ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯವಾದಿಗಳಿಂದ ಅನ್ಯಾಯ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಕೇಂದ್ರ ಭಾಗದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿ ಸಾರ್ವಜನಿಕ ಜೀವನವನ್ನು ಅಸ್ತವ್ಯಸ್ತಗೊಳಿಸಿದ ವಕೀಲರ ವರ್ತನೆ ಅವರು ಪ್ರತಿನಿಧಿಸುವ ವೃತ್ತಿ ಸಮುದಾಯಕ್ಕೆ ತಕ್ಕುದಾಗಿರಲಿಲ್ಲ. ವಕೀಲರು ಒಡ್ಡಿದ ರಸ್ತೆ ತಡೆಯನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಮುಂದಾಗದ ಪೊಲೀಸರ ಹೊಣೆಗೇಡಿತನವೂ ಖಂಡನೀಯ.

ವಕೀಲರೊಬ್ಬರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದರೆನ್ನಲಾದ ಪ್ರಕರಣ ಈ ಘಟನೆಗೆ ಕಾರಣ. ದೌರ್ಜನ್ಯದ ಪ್ರಕರಣಗಳಲ್ಲಿ ನ್ಯಾಯ ಮತ್ತು ಪರಿಹಾರ ಪಡೆಯುವುದಕ್ಕೆ ಕಾನೂನು ಪ್ರಕಾರ ಯಾವ ಮಾರ್ಗವಿದೆ ಎಂಬುದು ವಕೀಲರಿಗೆ ಗೊತ್ತಿಲ್ಲದ ಸಂಗತಿಯಲ್ಲ.

ಆದರೆ ಕಾನೂನು ಮಾರ್ಗವನ್ನು ಬಿಟ್ಟು ರಸ್ತೆಗಿಳಿದು ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೆ, ಯಾವುದೇ ಬಗೆಯ ಸಂಧಾನ ಮಾತುಕತೆಗಳಿಗೂ ಒಪ್ಪದೆ ಹಠಮಾರಿ ಧೋರಣೆಯನ್ನು ಪ್ರದರ್ಶಿಸಿದ್ದು ಸಲ್ಲದ ವರ್ತನೆ.

ರಸ್ತೆ ತಡೆಯನ್ನು ತೆರವುಗೊಳಿಸಲು ಬಂದ ಪೊಲೀಸರು ಮತ್ತು ತಮ್ಮನ್ನು ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ವಕೀಲರ ದುಂಡಾವರ್ತನೆ, ನ್ಯಾಯಕ್ಕಾಗಿ ಹೋರಾಟ ನಡೆಸುವ ನ್ಯಾಯವಾದಿಗಳಿಗೆ ಶೋಭೆ ತರುವಂಥದ್ದಲ್ಲ.

ಅಶಿಕ್ಷಿತ ಜನರಂತೆ, ತೋಳ್ಬಲವನ್ನು ಮಾತ್ರವೇ ಅವಲಂಬಿಸಿದವರಂತೆ, ತಮ್ಮ ಬೇಡಿಕೆಯನ್ನು ತಕ್ಷಣವೇ ಒಪ್ಪಿ ಕ್ರಮ ಕೈಗೊಳ್ಳಬೇಕು ಎಂದು ಬೀದಿಗಿಳಿದು ನಡೆಸಿದ ಈ ಹೋರಾಟದ ವಿಧಾನ ಎಷ್ಟರಮಟ್ಟಿಗೆ ಸಮರ್ಥನೀಯ ಎಂಬುದನ್ನು ನ್ಯಾಯವಾದಿಗಳ ವೃತ್ತಿ ಸಂಘಟನೆಗಳು ಹೇಳಬೇಕಾಗಿದೆ.
 
ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದ ಘಟನೆಯನ್ನು ಬಗೆಹರಿಸಿಕೊಳ್ಳಲು ನಗರದ ಕೇಂದ್ರ ಭಾಗದಲ್ಲಿ ಏಳು ಗಂಟೆಗಳ ಕಾಲ ರಸ್ತೆ ತಡೆಯಂಥ ಹೋರಾಟ ಕ್ರಮ ಅವಶ್ಯಕವೆಂದರೆ ಈ ವೃತ್ತಿ ಸಮುದಾಯದ ನಾಗರಿಕ ಪ್ರಜ್ಞೆಯ ಬಗ್ಗೆಯೇ ಸಾರ್ವಜನಿಕರು ಸಂಶಯಪಡುವಂತಾಗುತ್ತದೆ.

 ವಕೀಲರು ಪೂರ್ವಸೂಚನೆ ನೀಡದೆ ಆರಂಭಿಸಿದ ರಸ್ತೆ ತಡೆಯನ್ನು ತೆರವುಗೊಳಿಸಲು ಪೊಲೀಸರು ವಿಫಲರಾಗಿದ್ದಾರೆ. ಆಸ್ಪತ್ರೆಗಳಿಗೆ ತುರ್ತಾಗಿ ಹೋಗಬೇಕಾದ ರೋಗಿಗಳು, ಶಾಲೆ ಮುಗಿಸಿ ಮನೆಗೆ ತೆರಳಬೇಕಾದ ಮಕ್ಕಳು, ವ್ಯಾಪಾರ ವಹಿವಾಟು, ಕಚೇರಿ ಕೆಲಸಗಳಿಗಾಗಿ ಓಡಾಟ ನಡೆಸುವವರು, ಸಂಚಾರದಟ್ಟಣೆಯಲ್ಲಿ ಸಿಲುಕಿಕೊಂಡು ಸಂಕಷ್ಟಪಡುವುದಕ್ಕೆ ಪೊಲೀಸರು ನಿರ್ಲಕ್ಷ್ಯವೂ ಕಾರಣ.
 
ಅದು ಪೊಲೀಸರ ಕರ್ತವ್ಯದಲ್ಲಿ ಲೋಪ. ವಕೀಲರು ಬೀದಿಗಿಳಿದು ಪ್ರತಿಭಟನೆ ನಡೆಸಿದಾಗಲೆಲ್ಲ ಪೊಲೀಸರ ಉದಾಸೀನ ಧೋರಣೆ ಇದು ಮೊದಲೇನೂ ಅಲ್ಲ. ವಕೀಲರೊಂದಿಗೆ ಸಂಘರ್ಷಕ್ಕೆಇಳಿದರೆ ನ್ಯಾಯಾಂಗದ ಕೋಪಕ್ಕೆ ಗುರಿಯಾಗಬಹುದೆಂಬ ಅಳುಕು ಪೊಲೀಸ್ ಇಲಾಖೆಗೆ ಇರುವಂತೆ ತೋರುತ್ತದೆ.

ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡುವ ನ್ಯಾಯವಾದಿಗಳು, ಜನತೆಗೆ ರಕ್ಷಣೆ ನೀಡಬೇಕಾದ ಪೊಲೀಸರು ಪರಸ್ಪರ ಮುಖಾಮುಖಿಯಾದಾಗ ಹೆಚ್ಚಾಗಿ ಸಂಕಷ್ಟಕ್ಕೆ ಒಳಗಾಗುವವರು ಸಾಮಾನ್ಯ ಜನತೆ ಎಂಬುದು ಈ ಘಟನೆಯಲ್ಲಿ ನಿಚ್ಚಳವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಜನತೆಯ ನೆರವಿಗೆ ಬರಬೇಕಾಗುತ್ತದೆ.

ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧಕ್ಕೆ ಕೂಗಳತೆ ದೂರದಲ್ಲಿಯೇ ವಕೀಲರ ರಸ್ತೆ ತಡೆ ಇಡೀ ದಿನ ಮುಂದುವರಿದಿದ್ದರೂ ಅದರತ್ತ ಒಳಾಡಳಿತ ನಿರ್ವಹಣೆ ಹೊಣೆ ಹೊತ್ತ ಗೃಹಸಚಿವರ ಚಿತ್ತ ಹರಿಯಲೇ ಇಲ್ಲ. ವಕೀಲರು ಮತ್ತು ಪೊಲೀಸರಂತೆ ಸರ್ಕಾರವೂ ಜನವಿರೋಧಿಯಾಗಿರುವಂತೆ ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT