ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ಬಂಧನಕ್ಕೆ ಸಂಜೀವ್ ಭಟ್

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ನರೇಂದ್ರ ಮೋದಿ ವಿರುದ್ಧ ಗೋಧ್ರಾ ಘಟನೆ ನಂತರ ನಡೆದ ಗಲಭೆಗೆ ಪ್ರಚೋದಿಸಿದ್ದರು ಎಂದು ಆರೋಪಿ   ಸಿದ್ದ ಮತ್ತು ಶುಕ್ರವಾರ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಆರೋಪಿಯನ್ನು 7 ದಿನಗಳ ಕಾಲ ತನ್ನ ವಶಕ್ಕೆ ನೀಡುವಂತೆ ಪೊಲೀಸರು ಮಾಡಿಕೊಂಡ ಮನವಿಯನ್ನು ಹೆಚ್ಚುವರಿ ಸಿಜೆಎಂ ನ್ಯಾಯಾಧೀಶ ಬಿ.ಜಿ.ದೋಶಿ ತಿರಸ್ಕರಿಸಿ, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಶನಿವಾರ ಆದೇಶಿಸಿದರು.

ಇದಕ್ಕೆ ಮುನ್ನ ಬೆಳಿಗ್ಗೆ, ಸಂಜೀವ್ ಭಟ್ ಪತ್ನಿ ಶ್ವೇತಾ ಭಟ್, ತಮ್ಮ ಪತಿಯ ಜೀವಕ್ಕೆ ಪೊಲೀಸರಿಂದ ಅಪಾಯವಿದೆ ಇದೆ ಎಂದು ಆಪಾದಿಸಿದ್ದರು. ಆದರೆ ಅಹಮದಾಬಾದ್ ನಗರ ಪೊಲೀಸ್ ಕಮಿಷನರ್ ಸುಧೀರ್ ಸಿನ್ಹಾ  ಇದನ್ನು ತಳ್ಳಿಹಾಕಿದ್ದರು.

`ನನ್ನ ಪತಿ ಸಂಜೀವ್ ಭಟ್ ವಿರುದ್ಧ ಘಾಟ್‌ಲೊಡಿಯಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅವರನ್ನು ಅಪರಾಧ ವಿಭಾಗದ ಪೊಲೀಸರ ವಶಕ್ಕೆ ನೀಡಲಾಗಿದೆ. ಈ ವಿಭಾಗದವರು ಎನ್‌ಕೌಂಟರ್ ನಡೆಸುವುದಕ್ಕೆ ಹೆಸರಾದವರು. ಆದ್ದರಿಂದ ಅವರ ಜೀವಕ್ಕೆ ಕುತ್ತು ಬರಬಹುದು ಎಂಬ ಆತಂಕ ಉಂಟಾಗಿದೆ. ಆದ್ದರಿಂದ ನಾನು ಡಿಜಿಪಿ ಮತ್ತು ಸಿಜೆಎಂ ನ್ಯಾಯಾಲಯಕ್ಕೆ  ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಮಾಡಿದ್ದೇನೆ~ ಎಂದು ಶ್ವೇತಾ ಹೇಳಿದ್ದರು.

ಪೊಲೀಸರನ್ನು ತಡೆದ ಪತ್ನಿ: ಭಟ್ ಮನೆ ಮೇಲೆ ಶನಿವಾರ ಮತ್ತೆ ದಾಳಿ ನಡೆಸಲು ತೆರಳಿದ ಪೊಲೀಸರನ್ನು ಶ್ವೇತಾ ತಡೆದು, ವಾಪಸು ಕಳುಹಿಸಿದ್ದರು.

`ನಮ್ಮ ಮನೆಗೆ 30- 35 ಮಂದಿ ಪೊಲೀಸರು ಶನಿವಾರ ತಪಾಸಣೆ ನಡೆಸಲು ಬಂದರು. ಆದರೆ ಅವರು ಶುಕ್ರವಾರಕ್ಕೆ ಸೀಮಿತವಾಗಿದ್ದ ಶೋಧನಾ ವಾರೆಂಟ್‌ನಿಂದ  ಮತ್ತೆ ಶೋಧ ನಡೆಸಲು ಮುಂದಾಗಿದ್ದರು. ಇದಕ್ಕೆ ನಾನು ಅವಕಾಶ ಕೊಡಲಿಲ್ಲ~ ಎಂಬುದಾಗಿ ಶ್ವೇತಾ ತಿಳಿಸಿದ್ದಾರೆ.

ಹಿನ್ನೆಲೆ: ಗೋಧ್ರಾ ರೈಲು ಹತ್ಯಾಕಾಂಡ ನಡೆದ (27.2.02) ಕೆಲವು ಗಂಟೆಗಳ ನಂತರ ಮುಖ್ಯಮಂತ್ರಿ ನರೇಂದ್ರ ಮೋದಿ ಸಭೆಯೊಂದನ್ನು ಕರೆದಿದ್ದರು ಎಂಬ ಅಂಶವಿದ್ದ ಸುಳ್ಳು ಪ್ರಮಾಣ ಪತ್ರಕ್ಕೆ ಸಹಿ ಮಾಡುವಂತೆ ಸೂಚಿಸಿದ್ದ ಸಂಜೀವ್ ಭಟ್ ತಮಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಪೊಲೀಸ್ ಕಾನ್‌ಸ್ಟೆಬಲ್ ಕೆ.ಡಿ. ಪಂತ್ ದೂರು ನೀಡಿದ್ದರು. ಪಂತ್ ಆ ಸಂದರ್ಭದಲ್ಲಿ ಭಟ್ ಕೆಳಗೆ ಕಾರ್ಯ ನಿರ್ವಹಿಸುತ್ತಿದ್ದರು. ದೂರಿನ ಹಿನ್ನೆಲೆಯಲ್ಲಿ  ಭಟ್ ಅವರನ್ನು ಶುಕ್ರವಾರ ಬಂಧಿಸಿ, ಭಾರತೀಯ ದಂಡ ಸಂಹಿತೆ (ಐಪಿಸಿ) 341 (ಅಕ್ರಮ ತಡೆ), 342 (ಅಕ್ರಮ ಬಂಧನ), 195 (ಸುಳ್ಳು ಸಾಕ್ಷ್ಯ ) ಮತ್ತು 189 (ಸರ್ಕಾರಿ ನೌಕರಿನಿಗೆ ಹಲ್ಲೆ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗೋಧ್ರಾ ನಂತರ ನಡೆದ ಗಲಭೆಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಚೋದಿಸಿದ್ದರೆಂದು ಆರೋಪಿಸಿದ್ದ ಭಟ್, ಆ ಬಗ್ಗೆ  ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದರು.

ಐಪಿಎಸ್ ಅಧಿಕಾರಿಯಾದ ಭಟ್ ವಿರುದ್ಧ ಅನುಮತಿ ಪಡೆಯದೆ ಕರ್ತವ್ಯಕ್ಕೆ ಗೈರು ಹಾಜರಾದ ಪ್ರಕರಣವನ್ನು ಗುಜರಾತ್‌ನ ಗೃಹ ಇಲಾಖೆ ದಾಖಲಿಸಿತ್ತು.

ಬಿಡುಗಡೆಗೆ ಒತ್ತಾಯ:  ಭಟ್ ಅವರನ್ನು ಗುಜರಾತ್ ಸರ್ಕಾರ ಕಟ್ಟುಕತೆ ಸೃಷ್ಟಿಸಿ ಬಂಧಿಸಿದೆ. ಮೋದಿ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ಭಟ್ ಅವರಿಂದ ತೊಂದರೆ ಎದುರಾಗಬಹುದೆಂದು ಹೀಗೆ ಮಾಡಲಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಸಿಪಿಎಂ ಪಾಲಿಟ್ ಬ್ಯುರೊ ನವದೆಹಲಿಯಲ್ಲಿ ಒತ್ತಾಯಿಸಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT