ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ಬಂಧನಕ್ಕೆ ಸಬ್‌ಇನ್ಸ್‌ಪೆಕ್ಟರ್

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಕ್ತಿಯೊಬ್ಬರನ್ನು ಗೃಹ ಬಂಧನದಲ್ಲಿರಿಸಿ ಮೂರು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮೋಹನ್‌ಕುಮಾರ್ ಮತ್ತು ಕಾನ್‌ಸ್ಟೆಬಲ್ ದೊಡ್ಡಸಿದ್ದಯ್ಯ ಅವರನ್ನು ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇಬ್ಬರೂ ಆರೋಪಿಗಳನ್ನು ಬುಧವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ಎದುರು ಗುರುವಾರ ಬೆಳಿಗ್ಗೆ ಹಾಜರುಪಡಿಸಲಾಯಿತು. ಇಬ್ಬರನ್ನೂ ಇದೇ 26 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ಆದೇಶ ಹೊರಡಿಸಿದರು.

ಎಎಸ್‌ಐಗೂ ಜೈಲು: ಲಂಚ ಪಡೆಯುತ್ತಿದ್ದಾಗ ಸೋಮವಾರ ಲೋಕಾಯುಕ್ತ ಪೊಲೀಸರಿಗೆ ಸೆರೆಸಿಕ್ಕ ನಂತರ ಪರಾರಿಯಾಗಿದ್ದ ಸೆಂಟ್ರಲ್ ಪೊಲೀಸ್ ಠಾಣೆ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಗಂಗರಾಜಯ್ಯ ಅವರಿಗೆ ಶನಿವಾರದವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋಮವಾರ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಗಂಗರಾಜಯ್ಯ ಅವರನ್ನು ಬಂಧಿಸಲಾಗಿತ್ತು.

ಆದರೆ, ಬಂಧನದಲ್ಲಿದ್ದಾಗ ಸಮವಸ್ತ್ರ ಬದಲಿಸುವುದಾಗಿ ಹೇಳಿ ಠಾಣೆಯಿಂದಲೇ ನಾಪತ್ತೆಯಾಗಿದ್ದರು. ಗುರುವಾರ ಆರೋಪಿಯನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು, ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಯನ್ನು ಶನಿವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ ನ್ಯಾಯಾಧೀಶರು, ಜಾಮೀನು ಅರ್ಜಿಯ ವಿಚಾರಣೆಯನ್ನು ಅದೇ ದಿನಕ್ಕೆ ಮುಂದೂಡಿದರು.

ಡಿಪ್ಲೊಮಾ ವಿದ್ಯಾರ್ಥಿ ಆತ್ಮಹತ್ಯೆ
ಅನಾರೋಗ್ಯದಿಂದ ಬಳಲುತ್ತಿದ್ದ ಡಿಪ್ಲೊಮಾ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರದಲ್ಲಿ ಬುಧವಾರ ನಡೆದಿದೆ. ರಾಜರಾಜೇಶ್ವರಿನಗರದಲ್ಲಿರುವ ಪಂಚಶೀಲ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೊದಲ ವರ್ಷದ ಡಿಪ್ಲೊಮಾ ಓದುತ್ತಿದ್ದ ಮಹಾಂತೇಶ್ ಹಿರೇಮಠ್ (19) ಆತ್ಮಹತ್ಯೆ ಮಾಡಿಕೊಂಡವರು. ಅವರು ಬಸವೇಶ್ವರ ವಿದ್ಯಾರ್ಥಿ ನಿಲಯದಲ್ಲಿ ನೆಲೆಸಿದ್ದರು. ಕೆಲ ದಿನಗಳಿಂದ ಅವರು ಜ್ವರದಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ರ ಬರೆದಿಟ್ಟಿರುವ ಮಹಾಂತೇಶ್ `ನನ್ನ ಸಾವಿಗೆ ನಾನೇ ಕಾರಣ~ ಎಂದು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತ: ಬೈಕ್ ಸವಾರ ಸಾವು
ಹೊಸಕೋಟೆ:
ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದುದರಿಂದ ಅದರ ಸವಾರ ಮುಳಬಾಗಲು ಮೂಲದ ಚಂದ್ರಪ್ಪ(40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆದ್ದಾರಿ 207 ರ ಮಲ್ಲಸಂದ್ರ ಬಳಿಯ ತಿರುವು ರಸ್ತೆಯಲ್ಲಿ ಗುರುವಾರ ಈ ಅಪಘಾತ ನಡೆದಿದೆ.


ಹಿಂಬದಿ ಕುಳಿತಿದ್ದ ವೇಣು ಎಂಬುವವರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದ್ರಪ್ಪ ಚನ್ನಸಂದ್ರದಲ್ಲಿ ವಾಸವಾಗಿದ್ದು ತನ್ನ ಅಕ್ಕನ ಮಗ ವೇಣು ಜೊತೆ ಕಾರ್ಯನಿಮಿತ್ತ ಕೈವಾರಕ್ಕೆ ಹೋಗಿದ್ದು ಅಲ್ಲಿಂದ ಹಿಂತಿರುಗುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆಯಿತು. ತಿರುಮಲಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT