ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ.ಗಂಗೂಲಿ ವಜಾ ಪ್ರಕ್ರಿಯೆಗೆ ಚಾಲನೆ

ಕೇಂದ್ರ ಸಂಪುಟದ ಮಹತ್ವದ ನಿರ್ಧಾರ
Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯ­ಮೂರ್ತಿ ಎ.ಕೆ.ಗಂಗೂಲಿ  ಅವರನ್ನು ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವ ಪ್ರಕ್ರಿಯೆಗೆ ಗುರುವಾರ ಚಾಲನೆ ಸಿಕ್ಕಿತು.

ನ್ಯಾ. ಗಂಗೂಲಿ ವಿರುದ್ಧದ ಲೈಂಗಿಕ ಕಿರುಕುಳದ ಬಗ್ಗೆ ತನಿಖೆ ನಡೆಸು­ವುದಕ್ಕೆ ಅಗತ್ಯವಾದ ರಾಷ್ಟ್ರಪತಿಗಳ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸುವ ಕ್ರಮಕ್ಕೆ ಕೇಂದ್ರ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಪ್ರಧಾನಿ ಮನಮೋಹನ್‌ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆ­ಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಯಿತು.

ಕಾನೂನು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣ ತನಿಖೆಗೆ ಅರ್ಹವಾಗಿದೆ ಎಂಬ ಅಟಾರ್ನಿ ಜನರಲ್‌ ಜಿ.ಇ.ವಾಹನ್ವತಿ ಅವರ ಅಭಿಪ್ರಾಯವನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಯಿತು.

ಈ ಪ್ರಸ್ತಾವವನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗುವುದು. ನಂತರ ರಾಷ್ಟ್ರಪತಿಗಳು ಇದನ್ನು ಮುಖ್ಯ ನ್ಯಾಯ­ಮೂರ್ತಿ­ಗಳಿಗೆ ಕಳುಹಿಸಿ, ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿರುವ ಮೂರು ಸಂಗತಿಗಳ ಆಧಾರದಲ್ಲಿ ತನಿಖೆ ನಡೆಸುವಂತೆ ಕೇಳಿಕೊಳ್ಳುತ್ತಾರೆ ಎನ್ನಲಾಗಿದೆ.

ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನದಿಂದ ಗಂಗೂಲಿ ಅವರನ್ನು ವಜಾ ಮಾಡ­ಬೇಕೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಅಟಾರ್ನಿ ಜನರಲ್‌ ನೀಡಿದ ಪ್ರತಿಕ್ರಿಯೆ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಗಂಗೂಲಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮಾಹಿತಿ ನೀಡದೆ ಪಾಕಿಸ್ತಾನಕ್ಕೆ ಭೇಟಿ ಮತ್ತು ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟದ ಪರವಾಗಿ ಮಧ್ಯಸ್ಥಿಕೆ ಕೆಲಸ ಸ್ವೀಕಾರಕ್ಕೆ ಸಂಬಂಧಿಸಿ­ದಂತೆ ಅಭಿಪ್ರಾಯ ತಿಳಿಸುವಂತೆ ಅಟಾರ್ನಿ ಜನರಲ್‌ ಅವರನ್ನು ಕೇಳಿಕೊಳ್ಳಲಾಗಿತ್ತು.

ಆರೋಪ ನಿರಾಕರಿಸಿದ ಗಂಗೂಲಿ: ಗಂಗೂಲಿ ಈ ಆರೋಪ ವನ್ನು ಅಲ್ಲಗಳೆದಿದ್ದು, ಹುದ್ದೆ ತ್ಯಜಿಸಲು ನಿರಾಕರಿಸಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ ಪ್ರಕಾರ, ಕೇಂದ್ರ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಅಥವಾ ಸದಸ್ಯರನ್ನು ವಜಾ ಮಾಡಬೇಕಾದರೆ ಅವರ ದುರ್ನಡತೆ ಅಥವಾ ಅಸಾಮರ್ಥ್ಯ ಸಾಬೀತಾಗ­ಬೇಕು. ಅದರ ಆಧಾರ ದಲ್ಲಿ ರಾಷ್ಟ್ರಪತಿಗಳು ವಜಾ ಆದೇಶ ಹೊರಡಿಸಬೇಕು.

ಅದಕ್ಕೂ ಮೊದಲು ರಾಷ್ಟ್ರಪತಿಗಳ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸಬೇಕು. ಪ್ರಸ್ತಾವದಲ್ಲಿ ಉಲ್ಲೇಖಿಸಿರುವ ಸಂಗತಿಗಳ ಆಧಾರದಲ್ಲಿ ತನಿಖೆ ನಡೆಸಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಅಥವಾ ಸದಸ್ಯರನ್ನು ವಜಾ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ವರದಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT