ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರು ಕಂಪ್ಯೂಟರ್‌ ಕಲಿತರೆ ಭತ್ಯೆ, ಇಲ್ಲವಾದರೆ ಕತ್ತರಿ: ಸಂಪುಟ ನಿರ್ಣಯ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯನ್ನು ಕಡ್ಡಾಯಗೊಳಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ತರಬೇತಿ ಪಡೆಯುವುದು ಮತ್ತು ಅದನ್ನು ಸೇವೆಯಲ್ಲಿ ಅಳವಡಿಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವಕ್ಕೆ ಗುರುವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶಕುಮಾರ್, `ಆಡಳಿತ ನಿರ್ವಹಣೆಯ ವೇಗ ಹೆಚ್ಚಿಸುವ ಉದ್ದೇಶದಿಂದ ಕಂಪ್ಯೂಟರ್ ಬಳಕೆ ಕಡ್ಡಾಯ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ಸೇವೆಯಲ್ಲಿರುವ ನೌಕರರಿಗೆ ಕಂಪ್ಯೂಟರ್ ತರಬೇತಿ ಪಡೆಯಲು ಗಡುವು ವಿಧಿಸಲಾಗುವುದು~ ಎಂದರು.

ಕಂಪ್ಯೂಟರ್ ಬಳಕೆ ಕುರಿತು ಇಲಾಖಾ ಮಟ್ಟದಲ್ಲಿ ಸರ್ಕಾರದ ವತಿಯಿಂದ ಪರೀಕ್ಷೆ ನಡೆಸಲಾಗುತ್ತದೆ. ನೇರ ನೆಮಕಾತಿ ಮೂಲಕ ಇನ್ನು ಮುಂದೆ ರಾಜ್ಯ ಸರ್ಕಾರಿ ಸೇವೆಗೆ ಸೇರುವ ಎಲ್ಲರೂ ಮೂರು ತಿಂಗಳ ಒಳಗಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಈಗಾಗಲೇ ಸೇವೆಯಲ್ಲಿರುವವರು ಮೂರು ವರ್ಷದೊಳಗೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ತಪ್ಪಿದಲ್ಲಿ ಬಡ್ತಿ ತಡೆ ಹಿಡಿಯಲಾಗುವುದು.

ನಾಲ್ಕು ವರ್ಷಗಳಾದರೂ ಪ್ರಮಾಣ ಪತ್ರ ಹಾಜರುಪಡಿಸದಿದ್ದರೆ ವಾರ್ಷಿಕ ತುಟ್ಟಿಭತ್ಯೆ ತಡೆ ಹಿಡಿಯಲಾಗುವುದು. ನಿಗದಿತ ಅವಧಿಯೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಮಾಣ ಪತ್ರ ಹಾಜರುಪಡಿಸುವ ಎಲ್ಲ ಶ್ರೇಣಿಯ ನೌಕರರಿಗೆ ಐದು ಸಾವಿರ ರೂಪಾಯಿಗಳ ವಿಶೇಷ ಭತ್ಯೆ ನೀಡಲಾಗುವುದು ಎಂದು ಹೇಳಿದರು.

ಸೇವಾ ನಿರತರ ಪೈಕಿ ಪ್ರಾಥಮಿಕ ಶಾಲಾ ಶಿಕ್ಷಕರು, ಪೊಲೀಸ್ ಕಾನ್‌ಸ್ಟೆಬಲ್‌ಗಳು, ನರ್ಸ್‌ಗಳು, ವಾಹನ ಚಾಲಕರು, ವನಪಾಲಕರು, ಅರಣ್ಯ ಪರಿವೀಕ್ಷಕರು, ಅಬಕಾರಿ ಭದ್ರತಾ ಸಿಬ್ಬಂದಿ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಇಲಾಖೆ ಸಿಬ್ಬಂದಿ, ಎಲ್ಲ ಇಲಾಖೆಗಳ `ಡಿ~ ದರ್ಜೆ ನೌಕರರು, ನ್ಯಾಯಾಂಗ ಇಲಾಖೆಯ ಕೆಳದರ್ಜೆ ಸಿಬ್ಬಂದಿಗೆ ಕಡ್ಡಾಯ ಕಂಪ್ಯೂಟರ್ ಬಳಕೆಯಿಂದ ವಿನಾಯಿತಿ ನೀಡಲಾಗುವುದು. ಇತರೆ ಸೇವಾ ನಿರತರ ಪೈಕಿ 50 ವರ್ಷ ವಯಸ್ಸು ಮೀರಿರುವ ಎಲ್ಲ ಶ್ರೇಣಿಯ ನೌಕರರು ಮತ್ತು ಅಧಿಕಾರಿಗಳಿಗೆ ಈ ವಿನಾಯಿತಿ ದೊರೆಯಲಿದೆ ಎಂದು ವಿವರಿಸಿದರು.

ಉಪ ಸಮಿತಿ ರಚನೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚರ್ಚುಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ ನೇತೃತ್ವದ ವಿಚಾರಣಾ ಆಯೋಗವು ಸಲ್ಲಿಸಿರುವ ವರದಿಯ ಶಿಫಾರಸುಗಳ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಂಪುಟ ಉಪ ಸಮಿತಿಯಿಂದ ಪರಿಶೀಲನೆ ನಡೆಸಿದ ಬಳಿಕವೇ ಈ ಬಗ್ಗೆ ತೀರ್ಮಾನಕ್ಕೆ ಬರಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಆರ್.ಅಶೋಕ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ.

 ಈ ಸಮಿತಿ ಒಂದು ತಿಂಗಳಲ್ಲಿ ವರದಿ ನೀಡಲಿದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು-ಬಂಟ್ವಾಳ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆಯ ಪರಿಷ್ಕೃತ ಅಂದಾಜು ಪಟ್ಟಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಹಿಂದೆ 2002-03ರ ಸರಾಸರಿ ದರದಲ್ಲಿ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಈಗ ಪ್ರಸ್ತುತ ದರದಲ್ಲಿ ರೂ 538 ಕೋಟಿ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಅದಕ್ಕೆ ಅನುಮೋದನೆ ದೊರೆತಿದೆ ಎಂದರು.

ಕೇಂದ್ರೀಯ ಕೈಗಾರಿಕಾ ಮೀಸಲು ಪೊಲೀಸ್ ಪಡೆಯು (ಸಿಐಎಸ್‌ಎಫ್) ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಲಕ್ಕೂರು ಗ್ರಾಮದಲ್ಲಿ ಮೀಸಲು ಪಡೆಯ ತುಕಡಿಯನ್ನು ಸ್ಥಾಪಿಸುತ್ತಿದೆ. ಈ ಯೋಜನೆಗೆ ಸಿಐಎಸ್‌ಎಫ್ 100 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.

ಸದರಿ ಉದ್ದೇಶಕ್ಕೆ ಸಿಐಎಸ್‌ಎಫ್‌ಗೆ 55.36 ಎಕರೆ ಭೂಮಿ ಮಂಜೂರು ಮಾಡುವ ಪ್ರಸ್ತಾವಕ್ಕೂ ಸಭೆ ಒಪ್ಪಿಗೆ ನೀಡಿದೆ.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಬಸ್ ಖರೀದಿಗಾಗಿ ಖಾತರಿ ಇಲ್ಲದೇ 75 ಕೋಟಿ ರೂಪಾಯಿ ಸಾಲ ಪಡೆಯಲು ಅನುಮತಿ, ಕರ್ನಾಟಕ ಗೃಹ ಮಂಡಳಿಯು ಬೆಂಗಳೂರಿನ ವಿಜಯನಗರದಲ್ಲಿ 22 ಕೋಟಿ ರೂಪಾಯಿ ವೆಚ್ಚದಲ್ಲಿ ತನ್ನ ಸಿಬ್ಬಂದಿಗಾಗಿ ನಿರ್ಮಿಸುತ್ತಿರುವ ಬಹುಮಹಡಿ ವಸತಿ ಯೋಜನೆಗೆ ಒಪ್ಪಿಗೆ, ಕರ್ನಾಟಕ ಮಾಹಿತಿ ಆಯೋಗದ ಕಚೇರಿ ಕಟ್ಟಡ ಸ್ಥಾಪನೆ, ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆ ಅಡಿಯಲ್ಲಿ ಹೊಸಪೇಟೆಯ ಕನಕದಾಸ ವೃತ್ತದಿಂದ ಹಂಪಿ ರಸ್ತೆವರೆಗೆ ವರ್ತುಲ ರಸ್ತೆ ನಿರ್ಮಾಣ ಮತ್ತಿತರ ತೀರ್ಮಾನಗಳನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಮೊಕದ್ದಮೆ ಹಿಂದಕ್ಕೆ
ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಮಂಡ್ಯ, ಬೆಂಗಳೂರು, ರಾಯಚೂರು, ಬಾಗಲಕೋಟೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿವಿಧ ಸಂದರ್ಭಗಳಲ್ಲಿ ರೈತರ ವಿರುದ್ಧ ದಾಖಲಿಸಿದ್ದ 29 ಮೊಕದ್ದಮೆಗಳನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆಯಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತ ಪ್ರಸ್ತಾವಕ್ಕೆ ಸಭೆಯು ಒಪ್ಪಿಗೆ ನೀಡಿದ್ದು, 200 ರೈತರು ಆರೋಪ ಮುಕ್ತರಾಗಲಿದ್ದಾರೆ ಎಂದು ಸುರೇಶಕುಮಾರ್ ತಿಳಿಸಿದರು.

ರಸಗೊಬ್ಬರ ಕೊರತೆ ವಿರೋಧಿಸಿ ಪ್ರತಿಭಟನೆ, ಭೂ ಸ್ವಾಧೀನ ವಿರೋಧಿಸಿ ಪ್ರತಿಭಟನೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ, ಸಾರಾಯಿ ಮಾರಾಟದ ವಿರುದ್ಧ ಪ್ರತಿಭಟನೆಯಂತಹ ಆರೋಪಗಳಿದ್ದ ಮೊಕದ್ದಮೆಗಳನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ.

 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT