ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ಪರಿಣಾಮ'

ನ್ಯಾಯಾಂಗ ನೇಮಕಾತಿ: ಸಂವಿಧಾನ ತಿದ್ದುಪಡಿ ಮಸೂದೆ
Last Updated 7 ಸೆಪ್ಟೆಂಬರ್ 2013, 6:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ನ್ಯಾಯಾಂಗ ನೇಮಕಾತಿಯಲ್ಲೂ ಸರ್ಕಾರದ ಮಾತು ಗಂಭೀರವಾಗಿ ಪರಿಗಣಿಸಲು ಅವಕಾಶ ಒದಗಿಸುವ, ರಾಜ್ಯಸಭೆಯಲ್ಲಿ ಅಂಗೀಕರಿಸಿದ ಸಂವಿಧಾನ ತಿದ್ದುಪಡಿ ಮಸೂದೆಯಿಂದ ಭಾರತೀಯ ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ' ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅಭಿಪ್ರಾಯಪಟ್ಟರು.

ನವನಗರದಲ್ಲಿರುವ ಕಾನೂನು ವಿವಿ ಸಭಾಂಗಣದಲ್ಲಿ `ಭಾರತೀಯ ಸಂವಿಧಾನದ ಮೂಲತತ್ವಗಳು ಮತ್ತು ಸವಾಲುಗಳು' ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, `ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಕೇಂದ್ರದಲ್ಲಿ ಏಕಪಕ್ಷ ಆಡಳಿತ ಸಾಧ್ಯವಾಗದೆ ಹಲವು ಪಕ್ಷಗಳ ಬೆಂಬಲ ಅಗತ್ಯವಾಗಿದೆ.

5-6 ಸಂಸದರನ್ನೊಳಗೊಂಡ ಸಣ್ಣಪುಟ್ಟ ಪಕ್ಷಗಳು ಸರ್ಕಾರದ ಅಸ್ತಿತ್ವವನ್ನು ನಿರ್ಣಯಿಸುತ್ತಿರುವುದರಿಂದ ಅವು ತಮಗೆ ಬೇಕಾದವರನ್ನು ನ್ಯಾಯಾಧೀಶರನ್ನಾಗಿ ಆಯ್ಕೆ, ವರ್ಗಾವಣೆ ಮಾಡುವಂತೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇಲ್ಲದಿದ್ದರೆ ಬೆಂಬಲ ವಾಪಸ್ ಪಡೆಯುವ ಬೆದರಿಕೆ ಒಡ್ಡಬಹುದು' ಎಂದು ಅವರು ಆತಂಕ ವ್ಯಕ್ತಪಡಿಸಿದರು.

`ಭಾರತದ ಸಂವಿಧಾನದ ಮೂಲತತ್ವಗಳನ್ನು ಅರ್ಥಮಾಡಿಕೊಳ್ಳಲು ಇಲ್ಲಿನ ಚಾರಿತ್ರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಹಿನ್ನೆಲೆಯ ಕನಿಷ್ಠ ತಿಳಿವಳಿಕೆ ಅಗತ್ಯವಾಗಿದೆ. ಇಲ್ಲಿನ ಧರ್ಮಗಳು, ಜಾತಿಗಳು, ಉಪ ಜಾತಿ, ಉಪ ಸಂಸ್ಕೃತಿ, ಮೇಲ್ಜಾತಿ-ಮೇಲ್ವರ್ಗ, ಕೆಳಜಾತಿ- ಕೆಳವರ್ಗವನ್ನು ಪ್ರತ್ಯೇಕಿಸಲು ಸಾಧ್ಯವಾಗದ ವಾಸ್ತವವನ್ನು ಅರ್ಥ ಮಾಡಿಕೊಳ್ಳದೆ ಸಾಮಾಜಿಕ ನ್ಯಾಯವನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ' ಎಂದರು.

`ಭಾರತೀಯ ಸಂವಿಧಾನ ಕರಡು ರಚನೆಯ ಹಂತಕ್ಕೆ ಬರುವ ಸಂದರ್ಭಕ್ಕೆ ನೂರಾರು ಬಾರಿ ತಿದ್ದುಪಡಿಗೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂಸತ್ತಿನಲ್ಲಿ ಯಾವುದೇ ಚರ್ಚೆಗಳಿಲ್ಲದೆ ಮಸೂದೆಗಳು ಮಂಜೂರುಗೊಳ್ಳುತ್ತಿರುವುದು, ವ್ಯವಸ್ಥೆ ಅದೆಷ್ಟು ಅಧೋಗತಿಗೆ ಬಂದಿದೆ ಎನ್ನುವುದನ್ನು ತೋರಿಸುತ್ತದೆ' ಎಂದರು.

`ಶಿಕ್ಷಣ, ಆರೋಗ್ಯ, ಸಾರಿಗೆ ಹೀಗೆ ಎಲ್ಲ ಕ್ಷೇತ್ರವನ್ನೂ ಖಾಸಗೀಕರಣ ಆವರಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯಸಭೆ, ವಿಧಾನಸಭೆಯನ್ನೂ ನಡೆಸಲು ನಾವು ಖಾಸಗಿಯವರಿಗೆ ಕೊಡಬೇಕಾಗಿ ಬರಬಹುದೇನೋ' ಎಂದು ವ್ಯಾಖ್ಯಾನಿಸಿದ ಅವರು, `ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಯ ಸ್ಪರ್ಧೆಯಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಬಲಾಢ್ಯರಾದವರು ಗೆಲ್ಲುತ್ತಾರೆ. ಈ ಹಿನ್ನೆಲೆಯಲ್ಲೇ ಸಾಮಾಜಿಕ ನ್ಯಾಯ ಅಗತ್ಯವಾಗಿದೆ' ಎಂದು ಪ್ರತಿಪಾದಿಸಿದರು.

`ನಾವು ಸಂವಿಧಾನದ ಮೂಲತತ್ವಗಳಿಗೆ ಅನುಗುಣವಾಗಿ ಇದ್ದೇವೆಯೋ ಎಂದು ಪರೀಕ್ಷೆಗೆ ಒಡ್ಡಿಕೊಳ್ಳಬೇಕು. ನ್ಯಾಯದಾನ ನೀಡುವ ನ್ಯಾಯಾಧೀಶರಷ್ಟೇ ಅಲ್ಲ, ಲೇಖಕರು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ಅವರು ಆಶಿಸಿದರು.`ರಾಜಕೀಯ, ಸಾಮಾಜಿಕ, ಆರ್ಥಿಕ, ಸ್ವತಂತ್ರ ನ್ಯಾಯಾಂಗ, ಮುಕ್ತ ಪತ್ರಿಕಾ ಸ್ವಾತಂತ್ರ್ಯ ಇವೆಲ್ಲವೂ ಒಂದನ್ನು ಬಿಟ್ಟು ಇನ್ನೊಂದಿಲ್ಲ.

ಅವೆಲ್ಲವೂ ಇಲ್ಲದೆ ಭಾರತೀಯ ಪ್ರಜಾಪ್ರಭುತ್ವ ಆಗಲ್ಲ. ಈ ಸಾಧನೆಗಳ ನಡುವೆ ರಾಜಕೀಯ ಅರಾಜಕತೆ, ಕೋಮುವಾದ, ಭಯೋತ್ಪಾದನೆ, ನಕ್ಸಲಿಸಂ, ಭ್ರಷ್ಟಾಚಾರ, ಸಾಂಸ್ಕೃತಿಕ ಅವನತಿ ನಮ್ಮ ಮುಂದಿರುವ ಸವಾಲುಗಳು' ಎಂದು ಅವರು ಬೊಟ್ಟು ಮಾಡಿದರು.
ಕಾನೂನು ವಿವಿ ಕುಲಪತಿ ಟಿ.ಆರ್. ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT