಷ ಬುದ್ಧಿಯೂ ಬೇಕು.

* * *

ಹೆಚ್ಚು ದೂರದ್ದೇನಲ್ಲ, ಕೇವಲ ಐದಾರು ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೂ ಸಾಕು, ಟ್ಯಾಕ್ಸಿ/ಕ್ಯಾಬ್‌ಗಳ ದೃಷ್ಟಾಂತ ಕಣ್ಣಿಗೆ ಕಟ್ಟುತ್ತದೆ. ವರ್ಷಗಳ ಹಿಂದೆ ಸ್ವತಂತ್ರ ಅಸ್ತಿತ್ವವನ್ನೇ ಹೊಂದಿರದ ಅಸಂಘಟಿತ ಕ್ಷೇತ್ರವಾಗಿದ್ದ ಈ ಸಾರಿಗೆ ಸೇವಾ ವಲಯ, ನಂತರದಲ್ಲಿ ಸುಸಜ್ಜಿತ, ಸುವ್ಯವಸ್ಥಿತ ಹಾಗೂ ಸಂಘಟಿತ ಸ್ವರೂಪದ ಅಚ್ಚುಕಟ್ಟಾದ ಉದ್ಯಮವಾಗಿ ಬೆಳೆಯಲು ಹೆಚ್ಚು ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ. ಆದರೆ ಇಂದಿಗೂ ತನ್ನದೇ ಆದ ಸಮಸ್ಯೆ-ಸವಾಲುಗಳ ಜೊತೆಗೇ ಬೆಳೆಯುತ್ತ, ಬೀಳುತ್ತ ಮತ್ತೆ ಏಳುತ್ತ, ಗೆದ್ದೆನೆಂದರೂ ಸೋಲುತ್ತ, ಸೋಲಿನಲ್ಲೇ ಗೆಲ್ಲುತ್ತ ಸಾಗುತ್ತಿದೆ. ಇದು ಕ್ಯಾಬ್ ಅಥವಾ ಟ್ಯಾಕ್ಸಿ ಸೇವೆ ಎಂಬ ಸವಾರಿ ಉದ್ಯಮದ ಕಿರುನೋಟ.

ತನ್ನ ವೈಯಕ್ತಿಕ ತುಮುಲಗಳೇನೇ ಇರಲಿ, ಗ್ರಾಹಕರಿಗೆ ಮಾತ್ರ ಕಾಲಕಾಲಕ್ಕೆ ಸೂಕ್ತ ಸೇವೆ ಒದಗಿಸುವ ಟ್ಯಾಕ್ಸಿ/ಕ್ಯಾಬ್‌ಗಳು ಇಂದಿನ ಬಹುತೇಕ ಎಲ್ಲಾ ವ್ಯವಹಾರ-ಉದ್ಯಮಗಳ    ಜೀವಾಳವೆಂದೇ ಹೇಳಬಹುದು. ವೈಯಕ್ತಿಕ ಕೆಲಸಗಳಿರಲಿ, ಸಭೆ-ಸಮಾರಂಭಗಳೇ ಆಗಿರಲಿ, ವ್ಯವಹಾರಿಕ ಜವಾಬ್ದಾರಿಗಳಿರಲೀ ಎಲ್ಲದಕ್ಕೂ ಟ್ಯಾಕ್ಸಿ ಅಥವಾ ಕ್ಯಾಬ್‌ನ ಸೇವೆ ಅನಿವಾರ್ಯವಾಗಿ ಬೆಳೆಯುತ್ತಿದೆ.

ಇನ್ನೊಂದೆಡೆ ಇದು ಲಕ್ಷಾಂತರ ಜನರ ಬದುಕಿನ ಬಂಡಿ ಎಳೆಯುವ, ತುತ್ತಿನ ಚೀಲ ತುಂಬುವ ಸಂಜೀವಿನಿಯೂ ಆಗಿದೆ. ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಸಾಧಿಸುತ್ತ ಸಾಗಿರುವ, ಮೇಲ್ನೋಟಕ್ಕೆ ಲಾಭದ ಗಣಿಯಾಗಿ ಕಾಣುವ ಈ ಉದ್ಯಮ, ತನ್ನೊಳಗೆ ವಿಭಿನ್ನ ತಿರುವುಗಳನ್ನು, ವಿಚಿತ್ರ ಆಯಾಮಗಳನ್ನು ಹುದುಗಿಸಿಟ್ಟುಕೊಂಡಿದೆ. ಒಮ್ಮೆ ತನ್ನಷ್ಟಕ್ಕೆ ತಾನು ಓಡುವ ಸುಗಮ ದಾರಿಯಾಗಿ ಕಂಡರೂ, ಮತ್ತೊಮ್ಮೆ ಹೆಜ್ಜೆ-ಹೆಜ್ಜೆಗೂ ಅಡೆತಡೆಗಳನ್ನು ಎದುರಿಸುತ್ತ, ಮುಗ್ಗರಿಸುತ್ತ, ಸಾವರಿಸಿಕೊಳ್ಳುತ್ತಾ ಸಾಗುವ ಪ್ರಯಾಣವಿದು.

ಹೌದು, ಇದೊಂದು ವಿಚಿತ್ರ ಉದ್ಯಮ. ಲಾಭ-ನಷ್ಟವನ್ನು ನಿಖರವಾಗಿ ಲೆಕ್ಕ ಹಾಕುವುದು ಸ್ವಲ್ಪ ಕಷ್ಟವೆ. ಗೆದ್ದೆ ಎಂದು ಬೀಗುವಂತೆಯೂ ಇಲ್ಲ, ಸೋತೆ ಎಂದು ಸೊರಗುವಂತೆಯೂ ಇಲ್ಲ. ಏಕೆಂದರೆ ಇಲ್ಲಿ ಎಲ್ಲವೂ ಅಸ್ಥಿರ. ಇಲ್ಲಿ ವಾಹನಗಳ ಮರ್ಮವನ್ನು, ರಸ್ತೆಯ ಸ್ವಭಾವಗಳನ್ನು, ಗ್ರಾಹಕರ ಮನಸ್ಥಿತಿಯನ್ನು ಅರಿತವನಿಗೇ ಯಶಸ್ಸು. ಯಾವುದೇ ಒಂದು ಕಡೆ ಯಾಮಾರಿದರೂ ಸೋಲು ಬೆನ್ನೇರಿ ಕುಳಿತು ಬಿಡುತ್ತದೆ. ಎಲ್ಲಾ ದಿಕ್ಕುಗಳಿಂದ ಸ್ಪರ್ಧೆ, ಪೈಪೋಟಿ, ಸವಾಲುಗಳು... ಇವೆಲ್ಲವುಗಳೊಂದಿಗೆ ಸೆಣಸಾಡಿ ಬೆಳೆಯುವವನಿಗೆ ಎಂಟೆದೆಯ ಧೈರ್ಯ ಬೇಕು!

ಕ್ಯಾಬ್/ಟ್ಯಾಕ್ಸಿ ಸೇವೆ
ಕ್ಯಾಬ್ ಅಥವಾ ಟ್ಯಾಕ್ಸಿ ಸೇವೆ ನಿನ್ನೆ ಮೊನ್ನೆಯಿಂದ ಅಸ್ತಿತ್ವಕ್ಕೆ ಬಂದ ಹೊಸ ವಲಯವೇನೂ ಅಲ್ಲ. 1910ರಲ್ಲಿಯೇ ಈ ಸೇವೆ ಚಾಲ್ತಿಯಲ್ಲಿತ್ತು. ಹಳೆಯ ಕಾಲದ ಟ್ಯಾಕ್ಸಿಗಳು ಸಾಂಪ್ರದಾಯಿಕ ಅಂಬಾಸಿಡರ್ ಹಾಗೂ ಕಪ್ಪು ಮತ್ತು ಹಳದಿ ಬಣ್ಣದ ಪ್ರೀಮಿಯರ್ ಪದ್ಮಿನಿ ಶೈಲಿಯಲ್ಲಿದ್ದವು. ಅವು ಜನರ ದೈನಂದಿನ ಸಾರಿಗೆ ಅಗತ್ಯಗಳಿಗೆ ಬಳಕೆಯಾಗುತ್ತಿದ್ದವು. ಆದರೆ ಅಂತಹ ಸೇವೆಗಳನ್ನು ಪಡೆಯುವವರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು.

ನಂತರದ ದಿನಗಳಲ್ಲಿ ಈ ಸೇವೆ ಮುಂಬೈ, ದೆಹಲಿ, ಕೊಲ್ಕತ್ತಾ, ಹೈದರಾಬಾದ್, ಬೆಂಗಳೂರು ಸೇರಿದಂತೆ ಬಹುತೇಕ ಎಲ್ಲಾ ಮೆಟ್ರೊ ನಗರಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸುತ್ತಾ ಸಾಗಿತು. ಈಗಂತೂ ಸಣ್ಣ-ಪುಟ್ಟ ನಗರ, ಪಟ್ಟಣ, ತಾಲ್ಲೂಕು ಮಟ್ಟದಲ್ಲಿಯೂ ಸಹ ಕ್ಯಾಬ್ ಹಾಗೂ ಟಾಕ್ಸಿಗಳ ಸೇವೆ ಹರಡಿ ನಿಂತಿರುವುದನ್ನು ಗಮನಿಸಬಹುದು.
2009ರಿಂದ ಈಚೆಗೆ ಇಂತಹ ವಾಹನಗಳ ಒಟ್ಟಾರೆ ಮಾರುಕಟ್ಟೆಯ ವಾರ್ಷಿಕ ಸಂಯೋಜಿತ ಬೆಳವಣಿಗೆ (compounded annual growth rate-CAGR) ದ್ವಿಗುಣಗೊಳ್ಳುತ್ತಾ ಸಾಗಿದೆ.

ಮೂರು ವರ್ಷದ ಹಿಂದೆ ಬೆಂಗಳೂರಿನ ರಸ್ತೆಗಳಲ್ಲಿ ಹೆಚ್ಚೆಂದರೆ 40,000 ಕ್ಯಾಬ್ ಮತ್ತು ಟ್ಯಾಕ್ಸಿಗಳು ಓಡಾಡುತ್ತಿದ್ದವು. ವಿಮಾನ ನಿಲ್ದಾಣ, ಪಂಚತಾರಾ ಹೋಟೆಲ್‌ಗಳು ಹಾಗೂ ಕಾರ್ಪೊರೆಟ್ ಸಂಸ್ಥೆಗಳು, ಐ.ಟಿ-ಬಿಟಿ ಕಂಪೆನಿಗಳ ಮುಂದೆ ನಾಲ್ಕಾರು ವಾಹನಗಳು ನಿಂತಿರುತ್ತಿದ್ದವು. ಆದರೆ ಇಂದು ರಸ್ತೆಗಿಳಿಯುವ ಇಂತಹ ವಾಹನಗಳ ಸಂಖ್ಯೆ 80,000ಕ್ಕೂ ಅಧಿಕ. ವಿಮಾನ ನಿಲ್ದಾಣ ಹಾಗೂ ದೊಡ್ಡ ದೊಡ್ಡ ಹೋಟೆಲ್‌ಗಳ ಮುಂದೆ ವಾಹನಗಳ ಕ್ಯಾಬ್-ಟ್ಯಾಕ್ಸಿಗಳ ಸಾಲು. ಸ್ಪರ್ಧೆಯಂತೂ ಬಹಳ ತೀವ್ರವಾಗಿಯೇ ಇದೆ.

ಮೊದಲು ಶ್ರೀಮಂತರು, ದೊಡ್ಡ ಉದ್ಯಮಿಗಳು, ವಿಶೇಷ ಅಧಿಕಾರಿಗಳು ಸೇರಿದಂತೆ ಕೆಲವರು ಮಾತ್ರ ಬಳಸುತ್ತಿದ್ದ ಟ್ಯಾಕ್ಸಿ ಸೇವೆ ಇತ್ತೀಚಿನ ದಿನಗಳಲ್ಲಿ ಎಲ್ಲಾ  ಸ್ಥರದವರ, ಎಲ್ಲಾ ವರ್ಗದ ಜನರ ಎಲ್ಲಾ ರೀತಿಯ ಅಗತ್ಯಗಳಿಗೂ ಬಳಕೆಯಾಗತೊಡಗಿದೆ.  ಹೆಚ್ಚುತ್ತಿರುವ ಗ್ರಾಹಕರ ಆದಾಯ, ಐಶಾರಾಮಿ ಜೀವನ ಪದ್ಧತಿಯತ್ತ ಒಲವು, ಗೌಣವಾಗುತ್ತಿರುವ ದೈಹಿಕ ಶ್ರಮದ ಮಹತ್ವ, ಇದೆಲ್ಲದರೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಸಮರ್ಪಕ ಸೇವೆ... ಮೊದಲಾದ ಕಾರಣಗಳಿಂದಾಗಿ ಕ್ಯಾಬ್/ಟ್ಯಾಕ್ಸಿ ಸೇವೆ ಬಹಳ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಾ, ಎಲ್ಲೆಡೆ ವಿಸ್ತರಿಸಿಕೊಳ್ಳುತ್ತಾ, ಸಾವಿರಾರು ಮಂದಿಗೆ ಹೊಸದಾಗಿ ಉದ್ಯೋಗ ಒದಗಿಸುತ್ತಾ ಬೆಳೆಯುತ್ತಲೇ ಇದೆ...

ದಿನ-ದಿನವೂ ಹೊಸ ಹೊಸ ಟ್ಯಾಕ್ಸಿ/ಕ್ಯಾಬ್‌ಗಳು ರಸ್ತೆಗೆ ಬರುತ್ತಲೇ ಇವೆ. ದಿನಕ್ಕೊಂದು ಸಾರಿಗೆ ಸೇವೆ ಒದಗಿಸುವ ಕ್ಯಾಬ್ ಏಜೆನ್ಸಿಗಳು ಹುಟ್ಟಿಕೊಳ್ಳುತ್ತಿವೆ. ಆಕರ್ಷಕ ರಿಯಾಯಿತಿ, ಸ್ಪರ್ಧಾತ್ಮಕ ದರ, ಸಮಯಕ್ಕೆ ಸರಿಯಾದ ವಾಹನ ಸೇವೆ, ಏರ್ ಕಂಡಿಷನರ್-ಎಂಪಿ 3 ಪ್ಲೇಯರ್- ಟಿ.ವಿ ಮೊದಲಾದ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುತ್ತಾ, `ಜಿಪಿಎಸ್'(ಗ್ಲೋಬಲ್ ಪೊಸಿಷನಿಂಗ್ ಸಿಸ್ಟೆಂ) ಮತ್ತು ವಾಕಿಟಾಕಿ(ನಿಸ್ತಂತು ದೂರವಾಣಿ), ಸಿ.ಸಿ ಟಿ.ವಿ ಮೊದಲಾದ ನೂತನ ತಂತ್ರಜ್ಞಾನದ ಸಾಧನ-ಸಲಕರಣೆಗಳನ್ನು ಅಳವಡಿಸಿಕೊಂಡು ಸುಧಾರಿತ ಗುಣಮಟ್ಟದ ಸೇವೆ ನೀಡುತ್ತಾ ಸಾರಿಗೆ ಉದ್ಯಮದಲ್ಲಿ ಹೊಸ ಅಲೆಯನ್ನೇ ಹುಟ್ಟುಹಾಕುತ್ತಿದೆ ಈ `ಕ್ಯಾಬ್-ಟ್ಯಾಕ್ಸಿ ಸರ್ವಿಸ್' ಉದ್ಯಮ.

ತಲೆಮಾರಿನ ಬದಲಾವಣೆ ಹಾಗೂ ಸುಧಾರಿತ ತಂತ್ರಜ್ಞಾನದಿಂದಾಗಿ ಜನರು ಸಹ ಸುಧಾರಿತ ಹಾಗೂ ಐಷಾರಾಮಿ ಸೇವೆಯನ್ನು ಅಪೇಕ್ಷಿಸತೊಡಗಿದ್ದಾರೆ. ಈ ವಿದ್ಯಮಾನದಿಂದಾಗಿ ಕಪ್ಪು ಮತ್ತು ಹಳದಿ ಬಣ್ಣದ ಸಾಮಾನ್ಯ ದರ್ಜೆಯ ಹಳೆಯ ಟ್ಯಾಕ್ಸಿಗಳ ಬದಲಿಗೆ ಭಾರತೀಯ ರಸ್ತೆಗಳಲ್ಲಿ ಈಗ ಆಕರ್ಷಕವಾದ, ನೂತನ ಐಷಾರಾಮಿ ಕಾರುಗಳ ಪ್ರವೃತ್ತಿ ಅದಾಗಲೇ ಬೆಳೆದುಬಿಟ್ಟಿದೆ.

ಟಾಟಾ ಇಂಡಿಕಾ ಮತ್ತು ಮಾರುತಿ ಆಮ್ನಿ ವ್ಯಾನ್‌ನಿಂದ ಆರಂಭಿಸಿ ಟಾಟಾ ಇಂಡಿಗೊ, ಸೆಡಾನ್, ಇನ್ನೋವಾ, ಟೊಯೊಟಾ, ರೆನೊ ಲೊಗಾನ್, ಹೋಂಡಾ ಸಿಟಿ, ಹುಂಡೈ ವೆರ್ನಾ, ಮಾರುತಿ ಸ್ವಿಫ್ಟ್ ಸೇರಿದಂತೆ ಎಲ್ಲಾ ಕಂಪೆನಿಗಳ ವಿನೂತನ ಐಷಾರಾಮಿ ಕಾರುಗಳೂ ಈಗ ಸಾರಿಗೆ ಸಂಚಾರ ಸೇವೆಯಲ್ಲಿವೆ. 3 ಲಕ್ಷದ ಸಾಮಾನ್ಯ ಪುಟ್ಟ ಕಾರಿನಿಂದ ಆರಂಭಿಸಿ 1 ಕೋಟಿ ಮೌಲ್ಯದ ಐಶಾರಾಮಿ ಕಾರಿನವರೆಗೂ ಇರುವ ವಾಹನಗಳ ಸಾಲು ಈ ಟ್ಯಾಕ್ಸಿ ಸೇವಾ ಉದ್ಯಮದ ರೂಪರೇಷೆಗಳನ್ನೇ ಬದಲಿಸಿಬಿಟ್ಟಿದೆ.

ಆದರೆ ಇಂತಹ ಐಷಾರಾಮಿ, ಅತ್ಯಾಧುನಿಕ ಕಾರುಗಳನ್ನು ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಮಾತ್ರ ಕ್ಯಾಬ್ ಅಥವಾ ಟ್ಯಾಕ್ಸಿ ಸೇವೆಗೆ ಬಳಸಲಾಗುತ್ತದೆ. ಉಳಿದಂತೆ ಚಿಕ್ಕ ನಗರ-ಪಟ್ಟಣಗಳಲ್ಲಿ ಸಾಮಾನ್ಯ ಶ್ರೇಣಿಯ ಕಾರುಗಳ ಬಳಕೆ ಇದೆ.

ಪ್ರಸ್ತುತ `ಸಂಘಟಿತ ಸ್ವರೂಪದ ಕ್ಯಾಬ್ ಸೇವೆ' ಉದ್ಯಮದಲ್ಲಿ ರಾಜ್ಯಾದ್ಯಂತ ಸುಮಾರು 1,50,000 ವಾಹನಗಳಿವೆ ಎಂಬ ಅಂದಾಜಿದೆ. ಬೆಂಗಳೂರಿನಲ್ಲಿಯೇ ಅಂದಾಜು 80,000ಕ್ಕೂ ಅಧಿಕ ವಾಹನಗಳು ಈ ಸೇವೆಯಲ್ಲಿ ತೊಡಗಿವೆ. ಇವುಗಳಲ್ಲಿ 60,000 ವಾಹನಗಳು `ಆನ್ ಕಾಲ್ ಸರ್ವಿಸ್'ನಲ್ಲಿ ತೊಡಗಿವೆ. ಇನ್ನು 20,000 ವಾಹನಗಳು ಕಾರ್ಪೊರೆಟ್ ಹಾಗೂ ಇತರೆ ಕಂಪೆನಿಗಳ ಸಿಬ್ಬಂದಿಗಳ ಸಾರಿಗೆ ಸೇವೆಗಾಗಿ  ಮೀಸಲಾಗಿವೆ. ಪ್ರಸ್ತುತ ಈ ವಲಯದ ವಿವಿಧ ವಿಭಾಗಗಳಲ್ಲಿ ಸುಮಾರು ಐದು ಲಕ್ಷ ಜನರು ದುಡಿಯುತ್ತಿದ್ದಾರೆ.

ಸವಾಲು-ಸಮಸ್ಯೆ
ಈ ವ್ಯವಹಾರದಲ್ಲಿ ಸಾಕಷ್ಟು ಲಾಭವಿದೆ ಸರಿ. ಅಂತೆಯೇ ಹೆಜ್ಜೆ-ಹೆಜ್ಜೆಗೂ ಎದುರಾಗುವ ಸವಾಲುಗಳಿಗೇನು ಕೊರತೆ ಇಲ್ಲ. ಲಾಭ ಬಾಚಿಕೊಳ್ಳಲು ಕೈಚಾಚಿದವನ ತೆಕ್ಕೆಗೆ ಹೆಚ್ಚಾಗಿ ಸವಾಲುಗಳೇ ಬಂದು ಬೀಳುತ್ತವೆ. ಆದರೆ ಇಂತಹ ಸವಾಲುಗಳೊಂದಿಗೆ ಹಾವು ಏಣಿ ಆಟ ಆಡುತ್ತಲೇ ಮೇಲೇರುವ ಛಾತಿ ಇರುವವ ಮಾತ್ರ ಈ ಉದ್ಯಮದಲ್ಲಿ ಉಳಿಯುತ್ತಾನೆ ಮತ್ತು ಬೆಳೆಯುತ್ತಾನೆ.

`ಲಾಭವೇನೊ ಇದೆ. ಆದರೆ ಮೊದಲು ಈ ಉದ್ಯಮದ ಆಳವನ್ನು ಅರಿತುಕೊಳ್ಳಬೇಕಾಗುತ್ತದೆ. ಈ ವ್ಯವಹಾರದ ಸ್ವಭಾವವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಲಾಭ ಮಾಡಿಕೊಳ್ಳಬಹುದು. ಸರಿಯಾದ ರೀತಿಯಲ್ಲಿ ದುಡಿಸಿದರೆ ಒಂದು ಕ್ಯಾಬ್ ಅಥವಾ ಟ್ಯಾಕ್ಸಿ ದಿನಕ್ಕೆ ಒಂದು ಸಾವಿರದಿಂದ ಮೂರು ಸಾವಿರ ರೂಪಾಯಿವರೆಗೆ ಲಾಭ ತಂದುಕೊಡುತ್ತದೆ' ಎನ್ನುತ್ತಾರೆ `ಸಿ.ಕೆ ಕ್ಯಾಬ್' ಸಂಸ್ಥೆಯ ಪುನೀತ್ ಕುಮಾರ್.

`ಡೀಸೆಲ್ ಬೆಲೆಯಲ್ಲಿ ಹಾಗೂ ವಾಹನಗಳ ಬಿಡಿಭಾಗಗಳ ಬೆಲೆಯಲ್ಲಿ ಆಗ್ಗಿಂದ್ದಾಗ್ಗೆ ತೀವ್ರ ಏರಿಕೆ ಆಗುತ್ತಲೇ ಇದೆ. ಆದರೆ ಅದಕ್ಕೆ ತಕ್ಕಂತೆ ವಾಹನದ ಬಾಡಿಗೆಯ ದರವನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಕ್ಯಾಬ್ ಸೇವೆ ಬಯಸುವ ಕಂಪೆನಿಗಳ ಜತೆ ಮುಂಚಿತವಾಗಿಯೇ ವಾರ್ಷಿಕ ಅವಧಿಯ ಒಪ್ಪಂದ ಮಾಡಿಕೊಂಡಿರುತ್ತೇವೆ. ಆ ಅವಧಿ ಮುಗಿಯವವರೆಗೂ ದರ ಮತ್ತು ಸೇವೆ ಸ್ವರೂಪದಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ. ಹೀಗಾಗಿ ಈಗಂತೂ ಇದು ಲಾಭದ ಉದ್ಯಮ ಎನಿಸಿಕೊಳ್ಳುತ್ತಿಲ್ಲ' ಎನ್ನುತ್ತಾರೆ `ವಿನಾಯಕ ಟೆಂಪೊ ಸರ್ವಿಸಸ್' ಮಾಲೀಕ ಕೆ.ಎಂ.ರಮೇಶ್.

`ಇನ್ನೊಂದೆಡೆ ನೌಕರರ ಕೊರತೆ. ಉತ್ತಮ ಜ್ಞಾನ ಹೊಂದಿರುವ ಎಲ್ಲಾ ರೀತಿಯ ಗ್ರಾಹಕರಿಗೆ ಸೂಕ್ತ ಸೇವೆ ನೀಡುವ ಚಾಲಕರ ಕೊರತೆ ಇಲ್ಲಿ ಯಾವತ್ತಿನಿಂದಲೂ ಇದೆ. ಮೊದಲು ತಮಿಳುನಾಡಿನ ಸಾಕಷ್ಟು ಜನ ಚಾಲಕರು ಬೆಂಗಳೂರಿನಲ್ಲಿದ್ದರು. ಆದರೆ ನಗರದಲ್ಲಿನ ಮನೆ ಬಾಡಿಗೆ, ಜೀವನ ನಿರ್ವಹಣೆ ವೆಚ್ಚದಲ್ಲಿ ಭಾರಿ ಹೆಚ್ಚಳವಾಗಿದ್ದು ಕಂಡು ವಿಚಲಿತರಾಗಿ ಸ್ವಂತ ಊರಿಗೆ ವಾಪಸಾದರು. ಚಾಲಕರಿಗೆ ಸರ್ಕಾರ 8ನೇ ತರಗತಿವರೆಗಿನ ವ್ಯಾಸಂಗವನ್ನು ಕಡ್ಡಾಯ ಮಾಡಿದ ಮೇಲಂತೂ ಚಾಲಕರ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ' ಎನ್ನುವ ರಮೇಶ್, ಉದ್ಯಮದ ಸಮಸ್ಯೆಗಳ ಹಲವು ಮುಖಗಳನ್ನು ತೆರೆದಿಡುತ್ತಾರೆ.

`ಹೆಸರೂ ಇಲ್ಲದ, ಸ್ವಂತ ಅಸ್ತಿತ್ವವೂ ಇಲ್ಲದ ಪುಟ್ಟ ಏಜೆನ್ಸಿಗಳೂ ಸಹ ಕೆಲವೊಮ್ಮೆ ಭಯ ಹುಟ್ಟಿಸಿ ಬಿಡುತ್ತವೆ ಇಲ್ಲಿ. ಯಾವುದೊ ಕಾಲದ ಒಂದೊ-ಎರಡೊ ವಾಹನ ಇಟ್ಟುಕೊಂಡು ತೀರಾ ಕಡಿಮೆ ಸೇವಾ ಶುಲ್ಕದ ಆಮಿಷವೊಡ್ಡುತ್ತಾ ವಾಹನಗಳನ್ನು ರಸ್ತೆಗಿಳಿಸುವ ಈ ಸಂಸ್ಥೆಗಳು ಹೊಸ ಹೊಸ ಗ್ರಾಹಕರಿಗೆ ಗಾಳ ಬೀಸುತ್ತಲೇ ಇರುತ್ತವೆ. ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯ ಮಾನದಂಡಗಳನ್ನು ಕಾಯ್ದುಕೊಂಡು ಸೇವೆ ಒದಗಿಸುವ ನಮಗೆ ಕೆಲವೊಮ್ಮೆ ಈ ಸಣ್ಣ ಸಂಸ್ಥೆಗಳ ಅನಾರೋಗ್ಯಕಾರಿ ಸ್ಪರ್ಧೆಯೇ ದೊಡ್ಡ ಸಮಸ್ಯೆಯಾಗಿ ಕಾಣಿಸುವುದೂ ಉಂಟು' ಎನ್ನುತ್ತಾರೆ ರಮೇಶ್.

ದೇಶದಲ್ಲೆಲ್ಲೂ ಇಲ್ಲದ ನಿಯಮಗಳನ್ನು ತಂದು ಹೇರುವ ಸರ್ಕಾರದ, ರಸ್ತೆ ಸಾರಿಗೆ ನಿಯಂತ್ರಣ ಇಲಾಖೆಗಳ ಕಠಿಣ ಷರತ್ತುಗಳದ್ದೇ ಮತ್ತೊಂದು ಸಮಸ್ಯೆ. ನಿಯಮಗಳನ್ನೇನೊ ಹೇರುತ್ತಾರೆ, ಆದರೆ ಅದಕ್ಕೆ ಪೂರಕವಾಗಿ ತನ್ನದೂ ಕೆಲವು ಜವಾಬ್ದಾರಿಗಳೂ ಇರುತ್ತವೆ ಎನ್ನುವುದನ್ನೇ ನಮ್ಮ ಸರ್ಕಾರ ಮರೆತುಬಿಡುತ್ತದೆ ಎನ್ನುವುದು ಅವರ ದೂರು.

ರೇಡಿಯೊ ಟ್ಯಾಕ್ಸಿ
ಮೆಟ್ರೊಗಳ(ಮಹಾ ನಗರ) ಅವಸರದ ಜೀವನಶೈಲಿಯೊಂದಿಗೇ ಹೆಜ್ಜೆ ಹಾಕುವ ನಿಟ್ಟಿನಲ್ಲಿ ಕ್ಯಾಬ್/ಟ್ಯಾಕ್ಸಿ ಸೇವೆಯೂ ಹೊಸ ರೂಪ ಪಡೆಯುತ್ತಿದೆ. ಅಂತೆಯೇ ಗ್ರಾಹಕರಿಗೆ ಅತಿ ಕಡಿಮೆ ಅವಧಿಯಲ್ಲಿ ಹಾಗೂ ಬಹಳ ಸುಲಭವಾಗಿ ಲಭ್ಯವಾಗಬೇಕೆಂಬ ಉದ್ದೇಶದಿಂದಲೇ `ರೇಡಿಯೊ ಟ್ಯಾಕ್ಸಿ' ಸೇವೆ ಸಜ್ಜಾಗಿದೆ.

ರೇಡಿಯೊ ಸಿಗ್ನಲ್ ಮೂಲಕ ಕಾರ್ಯನಿರ್ವಹಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಟ್ಯಾಕ್ಸಿಗಳಿವು. ಗ್ರಾಹಕರು ರೇಡಿಯೊ ಟ್ಯಾಕ್ಸಿಯ ಸಹಾಯವಾಣಿಗೆ ಕರೆ ಮಾಡಿದಾಗ ಆ ನಿರ್ವಾಹಕ ರೇಡಿಯೊ ಸಿಗ್ನಲ್ ಮೂಲಕ ಹತ್ತಿರದ ಟ್ಯಾಕ್ಸಿ ಸೇವೆಯನ್ನು ಆ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾನೆ.

`ಭಾರತೀಯ ರೇಡಿಯೊ ಟ್ಯಾಕ್ಸಿ ಸೇವೆಗಳ ಮಾರುಕಟ್ಟೆ ಮುನ್ಸೂಚನೆ-2017'ರ ಸಮೀಕ್ಷೆ ಪ್ರಕಾರ ಭಾರತದಲ್ಲಿ `ರೇಡಿಯೊ ಟ್ಯಾಕ್ಸಿ' ಸೇವೆಗಳ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಅವಕಾಶಗಳು ಲಭ್ಯವಾಗಲಿವೆ. ಈ ವಲಯದಲ್ಲಿ ಸದ್ಯ ಕೆಲವೇ ಕೆಲವು ವ್ಯವಸ್ಥಿತ ಉದ್ಯಮಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯಕ್ಕೆ ತಕ್ಕಷ್ಟು ಕ್ಯಾಬ್‌ಗಳನ್ನು ಪೂರೈಸುವಲ್ಲಿ ತೊಂದರೆಯಾಗುತ್ತಿದೆ. ಕೇವಲ ಶೇ 15ರಷ್ಟು ಕೋರಿಕೆಗಳನ್ನು ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ. ಆದರೆ 2017ರ ವೇಳೆಗೆ ಭಾರತೀಯ ರಸ್ತೆಗಳ ಮೇಲೆ ರೇಡಿಯೊ ಟ್ಯಾಕ್ಸಿಗಳ ಓಡಾಟ ಶೇ 30ರಷ್ಟು ಹೆಚ್ಚಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

`ಕ್ಯಾಬ್ ಅಥವಾ ಟ್ಯಾಕ್ಸಿಗಳ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳ ಕಂಡುಬರುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಸಾರಿಗೆ ಸೌಲಭ್ಯ ಕ್ಷೇತ್ರದ ಖಾಸಗಿ ವಾಹನಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಆದರೆ ಗುಣಮಟ್ಟದ ಪ್ರಶ್ನೆ ಬಂದಾಗ ಮತ್ತೂ ಅಸಮಾಧಾನ. ಸೇವಾ ಗುಣಮಟ್ಟವನ್ನು ಮೇಲ್ದರ್ಜೆಗೆ ಏರಿಸುವ ಪ್ರಯತ್ನ ಕ್ಯಾಬ್ ಮತ್ತು ಟ್ಯಾಕ್ಸಿ ಸಂಘಗಳಿಂದ ನಡೆದೇ ಇದೆ. ಆದರೆ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಚಿಂತನೆಗಳು ನಡೆಯಬೇಕು. ಕೇವಲ ನಿಯಮಗಳನ್ನು ಹೇರುವುದು ಮಾತ್ರವಲ್ಲ, ಅದಕ್ಕೆ ತಕ್ಕಂತೆ ತನ್ನ ಹೊಣೆಗಾರಿಕೆಯನ್ನೂ ಸರ್ಕಾರ ಅರಿತುಕೊಳ್ಳಬೇಕು' ಎನ್ನುತ್ತಾರೆ ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಮುಖ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ ಹೊಳ್ಳ.

20 ಸಾವಿರ ಉದ್ಯೋಗಾವಕಾಶ
`ಈ ಸೇವೆಗೆ ಅತ್ಯುತ್ತಮ ಸ್ಥಿತಿಯಲ್ಲಿರುವ ವಾಹನಗಳೇ ಆಗಬೇಕು. ಚಾಲಕರು ಶಿಸ್ತು-ಸಂಯಮ ಉಳ್ಳವರಾಗಿರಬೇಕು. ಕನಿಷ್ಠ ಮೂರು ಭಾಷೆಗಳಾದರೂ ಗೊತ್ತಿರಬೇಕು. ಬೆಂಗಳೂರಿನ ಎಲ್ಲಾ ರಸ್ತೆಗಳೂ ಅವರಿಗೆ ಪರಿಚಿತವಿರಬೇಕು. ಇವು ಈ ಉದ್ಯಮದಲ್ಲಿ ಸರಾಗವಾಗಿ ಸಾಗಲು ಇರಲೇಬೇಕಾದ ಕಡ್ಡಾಯ ಅಂಶಗಳು. ಆದರೆ ಪ್ರಸ್ತುತ ವಾಹನ ಚಾಲಕರ ತೀವ್ರ ಕೊರತೆಯನ್ನು ಎದುರಿಸುತ್ತಿದ್ದೇವೆ.

ಅಂದರೆ ಈಗಲೂ 20,000 ಚಾಲಕರ ಕೊರತೆ ಇದೆ. ಇಂಥ ಸಂದರ್ಭದಲ್ಲಿ ಎಲ್ಲಾ ಷರತ್ತುಗಳನ್ನೂ ಪೂರ್ಣವಾಗಿ ಪಾಲಿಸಬಲ್ಲಂತಹ ಚಾಲಕರಿಗೆ ಎಲ್ಲಿ ಹುಡುಕುವುದು? ಇನ್ನು ಟ್ಯಾಕ್ಸಿ ಸೇವೆಗಳ ಶುಲ್ಕದ ವಿಚಾರದಲ್ಲಿ ದರ ಸಮರವೇ ನಡೆಯುತ್ತಿದೆ. ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಯ ನಡುವೆ ಸೇವೆ-ಶುಲ್ಕ-ಹೆಚ್ಚುವರಿ ಸೌಲಭ್ಯ ಮೊದಲಾದ ಅಂಶಗಳಲ್ಲಿ ಹೆಚ್ಚು ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ.

ಪ್ರತಿ ಕಿ.ಮೀ.ಗೆ ಕೇವಲ 7-8 ರೂಪಾಯಿಯಿಂದ 18 ರೂಪಾಯಿವರೆಗೂ ಹಲವು ಸ್ಥರದ ದರಪಟ್ಟಿ ಇದೆ. ದರ ಹಾಗೂ ಸೇವಾ ಸೌಲಭ್ಯಗಳ ಗುಣಮಟ್ಟದಲ್ಲಿ ಏಕರೂಪತೆ ತರಲು ಸಾಧ್ಯವಾಗುತ್ತಿಲ್ಲ. ಇದೆಲ್ಲವನ್ನೂ ಸರಿಪಡಿಸಿದರೆ ಮಾತ್ರ ಈ ಉದ್ಯಮ ಬಂಗಾರದ ಮೊಟ್ಟೆ ಇಡುವಂತಹುದೇ ಸರಿ' ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.

ಕೇವಲ ಹತ್ತು ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೆ ರಸ್ತೆಯ ಮೇಲೆ ಅಪರೂಪಕ್ಕೊಮ್ಮೆ ಹಳದಿ ಹಲಗೆ (ಯೆಲ್ಲೋ ಬೋರ್ಡ್) ಟ್ಯಾಕ್ಸಿಗಳೇ ಓಡಾಡುತ್ತಿದ್ದವು. ಅದರೊಳಗೆ ಹೊರ ಊರಿನಿಂದ ಬಂದ ಶ್ರೀಮಂತ ವ್ಯಾಪಾರಿ ಅಥವಾ ಉನ್ನತ ಅಧಿಕಾರಿಗಳೇ ಇರುತ್ತಾರೆಂದು ಲೆಕ್ಕ ಹಾಕುತ್ತಿದ್ದ ಕಾಲವದು. ಅವಕಾಶಗಳೂ ಸಹ ಸೀಮಿತವಾಗಿದ್ದವು. ಬೆರಳೆಣಿಕೆಯಷ್ಟು ಕಂಪೆನಿಗಳು ಮಾತ್ರ ತಮ್ಮ ಸಿಬ್ಬಂದಿಗೆ ವಾಹನ ಸೇವೆ ಒದಗಿಸುತ್ತಿದ್ದವು.

ಅಂತಹ ಸಿಬ್ಬಂದಿ ವರ್ಗದವರನ್ನು `ಮನೆ ಬಾಗಿಲಿಗೇ ವಾಹನ ಸೌಲಭ್ಯ ಪಡೆದುಕೊಳ್ಳುವವರು, ಬಹಳ ಅದೃಷ್ಟವಂತರು' ಎನ್ನುವಂತೆ ಕಾಣಲಾಗುತ್ತಿತ್ತು.ಆದರೆ ಈಗ ಟ್ಯಾಕ್ಸಿ/ಕ್ಯಾಬ್ ಪಯಣ ಬಹಳ ದೂರ ಸಾಗಿದೆ. ಇಂದು ಯಾರಾದರೂ ಸರಿ ಈ ಸಾರಿಗೆ ಸೇವೆ ಪಡೆದುಕೊಳ್ಳಬಹುದಾಗಿದೆ. ಬಹುತೇಕ ಎಲ್ಲಾ ಕಂಪೆನಿಗಳೂ ಸಿಬ್ಬಂದಿಗಳಿಗೆ ಮನೆಯಿಂದ ಕರೆತರುವ-ಮನೆ ಬಾಗಿಲಿಗೇ ಬಿಟ್ಟುಬರುವ ವಾಹನ ಸೇವೆಒದಗಿಸುತ್ತಿವೆ.

ಮಾತ್ರವಲ್ಲ, ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್, ಮ್ಯಾನೇಜ್‌ಮೆಂಟ್ ಕೋರ್ಸ್ ಮೊದಲಾದ ಉನ್ನತ ಶಿಕ್ಷಣದ ಖಾಸಗಿ ಕಾಲೇಜುಗಳೂ ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ವಾಹನ ಸೇವೆ ಒದಗಿಸುತ್ತಿವೆ. ಪರಿಣಾಮ, ಚಾಲಕ-ಸಹಾಯಕ ಹುದ್ದೆ ಹೆಸರಿನಲ್ಲಿ ಸಾವಿರಾರು ಜನರ ಉದ್ಯೋಗಕ್ಕೂ ಅವಕಾಶ ಲಭ್ಯವಾಗಿದೆ.

ಮುಂದಿನ ನಾಲ್ಕೈದು ವರ್ಷಗಳಲ್ಲಿ ಈ ಉದ್ಯಮ ಕನಿಷ್ಠ ನಾಲ್ಕು ಪಟ್ಟು ಅಭಿವೃದ್ಧಿ  ಸಾಧಿಸುವ ನಿರೀಕ್ಷೆ ಇದೆ. ಆದರೆ ಅಭಿವೃದ್ಧಿ ಎನ್ನುವುದು ಕೇವಲ ಲಾಭದ ಲೆಕ್ಕದಲ್ಲಿ ಮಾತ್ರವಲ್ಲ, ಗುಣಮಟ್ಟದ ದೃಷ್ಟಿಯಿಂದಲೂ ಸಾಧ್ಯವಾಗಬೇಕಿದೆ ಎನ್ನವುದು ಇದೇ ಕ್ಷೇತ್ರದ ಅನುಭವಿಗಳ ಮಾತು. 

ಸ್ವಯಂ ಚಾಲನೆ ಸೇವೆ
ನಗರದಲ್ಲಿ ಇತ್ತೀಚೆಗೆ ಹೆಚ್ಚು ಪ್ರಚಲಿವಾಗಿರುವ ಮತ್ತೊಂದು ಸೇವೆ ಎಂದರೆ ಸ್ವಯಂ ಚಾಲನಾ ಸೇವೆಗಳು. ಅಂದರೆ ಕೆಲವು ಗಂಟೆ, ದಿನ ಅಥವಾ ತಿಂಗಳ ಆಧಾರದ ಮೇಲೆ ಬಾಡಿಗೆ ಕಾರುಗಳನ್ನು ನೀಡುವ ವ್ಯವಸ್ಥೆ ಈಗ ಬೆಂಗಳೂರಿನಲ್ಲಿಯೂ ಮನ್ನಣೆ ಪಡೆಯುತ್ತಿದೆ. ಇಲ್ಲಿ ಗ್ರಾಹಕರು ತಮಗೆ ಬೇಕಾದಾಗ ಬೇಕಾದಲ್ಲಿ ತೆರಳಬಹುದು. ಚಾಲಕರ ವೇಟಿಂಗ್ ಚಾರ್ಜ್ ಗೊಡವೆಯೇ ಇರದು. ಬೆಂಗಳೂರಿನಲ್ಲಿ ಈಸಿ ಕ್ಯಾಬ್ಸ್, ಸೆಲ್ಫ್-ಡ್ರೈವ್ ಕಾರ್‌ನಂತಹ ಕೆಲವು ಏಜೆನ್ಸಿಗಳು ಇಂತಹ ಸೇವೆಗೆ ಕಾರುಗಳನ್ನು ಬಾಡಿಗೆ ಕೊಡುತ್ತಿವೆ.

ಚಾಲಕರ ಬದುಕು-ಬವಣೆ
ಗ್ರಾಹಕರ ಸಮಯ, ಹಣ ಮತ್ತು ತಾಳ್ಮೆಯನ್ನು ಗಮನದಲ್ಲಿಟ್ಟುಕೊಂಡು ನಿಗದಿತ ಸಮಯಕ್ಕೆ ಸರಿಯಾಗಿ ಬಾಗಿಲ ಮುಂದೆ ಹಾಜರಾಗುವ ಟ್ಯಾಕ್ಸಿ ಅಥವಾ ಕ್ಯಾನ್ ಚಾಲಕರ ನೋವು-ನಲಿವು ನಿತ್ಯದ ಕಥೆ...

ನಿರ್ದಿಷ್ಟ ಪಾಳಿ ಸಮಯ, ವರಮಾನದ ಖಾತರಿ, ಸುರಕ್ಷತೆ ಏನೂ ಇಲ್ಲದೇ ದುಡಿಯುತ್ತ ಕಾರಿನ ಯಂತ್ರದೊಡನೆ ಇನ್ನೊಂದು ಯಂತ್ರವೇ ಆಗಿರುವ ಈ ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರ ಬದುಕಿನ ಓಟ ಹಳ್ಳ-ದಿಣ್ಣೆ, ಮಧ್ಯೆ ಮಧ್ಯೆ ರಸ್ತೆ ಉಬ್ಬು, ಸಂಚಾರಿ ನಿಯಂತ್ರಣ ದೀಪದ ಕೆಂಪು-ಹಸಿರು-ಹಳದಿ ಎಂಬ ಮೂರು ಭಿನ್ನ ಬಣ್ಣಗಳಂತೆಯೇ ಇದೆ!

ಬೆಳ್ಳಂಬೆಳಿಗ್ಗೆ ನೀರು ಕಂಡಲ್ಲಿ ಮುಖ ತೊಳೆದು, ಉಟ್ಟ ಬಟ್ಟೆಯಿಂದಲೇ ಮುಖ ಉಜ್ಜಿಕೊಂಡು, ರಸ್ತೆ ಪಕ್ಕದ ಪೆಟ್ಟಿಗೆ ಅಂಗಡಿಯ ಚಹಾ ಕುಡಿದು, ಸ್ಟೀರಿಂಗ್ ಹಿಡಿದರೆ ಮತ್ತೆ ಯಾವಾಗ, ಎಲ್ಲಿ ದಿನದ ದುಡಿಮೆಗೆ ಬ್ರೇಕ್ ಬೀಳುವುದೊ ಗೊತ್ತಿಲ್ಲ. ಅದನ್ನು ನಿರ್ಧರಿಸುವವರೂ ಅವರಲ್ಲ. ಹಸಿದಾಗ ಊಟ ಮಾಡುವ,  ದಣಿದಾಗ ನಿದ್ರೆ ಹೋಗುವ ಅವಕಾಶವೂ ಇಲ್ಲ. ಗ್ರಾಹಕರು ವಿಶ್ರಾಂತಿಯಲ್ಲಿದ್ದಾಗಲೇ ಎಲ್ಲೊ ಒಂದು ಕಡೆ ಉದರ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆ, ಗ್ರಾಹಕರು ಕೆಲಸದಲ್ಲಿದ್ದಾಗ ಅದೇ ಮೂರಡಿ ಸೀಟಿನ ಮೇಲೆ ಕ್ಷಣ ಕಣ್ಣು ಮುಚ್ಚಿದರೆ ಸಾಕು ವರ್ಷಗಳಿಂದ ಕಂಡರಿಯದಂತಹ ನಿದ್ರೆ!

ಹೀಗೆ ಜಡವಾದ ದೇಹ ತಿಂಗಳಿಗೊಮ್ಮೆಯಾದರೂ ಜಡ್ಡಿಗೆ ಬೀಳುತ್ತದೆ. `ಆಸ್ಪತ್ರೆ ಬೇಡ, ವಿನಾಕರಣ ಖರ್ಚು' ಎಂಬ ಮನಸ್ಥಿತಿಯಲ್ಲಿ ಬುದ್ಧಿಗೆ ತಿಳಿದ ಮಾತ್ರೆಯನ್ನು ಗಂಟಲಿಗೆಸೆದುಕೊಂಡು ಮೈಗಂಟಿದ ಕಾಯಿಲೆಯನ್ನು ಕೊಡವಿಕೊಳ್ಳುವ ವ್ಯರ್ಥ ಪ್ರಯತ್ನ. ಅದರ ನಡುವೆಯೇ ಮತ್ತೆ ಎರಡೆರಡು ಶಿಫ್ಟ್‌ಗಳಿಗೆ ಬುಲಾವ್... ಸ್ಟೀರಿಂಗ್ ಹಿಡಿದಂತೆಯೇ ಮೊಬೈಲ್ ಕಿವಿಗೆ ತಾಗಿಸಿ ಉತ್ತರಿಸಬೇಕಾದ ತುರ್ತು...

ಮತ್ತದೇ ಬೆವರು ಮೆತ್ತಿದ ಅಂಗಿಗೆ ಕೈ ತೂರಿಸಿ ಸ್ಟೀರಿಂಗ್ ಹಿಡಿದು ರಸ್ತೆಗಿಳಿದರೆ ಮತ್ತೆ ಮನೆ ತಲುಪುವುದು ಯಾವಾಗಲೊ...
ಹೀಗೆ ಸಾಗುತ್ತದೆ ಕ್ಯಾಬ್/ಟ್ಯಾಕ್ಸಿ ಚಾಲಕರ ಬದುಕಿನ ಬಂಡಿ.

`ಒಂದೇ ಶಿಫ್ಟ್ ಮಾಡಿದರೆ ತಿಂಗಳಿಗೆ ಆರೊ-ಏಳೊ ಸಾವಿರ ರೂಪಾಯಿ ಸಿಗುತ್ತೆ. ಅದರಲ್ಲಿಯೇ ಮನೆ ಬಾಡಿಗೆ ಕಟ್ಟಿಕೊಂಡು, ಮಕ್ಕಳ ಶಾಲಾ ಶುಲ್ಕವನ್ನೂ ಪಾವತಿಸಿ, ದಿನಸಿ ಖರೀದಿಸಿ ಜೀವನ ಮಾಡುವುದು ಹೇಗೆ? ತಿಂಗಳಲ್ಲಿ ಎರಡು ವಾರವಾದರೂ ಎರಡು ಶಿಫ್ಟ್ ಮಾಡುವುದು ಅನಿವಾರ್ಯ' ಎನ್ನುತ್ತಾರೆ ಚಾಲಕ ರಾಮು. ಕಳೆದ ಒಂಬತ್ತು ವರ್ಷಗಳಿಂದ ಚಾಲಕರಾಗಿ ದುಡಿಯುತ್ತಿರುವ ರಾಮು ಅವರು ಹೇಳುವಂತೆ `ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರ ಬದುಕು ನಾಲ್ಕು ಚಕ್ರಗಳ ಮೇಲೆಯೇ ದಿಬ್ಬ ಹತ್ತುತ್ತಾ, ಇಳಿಜಾರಿನಲ್ಲಿ ಇಳಯುತ್ತಲೇ ಇರುವ ನೀರ ಮೇಲಿನ ಗುಳ್ಳೆ'

`ಹಸಿವು-ನಿದ್ರೆಯನ್ನು ಬೇಕಾದರೂ ತಡೆದುಕೊಳ್ಳಬಹುದು. ಆದರೆ ನಿತ್ಯ ಕರ್ಮಗಳನ್ನು ಪೂರೈಸಿಕೊಳ್ಳುವುದೇ ನಮಗೊಂದು ದೊಡ್ಡ ಸಮಸ್ಯೆ. ಅನೇಕ ಕಡೆ ಶೌಚಾಲಯದ ತೊಂದರೆ ಸಾಮಾನ್ಯ. ಹೊಟ್ಟೆಗೆ ಅನ್ನ ಬಿದ್ದರೆ ಮತ್ತೆ ವಿಸರ್ಜನೆಯ ಸಮಸ್ಯೆ. ಇದೇ ಭಯದಿಂದ ಕೆಲವು ಹೊತ್ತು ಊಟ-ತಿಂಡಿ ಮಾಡದೇ ಹೊಟ್ಟೆಯನ್ನು ಖಾಲಿ ಬಿಟ್ಟುಕೊಂಡೇ ಇರುವುದೂ ಇದೆ' ಎನ್ನುತ್ತಾ ವಿಷಾದ ನಗೆ ಬೀರುತ್ತಾರೆ ಅವರು.

`ಚಾಲಕರಿಗೆ ದೇಹ ಮಾತ್ರ ಇರುತ್ತದೆ, ಮನಸ್ಸೇ ಇರುವುದಿಲ್ಲ ಎಂದುಕೊಂಡಿದ್ದಾರೆ ಬಹಳಷ್ಟು ಜನ. ಹೋಗೊ-ಬಾರೊ ಅಂತ ಮಾತನಾಡಿಸ್ತಾರೆ. ಹೌದು, ನಾವು ಹೆಚ್ಚಿಗೆ ಓದಿದವರಲ್ಲ, ಶ್ರೀಮಂತರೂ ಅಲ್ಲ, ಹಾಗಂತ ನಮಗೆ ಮರ್ಯಾದೆಯಿಂದ ಬದುಕುವ ಹಕ್ಕಿಲ್ಲವೇ? ವಾಹನಗಳ ಮಾಲೀಕರಿರಲಿ, ವ್ಯವಸ್ಥಾಪಕರೂ ಸಹ ನಮ್ಮನ್ನು ಗೌರವದಿಂದ ನಡೆಸಿಕೊಳ್ಳುವುದಿಲ್ಲ' ಎಂಬ ನೋವು ರಾಮು ಒಬ್ಬರದೇ ಅಲ್ಲ.

ಇದನ್ನೆಲ್ಲ ನೆನೆದಾಗ ಯಾವ ಜನುಮಕ್ಕೂ ತಮ್ಮ ಮಕ್ಕಳು ಹೀಗಾಗಬಾರದು. ಅವರು ಚೆನ್ನಾಗಿ ಓದಿ ಉತ್ತಮ ಕೆಲಸ ಮಾಡಬೇಕು ಎಂದುಕೊಳ್ಳುತ್ತಲೇ ಎರಡು ಮಾತ್ರವಲ್ಲ, ಮೂರನೇ ಶಿಫ್ಟ್ ದುಡಿಯಲೂ ಮನಸ್ಸನ್ನು ಗಟ್ಟಿ ಮಾಡಿಕೊಳ್ಳುವವರಿದ್ದಾರೆ.
ಅಸಹಾಯಕ ತಂದೆ-ತಾಯಿ, ಸಂಸಾರ, ಮಕ್ಕಳು, ಅವರ ಶಿಕ್ಷಣ, ಆಸ್ಪತ್ರೆ... ಹೀಗೆ ಪ್ರತಿಯೊಂದು ಜವಾಬ್ದಾರಿಯನ್ನು ನೆನೆದಾಗಲೂ ಒಂದೊಂದು ಶಿಫ್ಟ್ ಹೆಚ್ಚೇ ಮಾಡುವ ಹೊಣೆಗಾರಿಕೆ ಹೆಗಲೇರುತ್ತದೆ.

`ನೀನಿಲ್ಲ ಅಂದ್ರೆ ಇನ್ನೊಬ್ಬ ಹೋಗೊ...' ಎನ್ನುವ ವಾಹನ ಮಾಲೀಕರ ನಡುವೆಯೇ `ಅಯ್ಯ, ಅಣ್ಣ' ಎನ್ನುತ್ತಲೇ ಕೆಲಸ ಮಾಡಬೇಕು. ಊಟ-ತಿಂಡಿಗೆ ಸಮಯ ಕೊಡದಿದ್ದರೂ ದುಡಿದು ಬರಬೇಕು. ತಕ್ಕ ಮಟ್ಟಿಗೆ ಹಣ ಇದ್ದವರು ಹೊಸತೋ ಅಥವಾ ಹಳೆಯದೊ ಒಂದು ಸ್ವಂತ ವಾಹನ ಖರೀದಿಸಿ ತಾವೇ ಓಡಿಸುತ್ತಾ ತಿಂಗಳಿಗೆ ಕನಿಷ್ಠ 30 ಸಾವಿರ ರೂಪಾಯಿವರೆಗೂ ದುಡಿದುಕೊಳ್ಳುತ್ತಾರೆ. ಆದರೆ ಅಂತಹ ಸಾಹಸಕ್ಕೆ ಕೈಹಾಕುವಷ್ಟು ಆರ್ಥಿಕ ಚೈತನ್ಯ ಇಲ್ಲದವರಿಗೆ ಮಾಲೀಕರ ಮರ್ಜಿ ಕಾಯುವುದು, ಕ್ಯಾಬ್ ಏರಿ ಕುಳಿತವರ ಆದೇಶ ಪಾಲಿಸುವುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT