ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಕದಲ್ಲಿ ರಥೋತ್ಸವ!

Last Updated 20 ಸೆಪ್ಟೆಂಬರ್ 2013, 8:28 IST
ಅಕ್ಷರ ಗಾತ್ರ

ಮಹಾಲಿಂಗಪುರ: ಭಕ್ತಿ, ಭಾವ ಹಾಗೂ ಭಾವೈಕ್ಯದ ಸಂಗಮವೆಂದೇ ಬಿಂಬಿಸಲಾಗುವ ಇಲ್ಲಿಯ ಮಹಾ­ಲಿಂಗೇಶ್ವರ ಜಾತ್ರೆಯಲ್ಲಿಯ ರಥ ಸಹಸ್ರ ಸಹಸ್ರ ಭಕ್ತರ ಹರ್ಷೋದ್ಘಾರ­ಗಳ ಮಧ್ಯ ಸಾಗಿತು. ಜಾತ್ರೆಯ ಸಕಲ ಪರಂಪರೆಗಳಿಗೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ರಥದ ಚಾಲನೆಗೆ ಆನುಮತಿ ನೀಡಿದರು. ರಥ ತನ್ನ ಪ್ರಯಾಣವನ್ನು ಆರಂಭಿಸುವ ಕ್ಷಣದಲ್ಲಿ ಹಾಜರಿದ್ದ ಸಾವಿರಾರು ಭಕ್ತರು ಕ್ಷಣದ ಮಹಿಮೆ ಸವಿದರು.

ಲೂಟಿ!: ಸಂಪ್ರದಾಯದಂತೆ ರಥದ ಚಾಲನೆಗೂ ಮುನ್ನ ಶ್ರೀಮಠದ ಪಾದ­ಗಟ್ಟೆಯ ಎದುರು ಹರಿವಾಣ ಕಟ್ಟೆ­ಯನ್ನು ಅಲಂಕೃತವಾಗಿ ನಿರ್ಮಿಸಿ ಅದನ್ನು ಲೂಟಿ ಮಾಡುವ ಕಾರ್ಯಕ್ರಮ ನಡೆಯಿತು.  

ನೂರಾರು ರೈತರು ತಮ್ಮ ಹೊಲದಲ್ಲಿ ಬೆಳೆದ ಗೋವಿನ ಜೋಳ, ಬಾಳೆ, ಕಬ್ಬು ಹಾಗೂ ಇನ್ನಿತರ ಧವಸ ಧಾನ್ಯ­ಗಳನ್ನು ತಂದು ಪಾದಗಟ್ಟೆಯ ಎದುರು ನಿರ್ಮಿಸಿದ ಹರಿವಾಣ ಕಟ್ಟೆಯ ಹಂದರಕ್ಕೆ ತೂಗು ಹಾಕಿ­ದರು. ಮಠಾಧಿಪತಿಗಳು ಮಂಗಳಾ­ರತಿ ಮಾಡಿದ ನಂತರ ಅಲ್ಲಿ ಕಟ್ಟಿದ್ದ ಧವಸ ಧಾನ್ಯಗಳನ್ನು ಜಮಾಯಿಸಿದ್ದ ಸಾವಿರಾರು ಭಕ್ತರು ಮುಗಿಬಿದ್ದು ಲೂಟಿ ಮಾಡಲು ಆರಂಭಿಸಿದರು. ಹೀಗೆ ದೋಚಿ­ಕೊಂಡು ಹೋದ ಧಾನ್ಯ­ಗಳನ್ನು ಮನೆಗೆ ತಂದು ಬೇಯಿಸಿ­ಕೊಂಡು ತಿಂದರೆ ಆ ಮನೆಯಲ್ಲಿ ಎಂದಿಗೂ ಅನ್ನದ ಕೊರತೆ­ಯಾಗುವು­ದಿಲ್ಲ ಎಂಬ ನಂಬಿಕೆ ಇದೆ.

ಪಂಚಕದಲ್ಲೇ ರಥೋತ್ಸವ!: ರಥೋತ್ಸವವು ಶ್ರೀಮಠದಿಂದ ಆರಂಭ­ವಾಗಿ ಬೆಳಗಿನ ಐದು ಗಂಟೆಗೆ ಚನ್ನ­ಗಿರೀಶ್ವರ ದೇವಸ್ಥಾನ ತಲುಪು­ತ್ತದೆ. ಜಾತ್ರೆಗೆ ಸಾಗರದೋಪಾದಿ­ಯಲ್ಲಿ ಜನತೆ ಹರಿದು ಬರುವುದಲ್ಲದೇ ಅಹೋ ರಾತ್ರಿ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಸಾಮಾನ್ಯವಾಗಿ ಪಂಚಕದಲ್ಲಿ ಯಾವ ದೇವತಾ ಕಾರ್ಯ­­ಗಳನ್ನು ಮಾಡದಿರುವ ಸಂಪ್ರದಾ­ಯವಿದ್ದರೂ ಎರಡೂ ರಥ­ಗಳು ಪಂಚಕದಲ್ಲೇ ಸಾಗುವುದು ಇಲ್ಲಿಯ ವಿಶೇಷತೆ. ಇಷ್ಟಾರ್ಥ ಸಿದ್ಧಿ­ಗಾಗಿ ಇಲ್ಲಿಯ ಜನತೆ ರಾತ್ರಿ 12 ಗಂಟೆಯಿಂದಲೇ  ದೀಡ ನಮಸ್ಕಾರ ಹಾಕಲು ಆರಂಭಿಸಿದವರು ಸಂಜೆ 6ರವರೆಗೂ ನಿರಂತರವಾಗಿ ಹಾಕುತ್ತಿ­ರುವ ದೃಶ್ಯ ಕಂಡು ಬಂದಿತು. ಭಾವೈ­ಕ್ಯಕೆ್ಕೆ ಹೆಸರಾದ ಈ ಜಾತ್ರೆ­ಯಲ್ಲಿ ಮುಸ್ಲಿಂ ಜನಾಂಗ­ದವರೂ ದೀಡ ನಮಸ್ಕಾರ ಹಾಕಿದ್ದು ವಿಶೇಷ.

ಜಟಾಭಿಷೇಕದಿಂದ ಜಾತ್ರೆಗೆ ಚಾಲನೆ: ಜಾತ್ರೆಯು ಬುಧವಾರ ಸಾರ್ವಜನಿಕ ಜಟೋತ್ಸವದೊಂದಿಗೆ ಚಾಲನೆಗೊಂಡಿತು. ಜಟೋತ್ಸವದ ಅಭಿಷೇಕದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಶ್ರೀಮಠದ ಪರಂಪರೆಯಂತೆ ಮಹಾ­ಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು ಅಭಿಷೇಕದ ನೇತೃತ್ವ ವಹಿ­ಸಿ­ದ್ದರು. ಮಂಗಳವಾದ್ಯ, ಕರಡಿ ಮಜಲು, ಶಹನಾಯಿಗಳೊಂದಿಗೆ ಪಲ್ಲಕ್ಕಿ ಉತ್ಸವವು ಶ್ರೀಮಠದಿಂದ ನಡುಚೌಕಿ ಮಾರ್ಗವಾಗಿ ಚನ್ನ­ಗಿರೀಶ್ವರ ದೇವಸ್ಥಾನ ತಲುಪಿತು. ಉಚ್ಛಾಯಿ, ನಂದಿಕೋಲು, ಹಾಗೂ ಸಾವಿರಾರು ಭಕ್ತಾದಿಗಳು ಉತ್ಸವ­ದೊಂದಿಗೆ ಹೆಜ್ಜೆ ಹಾಕಿದರು. ನಂತರ ನಡೆದ ಜಟೋತ್ಸವದಲ್ಲಿ ಮಹಿಳೆ­ಯರು, ಮಕ್ಕಳು ಅಲಂಕೃತ­ರಾಗಿ ಭಾಗವಹಿಸಿದ್ದರು.

ರಬಕವಿ, ಬನ­ಹಟ್ಟಿ, ತೇರದಾಳ, ಜಮಖಂಡಿ, ಮುಧೋಳ, ಸಮೀರ­ವಾಡಿ, ಸಂಗಾ­ನಟ್ಟಿ, ಢವಳೇಶ್ವರ ಮುಂತಾದ ಗ್ರಾಮ­ಗಳಿಂದ ಭಕ್ತರು ಆಗಮಿಸಿ ಜಾತ್ರೆಗೆ ಕಳೆ ತಂದರು. ಜಟೋತ್ಸವ ನಡೆದ ಚನ್ನ­ಗಿರೀಶ್ವರ ದೇವಾಲಯ ಜನ ಜಂಗುಳಿ­ಯಿಂದ ತುಂಬಿತ್ತು. ಮಹಾ­ಲಿಂಗೇಶ್ವರ ಮಠ­ದಲ್ಲಿ ಪ್ರಸಾದದ ವ್ಯವಸ್ಥೆ ಇತ್ತು.

ನಿಜವಾದ ನಂಬಿಕೆ: ಪ್ರತಿ ವರ್ಷ ಜಾತ್ರೆಯಂದು ಒಂದೆ­ರಡು ನಿಮಿಷ­ವಾದರೂ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಜಟೋತ್ಸ­ವದ ಆರಂಭಕ್ಕೆ ಮಳೆ ಸುರಿದು ಜನರ ನಂಬಿಕೆ ಇನ್ನಷ್ಟು ಬಲವಾಯಿತು.

ಸೂಕ್ತ ಬಂದೋಬಸ್ತ್‌:  ಜಾತ್ರೆ­ಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಧೋಳ ಸಿಪಿಐ ಎಚ್.ಡಿ. ಮುದರೆಡ್ಡಿ, ಠಾಣಾಧಿಕಾರಿ ಎಚ್.ಆರ್. ಪಾಟೀಲ ಸೂಕ್ತ ಬಂದೋಬಸ್ತ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT