ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ನೇಮಕಾತಿಯಲ್ಲೂ ಸರ್ಕಾರದ ಮಾತಿಗೆ ಮನ್ನಣೆ

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನ್ಯಾಯಾಂಗ ನೇಮಕಾತಿಯಲ್ಲೂ ಸರ್ಕಾರದ ಮಾತನ್ನು ಗಂಭೀರವಾಗಿ ಪರಿಗಣಿಸಲು ಅವಕಾಶ ಒದಗಿಸುವ  `120ನೇ ಸಂವಿಧಾನ ತಿದ್ದುಪಡಿ ಮಸೂದೆ -2013'ಯನ್ನು ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.

ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾನೂನು ಸಚಿವ ಕಪಿಲ್ ಸಿಬಲ್, ಸದ್ಯ ಜಾರಿಯಲ್ಲಿರುವ ನ್ಯಾಯಮೂರ್ತಿಗಳ ನೇಮಕಾತಿ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿದೆ ಎಂದರು. ಜೊತೆಗೆ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸರ್ಕಾರದ ಮಾತೂ ನಡೆಯಬೇಕು ಎಂದು ಒತ್ತಿ ಹೇಳಿದರು.

`ಹೈಕೋರ್ಟ್‌ಗಳು ಸುಪ್ರೀಂಕೋರ್ಟ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲ. ಬದಲಾಗಿ ಅವು ಸ್ವತಂತ್ರ ಸಂಸ್ಥೆಗಳು. ತಮ್ಮ ನೇಮಕಾತಿಗಾಗಿ ಹೈಕೋರ್ಟ್ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್‌ನತ್ತ ನೋಡುವಂತಾಗಬಾರದು. ಇದು ಹೈಕೋರ್ಟ್‌ಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಧಕ್ಕೆ ತರುತ್ತದೆ' ಎಂದು ಸಿಬಲ್ ಅಭಿಪ್ರಾಯಪಟ್ಟರು.   

ಸದ್ಯ ಜಾರಿಯಲ್ಲಿರುವ ನ್ಯಾಯಮೂರ್ತಿಗಳ ನೇಮಕಾತಿ ವ್ಯವಸ್ಥೆ ಪಾರದರ್ಶಕವಾಗಿಲ್ಲ ಎಂದ ಅವರು, ಇದಕ್ಕಾಗಿ ಸುಪ್ರೀಂಕೋರ್ಟ್ ಹಿಡಿತದಿಂದ ಮುಕ್ತವಾಗುವ  ಪ್ರತ್ಯೇಕ ಹಾಗೂ ಸ್ವತಂತ್ರ `ನ್ಯಾಯಾಂಗ ನೇಮಕ ಆಯೋಗ' ರಚಿಸಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ ಎಂದು ತಿಳಿಸಿದರು.

ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ಮಧ್ಯೆ ಇರುವ ಅತಿ ಸೂಕ್ಷ್ಮ ಸಮತೋಲನಕ್ಕೆ ಸದ್ಯದ ನೇಮಕಾತಿ ವ್ಯವಸ್ಥೆಯು ತೀವ್ರ ಧಕ್ಕೆ ತರುತ್ತಿದ್ದು ಅದನ್ನು ಬದಲಿಸುವುದು ಅಗತ್ಯವಿದೆ ಎಂದು ಸಿಬಲ್ ಪ್ರತಿಪಾದಿಸಿದರು.

`ಇತಿಹಾಸದ ನೆನಪಿನಲ್ಲಿ ಭವಿಷ್ಯವನ್ನು ಅಪ್ಪಿಕೊಳ್ಳುವ' ಸಂದರ್ಭ ಈಗ ಎದುರಾಗಿದೆ ಎಂದ ಅವರು, 1993ರಲ್ಲಿ ಸುಪ್ರೀಂಕೋರ್ಟ್ ಕೂಡ ನ್ಯಾಯಮೂರ್ತಿಗಳ ನೇಮಕಾತಿ ವ್ಯವಸ್ಥೆ ಬದಲಿಸಲು ಸಲಹೆ ನೀಡಿತ್ತು ಎಂದರು.

ನ್ಯಾಯಾಂಗದ ಕೆಲವು ಅಸರ್ಮಪಕ ಕಾರ್ಯವೈಖರಿಯ ವಿರುದ್ಧ ಪಕ್ಷಭೇದ ಮರೆತು ವಾಗ್ದಾಳಿ ನಡೆಸಿದ ಆಡಳಿತ, ವಿರೋಧ  ಪಕ್ಷಗಳ ಸದಸ್ಯರು ಸಿಬಲ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT