ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ.ಶೈಲೇಂದ್ರಕುಮಾರ್‌ಗೆ ಬೀಳ್ಕೊಡುಗೆ

Last Updated 4 ಸೆಪ್ಟೆಂಬರ್ 2013, 20:10 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ನ್ಯಾಯಮೂರ್ತಿಗಳ ಪೈಕಿ ಆಸ್ತಿ ಘೋಷಣೆ (ವೆಬ್‌ಸೈಟ್ ಮೂಲಕ) ಮಾಡಿಕೊಂಡವರಲ್ಲಿ ಮೊದಲಿಗರಾದ ನ್ಯಾ. ಡಿ.ವಿ. ಶೈಲೇಂದ್ರ ಕುಮಾರ್ ಅವರಿಗೆ ಬೆಂಗಳೂರು ವಕೀಲರ ಸಂಘ ಮತ್ತು ಹೈಕೋರ್ಟ್‌ನ ಪರವಾಗಿ ಬುಧವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು. ನ್ಯಾ. ಕುಮಾರ್ ಅವರು ಬುಧವಾರ ಕರ್ತವ್ಯದಿಂದ ನಿವೃತ್ತರಾಗಿದ್ದಾರೆ.

ವಕೀಲರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ವಕೀಲ ಉದಯ ಹೊಳ್ಳ, `ನ್ಯಾ. ಕುಮಾರ್ ಅವರು ಗಾಂಧಿವಾದಿ. ಹೊಸತನದ ಹುಡುಕಾಟದಲ್ಲಿದ್ದ ನ್ಯಾಯಮೂರ್ತಿ ಅವರು' ಎಂದು ಪ್ರಶಂಸೆ ವ್ಯಕ್ತಪಡಿಸಿದರು.

`ಅವರು ಯಾವುದೇ ಸಂದರ್ಭದಲ್ಲೂ ದರ್ಪ ತೋರಲಿಲ್ಲ. ಎಲ್ಲರಿಗೂ ಮೊದಲಿಗರಾಗಿ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡರು. ಗಣಿಗಾರಿಕೆ ಬಗ್ಗೆ ಅವರು ನೀಡಿದ ಆದೇಶ, ರಾಜ್ಯದಲ್ಲಿ ನಡೆಯುತ್ತಿದ್ದ ಹಗಲು ದರೋಡೆಗೆ ಅಂಕುಶ ಹಾಕಿ, ಗಣಿ ಕಳ್ಳರು ಜೈಲು ಪಾಲಾಗಲು ನಾಂದಿ ಹಾಡಿತು' ಎಂದು ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಸ್ಮರಿಸಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ನಾಂದಿ ಹಾಡಿದ ವ್ಯಕ್ತಿ ಇವರು ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ಮೆಚ್ಚುಗೆಯ ಮಾತು ಹೇಳಿದರು. ಎಲ್ಲರ ಮೆಚ್ಚುಗೆಯ ಮಾತು ಆಲಿಸಿದ ನ್ಯಾ. ಕುಮಾರ್, `ನಾನು ಅತಿಶಯವಾದ ಯಾವುದೇ ಕೆಲಸವನ್ನೂ ಮಾಡಿಲ್ಲ. ನನ್ನ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿಭಾಯಿಸಿದ್ದೇನೆ' ಎಂದು ಮಾರ್ನುಡಿದರು.

ಮುಖ್ಯ ನ್ಯಾ.ಡಿ.ಎಚ್. ವಘೇಲಾ, ನ್ಯಾ. ಕುಮಾರ್ ಅವರ ನಿವೃತ್ತ ಜೀವನಕ್ಕೆ ಶುಭ ಕೋರಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಹೈಕೋರ್ಟ್ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಮುನಿಯಪ್ಪ, `ಎಂಎಸ್‌ಪಿಎಲ್ ಲಿಮಿಟೆಡ್ ಮತ್ತು ರಾಜ್ಯ ಸರ್ಕಾರದ ನಡುವಿನ ಪ್ರಕರಣದಲ್ಲಿ ನೀವು ನೀಡಿದ ಆದೇಶ ಅತ್ಯಂತ ಮಹತ್ವದ್ದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT