ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ `ಎ' ಮರು ಹೋರಾಟ

ಕ್ರಿಕೆಟ್: ಕೋರಿ ಆ್ಯಂಡರ್‌ಸನ್, ಡೆವ್‌ಸಿಚ್ ಶತಕ
Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಆರಂಭಿಕ ಆಘಾತ ಎದುರಿಸಿದರೂ ಮರುಹೋರಾಟ ನಡೆಸಿದ ನ್ಯೂಜಿಲೆಂಡ್ `ಎ' ತಂಡದವರು ಭಾರತ `ಎ' ವಿರುದ್ಧ ಎರಡನೇ ಟೆಸ್ಟ್ (ನಾಲ್ಕು ದಿನಗಳ) ಪಂದ್ಯದಲ್ಲಿ ಸಾಧಾರಣ ಮೊತ್ತ ಪೇರಿಸಿದ್ದಾರೆ.

ವಿಶಾಖಪಟ್ಟಣದ ಎಸಿಎ- ವಿಡಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನವಾದ ಸೋಮವಾರದ ಆಟದ ಅಂತ್ಯಕ್ಕೆ ಪ್ರವಾಸಿ ತಂಡ 89 ಓವರ್‌ಗಳಲ್ಲಿ 8 ವಿಕೆಟ್‌ಗೆ 300 ರನ್ ಗಳಿಸಿದೆ. ಕೋರಿ ಅ್ಯಂಡರ್‌ಸನ್ (100) ಮತ್ತು ಆ್ಯಂಟನ್ ಡೆವ್‌ಸಿಚ್ (115) ಆಕರ್ಷಕ ಶತಕದ ಮೂಲಕ ತಂಡಕ್ಕೆ ನೆರವಾದರು.

ಟಾಸ್ ಗೆದ್ದ ಕಿವೀಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. 43 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ತಂಡ ಆರಂಭಿಕ ಕುಸಿತ ಕಂಡಿತು. ಧವಳ್ ಕುಲಕರ್ಣಿ (26ಕ್ಕೆ 2) ಎದುರಾಳಿ ತಂಡಕ್ಕೆ ಆಘಾತ ನೀಡಿದರು. ನೀಲ್ ಬ್ರೂಮ್ ಮತ್ತು ಲೂಕ್ ರೊಂಚಿ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಮರಳಿದ ಕಾರಣ ತಂಡ ಒತ್ತಡಕ್ಕೆ ಒಳಗಾಯಿತು.

ಆದರೆ ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳಾದ ಆ್ಯಂಡರ್‌ಸನ್ ಮತ್ತು ಡೆವ್‌ಸಿಚ್ ತಂಡದ ನೆರವಿಗೆ ನಿಂತರು. ಐದನೇ ವಿಕೆಟ್‌ಗೆ 165 ರನ್‌ಗಳ ಉಪಯುಕ್ತ ಜೊತೆಯಾಟ ನೀಡಿದ ಇವರು ಭಾರತದ ಬೌಲರ್‌ಗಳು ಪೂರ್ಣ ಪ್ರಭುತ್ವ ಸಾಧಿಸದಂತೆ ನೋಡಿಕೊಂಡರು.

ರಾಕೇಶ್ ಧುರ್ವ್ ಅವರು ಆ್ಯಂಡರ್‌ಸನ್ ವಿಕೆಟ್ ಪಡೆದು ಈ ಜೊತೆಯಾಟ ಮುರಿದರು. 126 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ತಾಳ್ಮೆಯ ಆಟವಾಡಿದ ಡೆವ್‌ಸಿಚ್ 185 ಎಸೆತಗಳನ್ನು ಎದುರಿಸಿ 15 ಬೌಂಡರಿ ಗಳಿಸಿದರು.

ಡೆವ್‌ಸಿಚ್ ಮತ್ತು ಟಾಡ್ ಆ್ಯಸಲ್ (17) ಏಳನೇ ವಿಕೆಟ್‌ಗೆ 52 ರನ್‌ಗಳನ್ನು ಸೇರಿಸಿದರು. ಇದರಿಂದ ಎದುರಾಳಿ ತಂಡವನ್ನು ಮೊದಲ ದಿನವೇ ಆಲೌಟ್ ಮಾಡಬೇಕೆಂಬ ಭಾರತದ ಕನಸು ನನಸಾಗಲಿಲ್ಲ. ಡಗ್ ಬ್ರೇಸ್‌ವೆಲ್ (ಬ್ಯಾಟಿಂಗ್ 12) ಮತ್ತು ಇಶ್ ಸೋಧಿ (ಬ್ಯಾಟಿಂಗ್ 14) ದಿನದಾಟದ ಅಂತ್ಯಕ್ಕೆ ಅಜೇಯರಾಗಿ ಉಳಿದುಕೊಂಡಿದ್ದರು.

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ `ಎ' ಮೊದಲ ಇನಿಂಗ್ಸ್ 89 ಓವರ್‌ಗಳಲ್ಲಿ 8 ವಿಕೆಟ್‌ಗೆ 300 (ಟಾಮ್ ಲಥಾಮ್ 21, ಕೋರಿ ಅ್ಯಂಡರ್‌ಸನ್ 100, ಆ್ಯಂಟನ್ ಡೆವ್‌ಸಿಚ್ 115, ಡಗ್ ಬ್ರೇಸ್‌ವೆಲ್ ಬ್ಯಾಟಿಂಗ್ 12, ಇಶ್ ಸೋಧಿ ಬ್ಯಾಟಿಂಗ್ 14, ಧವಳ್ ಕುಲಕರ್ಣಿ 26ಕ್ಕೆ 2, ಜಲಜ್ ಸಕ್ಸೇನಾ 69ಕ್ಕೆ 2, ಶ್ರೀಕಾಂತ್ ವಾಗ್ 26ಕ್ಕೆ 1, ಇಮ್ತಿಯಾಜ್ ಅಹ್ಮದ್ 35ಕ್ಕೆ 1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT