ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ಅಪಾಯಕಾರಿ ತಂಡ

Last Updated 28 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಇಂಗ್ಲೆಂಡ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ಪಡೆದ ಬಳಿಕ ನನಗೆ ಒಂದು ಆತಂಕ ಕಾಡಿತ್ತು. ತಂಡದ ಆಟಗಾರರು ಗೆಲುವಿನ ಅಲೆಯಲ್ಲಿ ಮೈಮರೆಯುವರೇ ಎಂಬುದು ಆತಂಕಕ್ಕೆ ಕಾರಣ. ಇಂಗ್ಲೆಂಡ್ ವಿರುದ್ಧ ನಾವು ಅದ್ಭುತ ಪ್ರದರ್ಶನ ನೀಡಿದ್ದೇವೆ. ಆದರೆ ಅದು ಈಗ ಇತಿಹಾಸ. ಮುಂದಿನ ಸವಾಲಿನತ್ತ ಗಮನ ಹರಿಸಬೇಕಾಗಿದೆ.

ಮಂಗಳವಾರ ನಡೆಯುವ ಸೆಮಿಫೈನಲ್‌ನಲ್ಲಿ ನಾವು ನ್ಯೂಜಿಲೆಂಡ್ ವಿರುದ್ಧ ಪೈಪೋಟಿ ನಡೆಸಲಿದ್ದೇವೆ. ಹಲವು ಮಂದಿ ಈಗಾಗಲೇ ಕಿವೀಸ್ ತಂಡವನ್ನು ಕಡೆಗಣಿಸಿದ್ದಾರೆ. ಆದರೆ ನಾವು ಅದಕ್ಕೆ ಸಿದ್ಧರಿಲ್ಲ. ನ್ಯೂಜಿಲೆಂಡ್ ಪ್ರಸಕ್ತ ಟೂರ್ನಿಯಲ್ಲಿ ಈಗಾಗಲೇ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳನ್ನು ಸೋಲಿಸಿದೆ. ಇವೆರಡೂ ಬಲಿಷ್ಠ ತಂಡಗಳು ಎಂಬುದರ ಬಗ್ಗೆ ಅನುಮಾನವೇ ಬೇಡ. ನ್ಯೂಜಿಲೆಂಡ್ ಅಪಾಯಕಾರಿ ತಂಡ ಎನ್ನುವುದಕ್ಕೆ ಈ ಎರಡು ಗೆಲುವುಗಳೇ ಸಾಕ್ಷಿ.

ಮುಂಬೈನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಅವರ ವಿರುದ್ಧ ಗೆಲುವು ಪಡೆಯಲು ನಾವು ಸಾಕಷ್ಟು ಪರಿಶ್ರಮ ಪಟ್ಟಿದ್ದೆವು. ಅಂದು ನ್ಯೂಜಿಲೆಂಡ್ ಇಬ್ಬರು ಪ್ರಮುಖ ಆಟಗಾರರ ಅನುಪಸ್ಥಿತಿಯೊಂದಿಗೆ ಕಣಕ್ಕಿಳಿದಿತ್ತು. ಕಿವೀಸ್ ತಂಡ ಅತ್ಯುತ್ತಮ ರೀತಿಯಲ್ಲಿ ಸಂಘಟಿತವಾಗಿದೆ, ಶಿಸ್ತಿನಿಂದ ಕೂಡಿದೆ ಮಾತ್ರವಲ್ಲ ಆಕ್ರಮಣಕಾರಿ ಮನೋಭಾವ ಹೊಂದಿದೆ. ನ್ಯೂಜಿಲೆಂಡ್ ಸೆಮಿಫೈನಲ್ ತಲುಪುತ್ತದೆ ಎಂದು ಕೆಲವರು ಮಾತ್ರ ಲೆಕ್ಕ ಹಾಕಿದ್ದರು. ಈ ಕಾರಣ ಮಂಗಳವಾರ ಅವರಿಗೆ ಕಳೆದುಕೊಳ್ಳುವಂತಹದ್ದು ಏನೂ ಇಲ್ಲ.

ಇಂಗ್ಲೆಂಡ್ ವಿರುದ್ಧ ಶನಿವಾರ ನಾವು ಬಿರುಬಿಸಿಲಿನಲ್ಲೇ ಆಡಿದ್ದೆವು. ಇದರಿಂದ ಭಾನುವಾರ ಎಲ್ಲ ಅಟಗಾರರು ಸ್ವಿಮ್ಮಿಂಗ್ ಪೂಲ್‌ನಲ್ಲೇ ಕಾಲ ಕಳೆದರು. ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳ ನಡುವೆ ನಮಗೆ ಹೆಚ್ಚಿನ ಬಿಡುವು ಲಭಿಸಿಲ್ಲ. ಆದ್ದರಿಂದ ಅಭ್ಯಾಸದ ಮೇಲೂ ಗಮನ ಹರಿಸಿದ್ದೇವೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಾಕಷ್ಟು ಧನಾತ್ಮಕ ಅಂಶಗಳನ್ನು ಕಂಡುಕೊಂಡೆವು. ಬ್ಯಾಟಿಂಗ್‌ಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ನಮ್ಮ ಬೌಲರ್‌ಗಳು ಚೆನ್ನಾಗಿ ಚೆಂಡೆಸೆದರು. ಅದೇ ರೀತಿ ನಮ್ಮ ಬ್ಯಾಟ್ಸ್‌ಮನ್‌ಗಳೂ ಮಿಂಚಿದರು. ತಿಲಕರತ್ನೆ ದಿಲ್ಶಾನ್ ಮತ್ತು ಉಪುಲ್ ತರಂಗ ಸೊಗಸಾದ ಆಟವಾಡಿದರಲ್ಲದೆ, ನಮ್ಮ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT