ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗಕ್ಕೆ ಸೆಡ್ಡು ಹೊಡೆದ ಪಾಕ್ ಸಂಸತ್

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದಲ್ಲಿ ಸಂಸತ್ ಮತ್ತು ನ್ಯಾಯಾಂಗದ ಸಂಘರ್ಷ ಮುಂದುವರಿದಿದ್ದು, ಅಧಿಕಾರಸ್ಥ ಪ್ರಮುಖ ನಾಯಕರನ್ನು ನ್ಯಾಯಾಂಗ ನಿಂದನೆ ಆರೋಪದಿಂದ ಮುಕ್ತ ಮಾಡುವ ಮಸೂದೆಗೆ ಸಂಸತ್ತಿನ ಕೆಳಮನೆ ತರಾತುರಿಯಲ್ಲಿ ಅಂಗೀಕಾರ ನೀಡಿದೆ. ಇದರಿಂದ ನ್ಯಾಯಾಂಗಕ್ಕೆ ಮೂಗುದಾರ ಹಾಕುವ ಪ್ರಯತ್ನವನ್ನು ಸರ್ಕಾರ ಮಾಡಿದೆ.

ಕಾನೂನು ಸಚಿವ ಫಾರೂಕ್ ಅವರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ (ಕೆಳಮನೆ) ಸೋಮವಾರ ರಾತ್ರಿ ಮಂಡಿಸಿದ `ಕೋರ್ಟ್ ನಿಂದನೆ ಮಸೂದೆ- 2012~ ರ ಬಗ್ಗೆ ತುಸು ಕಾಲವಷ್ಟೆ ಚರ್ಚೆ ನಡೆಯಿತು. ಪ್ರಮುಖ ವಿರೋಧ ಪಕ್ಷ ಪಿಎಂಎಲ್-ಎನ್ ವಿರೋಧದ ಮಧ್ಯೆಯೇ ಸದನ ಮಸೂದೆಗೆ ಸಮ್ಮತಿಸಿತು. ಈ ಮಸೂದೆ ಸಂಸತ್ತಿನ ಮೇಲ್ಮನೆಯಲ್ಲಿ ಮಂಡನೆ ಆಗಬೇಕಿದೆ.

ಮೇಲ್ಮನೆಯಲ್ಲಿ ಆಡಳಿತಾರೂಢ ಮೈತ್ರಿಕೂಟದ ನೇತೃತ್ವ ವಹಿಸಿರುವ `ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ~ಗೆ ಬಹುಮತ ಇರುವ ಕಾರಣ ಮಸೂದೆ  ನಿರಾಯಾಸವಾಗಿ ಅಂಗೀಕಾರವಾಗುವ ಸಾಧ್ಯತೆಯೇ ಹೆಚ್ಚಿದೆ.

ರಾಷ್ಟ್ರಾಧ್ಯಕ್ಷ ಆಸಿಫ್ ಅಲಿ ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಗುರುವಾರ  ಕೈಗೆತ್ತಿಕೊಳ್ಳಲಿದೆ. ಅಷ್ಟರಲ್ಲಿ ಸರ್ಕಾರದ ಮುಖ್ಯಸ್ಥರಾದ ಪ್ರಧಾನಿ ಅವರನ್ನು ನ್ಯಾಯಾಂಗ ನಿಂದನೆ ಆರೋಪದಿಂದ ದೂರವಿಡುವ ಈ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರ ಪಡೆದುಕೊಳ್ಳಲೇ ಬೇಕು ಎನ್ನುವ ತರಾತುರಿಯಿಂದ ಅಧ್ಯಕ್ಷ ಜರ್ದಾರಿ ಅವರೇ ಮುತುವರ್ಜಿ ವಹಿಸಿ ಸಂಸತ್ ವಿಶೇಷ ಅಧಿವೇಶನ ಕರೆದಿದ್ದರು ಎನ್ನಲಾಗಿದೆ.

ಈ ಮಸೂದೆಯಲ್ಲಿ ಸರ್ಕಾರದ ಪ್ರಮುಖ ಮುಖಂಡರನ್ನು ನ್ಯಾಯಾಂಗ ನಿಂದನೆಯಿಂದ ವಿನಾಯ್ತಿ ನೀಡುವುದು ಮಾತ್ರವಲ್ಲದೆ, ನ್ಯಾಯಾಧೀಶರ ವಿರುದ್ಧ ಕೂಡ ಶಿಸ್ತುಕ್ರಮ ಜರುಗಿಸಲು ಅವಕಾಶ ಕಲ್ಪಿಸಲಾಗಿದೆ. ನ್ಯಾಯಾಧೀಶರ ವಿರುದ್ಧದ ಕ್ರಮ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಒಳಪಡದಂತೆ ನೋಡಿಕೊಳ್ಳಲಾಗಿದೆ.

ಹಿನ್ನೆಲೆ: ರಾಷ್ಟ್ರಾಧ್ಯಕ್ಷ ಜರ್ದಾರಿ ವಿರುದ್ಧ ಭ್ರಷ್ಟಾಚಾರ ಪ್ರಕರಣದ ಪುನರ್ ತನಿಖೆ ಕೈಗೊಳ್ಳುವಂತೆ ಸ್ವಿಟ್ಜರ್ಲೆಂಡ್ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸುಪ್ರೀಂಕೋರ್ಟ್ ಈ ಹಿಂದೆ ಪ್ರಧಾನಿಯಾಗಿದ್ದ ಯೂಸುಫ್ ರಜಾ ಗಿಲಾನಿ ಅವರ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಗಿಲಾನಿ ಇದನ್ನು ಕಡೆಗಣಿಸಿ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿ ಸುಪ್ರೀಂಕೋರ್ಟ್‌ನಿಂದ ಶಿಕ್ಷೆಗೆ ಗುರಿಯಾಗಿದ್ದರು. ಮಾತ್ರವಲ್ಲದೆ, ಅವರು ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿದ್ದರು. ಇದು  ಪ್ರಧಾನಿ ಪಟ್ಟಕ್ಕೂ ಕುತ್ತುತಂದಿತ್ತು.

ಇಂತಹದಕ್ಕೆ ಅವಕಾಶವೇ ಇರಬಾರದೆಂದು ಬಗೆದ ಸರ್ಕಾರ, ಸಂಸತ್‌ಗೆ ಇರುವ ಶಾಸನ ರಚನೆಯ ಪರಮಾಧಿಕಾರವನ್ನು ಬಳಕೆ ಮಾಡಿಕೊಂಡು ನ್ಯಾಯಾಂಗಕ್ಕೆ ಸೆಡ್ಡುಹೊಡೆಯುವ ಪ್ರಯತ್ನವನ್ನು ಈಗ ಮಾಡಿದೆ.
 

`ರಕ್ಷಿಸುವ ದುರದ್ದೇಶ ಇಲ್ಲ~
ಮಸೂದೆಗೆ ಅಂಗೀಕಾರ ದೊರೆತ ನಂತರ ಮಾತನಾಡಿದ ಪ್ರಧಾನಿ ರಜಾ ಪರ್ವೇಜ್ ಅಶ್ರಫ್, `ಈ ಮಸೂದೆಯು ನ್ಯಾಯಾಧೀಶರ ವಿರುದ್ಧ ಅಲ್ಲ ಮತ್ತು ಯಾರನ್ನೂ ರಕ್ಷಿಸುವ ಉದ್ದೇಶ ಹೊಂದಿಲ್ಲ~ ಎಂದು ಹೇಳಿದ್ದಾರೆ.

ರೆಹಮಾನ್ ಮಲಿಕ್ ರಾಜೀನಾಮೆ
ಇಸ್ಲಾಮಾಬಾದ್ (ಪಿಟಿಐ): ಆಂತರಿಕ ವ್ಯವಹಾರ ಕುರಿತು ಪಾಕ್ ಪ್ರಧಾನಿ ಅವರಿಗೆ ವಿಶೇಷ ಸಲಹೆಗಾರರಾಗಿರುವ ರೆಹಮಾನ್ ಮಲಿಕ್ ಸಂಸತ್ತಿನ ಮೇಲ್ಮನೆಯ ತಮ್ಮ ಸದಸ್ಯತ್ವಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಮಲಿಕ್ ಬ್ರಿಟಿಷ್ ಪೌರತ್ವ ತೊರೆದಿರುವ ಬಗ್ಗೆ ದಾಖಲೆಯನ್ನು ಒದಗಿಸಲು ವಿಫಲರಾದ ಹಿನ್ನೆಲೆಯಲ್ಲಿ ಅವರ ಮೇಲ್ಮನೆ ಸದಸ್ಯತ್ವವನ್ನು ಸುಪ್ರೀಂಕೋರ್ಟ್ ಕಳೆದ ತಿಂಗಳ 4ರಂದು ಅಮಾನತು ಮಾಡಿತ್ತು. ಆ ಸಂದರ್ಭದಲ್ಲಿ ಅವರು ಪಾಕ್‌ನ ಆಂತರಿಕ ವ್ಯವಹಾರ ಇಲಾಖೆ ಸಚಿವರೂ ಆಗಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT