ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದ ಹಾದಿ ಮರೆತ ವಕೀಲರು

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಇತ್ತೀಚೆಗೆ ಪೊಲೀಸರ ವಿರುದ್ಧ ವಕೀಲರು ಪ್ರತಿಭಟನೆ ಮಾಡಿದರು. ಮೈಸೂರು ಬ್ಯಾಂಕ್ ವೃತ್ತದ ಬಳಿ ಏಳು ಗಂಟೆಗಳ ಕಾಲ ನಡೆದ ಈ ಪ್ರತಿಭಟನೆಯಿಂದ ರಾಜಧಾನಿಯ ಜನರ ಜೀವನ ಅಸ್ತವ್ಯಸ್ತವಾಯಿತು.
 
ಜನರಿಗೆ ಸಹಿಸಲಾಗದ ಹಿಂಸೆಯನ್ನು ಮಾಡಿತು.  ಅನಾಗರಿಕವಾದ ವಕೀಲರ ಅಂದಿನ ನಡತೆಯನ್ನು ಖಂಡಿಸಲು ಕನ್ನಡದಲ್ಲಿ ಅಥವಾ ಭಾರತದ ಇನ್ಯಾವುದೇ ಭಾಷೆಯಲ್ಲಿ ಕಠಿಣವಾದ ಪದಗಳು ಸಿಗುವುದಿಲ್ಲ.
 
ಇದು ನಾಚಿಕೆಗೇಡು, ಅನಾಗರಿಕ ವರ್ತನೆ (ಇಂಗ್ಲಿಷ್‌ನಲ್ಲಿ ಹೇಳುವುದಾದರೆ `ಇಟ್ ವಾಸ್ ಎ ಡಿಸ್‌ಗ್ರೇಸ್‌ಫುಲ್, ಅನ್‌ಸಿವಿಲೈಜ್‌ಫುಲ್ ಆಕ್ಟ್~ ). ಯಾವ ನಾಗರಿಕನೂ ಅಂಥ ನಡತೆಯನ್ನು ಸಹಿಸಲಾರ.

ವಕೀಲಿಕೆ, ಅದು ಘನತೆವೆತ್ತ ಪವಿತ್ರ ವೃತ್ತಿ (ನೊಬೆಲ್ ಪ್ರೊಫೆಶನ್). ಅಂಥ ಪವಿತ್ರ ವೃತ್ತಿಯನ್ನು ಅವಲಂಬಿಸಿದವರು ಅಂತಹ ಹೇಯ ಕೃತ್ಯದಲ್ಲಿ ತೊಡಗುವುದು ಲಜ್ಜಾಸ್ಪದ ಸಂಗತಿ.

ವಕೀಲ ವೃತ್ತಿಯನ್ನು ಪವಿತ್ರ ವೃತ್ತಿ ಎಂದು ಕರೆಯಲು ಒಂದು ಪ್ರಬಲ ತಾತ್ವಿಕ ಕಾರಣ ಇದೆ. ಪಾಶ್ಚಾತ್ಯ ದೇಶಗಳಲ್ಲಿ, ಅದರಲ್ಲೂ ಇಂಗ್ಲೆಂಡ್, ಫ್ರಾನ್ಸ್ ಮುಂತಾದ ದೇಶಗಳಲ್ಲಿ, ನ್ಯಾಯವಾದಿಗಳೆಂದರೆ ಸಂಕಷ್ಟಕ್ಕೊಳಗಾದ ಜನರ ಸಂಕಟ ನಿವಾರಣೆಗಾಗಿ ಇರುವವರು.
ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಅವರು ಜನರ ದುಃಖ ನಿವಾರಣೆಗಾಗಿ ಪ್ರಯತ್ನಿಸುವ, ಪರಿಹಾರ ಕೊಡಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ಪ್ರಬುದ್ಧ ಚಿಂತಕರು. ಸಮಾಜ ಸೇವಾಸಕ್ತರು.

ಅವರನ್ನು `ಕರಿಕಪನಿಯ ಸಂನ್ಯಾಸಿಗಳು~ ಎಂದು ಕರೆಯಬಹುದು. ವಕೀಲರು ಧರಿಸುವ ಕರಿಗೌನು ಇದೆಯಲ್ಲ, ಅದು ಅವರ ಧರ್ಮಪರಾಯಣತೆಯ ಕುರುಹು. ಆ ಗೌನಿನ ಹಿಂದೆ ಒಂದು ಸಣ್ಣ ಚೀಲದಂತಹ ಪೌಚ್ ಇರುತ್ತದೆ.

ಹಿಂದಿನ ಕಾಲದಲ್ಲಿ ನ್ಯಾಯಶಾಸ್ತ್ರದಲ್ಲಿ ಪರಿಣಿತರಾದವರು ನ್ಯಾಯ ಒದಗಿಸಲು, ತಮ್ಮ ಕಲಿತ ವಿದ್ಯೆಯನ್ನು ಹೊಟ್ಟೆ ಹೊರೆಯಲು ಮಾರಿಕೊಳ್ಳುತ್ತಿರಲಿಲ್ಲ. ಆದರೆ, ಧರ್ಮಶಾಸ್ತ್ರ, ನ್ಯಾಯಶಾಸ್ತ್ರವನ್ನು ಬಲ್ಲ ವಿದ್ವಾಂಸರು, ಸಮಾಜಸೇವಾಸಕ್ತರು ತಾವು ತೊಟ್ಟುಕೊಂಡಿದ್ದ ಕಪನಿಯ ಮೇಲೆ, ಬೆನ್ನಿಗೆ ಸಣ್ಣ ಜೋಳಿಗೆಯನ್ನು ಕಟ್ಟಿಕೊಂಡಿರುತ್ತಿದ್ದರು.
 
ಅವರು ಬೀದಿಯಲ್ಲಿ ಹೋಗುವಾಗ ಯಾರನ್ನೂ, ಯಾತಕ್ಕೂ ಯಾಚಿಸುತ್ತಿರಲಿಲ್ಲ. ಅಂಥವರು ದಾರಿಗುಂಟ ಹೋಗುವಾಗ ಅವರನ್ನು ಜನರು ಗುರುತಿಸಿ ಅವರ ಜೋಳಿಗೆಗೆ ತಮಗೆ ತಿಳಿದ ವಸ್ತುಗಳನ್ನು, ಆಹಾರಗಳನ್ನು ಇಳಿಬಿಡುತ್ತಿದ್ದರು. ಅದು ಭಿಕ್ಷಾಟನೆಯಾಗಿರಲಿಲ್ಲ.

ಜನರು, ಹಾಗೆ ತಾವಾಗಿಯೇ ಜೋಳಿಗೆಯಲ್ಲಿ ಹಾಕಿದ್ದ ಧನ, ಧಾನ್ಯದಿಂದ ಅವರು ಬದುಕುತ್ತಿದ್ದರು. ಆ ದೊಡ್ಡ ಜೋಳಿಗೆಯನ್ನು ತೆಗೆದು ಹಾಕಿದರು. ಆ ಜೋಳಿಗೆಯ ಪಳೆಯುಳಿಕೆಯೇ ಕರಿಗೌನಿನಲ್ಲಿರುವ ಪೌಚ್ (ಸಣ್ಣ ಚೀಲ). ಅಂಥ ಪವಿತ್ರ ವೃತ್ತಿ ನ್ಯಾಯವಾದಿಗಳದು.

 ಆ ಪಾಶ್ಚಾತ್ಯ ಪದ್ಧತಿ ನಮ್ಮ ದೇಶದಲ್ಲಿ ಆಚರಣೆಗೆ ಬಂದ ಮೇಲೆ ಆ ಕರಿಕಪನಿ ಹಾಗೂ ಆ ಸಣ್ಣ ಜೋಳಿಗೆಯ ಗುರುತಾಗಿ ಗೌನು ಉಳಿದುಕೊಂಡಿದೆ. ಆದ್ದರಿಂದಲೇ ನಮ್ಮ ದೇಶದಲ್ಲಿ ಮೊದಲು ವಕೀಲರೆಂದರೆ ತುಂಬಾ ಗೌರವ ಕೊಡುತ್ತಿದ್ದರು.

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದವರೇ ವಕೀಲರು. ನಂತರದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪ್ರವೇಶಿಸಿದವರು ಕೂಡಾ ಅವರೇ. ಇತ್ತೀಚಿನ ವರ್ಷಗಳ ವರೆಗೆ ನಮ್ಮ ಸಂಸದರು-ಮತ್ತು ಶಾಸಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಇರುತ್ತಿದ್ದರು. ಅಲ್ಲಿಯೂ ಈಗ ಪರಿಸ್ಥಿತಿ ಬದಲಾಗಿದೆ.

ಇಂಥ ಪವಿತ್ರ ವೃತ್ತಿಯನ್ನು ಅವಲಂಬಿಸಿದವರು ಶಾಂತಿ ಸುವ್ಯವಸ್ಥೆ, ನ್ಯಾಯ ಪರಿಪಾಲನೆಯನ್ನು ಕಾಪಾಡಬೇಕಾದ ಕಾರ್ಯಾಂಗದ ಪ್ರಮುಖ ಸಿಬ್ಬಂದಿಯಾದ ವಕೀಲರನ್ನು ಪೊಲೀಸರು ಗೌರವಿಸುತ್ತಿದ್ದುದು ಸಹಜವೇ ಆಗಿತ್ತು. ಎರಡು ವೃತ್ತಿಪರರೂ ಪರಸ್ಪರ ಗೌರವಿಸುತ್ತಿದ್ದರು. ಪೊಲೀಸ್ ಪೇದೆ ರಾಷ್ಟ್ರದ ಪ್ರತಿನಿಧಿ. ರಾಷ್ಟ್ರದ ಚಿಹ್ನೆಗಳನ್ನು ಧರಿಸಿರುತ್ತಾನೆ. ಅವರು ರಾಜ್ಯಾಧಿಕಾರದ ಪ್ರತ್ಯಕ್ಷ  ಪ್ರತಿನಿಧಿಗಳು.
 
ಕರ್ತವ್ಯ ನಿರತನಾದ ಪೇದೆ ತನ್ನ ಕೈ ಎತ್ತಿ, ನಿಲ್ಲಿಸು ಎಂದರೆ ರಾಷ್ಟ್ರಪತಿಯಾಗಲಿ, ಆಟೋರಿಕ್ಷಾ ಚಾಲಕನಾಗಲಿ ನಿಲ್ಲಿಸಲೇಬೇಕು. ಕರ್ತವ್ಯನಿರತನಾದ ಪೊಲೀಸ್ ಪೇದೆ ಅವನ ಮೇಲಧಿಕಾರಿ ಯಾರೇ ಬರಲಿ, ಸೆಲ್ಯೂಟ್ ಮಾಡಕೂಡದೆಂಬ ನಿಯಮವೇ ಇದೆ.

ಕರ್ತವ್ಯ ಪಾಲನೆಯಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರನೂ ಜನರೊಡನೆ ಮೃದುವಾಗಿ ಮಾತನಾಡಬೇಕು, ಗೌರವದಿಂದ ಮಾತನಾಡಬೇಕು. ಅವರಿಗೆ ಸಹಾಯ ಮಾಡಬೇಕು.
ಅದನ್ನು ಪೊಲೀಸರೂ ಅನುಸರಿಸುತ್ತಾರೆ. ಅವರ ದೃಷ್ಟಿಯಲ್ಲಿ ಕಾನೂನು ಎಲ್ಲರಿಗೂ ಒಂದೇ. ಅವರು ಕರ್ತವ್ಯ ನಿರ್ವಹಣೆಯಲ್ಲಿ ತಾರತಮ್ಯ ತೋರಿಸಬಾರದು.

ನ್ಯಾಯವಾದಿಯ ವೃತ್ತಿಧರ್ಮವೂ ಅದೇ. ಅಂದರೆ, ನ್ಯಾಯವಾದಿಗಳು, ಕಾರ್ಯಾಂಗದ ಪೊಲೀಸರು ಕಾನೂನನ್ನು ಎತ್ತಿಹಿಡಿಯುವ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ಪೊಲೀಸರಿಗೂ, ನ್ಯಾಯವಾದಿಗೂ ಮಧ್ಯೆ ವೈಷಮ್ಯ ಇರಕೂಡದು.

ಪರಸ್ಪರ ಮಧುರ ಬಾಂಧವ್ಯ ಇರಬೇಕಾದ ಸಮಾಜದ ಎರಡು ವೃತ್ತಿವರ್ಗಗಳಾದ ವಕೀಲರು ಮತ್ತು ನ್ಯಾಯರಕ್ಷಕರು ಪರಸ್ಪರ ನಿಂದಿಸುವುದು ಸಾಧುವಲ್ಲ.

ಮೊನ್ನೆ ಬೆಂಗಳೂರಿನಲ್ಲಿ ವಕೀಲರು ಪೊಲೀಸರು ತಮ್ಮಂದಿಗೆ ಅಸಭ್ಯವಾಗಿ, ಅನಾಗರಿಕವಾಗಿ ವರ್ತಿಸಿದರು ಎಂಬ ಕಾರಣದಿಂದ ಬೀದಿಗಿಳಿದು ಪ್ರತಿಭಟನೆ ನಡೆಸಿರುವುದು ಯೋಗ್ಯವಲ್ಲ.

ಒಂದು ವೇಳೆ ಪೊಲೀಸರೇ ಹದ್ದು ಮೀರಿ ವರ್ತಿಸಿದರು ಎಂದು ಇಟ್ಟುಕೊಂಡರೂ ವಕೀಲರು ಅದಕ್ಕಿಂತಲೂ ಕೆಳಮಟ್ಟಕ್ಕಿಳಿದು ಇಡೀ ನಗರವನ್ನು, ನಗರಕ್ಕೆ ಬಂದು ಹೋಗುವ ಲಕ್ಷಾಂತರ ಜನರನ್ನು, ನಗರದೊಳಗೆ ವಾಸಿಸುವ ನಾಗರಿಕರನ್ನು ಹಿಂಸೆಗೆ ಒಳಪಡಿಸಿದ್ದು ಸರ್ವಥಾ ಸರಿಯಲ್ಲ, ಯೋಗ್ಯವಲ್ಲ.
 
ಒಂದು ವೇಳೆ ಅವರದೇ ತಪ್ಪಾಗಿದ್ದರೆ ವಕೀಲರು ಸಂಯಮದಿಂದ ವರ್ತಿಸಬೇಕಾಗಿತ್ತು.
ಸುಪ್ರಿಂಕೋರ್ಟ್‌ನಿಂದ ಸೆಷನ್ಸ್ ನ್ಯಾಯಾಲಯಗಳ ವರೆಗೆ ಎಲ್ಲ ಕಡೆ ಲಕ್ಷಾಂತರ ವ್ಯಾಜ್ಯಗಳು ಸಕಾಲದಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿವೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯಗಳ ಕಾರ‌್ಯನಿರ್ವಹಣೆಯನ್ನು ಇನ್ನಷ್ಟು ಸುಧಾರಣೆಗೊಳಪಡಿಸುವ ಬಗ್ಗೆ ಚಿಂತನೆ ನಡೆಯುತ್ತಿರುವ ಈ ಕಾಲದಲ್ಲಿ ಬೆಂಗಳೂರಿನ ವಕೀಲರು ತಾವೇ ಶಿಸ್ತುಭಂಗ ನಡೆಸಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಲು ಹೊರಟಿದ್ದಾರೆ.
 
ಇದರಿಂದಾಗಿ ಕಷ್ಟಕ್ಕೆಡಾದವರು ಕೇವಲ ಬೆಂಗಳೂರಿನ ಸಾರ್ವಜನಿಕರಲ್ಲ. ಮುಖ್ಯವಾಗಿ ದೂರದ ಊರುಗಳಿಂದ ಬಂದ ಬಡ ಮತ್ತು ಅಸಹಾಯಕ ಕಕ್ಷಿದಾರರು ತೊಂದರೆಗೀಡಾಗಿದ್ದಾರೆ.

ವಕೀಲರು ಕಾನೂನು ಮತ್ತು ನ್ಯಾಯಾಂಗದ ಬಗ್ಗೆ ಸಾರ್ವಜನಿಕರಲ್ಲಿ ಗೌರವ ಹುಟ್ಟಿಸುವಂತೆ ನಡೆದುಕೊಳ್ಳಬೇಕು. ಆದರೆ ಇತ್ತೀಚಿನ ಕೆಲವು ವಕೀಲರ ನಡವಳಿಕೆ  ನ್ಯಾಯಾಂಗದ ಮೇಲೆ ನಂಬಿಕೆಯೇ ಕಳೆದುಕೊಳ್ಳುವಂತೆ ಮಾಡಿದೆ.

ನ್ಯಾಯವಾದಿಗಳು ನ್ಯಾಯಾಲಯಗಳಿಗೆ ಬಹಿಷ್ಕಾರ ಹಾಕಿದ್ದು ಅತ್ಯಂತ ಘೋರ ಅನ್ಯಾಯ. ಹಿಂದೆಲ್ಲ ವಕೀಲರು ಪ್ರತಿಭಟನೆಗೆ ಇಳಿದಾಗಲೂ ಕಲಾಪವನ್ನು ಬಹಿಷ್ಕರಿಸುತ್ತೇವೆ ಎಂದು ಹೇಳದೆ `ಕಲಾಪದಿಂದ ದೂರ ಇರುತ್ತೇವೆ~ ಎಂದು ಹೇಳುವಷ್ಟು ವೃತ್ತಿ ಗೌರವ ಹೊಂದಿದ್ದರು.

ಆದರೆ ಈಗ ಅಂತಹ ಸೌಜನ್ಯಯುತ ನಡವಳಿಕೆಯನ್ನು ಕಾಣಲಾಗುತ್ತಿಲ್ಲ. ಸುಪ್ರೀಂ ಕೋರ್ಟ್ ಕಲಾಪವನ್ನು ನ್ಯಾಯವಾದಿಗಳು ಬಹಿಷ್ಕರಿಸುವುದು ನ್ಯಾಯಬಾಹಿರ ಎಂದಿತ್ತು. ಬಹಿಷ್ಕರಿಸಕೂಡದು ಎಂದು ಶಾಸನ ಮಾಡಿರುವಾಗ ನ್ಯಾಯವಾದಿಗಳ ಸಂಘ ನ್ಯಾಯಾಲಯಗಳನ್ನು ಬಹಿಷ್ಕರಿಸಬೇಕೆಂದು ತೀರ್ಮಾನಿಸಿದ್ದು ಇನ್ನೂ ಅನುಚಿತ.
 
ನ್ಯಾಯವಾದಿಗಳು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ತಲೆಬಾಗಬೇಕೆ ಅಥವಾ ನ್ಯಾಯವಾದಿಗಳ ಗೊತ್ತುವಳಿಗೆ ತಲೆಬಾಗಬೇಕೆ? ನ್ಯಾಯವಾದಿಗಳ ಸಂಘದ ಗೊತ್ತುವಳಿಯನ್ನು ಪಾಲಿಸದ ವಕೀಲರನ್ನು ಹೆದರಿಸುವುದು ನ್ಯಾಯಸಮ್ಮತವಲ್ಲ.

ಪ್ರೊ.ರವಿವರ್ಮ ಕುಮಾರರು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ತಲೆಬಾಗಿ ನ್ಯಾಯಾಲಯಕ್ಕೆ ಹಾಜರಾದಾಗ ಅವರನ್ನು ದೂರವಾಣಿ ಮೂಲಕ ಬೆದರಿಸಿ, ಹೆದರಿಸಿ, ಪ್ರಾಣಾಪಾಯ ಒಡ್ಡಿದ್ದು ಕಿರಾತಕ ವರ್ತನೆ.
 
ಅದು ಖಂಡನೀಯ. ದಾರಿ ತಪ್ಪಿದ ನ್ಯಾಯವಾದಿಗಳ ಈ ವರ್ತನೆ ದೇಶವನ್ನು ಫ್ಯಾಸಿಸಂ ಕೂಪಕ್ಕೆ ತಳ್ಳುತ್ತದೆ. ಇದರಿಂದ ದೇಶ ಸರ್ವಾಧಿಕಾರಕ್ಕೆ ತಲೆಬಾಗುವಂತಾಗುತ್ತದೆ.

ವಕೀಲರು ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ ಅವರನ್ನು `ರೋಗ್ಸ್ ಇನ್ ಬ್ಲಾಕ್ ರೋಬ್ಸ್~ (ಕಪ್ಪು ಗೌನಿನೊಳಗಿನ ಗೂಂಡಾಗಳು) ಎಂದು ಕರೆಯುವ ಕಾಲ ಬಂದೀತು. ವಕೀಲರು ಅದಕ್ಕೆ ಅವಕಾಶ ನೀಡಬಾರದು.

- ಕೋ. ಚೆನ್ನಬಸಪ್ಪ
(ಲೇಖಕರು ನಿವೃತ್ತ ನ್ಯಾಯಾಧೀಶರು)

 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT