ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂನತೆಯನ್ನು ಮೆಟ್ಟಿ ನಿಂತ ಬದುಕು

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

 ವಿಶ್ವದಾಖಲೆಗಳ ಹುಡುಗಿ
ಜೆಸ್ಸಿಕಾ ಲಾಂಗ್ ಹುಟ್ಟಿದ್ದು 1992ರಲ್ಲಿ. ಸೈಬೀರಿಯಾದಲ್ಲಿ ಜನಿಸಿದ ಜೆಸ್ಸಿಕಾ 2 ವರ್ಷವಿರುವಾಗಲೇ ಫೈಬುಲಾರ್ ಹೆಮಿಮೇಲಿಯಾಗೆ (ಮಂಡಿಯ ಕೆಳಭಾಗದ ಕಾಲಿನ ಮೂಳೆಗಳಲ್ಲಿ ಕಂಡುಬರುವ ತೊಂದರೆ) ತುತ್ತಾಗಿ ಎರಡೂ ಕಾಲುಗಳನ್ನು ಕಳೆದುಕೊಳ್ಳಬೇಕಾಯಿತು. ಆದರೆ ಚಿಕ್ಕವಯಸ್ಸಿಗೇ ಆಕೆಯಲ್ಲಿ ತುಂಬಿದ್ದ ಆತ್ಮಸ್ಥೈರ್ಯ ಈ ಪರಿಸ್ಥಿತಿಯನ್ನು ಎದುರಿಸುವ ಮನೋಧೈರ್ಯ ತಂದಿತು.

ಜಿಮ್ನಾಸ್ಟಿಕ್, ಚೀರ್ ಲೀಡಿಂಗ್, ಐಸ್ ಸ್ಕೇಟಿಂಗ್, ಬೈಕಿಂಗ್, ಟ್ರಾಂಪೊಲೈನ್, ರಾಕ್ ಕ್ಲೈಂಬಿಂಗ್ ಎಲ್ಲವನ್ನೂ ಛಲದಿಂದ ಕಲಿತಳು. ಈಜಿನಲ್ಲಿ ಪರಿಣತಿ ಹೊಂದಿ ಮೊಟ್ಟ ಮೊದಲ ಬಾರಿಗೆ 2002ರಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದಳು. 2003ರ ಮೇರಿಲ್ಯಾಂಡ್ ಸ್ವಿಮ್ಮರ್ ಎಂದು ಹೆಸರುವಾಸಿಯಾದ ಮೊದಲ ಅಂಗವಿಕಲ ಮಹಿಳೆ ಎಂಬ ಖ್ಯಾತಿ ಹೊಂದಿದಳು.
 
ನಂತರ ಪ್ಯಾರಾಲಂಪಿಕ್ಸ್‌ನ ಹಲವು ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಅನೇಕ ಚಿನ್ನದ ಪದಕ ಗಳಿಸಿ ವಿಶ್ವದ ಗಮನ ಸೆಳೆದಳು. 2007ರಲ್ಲಿ ಅಮೆಚೂರ್ ಅಥ್ಲೆಟಿಕ್ ಯೂನಿಯನ್ ಸಲಿವಾನ್ ಅವಾರ್ಡ್ ಪಡೆದ ಮೊದಲ ಪ್ಯಾರಾಲಂಪಿಕ್ ಅಥ್ಲೀಟ್ ಎನಿಸಿಕೊಂಡಿದ್ದಲ್ಲದೆ 2006ರವರೆಗೂ ಸುಮಾರು 18 ವಿಶ್ವ ದಾಖಲೆಗಳ ಸಾಧನೆಗೈದಳು.
 

ಬಾಸ್ಕೆಟ್‌ಬಾಲ್ ಗರ್ಲ್
ಲಾರಿ ಹರಿದು ತನ್ನ ದೇಹದ ಅರ್ಧ ಭಾಗವನ್ನು ಕಳೆದುಕೊಂಡಿರುವ ಕಿಯಾನ್ ಹೋಗ್ಯಾನ್ `ಬಾಸ್ಕೆಟ್‌ಬಾಲ್ ಗರ್ಲ್~ ಎಂದೇ ಪ್ರಸಿದ್ಧ. ಈಕೆಯ ಅರ್ಧ ದೇಹವನ್ನು ಬಾಸ್ಕೆಟ್‌ಬಾಲ್‌ನ ಅರ್ಧ ಭಾಗದಲ್ಲಿಟ್ಟಿರುವುದರಿಂದ ಈಕೆಗೆ ಈ ಹೆಸರು. ನಾನೂ ಎಲ್ಲರಂತೆಯೇ ಆರಾಮವಾಗಿದ್ದೇನೆ. ನನಗೂ ಎಲ್ಲರಂತೆಯೇ ಇರಲು ಸಾಧ್ಯ, ನಾನೂ ಓಡುತ್ತೇನೆ ಆದರೆ ಸ್ವಲ್ಪ ನಿಧಾನ ಎನ್ನುವ ಆಕೆಯ ಮಾತಿನಲ್ಲಿ ಆತ್ಮವಿಶ್ವಾಸ ತುಂಬಿದೆ.

ಕಿಯಾನ್‌ಗೆ 4 ವರ್ಷವಿರುವಾಗಲೇ ಈ ಘಟನೆ ನಡೆದಿದ್ದು, ಕಾಲು ಕಳೆದುಕೊಂಡ ಘಟನೆಯನ್ನು ಜೀರ್ಣಿಸಿಕೊಳ್ಳಲಾಗದೆ ಖಿನ್ನತೆಗೆ ಒಳಗಾಗಿದ್ದಳು. ಆದರೆ ನಂತರ ಈಜಿನಲ್ಲಿ ಪರಿಣತಿ ಹೊಂದಲು ನಿರ್ಧರಿಸಿ ಉತ್ತಮ ಪ್ಯಾರಾಲಿಂಪಿಕ್ ಈಜುಗಾರ್ತಿ ಎಂಬ ಖ್ಯಾತಿ ಪಡೆದುಕೊಂಡಳು. ಆಸ್ಕರ್ ಪಿಸ್ಟೊರಿಯಸ್ ಮತ್ತು ನಟ ಲೀ ಡು ಟಾಯ್ಟ ಅವರಿಂದ ಪ್ರೇರೇಪಣೆ ಪಡೆದು ತಾನೂ ಈಜಿನಲ್ಲಿ ಮಹತ್ತರವಾದುದನ್ನೇ ಸಾಧಿಸುವ ಛಲ ಹೊಂದಿದ್ದಾಳೆ. ತನಗೆ ಕಬ್ಬಿಣದಷ್ಟು ಕಠಿಣವಾದ ಆತ್ಮವಿಶ್ವಾಸವಿದೆ, ಮೊದ ಮೊದಲು ಈಜು ಕಷ್ಟವೆನಿಸಿತ್ತು. ಆದರೆ ನಿರಂತರ ಅಭ್ಯಾಸದಿಂದ ಈಜು ತನಗೊಲಿದಿದೆ ಎಂದು ತನ್ನ ಎತ್ತರದ ಕನಸುಗಳನ್ನು ಬಿಚ್ಚಿಕೊಳ್ಳುತ್ತಾಳೆ.

ಸೈಕಲ್ `ಬೆಳಕು~
ಕರಿಸ್ಸಾ ವಿಟ್ಸೆಲ್ ಅಂಧೆಯಾದರೂ ತಾನೆಂದೂ ಅಂಧಕಾರದಲ್ಲಿರುವಂತೆ ತೋರಿಸಿಕೊಂಡಿಲ್ಲ. ಅಮೆರಿಕ ಮೂಲದ ಈಕೆ ಖುಷಿ ಕಂಡುಕೊಂಡಿದ್ದು ಸೈಕ್ಲಿಂಗ್‌ನಲ್ಲಿ. ಮಾರ್ಗದರ್ಶಕರೊಬ್ಬರು ಜೊತೆಗಿದ್ದರೆ ಸ್ಪರ್ಧೆಯಲ್ಲಿ ಭಾಗವಹಿಸಲು ಸದಾ ಸಿದ್ಧ.

2000ರಲ್ಲಿ ಸಿಡ್ನಿಯಲ್ಲಿ ಸ್ಪೆನ್ಸರ್ ಏಟ್ಸ್ ಜೊತೆ, 2004ರಲ್ಲಿ ಅಥೆನ್ಸ್‌ನಲ್ಲಿ ಕ್ಯಾಟಿ ಕಾಂಪ್ಟನ್ ಮತ್ತು 2008ರಲ್ಲಿ ಮೆಕೆಂಜಿ ವುಡ್‌ರಿಂಗ್ ಮಾರ್ಗದರ್ಶನದೊಂದಿಗೆ ಅನೇಕ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಪ್ಯಾರಾ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದಾಳೆ. ಇದೀಗ ಕೊಲರಾಡೊದಲ್ಲಿರುವ ಯು.ಎಸ್ ಒಲಿಂಪಿಕ್ ತರಬೇತು ಕೇಂದ್ರದಲ್ಲಿ ತರಬೇತುದಾರಳಾಗಿದ್ದಾಳೆ. 

ಒಂಟಿ ಕೈ ಈಜು
ಭಾರತದ ಪಶ್ಚಿಮ ಬಂಗಾಳದಲ್ಲಿ ಹುಟ್ಟಿದ ಪ್ರಶಾಂತ್ ಕರ್ಮಾಕಾರ್ ತನ್ನ 7ನೇ ವಯಸ್ಸಿಗೇ ಅಪಘಾತದಲ್ಲಿ ಬಲಗೈಯನ್ನು ಕಳೆದುಕೊಂಡವರು. ಆದರೆ ಧೃತಿಗೆಡದೆ ತನ್ನ ಮೆಚ್ಚಿನ ಹವ್ಯಾಸವಾದ ಈಜನ್ನೇ ತನ್ನ ಜೀವನದ ಗುರಿಯನ್ನಾಗಿಸಿಕೊಂಡರು. ತನ್ನೆಲ್ಲಾ ಸಮಯವನ್ನು ಈಜು ಕಲಿಯುವುದಕ್ಕೆ ಮೀಸಲಿಟ್ಟರು. 2006ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದುಕೊಂಡ ನಂತರ ಈಜನ್ನು ಗಂಭೀರವಾಗಿ ಪರಿಗಣಿಸಿ ಅನೇಕ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದರು.
 

ಐಡಬ್ಲುಎಎಸ್ ಗೇಮ್ಸನಲ್ಲಿ 4 ಚಿನ್ನದ ಪದಕ, 2 ಬೆಳ್ಳಿ ಮತ್ತು 1 ಕಂಚು ಸೇರಿದಂತೆ ಒಟ್ಟು22 ಅಂತರರಾಷ್ಟ್ರೀಯ ಪದಕಗಳನ್ನು ಪಡೆದುಕೊಂಡರು. 2010ರ ಕಾಮನ್‌ವೆಲ್ತ್  ಕ್ರೀಡಾಕೂಟ, 2008ರ ಯುವ ಕಾಮನ್‌ವೆಲ್ತ್  ಕ್ರೀಡಾಕೂಟ ಸೇರಿದಂತೆ ಹತ್ತಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
 

ಬ್ಲೇಡ್ ರನ್ನರ್
ಆಸ್ಕರ್ ಪಿಸ್ಟೊರಿಯಸ್ `ಬ್ಲೇಡ್ ರನ್ನರ್~ ಎಂದೇ ಪ್ರಸಿದ್ಧ. ಕಾಲುಗಳಿಲ್ಲದಿದ್ದರೂ ಅತಿ ವೇಗವಾಗಿ ಓಡಬಲ್ಲ ಮನುಷ್ಯ ಎಂದೇ ಖ್ಯಾತಿ. ಎರಡೂ ಕಾಲುಗಳಿಲ್ಲದ ಈತ ಕೃತಕ ಕಾಲುಗಳ ಸಹಾಯದಿಂದ 100, 200 ಮತ್ತು 400 ಮೀಟರ್ ಓಡಿ ವಿಶ್ವ ದಾಖಲೆ ಸೃಷ್ಟಿಸಿದವನು. ಜೊಹಾನ್ಸ್‌ಬರ್ಗ್‌ನಲ್ಲಿ ಹುಟ್ಟಿದ ಈತನಿಗೆ ಕಾಲುಗಳಲ್ಲಿ ಫಿಬುಲಾ ಇಲ್ಲದಿರುವುದರಿಂದ ಎರಡೂ ಕಾಲುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಚಿಕ್ಕ ವಯಸ್ಸಿಗೇ ಎದುರಾಯಿತು.

2007ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಆಸ್ಕರ್ ಅನೇಕ ಬಾರಿ ಸೋಲುಂಡರೂ ಛಲ ಬಿಡದೆ ಮುಂದುವರೆದನು. 2008ರ ಪ್ಯಾರಾಲಿಂಪಿಕ್ಸ್‌ನ 100,200 ಮತ್ತು 400 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡನು. ನಂತರ 2011 ಮತ್ತು 2012ರ ವಿಶ್ವ  ಚಾಂಪಿಯನ್‌ಶಿಪ್‌ನಲ್ಲಿ `ಎ~ ಅರ್ಹತಾಮಟ್ಟದ ಖ್ಯಾತಿ ಕೂಡ ಒಲಿಯಿತು. ಪ್ರಿಟೋರಿಯಾ ವಿಶ್ವವಿದ್ಯಾಲಯದಲ್ಲಿ ಕ್ರೀಡಾ ವಿಜ್ಞಾನ ಅಧ್ಯಯನ ಮಾಡಿದ್ದಾನೆ. ನಮ್ಮಲ್ಲಿರುವ ಕೊರತೆ ನಮ್ಮನ್ನು ಕುಗ್ಗಿಸುವುದಿಲ್ಲ. ಆದರೆ ನಮ್ಮಲ್ಲಿರುವ ಸಾಮರ್ಥ್ಯ ನಮ್ಮನ್ನು ಸಮರ್ಥರನ್ನಾಗಿಸುತ್ತದೆ ಎನ್ನುವ ಆತ್ಮವಿಶ್ವಾಸವೇ ಈತನ ಶಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT