ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯ ದೊರೆಯಲಿ

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕಿರಿಯ ಮಹಿಳಾ  ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ‘ತೆಹೆಲ್ಕಾ’ ಸಂಸ್ಥಾಪಕ ಸಂಪಾದಕ ತರುಣ್ ತೇಜ್‌ಪಾಲ್  ಅವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.  ಕಳೆದ ಒಂದು ವಾರದಿಂದ  ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರಬಿಂದುವಾಗಿದ್ದ ಈ ಪ್ರಕರಣದ ಕಾನೂನು ಪ್ರಕ್ರಿಯೆ ಇದರಿಂದ ಚುರುಕುಗೊಂಡಂತಾಗಿದೆ.

ಕುಟುಕು ಕಾರ್ಯಾಚರಣೆಗಳ  ತನಿಖಾ  ಪತ್ರಿಕೋದ್ಯಮಕ್ಕೆ ಹೆಸರಾಗಿದ್ದ ತೇಜ್‌­­ಪಾಲ್ ವಿರುದ್ಧ ಹೊರಿಸಲಾಗಿರುವ ಆರೋಪಗಳು ಗಂಭೀರವಾದವು.  ಆದರೆ  ಈ ಆರೋಪಗಳನ್ನು ಹಗುರವಾಗಿ ಕಂಡು  ತೇಲಿಸಿಬಿಡುವಂತಹ ಹೇಳಿಕೆಗಳನ್ನು ಅವರು ನೀಡಿದ್ದು ಪರಿಸ್ಥಿತಿಯ ವ್ಯಂಗ್ಯ. ‘ಅತಿ ಕೆಟ್ಟ ತಪ್ಪು ನಿರ್ಣಯ ಹಾಗೂ ಪರಿಸ್ಥಿತಿಯ ತಪ್ಪಾದ ಗ್ರಹಿಕೆ’ಯಿಂದ ಈ ಪ್ರಮಾದ ಘಟಿಸಿದೆ ಎಂಬಂತಹ ತೇಜ್‌ಪಾಲ್‌ ನುಡಿಗಳು ಈ ದುಷ್ಕೃತ್ಯದ  ತೀವ್ರತೆ­ಯನ್ನು ತಗ್ಗಿಸುವ ಧಾಟಿಯದಾಗಿತ್ತು.

ಇದಕ್ಕಾಗಿ ಆರು ತಿಂಗಳ ಕಾಲ  ‘ತೆಹೆಲ್ಕಾ’ದ ಸಂಪಾದಕತ್ವದಿಂದ ದೂರ ಉಳಿದು  ಪಶ್ಚಾತ್ತಾಪ­ಪಡುವುದಾಗಿ ಕೈಗೊಂಡಿದ್ದಂತಹ  ಸ್ವಯಂ ನಿರ್ಧಾರವಂತೂ ಹಾಸ್ಯಾಸ್ಪದ.  ಲೈಂಗಿಕ ಹಲ್ಲೆ ಎಂಬುದು  ಈ ನಾಡಿನ ಕಾನೂನಿನ ಅನ್ವಯ ಪೊಲೀಸರಿಂದ  ತನಿಖೆಯಾಗಿ ಶಿಕ್ಷೆಯಾಗುವಂತಹ ಅಪರಾಧ. ಇದರಲ್ಲಿ ಎರಡು ಮಾತಿಲ್ಲ.  ಆದರೆ ಇದು ಸಂಸ್ಥೆಯ  ‘ಆಂತರಿಕ ವಿಚಾರ’  ಎಂದು   ‘ತೆಹೆಲ್ಕಾ’ ವ್ಯವಸ್ಥಾಪಕ ಸಂಪಾದಕಿ­ಯಾಗಿದ್ದ ಶೋಮಾ ಚೌಧರಿ ಬಣ್ಣಿಸಿದ್ದು ಸಹಜವಾಗಿಯೇ ದೊಡ್ಡ ವಿವಾದ­ವಾಯಿತು.

ಅತ್ಯಾಚಾರದಂತಹ ಆರೋಪ ಸಂಸ್ಥೆಯೊಂದರ ಆಂತರಿಕ ವಿಚಾರ­­ವಾಗು­ವುದಾದರೂ ಹೇಗೆ?  ಲೈಂಗಿಕ ಕಿರುಕುಳ ದೂರಿನ  ವಿಚಾರ­ದಲ್ಲಿ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಎಡವಿದ ಆರೋಪಕ್ಕೊಳಗಾದ  ಶೋಮಾ  ಚೌಧರಿ ತಮ್ಮ ಹುದ್ದೆಗೂ ರಾಜೀನಾಮೆ ನೀಡುವಂತಾಯಿತು.  ಲೈಂಗಿಕ ಕಿರುಕುಳದ ದೂರನ್ನು ನಿರ್ವಹಿಸುವಲ್ಲಿನ ವೈಫಲ್ಯ ಇಲ್ಲಿ ಎದ್ದು ಕಾಣಿ­ಸುತ್ತದೆ. ‘ತೆಹೆಲ್ಕಾ’ದ ಅನೇಕ ಪತ್ರಕರ್ತರೂ ಸಂಸ್ಥೆ ತೊರೆಯಲು ಇದು ನೆಪವಾಯಿತು.

‘ತೇಜ್‌ಪಾಲ್ ವಿರುದ್ಧದ ದೂರು  ಚುನಾವಣಾಪೂರ್ವ ರಾಜಕೀಯ ಸಂಚು’ ಎಂಬಂತಹ ಮಾತುಗಳನ್ನಾಡುತ್ತಾ ಈ ವಿಷಯವನ್ನು ರಾಜಕೀಯ­ಗೊಳಿಸುವ ಪ್ರಯತ್ನಗಳು ಈ ಮಧ್ಯೆ ನಡೆದಿವೆ.  ಅತ್ಯಾಚಾರ ಅಪರಾಧದಿಂದ ಗಮನವನ್ನು ಬೇರೆಡೆ ಸೆಳೆಯುವ ಇಂತಹ ಪ್ರಯತ್ನಗಳು ನ್ಯಾಯ ಪಡೆ­ಯುವ ಹಾದಿಯಲ್ಲಿ ತೊಡಕಾಗಬಾರದು.  ಪ್ರಭಾವಿ ಶಕ್ತಿಗಳ ಒತ್ತಡಗಳು   ತನಿಖೆಯ ದಿಕ್ಕನ್ನು ತಪ್ಪಿಸುವಂತಾಗಬಾರದು.

ಇದೇ ಸಂದರ್ಭದಲ್ಲೇ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ  ಎ.ಕೆ. ಗಂಗೂಲಿ ಅವರೂ, ಕಾನೂನು ವಿದ್ಯಾರ್ಥಿನಿಗೆ  ಲೈಂಗಿಕ ಕಿರುಕುಳ  ನೀಡಿದ ಆರೋಪ ಎದುರಿ­ಸುತ್ತಿದ್ದಾರೆ. ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆಯಲು 1997­ರಲ್ಲಿ ಸುಪ್ರೀಂಕೋರ್ಟ್ ನೀಡಿರುವ  ‘ವಿಶಾಖಾ’  ಮಾರ್ಗದರ್ಶಿ ಸೂತ್ರಗಳಿವೆ. ಜೊತೆಗೆ  ಲೈಂಗಿಕ ಕಿರುಕುಳಗಳ ವಿರುದ್ಧ ಹೊಸ ಕಾನೂನಿಗೆ ರಾಷ್ಟ್ರಪತಿ ಅಂಕಿತ ಬಿದ್ದಿದೆ. ಹೀಗಿದ್ದೂ ಲೈಂಗಿಕ ಕಿರುಕುಳ ಪ್ರಕರಣಗಳು ಕಡಿಮೆ ಆಗುತ್ತಿಲ್ಲ.

ಇದರ ವಿರುದ್ಧ ದನಿ ಎತ್ತುವುದು ಅಷ್ಟು ಸುಲಭವಲ್ಲ.   ಈ ವಿಚಾರದಲ್ಲಿ ಆವರಿಸಿರುವ ಮೌನವನ್ನು ಒಡೆಯುವ ದಿಟ್ಟತನ ಈಗೀಗಷ್ಟೇ  ಕಂಡು ಬರುತ್ತಿದೆ.  ಲೈಂಗಿಕ ಕಿರುಕುಳಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ದೂರು ಸಮಿತಿಗಳನ್ನು ಸಂಸ್ಥೆಗಳು ಹೊಂದಿರುವುದು ವಿಶಾಖಾ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕಡ್ಡಾಯ. ಆದರೆ ಈ ನಿಯಮ ಎಲ್ಲೆಡೆ ಪಾಲನೆಯಾಗುತ್ತಿಲ್ಲ.  ‘ತೆಹೆಲ್ಕಾ’ದ  ಅಹಿತಕರ ವಿದ್ಯಮಾನ ಈ ನಿಟ್ಟಿನಲ್ಲಿ  ಎಚ್ಚರಿಕೆ  ಗಂಟೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT