ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ತಿರುಗೇಟು: ಏಕೆ ಈ ಆರೋಪ?

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಹೊಂದಿದ ಕಾರಣಕ್ಕೆ ನನ್ನ ವಿರುದ್ಧ ಸಲ್ಲದ ಆರೋಪ ಮಾಡಲಾಗಿದೆ.

ಆದರೆ, ಅಲ್ಲಿಯೇ ನಿವೇಶನ ಹೊಂದಿರುವ ಒಬ್ಬರನ್ನು ಲೋಕಾಯುಕ್ತ ಹುದ್ದೆಗೆ, ಮತ್ತೊಬ್ಬರನ್ನು ಉಪ ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಿದಾಗ ಏಕೆ ಯಾರೂ ಚಕಾರ ಎತ್ತಲಿಲ್ಲ~ ಎಂದು ಕೇರಳ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ಅವರು ರಾಜ್ಯಪಾಲರನ್ನು ನೇರವಾಗಿ ಪ್ರಶ್ನಿಸಿದರು.

ಲೋಕಾಯುಕ್ತ ಹುದ್ದೆಯ ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯುವ ಇಂಗಿತ ಪ್ರಕಟಿಸಿದ ಬೆನ್ನಲ್ಲೇ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, `ಯಾವುದೇ ಆಧಾರಗಳಿಲ್ಲದೇ ರಾಜ್ಯಪಾಲರು ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಮಾಧ್ಯಮಗಳಲ್ಲೂ ನಿರಂತರವಾಗಿ ಆಧಾರರಹಿತ ವರದಿಗಳು ಪ್ರಕಟವಾಗಿವೆ. ಇದರಿಂದ ನನ್ನ ವ್ಯಕ್ತಿತ್ವಕ್ಕೆ ಕುಂದುಂಟಾಗಿದೆ. ಮಾನಸಿಕ ನೆಮ್ಮದಿಯೂ ಹಾಳಾಗಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಆರೋಪಗಳಿಗೆ ಯಾವ ಆಧಾರವಿದೆ ಎಂಬುದನ್ನೂ ತಿಳಿಸದೆ ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಿರಂತರವಾಗಿ ಆರೋಪ ಮಾಡುವ ಮೂಲಕ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗಿದೆ. ನನ್ನನ್ನು ಭ್ರಷ್ಟ, ಕಳಂಕಿತ ವ್ಯಕ್ತಿ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಯಿತು~ ಎಂದು ದೂರಿದರು.

`ನಾನು ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದೇನೆ ಎಂಬ ಸುಳ್ಳು ಆರೋಪ ಮಾಡಲಾಗಿದೆ. ಪಿತ್ರಾರ್ಜಿತ ಮನೆಯನ್ನು ಹೊರತುಪಡಿಸಿದರೆ ಬೆಂಗಳೂರು ಸೇರಿದಂತೆ ದೇಶದ ಯಾವುದೇ ಭಾಗದಲ್ಲೂ ನನ್ನ ಬಳಿ ನಿವೇಶನ ಅಥವಾ ಮನೆ ಇಲ್ಲ. ನನಗೆ ಮಂಜೂರು ಮಾಡಲಾದ ನಿವೇಶನ ನಾಗರಿಕ ಸೌಲಭ್ಯಗಳಿಗೆ ಮೀಸಲಾದುದು ಎಂಬುದು ಕೂಡ ಸುಳ್ಳು~ ಎಂದರು.

`ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆದಿರುವ ನ್ಯಾಯಮೂರ್ತಿ ನಾನೊಬ್ಬನೇ ಅಲ್ಲ. 80 ಜನ ನ್ಯಾಯಮೂರ್ತಿಗಳಿಗೆ ನಿವೇಶನ ನೀಡಲಾಗಿದೆ. ಇದನ್ನು ಪ್ರಶ್ನಿಸಿದ ಅರ್ಜಿಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ತಿರಸ್ಕರಿಸಿತ್ತು. ಸುಪ್ರೀಂಕೋರ್ಟ್ ಕೂಡ ಈ ತೀರ್ಪನ್ನು ಎತ್ತಿಹಿಡಿದು, ನ್ಯಾಯಮೂರ್ತಿಗಳು ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆದಿರುವುದು ಸರಿ ಎಂದು ಹೇಳಿದೆ. ಆಗ ಮಾಧ್ಯಮಗಳಾಗಲೀ, ಯಾವುದೇ ವ್ಯಕ್ತಿಗಳಾಗಲೀ ಈ ತೀರ್ಪನ್ನು ಪ್ರಶ್ನಿಸಿರಲಿಲ್ಲ~ ಎಂದು ಹೇಳಿದರು.

ಹೈಕೋರ್ಟ್ ನ್ಯಾಯಮೂರ್ತಿಗಳು ಕೂಡ ಸರ್ಕಾರಿ ನೌಕರರು ಎಂದು ಸುಪ್ರೀಂಕೋರ್ಟ್ 2001ರಲ್ಲಿ ಸ್ಪಷ್ಟವಾಗಿ ಹೇಳಿದೆ. ಅವರು ಅತ್ಯುನ್ನತ ಸಾರ್ವಜನಿಕ ನೌಕರರೆಂದ ಮಾತ್ರಕ್ಕೆ ನಿವೇಶನ ಹೊಂದುವುದರಿಂದ ಅವರನ್ನು ನಿರ್ಬಂಧಿಸಲಾಗದು. ನ್ಯಾಯಮೂರ್ತಿಯಾಗಿ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆಯಲು ತಮಗೆ ಅರ್ಹತೆ ಇರಲಿಲ್ಲ ಎಂಬ ಆರೋಪಕ್ಕೆ ಯಾವ ಆಧಾರವೂ ಇಲ್ಲ ಎಂದು ತಿರುಗೇಟು ನೀಡಿದರು.

ಲಿಂಗಾಯತನೆಂಬ ಕಾರಣವೇ?: `ನಾನು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವನೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಲಿಂಗಾಯತ ಸಮುದಾಯದವರು ಎಂಬುದು ಕೂಡ ಸ್ಪಷ್ಟ. ಆದರೆ, ಅವರು ನನಗೆ ಸಂಬಂಧಿಯಲ್ಲ. ಸ್ನೇಹವೂ ಇಲ್ಲ. ಅವರೊಂದಿಗೆ ನಿಕಟ ಸಂರ್ಕವೂ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ~ ಎಂದರು.

`ನಾನು ಯಾವುದೇ ರಾಜಕೀಯ ಪಕ್ಷದ ಜೊತೆಯೂ ಸಂಬಂಧ ಹೊಂದಿಲ್ಲ. 1990ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರು ನನ್ನನ್ನು ರಾಜ್ಯ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗೆ ನೇಮಕ ಮಾಡಿದ್ದರು. ವೀರಪ್ಪ ಮೊಯಿಲಿ, ಎಚ್.ಡಿ.ದೇವೇಗೌಡ ಮತ್ತು ಜೆ.ಎಚ್.ಪಟೇಲ್ ಅವರ ಅವಧಿಯಲ್ಲೂ ನಾನು ಅದೇ ಹುದ್ದೆಯಲ್ಲಿ ಮುಂದುವರೆದಿದ್ದೆ. ಇವರೆಲ್ಲರೂ ಬೇರೆ ಬೇರೆ ಸಮುದಾಯದಿಂದ ಬಂದವರಾಗಿದ್ದರು. ಆಗ ಜಾತಿಯ ಕಾರಣಕ್ಕೆ ನನ್ನನ್ನು ನೇಮಕ ಮಾಡಿರಲಿಲ್ಲ~ ಎಂದು ರಾಜ್ಯಪಾಲರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

`ಜಾತಿವಾದಿ ಅಥವಾ ರಾಜಕೀಯ ಪಕ್ಷವೊಂದರ ಜೊತೆ ಸಂಬಂಧ ಹೊಂದಿದ ಆರೋಪಗಳಿದ್ದರೆ ನನ್ನನ್ನು ನ್ಯಾಯಮೂರ್ತಿ ಮತ್ತು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನೇಮಕ ಮಾಡುತ್ತಿರಲಿಲ್ಲ. ನಾನು ಲಿಂಗಾಯತ ಎಂಬ ಕಾರಣಕ್ಕೆ ಈ ಎಲ್ಲ ಅತ್ಯುನ್ನತ, ಸಾಂವಿಧಾನಿಕ ಹುದ್ದೆಗಳನ್ನು ಪಡೆದಿಲ್ಲ. ಯಾವುದೇ ರಾಜಕೀಯ ಪಕ್ಷ ಅಥವಾ `ಗಾಡ್‌ಫಾದರ್~ ಬೆಂಬಲದಿಂದಲೂ ಗಳಿಸಿಲ್ಲ. ರಾಜ್ಯಪಾಲರ ಹೇಳಿಕೆಗಳೂ ಸೇರಿದಂತೆ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಪ್ರಕಟವಾಗಿರುವ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ~ ಎಂದರು.

`ಮೊದಲು ಕೇವಲ ನಿವೇಶನಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನನ್ನ ನೇಮಕಾತಿಯ ಬಗ್ಗೆ ಪ್ರಶ್ನೆ ಎತ್ತಿದ್ದರು. ಈ ಕುರಿತ ಪತ್ರಕ್ಕೆ ಮುಖ್ಯಮಂತ್ರಿಯವರು ವಿವರವಾದ ಉತ್ತರವನ್ನೂ ನೀಡಿದ್ದರು. ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಾಜ್ಯಪಾಲರು, ಬನ್ನೂರಮಠ ಅವರ ನೇಮಕಾತಿ ಪ್ರಸ್ತಾವ ತಡೆ ಹಿಡಿಯಲು ನಿವೇಶನವಲ್ಲದೇ ಬೇರೆ ಕಾರಣಗಳೂ ಇವೆ. ಆದರೆ, ಅವುಗಳನ್ನು ಬಹಿರಂಗಪಡಿಸಲಾಗದು ಎಂದರು. ರಾಜಕೀಯಕ್ಕಾಗಿಯೇ ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡಲಾಗಿತ್ತು~ ಎಂದು ದೂರಿದರು.

`ನಾನು ಪ್ರಾಮಾಣಿಕ~: `ವಕೀಲನಾಗಿ, ನ್ಯಾಯಮೂರ್ತಿಯಾಗಿ, ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಯಾವುದೇ ಲೋಪ ಎಸಗಿಲ್ಲ. ಪ್ರಾಮಾಣಿಕನಾಗಿಯೇ ಉಳಿದಿದ್ದೇನೆ~ ಎಂದ ಅವರು, ನಿವೃತ್ತಿ ಸಮಯದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಆರ್.ಕೃಷ್ಣಯ್ಯರ್ ಅವರು ಆಡಿರುವ ಮೆಚ್ಚುಗೆಯ ಮಾತುಗಳನ್ನು ಸ್ಮರಿಸಿದರು.

`ನಿರಂತರವಾಗಿ ಮಾಡಿದ ಆಧಾರರಹಿತ ಆರೋಪಗಳಿಂದ ನನಗೆ ತೀವ್ರವಾಗಿ ನೋವಾಗಿದೆ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲಾಗಿದೆ. ಇದರಿಂದ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಸ್ನೇಹಿತರು, ಪರಿಚಯಸ್ಥರಿಂದ ನಿರಂತರವಾಗಿ ಪ್ರಶ್ನೆಗಳ ಸುರಿಮಳೆ ಎದುರಿಸಿದ್ದೇನೆ~ ಎಂದು ನೋವು ಹೊರಹಾಕಿದರು.

`ರಾಜಭವನದಲ್ಲಿ ಕಾಣದ ಕೈಗಳು~

ಬೀದರ್: `ವೀರಶೈವ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಲೋಕಾಯುಕ್ತ ಆಗುವುದಕ್ಕೆ ಬಿಡಬಾರದು ಎನ್ನುವ ಕಾರಣದಿಂದ ರಾಜಭವನದಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಇಲ್ಲಿ ಆರೋಪಿಸಿದರು.

~ಲೋಕಾಯುಕ್ತರಾಗಿ ನ್ಯಾಯಮೂರ್ತಿ ಬನ್ನೂರುಮಠ ಅವರ ನೇಮಕ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಅನಗತ್ಯ ವಿವಾದ ಸೃಷ್ಟಿ ಮಾಡಿದ್ದರು. ನ್ಯಾಯಮೂರ್ತಿ ಬನ್ನೂರುಮಠ ಅವರು ವೀರಶೈವರಾಗಿದ್ದೇ ಅದಕ್ಕೆ ಪ್ರಮುಖ ಕಾರಣವಾಗಿತ್ತು~ ಎಂದು ಅವರು ಪ್ರತಿಕ್ರಿಯೆ ನೀಡಿದರು.

 ~ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪನನ್ನು ತುಳಿಯುವುದಕ್ಕೆ ಕೆಲಸ ಮಾಡಿದ ಕೈಗಳೇ ಲೋಕಾಯುಕ್ತರ ನೇಮಕದ ಹಿಂದೆಯೂ ಇವೆ. ವೀರಶೈವ ಸಮುದಾಯದ ಏಳ್ಗೆಯನ್ನು ಸಹಿಸದ ಇಂತಹ ಶಕ್ತಿಗಳಿಗೆ ತಕ್ಕ ಪಾಠ ದೊರೆಯಲಿದೆ~ ಎಂದು ಅವರು ಎಚ್ಚರಿಸಿದರು.

ಎಂಟು ಪ್ರಶ್ನೆಗಳು

ತಮ್ಮ ವಿರುದ್ಧ ಆರೋಪ ಮಾಡಿರುವ ರಾಜ್ಯಪಾಲರು ಮತ್ತು ಮಾಧ್ಯಮಗಳಿಗೆ ಬನ್ನೂರಮಠ ಅವರು ಪತ್ರಿಕಾಗೋಷ್ಠಿಯಲ್ಲಿ ಎಂಟು ಪ್ರಶ್ನೆಗಳನ್ನು ಹಾಕಿದರು. ಪ್ರಶ್ನೆಗಳ ವಿವರ ಇಲ್ಲಿದೆ.

-ನ್ಯಾಯಾಂಗ ಬಡಾವಣೆಗೆ ಸಂಬಂಧಿಸಿದಂತೆ ಗೃಹ ನಿರ್ಮಾಣ ಸಹಕಾರ ಸಂಘದ ದಾಖಲೆಗಳನ್ನು ಪರಿಶೀಲಿಸದೇ, ನನ್ನಿಂದ ಪ್ರತಿಕ್ರಿಯೆಯನ್ನೂ ಪಡೆಯದೇ ಆಧಾರರಹಿತ ಆರೋಪ ಮಾಡಲು ಕಾರಣವೇನು?

-ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಹೊಂದಿರುವ ಒಬ್ಬರನ್ನು ಲೋಕಾಯುಕ್ತ, ಮತ್ತೊಬ್ಬರನ್ನು ಉಪ ಲೋಕಾಯುಕ್ತ ಹುದ್ದೆಗೆ ನೇಮಿಸುವಾಗ ಮಾಧ್ಯಮಗಳು ಮತ್ತು ಅತ್ಯುನ್ನತ ಸ್ಥಾನದಲ್ಲಿರುವವರು ಏಕೆ ಪ್ರಶ್ನಿಸಲಿಲ್ಲ? ಈ ವಿಷಯದಲ್ಲಿ ಆಯ್ಕೆ ಪದ್ಧತಿ ಏಕೆ? ಇಂತಹ ಇಬ್ಬಗೆ ನೀತಿಗೆ ಯಾವ ಸಮಜಾಯಿಷಿ ಇದೆ?

-ರಾಜಕೀಯ ದುರುದ್ದೇಶಗಳಿಗಾಗಿ ಇಂತಹ ಆರೋಪ ಮಾಡಲಾಗಿದೆಯೇ?

-ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವ ಹಗರಣಗಳು ಒಬ್ಬ ದಕ್ಷ ಲೋಕಾಯುಕ್ತ ಮತ್ತು ಸ್ವತಂತ್ರ ತನಿಖಾ ಸಂಸ್ಥೆಯಿಂದ ಹೊರಬರುತ್ತವೆ ಎಂಬ ಹೆದರಿಕೆಯಿಂದ ಹೀಗೆ ಮಾಡಲಾಗಿದೆಯೇ?

-ಇಂತಹ ನೇಮಕಾತಿಗೆ ಅರ್ಹವಾಗಿರುವವರ ವಿಷಯದಲ್ಲಿ ಅತ್ಯುನ್ನತ ಸಾರ್ವಜನಿಕ ಹುದ್ದೆಯಲ್ಲಿರುವವರು ಆರೋಪಗಳನ್ನು ಮಾಡುವಾಗ ಯಾವುದೇ ನೀತಿಸಂಹಿತೆ ಇಲ್ಲವೇ? ಆರೋಪ ಎದುರಿಸುತ್ತಿರುವವರಿಗೆ ಅವಕಾಶ ನೀಡಬಾರದೇ?

-ಅಮಾಯಕ ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಚಾರಿತ್ರ್ಯ ರಕ್ಷಣೆ ವಿಷಯದಲ್ಲಿ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರಿಗೆ ಯಾವುದೇ ಬಾಧ್ಯತೆ ಇಲ್ಲವೇ?

-ಒಬ್ಬ ವ್ಯಕ್ತಿಯ ಮನಶಾಂತಿ ಕದಡುವುದು, ಚಾರಿತ್ರ್ಯ ಹರಣದ ವಿಷಯದಲ್ಲಿ ಕಾನೂನು ಕ್ರಮ ಸಮರ್ಪಕವಾಗಿ ಇದೆಯೇ?

-ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬರ ವಿರುದ್ಧ ಸಾರ್ವಜನಿಕವಾಗಿ ಆಧಾರರಹಿತ ಆರೋಪ ಮಾಡುವವರ ವಿರುದ್ಧ ನ್ಯಾಯಾಂಗದ ಘನತೆ ರಕ್ಷಿಸುವ ಸಾಂವಿಧಾನಿಕ ಜವಾಬ್ದಾರಿ ಸ್ಥಾನದಲ್ಲಿರುವವರು ಕ್ರಮ ಜರುಗಿಸಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT