ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರನ ಮೇಲೆ ಹಲ್ಲೆ ಪ್ರಕರಣ ಎಚ್‌ಕೆಡಿಬಿ ಅಧ್ಯಕ್ಷ ನಾಪತ್ತೆ

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ದಲಿತ ನೌಕರನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಒಳಗಾದ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಎಚ್‌ಕೆಡಿಬಿ) ಅಧ್ಯಕ್ಷ ಅಮರನಾಥ ಪಾಟೀಲ ಬಂಧನಕ್ಕೆ ಪೊಲೀಸರು ಸತತ ಪ್ರಯತ್ನ ನಡೆಸುತ್ತಿದ್ದರೂ, ಈವರೆಗೆ ಅವರ ಸುಳಿವು ಸಿಕ್ಕಿಲ್ಲ.

ಮಂಡಳಿಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಆಪ್ತ ಕಾರ್ಯದರ್ಶಿ ಶ್ರೀಮಂತ ಪಟ್ಟೇದಾರ ಮೇಲೆ ಜೂನ್ 8ರಂದು ಪಾಟೀಲ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದರು ಎಂದು ಆರೋಪಿಸಿ ದೂರು ನೀಡಲಾಗಿದೆ. ಪರಿಶಿಷ್ಟ ಜಾತಿ/ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಹಾಗೂ ಸಂಘಟಿತ ಹಲ್ಲೆ, ಉದ್ದೇಶಿತ ಹಲ್ಲೆ ಮತ್ತಿತರ ಐಪಿಸಿ ಸೆಕ್ಷನ್ ಅಡಿಯಲ್ಲಿ ಗುಲ್ಬರ್ಗದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪಾಟೀಲ ಹಾಗೂ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ.

ಅಮರನಾಥ ಪಾಟೀಲ ಬಂಧನಕ್ಕೆ ಗುಲ್ಬರ್ಗ (ಬಿ) ವಿಭಾಗದ ಡಿಎಸ್ಪಿ ಸಿ.ಕೆ.ಬಾಬಾ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಲಾಗಿದ್ದು, ಈಗಾಗಲೇ ಹುಮನಾಬಾದ್, ಮಹಾಗಾಂವ ಮತ್ತಿತರ ಕಡೆ ಶೋಧ ನಡೆಸಿದೆ. ಆದರೆ ಯಾವುದೇ ಬೆಳವಣಿಗೆಗಳು ಕಂಡುಬಂದಿಲ್ಲ. ಹೀಗಾಗಿ ವಿಶೇಷ ತಂಡ ರಚಿಸಿಕೊಂಡು ಹೊರ ಜಿಲ್ಲೆಗಳಲ್ಲಿ ಅವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ಒಂದು ವಾರದ ಹಿಂದೆ ಹಲ್ಲೆ ಮಾಡಿ ಪರಾರಿಯಾಗಿರುವ ಎಚ್‌ಕೆಡಿಬಿ ಅಧ್ಯಕ್ಷ ಮತ್ತು ಬೆಂಬಲಿಗರನ್ನು ಬಂಧಿಸಲು ವಿಳಂಬ ಮಾಡಲಾಗುತ್ತಿದೆ ಎಂದು ದಲಿತ ಸಂಘಟನೆಗಳು ಖಂಡಿಸಿವೆ. ಹಲವು ಸಂಘಟನೆಗಳು ಈಗಾಗಲೇ ಪ್ರತಿಭಟನೆ ನಡೆಸಿದ್ದು, ಜೂನ್ 16ರೊಳಗೆ ಅಮರನಾಥ ಪಾಟೀಲರನ್ನು ಬಂಧಿಸದೇ ಹೋದರೆ 17ರಂದು (ಶುಕ್ರವಾರ) ಗುಲ್ಬರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT