ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರ ವಿರುದ್ಧ ಮಾನಹಾನಿ ಹೇಳಿಕೆ:

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರ ವಿರುದ್ಧ ಮಾನಹಾನಿ ಹೇಳಿಕೆ ನೀಡಿಯೇ ಇಲ್ಲ ಎಂದು ಹೈಕೋರ್ಟ್‌ನಲ್ಲಿ ಮಂಗಳವಾರ ವಾದಿಸಿದ ಸಂಸದ ಡಿ.ಬಿ.ಚಂದ್ರೇಗೌಡ ಅವರು ತಾವು `ನೀಡದ ಹೇಳಿಕೆ~ ಕುರಿತು ಬೇಷರತ್ ಕ್ಷಮೆ ಯಾಚಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಾಮೀನು ನೀಡಲು ನ್ಯಾಯಾಧೀಶ ಸುಧೀಂದ್ರ ರಾವ್ ನಿರಾಕರಿಸಿದ್ದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಮಾನಹಾನಿ ಹೇಳಿಕೆಯನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದ ಆರೋಪ ಇವರ ಮೇಲೆ ಇತ್ತು.

ಇದಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು. ಹೇಳಿಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾ. ಸುಧೀಂದ್ರ ರಾವ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು.
 
ತಮ್ಮ ವಿರುದ್ಧ ಈ ರೀತಿ ಹೇಳಿಕೆ ನೀಡುವ ಮೂಲಕ ನ್ಯಾಯಾಂಗದ ಘನತೆಗೆ ಚಂದ್ರೇಗೌಡ ಅವರು ಚ್ಯುತಿ ಉಂಟುಮಾಡಿದ್ದಾರೆ. ತಮ್ಮ ವಿರುದ್ಧ ವೃಥಾ ಆರೋಪ ಮಾಡಿದ್ದಾರೆ, ಇದು ನ್ಯಾಯಾಂಗ ನಿಂದನೆ ಆಗುತ್ತದೆ ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕೋರ್ಟ್ ಖುದ್ದಾಗಿ ಚಂದ್ರೇಗೌಡರ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿತ್ತು.

ಚಂದ್ರೇಗೌಡ ವಿಚಾರಣೆ ವೇಳೆ ಖುದ್ದು ಹಾಜರು ಇದ್ದರು. ಕೋರ್ಟ್‌ಗೆ ಅವರು ನೀಡಿರುವ ಪ್ರಮಾಣ ಪತ್ರದಲ್ಲಿ, `ಪತ್ರಿಕೆಯು ನಾನು ನೀಡಿರುವ ಹೇಳಿಕೆಗಳನ್ನು ತಿರುಚಿದೆ.

ಕಾನೂನು ಎಂದರೆ ಏನು ಎನ್ನುವುದು ಕಾನೂನು ಇಲಾಖೆಯ ಮಾಜಿ ಸಚಿವನಾದ ನನಗೆ ಚೆನ್ನಾಗಿ ಗೊತ್ತು. ನ್ಯಾಯಾಂಗದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೂ ನಾನು ಹೇಳಿಕೆ ನೀಡಿದ್ದೇನೆ ಎಂದು ಪ್ರಕಟ ಆಗಿರುವ ಹಿನ್ನೆಲೆಯಲ್ಲಿ ಕ್ಷಮೆ ಯಾಚಿಸುತ್ತೇನೆ~ ಎಂದು ತಿಳಿಸಿದ್ದಾರೆ.ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಡಾ.ಕೆ.ಭಕ್ತವತ್ಸಲ ಅವರು ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟರು.

ಲೋಕಾಯುಕ್ತ ನೇಮಕ: ಅರ್ಜಿ ಹಿಂದಕ್ಕೆ

ಲೋಕಾಯುಕ್ತ ಸ್ಥಾನಕ್ಕೆ ಶೀಘ್ರ ನೇಮಕ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಮಂಗಳೂರಿನ ಗಜೇಂದ್ರ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ಅವರು ಹಿಂದಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆದಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಸೂಚಿಸಿತು.

ಇದೇ ಕೋರಿಕೆ ಇಟ್ಟು ಬೆಳಗಾವಿಯ ಸಿದ್ದನಗೌಡ ಪಾಟೀಲ ಅವರೂ ಅರ್ಜಿ ಸಲ್ಲಿಸ್ದ್ದಿದಾರೆ. ಈ ಅರ್ಜಿಯನ್ನು ಹಿಂದಕ್ಕೆ ಪಡೆಯುವ ಕುರಿತು ತಮ್ಮ ಕಕ್ಷಿದಾರರಿಂದ ಮಾಹಿತಿ ಕೇಳಬೇಕು ಎಂದು ವಕೀಲರು ತಿಳಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಬೇರೆ ಪೀಠಕ್ಕೆ ವರ್ಗಾಯಿಸಲಾಯಿತು.

(ಯಾವುದೇ ಅರ್ಜಿಯಲ್ಲಿ ಪ್ರತಿವಾದಿಯಾಗಿ ಮುಖ್ಯಮಂತ್ರಿ ಅಥವಾ ರಾಜ್ಯಪಾಲರು ಇದ್ದಲ್ಲಿ ಅಂತಹ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳು ನಡೆಸುತ್ತಿಲ್ಲ. ಶಿಷ್ಟಾಚಾರದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಹಾಗೂ ಇವರು ಒಂದೇ ವೇದಿಕೆ ಹಂಚಿಕೊಳ್ಳಬೇಕಾದ ಸನ್ನಿವೇಶ ಎದುರಾಗುವ ಹಿನ್ನೆಲೆಯಲ್ಲಿ ಇದು ವಿವಾದಕ್ಕೆ ಎಡೆ ಮಾಡಿಕೊಡಬಹುದು ಎಂದು ವಿಚಾರಣೆ ಬೇರೆ ಪೀಠಕ್ಕೆ ವರ್ಗಾಯಿಸಲಾಗುತ್ತಿದೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT