ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗಕ್ಕೆ ಜಿಲ್ಲಾಧಿಕಾರಿ ‘ಹಿತನುಡಿ’

Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ತುಮಕೂರು: ‘ಅಪರಾಧ ಪ್ರಕರಣ­ಗಳಲ್ಲಿ ಭಾಗಿಯಾದವರನ್ನು ಖುಲಾಸೆ­ಗೊಳಿಸುವ ಮೂಲಕ ತಪ್ಪಿತಸ್ಥರು ತಲೆ ಎತ್ತಿಕೊಂಡು ತಿರುಗಾಡಲು ನ್ಯಾಯಾಂಗ ವ್ಯವಸ್ಥೆ ಅನುವು ಮಾಡಿ­ಕೊಟ್ಟಿದೆ’ ಎಂದು ಜಿಲ್ಲಾಧಿಕಾರಿ ಕೆ.ಸತ್ಯಮೂರ್ತಿ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ‘ನಿರ್ಲಕ್ಷಿತ ಮಹಿಳೆ­ಯರ ಮೇಲಿನ ದೌರ್ಜನ್ಯ, ಕಾನೂನು ಹಾಗೂ ಸಾಮಾಜಿಕ ದೃಷ್ಟಿ­ಕೋನಗಳು’ ಕುರಿತ ನ್ಯಾಯಾಧೀಶರ ಸಂವೇದನಾ ಕಾರ್ಯಾಗಾರದಲ್ಲಿ ಮಾತನಾಡಿದರು.

‘ತಪ್ಪಿತಸ್ಥರನ್ನು ಖುಲಾಸೆ ಮಾಡು­ತ್ತಲೇ ಇದ್ದರೆ ಜನ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವುದು ನಿಶ್ಚಿತ. ಹಾಗಾಗಿ ನ್ಯಾಯಾಧೀಶರು ಕಟ್ಟು­ನಿಟ್ಟಿನ ಮನಸ್ಥಿತಿಯಿಂದ ಕಾರ್ಯ­ನಿರ್ವಹಿಸಿ, ಅಪರಾಧಿಗಳು ತಪ್ಪಿಸಿ­ಕೊಳ್ಳ­ದಂತೆ ನೋಡಿಕೊಳ್ಳಬೇಕು. ಖುಲಾಸೆ ಮಾಡುವುದನ್ನು ನಿಲ್ಲಿಸದಿದ್ದರೆ ಜನರ ದೃಷ್ಟಿಯಲ್ಲಿ ಕೆಟ್ಟವರಾಗಬೇಕಾ­ಗುತ್ತದೆ. ನ್ಯಾಯಾಧಿೀಶರು ಅಂತಃ­ಸಾಕ್ಷಿಗೆ ಸರಿ­ಯಾಗಿ ಕೆಲಸ ಮಾಡಬೇಕು’ ಎಂದರು.

ಮರಳು ಗಣಿಗಾರಿಕೆ ತಡೆಯುವಲ್ಲಿ ಜಿಲ್ಲಾ­ಡಳಿತ ವಿಫಲವಾಗಿದೆ ಎಂದು ಮಾಧ್ಯಮಗಳು ಬರೆಯುತ್ತವೆ. ಅಕ್ರಮ ಮರಳು ಸಾಗಿಸುವವರನ್ನು ಬಂಧಿಸಿ, ಲಾರಿಗಳನ್ನು ಮುಟ್ಟುಗೋಲು ಹಾಕಿ­ಕೊಂಡರೆ ಮಾರನೇ ದಿನವೇ ಲಾರಿಗಳು ರಸ್ತೆಗಿಳಿಯುತ್ತವೆ. ಬಂಧಿತರು ಜಾಮೀನು ಪಡೆದು ಹೊರಬಂದು, ರಾಜಾರೋಷವಾಗಿ ಓಡಾಡುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಚಿನ್ನಕ್ಕೆ ಕ್ಷಣಾರ್ಧದಲ್ಲಿ ಹಣ ನೀಡುವ ಸಂಸ್ಥೆಗಳ ಪ್ರಲೋಭನೆಗೆ ಒಳಗಾಗಿ ಸರಗಳ್ಳರು ದುಷ್ಕೃತ್ಯದಲ್ಲಿ ಭಾಗಿಯಾಗು­ತ್ತಾರೆ. ಸಿಕ್ಕಿಬೀಳುವ ಕಳ್ಳರನ್ನು ಬಂಧಿಸಿ­ದರೆ ವಾರದಲ್ಲೇ ಜಾಮೀನು ಪಡೆದು ಹೊರಬರುತ್ತಾರೆ. ಕದ್ದ ಚಿನ್ನದಲ್ಲಿ ಶೇ 10ರಷ್ಟು ಖರ್ಚು ಮಾಡಿದರೆ ಜಾಮೀನು ಸಿಗುತ್ತದೆ. ಹೀಗೆ ಬಂದ­ವರು ಮತ್ತೆ ಹಳೆಯ ಚಾಳಿ ಮುಂದು­ವರೆಸುತ್ತಾರೆ. ಹಾಗಾಗಿ ತಪ್ಪಿತಸ್ಥರಿಗೆ ಕಠಿಣ ಸಜೆ, ದಂಡ ವಿಧಿಸಬೇಕು ಎಂದು ಕೋರಿದರು.

ಕೆಲ ಪ್ರಕರಣಗಳಲ್ಲಿ ಅಧಿಕಾರಿಗಳು ಕಟಕಟೆ­ಯಲ್ಲಿ ನಿಲ್ಲಬೇಕಾಗುತ್ತದೆ. ಇದ­ರಿಂದ ಪ್ರಾಮಾಣಿಕವಾಗಿ ಕೆಲಸ ಮಾಡು­ವುದು ಕಷ್ಟಕರವಾಗಿದೆ. ಅಧಿ­ಕಾರಿ­ಗಳ ಮೇಲೆ ಸುಳ್ಳು ಕೇಸು ದಾಖಲಿ­ಸು­ವವರಿಗೆ ನ್ಯಾಯಾಲಯ ದಂಡ, ಸಜೆ ವಿಧಿಸಬೇಕು ಎಂದು ಮನವಿ
ಮಾಡಿ­ದರು.

ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.­ಎಸ್‌.ಕೆಂಪಣ್ಣ ಕಾರ್ಯಾಗಾರ ಉದ್ಘಾಟಿಸಿದರು. ಜಿಲ್ಲಾ ಸೆಷನ್ಸ್‌ ನ್ಯಾಯಾ­ಧೀಶ ಪ್ರಭಾಕರ ಶಾಸ್ತ್ರಿ, ಕರ್ನಾ­ಟಕ ಹೆಲ್ತ್‌ ಪ್ರೊಮೋಷನ್‌ ಟ್ರಸ್ಟ್ ಅಧ್ಯಕ್ಷ ಅಶೋಕಾನಂದ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮಣ್‌­ಗುಪ್ತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ­ರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT