ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರಿಗೆ ಕಾದಿರುವ ಮಾಜಿ ಸೈನಿಕ!

ಕೋರ್ಟ್ ಆದೇಶಕ್ಕೂ ಮಣಿಯದ ಕೆಪಿಎಸ್‌ಸಿ
Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಏನೆಲ್ಲಾ ಅಕ್ರಮಗಳು ನಡೆಯುತ್ತವೆ ಎನ್ನುವುದಕ್ಕೆ ಮಾಜಿ ಸೈನಿಕ ಡಿ.ಎಸ್.ಪರಮೇಶ್ವರಪ್ಪ ಅವರ ಕತೆ ಒಳ್ಳೆಯ ಉದಾಹರಣೆ. ಕೆಪಿಎಸ್‌ಸಿ ತಪ್ಪಿನಿಂದ ಅವರಿಗೆ ಕೆಲಸ ಸಿಗಲಿಲ್ಲ. ಅವರಿಗೆ ಕೆಲಸ ನೀಡುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಅದಕ್ಕೆ ಕೆಪಿಎಸ್‌ಸಿ ಜಗ್ಗಲಿಲ್ಲ. ತಮಗೆ ಕೆಲಸ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಳೆದ 20 ತಿಂಗಳಿನಿಂದ ಅವರು `ಕೆಲಸ ಕೊಡಿ' ಎಂದು ಸರ್ಕಾರದ ಬಾಗಿಲು ತಟ್ಟುತ್ತಲೇ ಇದ್ದಾರೆ.

1985-86 ಮತ್ತು 1986-87 ಸಾಲಿನಲ್ಲಿ ಕೆಪಿಎಸ್‌ಸಿ ಕೆ.ಎ.ಎಸ್. ಕ್ಲಾಸ್ -2 (ಬಿ ಗ್ರೂಪ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತು. ಹಿಂದುಳಿದ ಕುರುಬ ಜನಾಂಗಕ್ಕೆ (2ಎ) ಸೇರಿದ ಡಿ.ಎಸ್.ಪರಮೇಶ್ವರಪ್ಪ ಅವರು ಮಾಜಿ ಸೈನಿಕರ ಕೋಟಾದಲ್ಲಿ ಅರ್ಜಿ ಸಲ್ಲಿಸಿದರು. ಜಾತಿ ಪ್ರಮಾಣ ಪತ್ರ, ಮಾಜಿ ಸೈನಿಕರ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರವನ್ನೂ ಸಲ್ಲಿಸಿದರು. ಮುಖ್ಯ ಪರೀಕ್ಷೆಯಲ್ಲಿ ಅವರಿಗೆ 496 ಮತ್ತು ಸಂದರ್ಶನದಲ್ಲಿ ನೂರು ಅಂಕ ಸೇರಿ ಒಟ್ಟಾರೆ 596 ಅಂಕಗಳು ಬಂದವು. ಆದರೆ ಅವರಿಗೆ ಯಾವುದೇ ಹುದ್ದೆ ಸಿಗಲಿಲ್ಲ.

ನೌಕರಿಗೆ ಕಾದಿರುವ ಮಾಜಿ ಸೈನಿಕ
`ನಾನು ಸಂದರ್ಶನಕ್ಕೆ ಹಾಜರಾದಾಗ  ಸಂದರ್ಶಕರೊಬ್ಬರು ತಮ್ಮ ಮಗಳನ್ನು ಮದುವೆಯಾದರೆ ಉದ್ಯೋಗ ನೀಡುವುದಾಗಿ ಹೇಳಿದರು. ಆದರೆ ನಾನು ಅದನ್ನು ನಿರಾಕರಿಸಿದೆ. ಅದರಿಂದ ನನಗೆ ಉದ್ಯೋಗ ಸಿಗಲಿಲ್ಲ' ಎಂದು ಅವರು ಆರೋಪಿಸುತ್ತಾರೆ. `ನನ್ನ ಅಂಕ ಕಡಿಮೆ ಇರುವುದರಿಂದ ನನಗೆ ಕೆಲಸ ಸಿಗಲಿಲ್ಲ ಎಂದು ನಾನು ಸುಮ್ಮನಾಗಿಬಿಟ್ಟೆ.

ಆದರೆ 1998, 1999 ಮತ್ತು 2004ರಲ್ಲಿ ನಡೆದ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಡಾ.ಎಚ್.ಎನ್.ಕೃಷ್ಣ ಅವರು ಜೈಲಿಗೆ ಹೋದಾಗ ನನಗೂ ಹೀಗೆಯೇ ಅನ್ಯಾಯವಾಗಿರಬಹುದಲ್ಲ ಎನ್ನಿಸಿತು. ಅದಕ್ಕಾಗಿ ನಾನು 1985-86, 1986-87ನೇ ಸಾಲಿನ ನೇಮಕಾತಿ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಪಡೆದುಕೊಂಡೆ. ಅದನ್ನು ಗಮನಿಸಿದಾಗ ಈ ಅವಧಿಯಲ್ಲಿ ನೇಮಕಾತಿ ನಡೆಸುವಾಗ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪಾಲಿಸಿಲ್ಲ. ನನಗಿಂತ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳು ಆಯ್ಕೆಯಾಗಿರುವುದು ತಿಳಿದು ಬಂತು' ಎಂದು ವಿವರಿಸುತ್ತಾರೆ.

ಪರೀಕ್ಷೆ ಮತ್ತು ಸಂದರ್ಶನ ಸೇರಿ ಪರಮೇಶ್ವರಪ್ಪ ಅವರಿಗೆ 596 ಅಂಕ ಬಂದಿತ್ತು. ಆದರೆ 582 ಅಂಕ ಪಡೆದ ಹರಿಶ್ಚಂದ್ರ ಬಂಟ್ವಾಳ್ ಮತ್ತು ವಿಠಲಾಕ್ಷ ಎಂಬುವರಿಗೆ ಮಾಜಿ ಸೈನಿಕರ ಕೋಟಾದಲ್ಲಿ ಉದ್ಯೋಗ ನೀಡಲಾಗಿತ್ತು. ತಕ್ಷಣವೇ ಪರಮೇಶ್ವರಪ್ಪ ತಮಗೆ ಆಗಿರುವ ಅನ್ಯಾಯವನ್ನು ವಿವರಿಸಿ ಮತ್ತು ಕೆಲಸ ನೀಡುವಂತೆ ಒತ್ತಾಯಿಸಿ 2011ರ ಡಿ. 2ರಂದು ಕೆಪಿಎಸ್‌ಸಿಗೆ ಮನವಿ ಸಲ್ಲಿಸಿದರು. ಅದಕ್ಕೆ ಯಾವುದೇ ಉತ್ತರ ಆಯೋಗದಿಂದ ಬರಲಿಲ್ಲ. ಆಗ ಪರಮೇಶ್ವರಪ್ಪ ಅವರು ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಹೈಕೋರ್ಟ್ ಮೊರೆ ಹೋದರು.

ಕೋರ್ಟ್ ತಾಕೀತು:  ಕೆ.ಎಸ್.ವಿಠಲಾಕ್ಷ ಮತ್ತು ಹರಿಶ್ಚಂದ್ರ ಬಂಟ್ವಾಳ ತಪ್ಪು ಆದಾಯ ಪ್ರಮಾಣ ಪತ್ರವನ್ನು ನೀಡಿ ಕೆಲಸ ಪಡೆದುಕೊಂಡಿದ್ದಾರೆ. ತಾವು ಸರಿಯಾದ ಆದಾಯ ಪ್ರಮಾಣ ಪತ್ರ ನೀಡಿದ್ದರೂ, ಅವರಿಬ್ಬರಿಗಿಂತ ಹೆಚ್ಚಿನ ಅಂಕ ಪಡೆದುಕೊಂಡಿದ್ದರೂ ತಮಗೆ ಕೆಲಸ ನೀಡಿಲ್ಲ ಎಂದು ಅವರು ವಾದಿಸಿದ್ದರು. 2012ರ ಜನವರಿಯಲ್ಲಿ ಹೈಕೋರ್ಟ್ ತೀರ್ಪು ನೀಡಿ, `ಸುಳ್ಳು ಆದಾಯ ಪ್ರಮಾಣ ಪತ್ರದ ಬಗ್ಗೆ ತನಿಖೆ ನಡೆಸಲು ಕೆಪಿಎಸ್‌ಸಿಗೆ ಅಧಿಕಾರವಿಲ್ಲ. ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಅದಕ್ಕೆ ಸಂಬಧಿಸಿದ ಎಲ್ಲ ದಾಖಲೆಗಳನ್ನು ಪರಮೇಶ್ವರಪ್ಪ ಸರ್ಕಾರಕ್ಕೆ ನೀಡಬೇಕು. ಆಯ್ಕೆಯಾದ ಇಬ್ಬರು ಅಭ್ಯರ್ಥಿಗಳು ಸುಳ್ಳು ಪ್ರಮಾಣ ಪತ್ರ ನೀಡಿರುವುದು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಬೇಕು. ಪರಮೇಶ್ವರಪ್ಪ ಅವರ ಮನವಿಯನ್ನೂ ಸರ್ಕಾರ ಪರಿಗಣಿಸಬೇಕು' ಎಂದು ಆದೇಶ ನೀಡಿತು.

ಈ ಆದೇಶದ ಪ್ರತಿಯ ಜೊತೆಗೆ ಕೆಪಿಎಸ್‌ಸಿಯಿಂದ ಆಯ್ಕೆಯಾದ ಇಬ್ಬರ ಸುಳ್ಳು ಪ್ರಮಾಣ ಪತ್ರದ ದಾಖಲೆಗಳನ್ನು ಸೇರಿಸಿ 2012ರ ಜನವರಿ 31ರಂದು ಪರಮೇಶ್ವರಪ್ಪ ಅವರು ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಮನವಿ ಸಲ್ಲಿಸಿದರು. 2012ರ ಫೆಬ್ರುವರಿ 22ರಂದು ಮತ್ತು 2012ರ ಮಾರ್ಚ್ 29ರಂದು ಡಿಪಿಎಆರ್ ಕಾರ್ಯದರ್ಶಿಯವರು ಕೆಪಿಎಸ್‌ಸಿಗೆ ಪತ್ರ ಬರೆದು ಪರಮೇಶ್ವರಪ್ಪ ಅವರ ಬಗ್ಗೆ ಮಾಹಿತಿಯನ್ನು ಕೇಳಿದರು.
`ಪರಮೇಶ್ವರಪ್ಪ ಅವರು ಮಾಜಿ ಸೈನಿಕ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಮೀಸಲಾತಿ ಕೇಳಿದ್ದರು' ಎಂದು ಕೆಪಿಎಸ್‌ಸಿ ಉತ್ತರ ನೀಡಿತು.

ಆದರೆ ಪರಮೇಶ್ವರಪ್ಪ ಅವರು 19-12-2012ರಂದು ಮಾಹಿತಿ ಹಕ್ಕು ಅನ್ವಯ 1985-86, 86-87ರ ನೇಮಕಾತಿ ಮಾಹಿತಿಯನ್ನು ಕೇಳಿದಾಗ `ಸಂಬಂಧಪಟ್ಟ ದಾಖಲೆಗಳು ಲಭ್ಯ ಇಲ್ಲ' ಎಂಬ ಉತ್ತರ ನೀಡಿತ್ತು. ಆಗ ಇಲ್ಲದ ದಾಖಲೆಗಳು ಸರ್ಕಾರ ಕೇಳಿದಾಗ ಹೇಗೆ ಬಂತು ಎಂದು ಪ್ರಶ್ನಿಸುತ್ತಾರೆ.
ಮಾಜಿ ಸೈನಿಕರ ಆದಾಯ ಪ್ರಮಾಣ ಪತ್ರವನ್ನು ಪರಿಶೀಲಿಸುವಾಗ ಸೈನಿಕರ ಸೇವಾ ನಿವೃತ್ತಿ ಪತ್ರ ಮತ್ತು ಪಿಂಚಣಿ ಮೂಲ ದಾಖಲೆಗಳನ್ನು ಪರಿಶೀಲಿಸಬೇಕು.

ಇವುಗಳನ್ನು ಪರಿಶೀಲನೆ ನಡೆಸದೆ ಇಬ್ಬರಿಗೆ ಕೆಲಸ ನೀಡಲಾಗಿದೆ. ಅರ್ಹನಿದ್ದರೂ ತಮಗೆ ಕೆಲಸ ನೀಡಿಲ್ಲ ಎಂದು ಅವರು ಆರೋಪಿಸುತ್ತಾರೆ. ಹರಿಶ್ಚಂದ್ರ ಬಂಟ್ವಾಳ್ ಮತ್ತು ಕೆ.ಎಸ್.ವಿಠಲಾಕ್ಷ ಅವರ ಆದಾಯ ಪ್ರಮಾಣ ಪತ್ರವನ್ನು ಪರಿಶೀಲನೆ ನಡೆಸಲು ಸಮಾಜ ಕಲ್ಯಾಣ ಇಲಾಖೆಗೆ ಡಿಪಿಎಆರ್ ಸೂಚಿಸಿದೆ. ಸಮಾಜ ಕಲ್ಯಾಣ ಇಲಾಖೆ ಇನ್ನೂ ಯಾವುದೇ ವರದಿಯನ್ನು ನೀಡಿಲ್ಲ. ಸರ್ಕಾರ ಕೂಡ ಪರಮೇಶ್ವರಪ್ಪ ಅವರಿಗೆ ಉದ್ಯೋಗ ನೀಡುವ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ದೇವನೂರು ಗ್ರಾಮದವರಾದ ಪರಮೇಶ್ವರಪ್ಪ 1979ರಿಂದ 1988ರವರೆಗೆ ಭಾರತೀಯ ಸೇನೆಯಲ್ಲಿ ದುಡಿದಿದ್ದರು. ಕೆಪಿಎಸ್‌ಸಿ ಮಾಡಿದ ಅವಾಂತರದಿಂದ 25 ವರ್ಷದಿಂದ ನಿರುದ್ಯೋಗಿಯಾಗಿದ್ದಾರೆ. 50 ವರ್ಷ ವಯಸ್ಸಿನರಾದ ಅವರು ಈಗ ಕಳೆದ 20 ತಿಂಗಳಿನಿಂದ ಉದ್ಯೋಗಕ್ಕಾಗಿ ಹೋರಾಟ ನಡೆಸಿದ್ದಾರೆ.

`ನನಗೂ ಕೆಲಸ ನೀಡಿ'

1990ರ ಸಾಲಿನ ಕೆಎಎಸ್ ಪರೀಕ್ಷೆಗೆ ಹಾಜರಾಗಿದ್ದ ಬಿ.ಎಂ.ವಿಜಯಶಂಕರ್ ಅವರು ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯ ಹೆಚ್ಚುವರಿ ಕಾಗದ (ಅಡಿಷನಲ್ ಶೀಟ್)ದಲ್ಲಿ ನೋಂದಣಿ ಸಂಖ್ಯೆ ಬರೆದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಕೆಪಿಎಸ್‌ಸಿ ಆದೇಶವನ್ನು ಪ್ರಶ್ನಿಸಿ ವಿಜಯಶಂಕರ್ ಹೈಕೋರ್ಟ್ ಮೊರೆ ಹೋದರು. ಹೈಕೋರ್ಟ್ ಇವರ ಅರ್ಜಿಯನ್ನು ವಜಾಗೊಳಿಸಿತು.

8-7-1999ರಂದು ಈ ವಿಚಾರ ಸಚಿವ ಸಂಪುಟದ ಮುಂದೆ ಚರ್ಚೆಗೆ ಬಂದಾಗ ಆಗಿನ ಮುಖ್ಯ ಕಾರ್ಯದರ್ಶಿ ಬಿ.ಕೆ.ಭಟ್ಟಾಚಾರ್ಯ ಅವರು, ಇವರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಸಲಹೆ ಮಾಡಿದರು. ಅದಕ್ಕೆ ಸಂಪುಟ ಒಪ್ಪಿಗೆ ನೀಡಿತು. ಆದರೆ 19-3-2001ರಂದು ಮತ್ತೆ ಇದೇ ವಿಷಯ ಸಚಿವ ಸಂಪುಟದ ಮುಂದೆ ಬಂತು. ಆಗ ಇವರಿಗೆ ಉದ್ಯೋಗ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿತು. ವಿಜಯಶಂಕರ್ ಅವರಿಗೆ ಕೆಲಸ ನೀಡಿದ ಸರ್ಕಾರ ತಮಗೂ ಕೆಲಸ ನೀಡಬೇಕು ಎಂದು ಪರಮೇಶ್ವರಪ್ಪ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT