ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ- ಸರ್ಕಾರದ ಸಂಘರ್ಷ ತಾರಕಕ್ಕೆ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್(ಪಿಟಿಐ/ಐಎಎನ್‌ಎಸ್): ಕುತೂಹಲ ಕೆರಳಿಸಿರುವ ಮೆಮೊಗೇಟ್ ಮತ್ತು ಭ್ರಷ್ಟಾಚಾರ ಹಗರಣಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಸರ್ಕಾರ- ನ್ಯಾಯಾಂಗದ ನಡುವಿನ ಸಂಘರ್ಷ ತಾರಕಕ್ಕೆ ಏರಿದ್ದು,  ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. 

 ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಹಳೆಯ ಪ್ರಕರಣವೊಂದಕ್ಕೆ ಸುಪ್ರೀಂಕೋರ್ಟ್ ಮರುಜೀವ ನೀಡಿದೆ. ಇದು ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರಿಗೆ ಥಳಕು ಹಾಕಿಕೊಳ್ಳುವ ಸಾಧ್ಯತೆ ಕಾಣುತ್ತಿದೆ. 

ಸುಪ್ರೀಂಕೋರ್ಟ್‌ನ `ನ್ಯಾಯಾಂಗ ನಿಂದನೆ~ ನೋಟಿಸ್ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳ (ಎನ್‌ಎಬಿ) ಗಿಲಾನಿ ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಪ್ರಕರಣ ದಾಖಲಿಸಲು ಚಿಂತನೆ ನಡೆಸಿದೆ. ಒಂದು ವೇಳೆ ಈ ಆರೋಪ ಸಾಬೀತಾದರೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಗಿಲಾನಿ 14 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಅಭಿವೃದ್ಧಿ ಕಂಪೆನಿಯ ಅಧ್ಯಕ್ಷ ಸ್ಥಾನಕ್ಕೆ, ಕೋರ್ಟ್‌ನಿಂದ ಶಿಕ್ಷೆಗೆ ಒಳಗಾದ ಅದ್ನಾನ್ ಖ್ವಾಜಾ ಅವರನ್ನು ನೇಮಕ ಮಾಡಿರುವ ಪ್ರಕರಣ ಪ್ರಧಾನಿ ಕೊರಳಿಗೆ ಉರುಳಾಗುವ ಸಾಧ್ಯತೆ ಇದೆ.

ಮೇಲ್ಮನವಿ: ಈ ಮಧ್ಯೆ ಮತ್ತೊಂದು ಬೆಳವಣಿಗೆಯಲ್ಲಿ, ಸುಪ್ರೀಂಕೋರ್ಟ್ ನೀಡಿದ ನ್ಯಾಯಾಂಗ ನಿಂದನೆ ನೋಟಿಸ್ ಪ್ರಶ್ನಿಸಿ ಗಿಲಾನಿ ಮಂಗಳವಾರ ಮೇಲ್ಮನವಿ ಸಲ್ಲಿಸಿದ್ದಾರೆ.

ಸುಪ್ರೀಂಕೋರ್ಟ್‌ನ ರಿಜಿಸ್ಟ್ರಾರ್ ಬಳಿ ಅರ್ಜಿ ಸಲ್ಲಿಸಿದ ಪ್ರಧಾನಿ ಪರ ವಕೀಲ ಜಫರ್‌ವುಲ್ಲಾ, ಸಂವಿಧಾನದ 248-1ನೇ ಕಲಂ ಅನ್ವಯ ರಾಷ್ಟ್ರಪತಿಯಂತೆಯೇ ಪ್ರಧಾನಿ ಕೂಡ ರಿಯಾಯಿತಿ ಹೊಂದಿದ್ದಾರೆ, ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಸ್ವಿಸ್ ಅಧಿಕಾರಿಗಳಿಗೆ ಪತ್ರ ಬರೆಯುವುದು ಪ್ರಧಾನಿಯ ಕೆಲಸವಲ್ಲ ಎಂದು ವಾದಿಸಿದ್ದಾರೆ.

ಸರ್ಕಾರದ ಅನೇಕ ಉನ್ನತ ಹುದ್ದೆಗಳಿಗೆ ಗಿಲಾನಿ ತಮ್ಮ ಆಪ್ತರನ್ನು ಕಾನೂನುಬಾಹಿರವಾಗಿ ನೇಮಕ ಮಾಡುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ, ಈ ಪ್ರಕರಣಗಳ ತನಿಖೆಗೆ ಭ್ರಷ್ಟಾಚಾರ ನಿಗ್ರಹ ದಳ ಆಸಕ್ತಿ ತೋರುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಈಚೆಗೆ ಎನ್‌ಎಬಿ ಅಧ್ಯಕ್ಷ ಫಾಶಿ ಬೊಖಾರಿ ಅವರಿಗೆ ಛೀಮಾರಿ ಹಾಕಿತ್ತು.

ಆ ನಂತರ ಎಚ್ಚೆತ್ತುಕೊಂಡ ಎನ್‌ಎಬಿ, ಹಳೆಯ ಪ್ರಕರಣಗಳನ್ನು ಕೆದಕುತ್ತಿದ್ದು ಅಧಿಕೃತವಾಗಿ ಪ್ರಕರಣ ದಾಖಲಿಸಲು ಮುಂದಾಗಿದೆ. ಪ್ರಧಾನಿ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಎನ್‌ಎಬಿ ಅಧ್ಯಕ್ಷರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಧಿ ಅಮಾನತು ಪ್ರಶ್ನೆ: ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯದರ್ಶಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ನಯೀಮ್ ಖಾಲಿದ್ ಲೋಧಿ ಅವರನ್ನು ವಜಾ ಮಾಡಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ.

ಹಗರಣದ ತನಿಖೆ ಇನ್ನೂ ಪೂರ್ಣಗೊಳ್ಳದ ಕಾರಣ ಲೋಧಿ ವಜಾ ಆದೇಶವನ್ನು ಹಿಂತೆಗೆದುಕೊಳ್ಳಲು ಪ್ರಧಾನಿಗೆ ನಿರ್ದೇಶನ ನೀಡುವಂತೆ ವಕೀಲ ತಾರಿಖ್ ಅಸಾದ್ ಅರ್ಜಿ ಸಲ್ಲಿಸಿದ್ದಾರೆ.

ಜರ್ದಾರಿ ವಕೀಲರಿಗೆ ಅರ್ಧಚಂದ್ರ: ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಆಪ್ತ ಮತ್ತು ಅವರ ವಕೀಲ ಬಾಬರ್ ಅವಾನ್ ಅವರ ವಕೀಲಿ ವೃತ್ತಿಯ ಅನುಮತಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ನೇತೃತ್ವದ 11 ನ್ಯಾಯಮೂರ್ತಿಗಳ ಪೀಠ ಈ ಆದೇಶ ನೀಡಿದ್ದು, ಅವಾನ್ ತಮಗೆ ನೀಡಿದ್ದ ನ್ಯಾಯಾಂಗ ನಿಂದನೆ ನೋಟಿಸ್‌ಗೆ ಉತ್ತರಿಸದ ವರ್ತನೆಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.

ನ್ಯಾಯಾಂಗ ನಿಂದನೆ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೋರಿ ಸಲ್ಲಿಸಿದ್ದ ಅವಾನ್ ಅವರ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ತೆರವಾದ ಸ್ಥಾನಕ್ಕೆ ಹೊಸದಾಗಿ ವಕೀಲರೊಬ್ಬರನ್ನು ನೇಮಕ ಮಾಡಿಕೊಳ್ಳುವಂತೆ ಜರ್ದಾರಿ ಅವರಿಗೆ ಹೇಳಿದೆ. ಕಾನೂನು ಸಚಿವರಾಗಿದ್ದ ಅವಾನ್ ಕಳೆದ ವರ್ಷ ರಾಜೀನಾಮೆ ಸಲ್ಲಿಸಿದ ನಂತರ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಕ್ಷದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.

ಅನೇಕ ಪ್ರಮುಖ ಪ್ರಕರಣಗಳಲ್ಲಿ ಸರ್ಕಾರದ ಪರ ವಕಾಲತ್ತು ವಹಿಸಿದ್ದರು. ಹಲವು ಸಂದರ್ಭಗಳಲ್ಲಿ ನ್ಯಾಯಾಲಯದ ನಿರ್ಣಯಗಳನ್ನು ಬಹಿರಂಗವಾಗಿ ಟೀಕಿಸಿ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT