ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ರೈತ ಸಮಾವೇಶ 17ಕ್ಕೆ

ಕೂಡಲಸಂಗಮ ಪೀಠದ ಐದನೇ ವಾರ್ಷಿಕ ಪೀಠಾರೋಹಣ ಸ್ಮರಣೆ
Last Updated 4 ಫೆಬ್ರುವರಿ 2013, 6:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಂಚಮಸಾಲಿ ಸಮಾಜವನ್ನು 2ಎ ವರ್ಗಕ್ಕೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಇದೇ 17ರಂದು ನಗರದಲ್ಲಿ ಆಯೋಜಿಸಿರುವ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಐದನೇ ವಾರ್ಷಿಕ ಪೀಠಾರೋಹಣ ಸಮಾರಂಭವನ್ನು ವೇದಿಕೆಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಯಿತು.

ಸಮಾವೇಶದ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ನಡೆದ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಅಮರಗೋಳದ ಎಪಿಎಂಸಿ ಹಿಂಭಾಗದ ಮೈದಾನದಲ್ಲಿ ನಡೆಯಲಿರುವ ಪೀಠಾರೋಹಣ ಸಮಾರಂಭವನ್ನು ರೈತ ಸಮಾವೇಶವಾಗಿ ಆಚರಿಸಿ ಎಲ್ಲಾ ಪಕ್ಷಗಳ ಕೇಂದ್ರ ಹಾಗೂ ರಾಜ್ಯಮಟ್ಟದ ನಾಯಕರು, ವಿವಿಧ ಸಮುದಾಯಗಳ ಮಠಾಧೀಶರು, ಧಾರ್ಮಿಕ ನಾಯಕರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.

ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಒಂದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲು, ಸಮಾವೇಶದ ಯಶಸ್ಸಿಗೆ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ರಚನೆಗೆ ಸಭೆ ನಿರ್ಧರಿಸಿತು. ಆಹ್ವಾನಿತರ ಪಟ್ಟಿ, ಸಮಿತಿಗಳನ್ನು ಇದೇ 6ರಂದು ನಡೆಯಲಿರುವ ಮತ್ತೊಂದು ಸುತ್ತಿನ ಸಿದ್ಧತಾ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತಿದೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, `ಮಾಜಿ ಸಚಿವ ಸಿ.ಎಂ.ಉದಾಸಿ ನೇತೃತ್ವದ ಸಂಪುಟ ಉಪಸಮಿತಿ ಈಗಾಗಲೇ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪಂಚಮಸಾಲಿ ಸಮುದಾಯ ಸೇರಿದಂತೆ ಹಲವು ಸಮುದಾಯ ಗಳನ್ನು ಪ್ರವರ್ಗ 2ಎ ವರ್ಗಕ್ಕೆ ಸೇರಿಸಲು ಶಿಫಾರಸು ಮಾಡಿದೆ. ಅಂತಿಮ ಆದೇಶ ಕೈಗೊಳ್ಳಲು ಅಗತ್ಯ ಪ್ರಕ್ರಿಯೆಯನ್ನು ತುರ್ತಾಗಿ ಕೈಗೊಳ್ಳುವಂತೆ ಸರ್ಕಾರದ ಮೇಲೆ ಸಮಾವೇಶದ ಮೂಲಕ ಒತ್ತಡ ತರುವ ಕೆಲಸ ಮಾಡೋಣ' ಎಂದು ಸಲಹೆ ನೀಡಿದರು.

`ಪೀಠಾರೋಹಣ ಎಂದರೆ ಸಾಮಾನ್ಯವಾಗಿ ಅಡ್ಡಪಲ್ಲಕ್ಕಿ ಮಹೋತ್ಸವ ಮಾಡುತ್ತಾರೆ, ಚಿನ್ನಾಭರಣದ ಕಾಣಿಕೆ ನೀಡುತ್ತಾರೆ. ಅದರ ಬದಲಿಗೆ ರೈತರ ಸಮಾವೇಶ ಸಂಘಟಿಸುವಂತೆ' ಸ್ವಾಮಿಜಿ ಮನವಿ ಮಾಡಿದರು.

ಇಲ್ಲಿನ ಕಾನೂನು ವಿಶ್ವವಿದ್ಯಾಲಯಕ್ಕೆ ರಾಜ್ಯದ ಪ್ರಥಮ ಕಾನೂನು ಸಚಿವ ಸರ್.ಸಿದ್ದಪ್ಪ ಕಂಬಳಿ ಅವರ ಹೆಸರು ಇಡುವಂತೆ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲು, ರೈತರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣ, ರಾಣಿ ಚನ್ನಮ್ಮನ ಪುಣ್ಯಸ್ಮರಣೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜದ ಗಣ್ಯರನ್ನು ಗುರುತಿಸಿ ಗೌರವಿಸಲು ತೀರ್ಮಾನಿಸಲಾಯಿತು.

ಇದೇ 12ರಂದು ಕೂಡಲಸಂಗಮದ ಪಂಚಮ ಸಾಲಿ ಪೀಠಕ್ಕೆ ಐದು ವರ್ಷ ತುಂಬುತ್ತದೆ. ಅದೇ ದಿನ ವಿಜಾಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗುವುದರಿಂದ ಸಮಾವೇಶ ವನ್ನು 17ರಂದು ನಡೆಸಲು ನಿರ್ಧರಿಸಲಾಯಿತು.

ಮುಖಂಡರಾದ ನೀಲಕಂಠ ಅಸೂಟಿ, ರಾಜ ಶೇಖರ ಮೆಣಸಿನಕಾಯಿ, ಶಿವಾನಂದ ಬೆಲ್ಲದ, ಪ್ರಕಾಶ ಲಿಂಬಿಕಾಯಿ, ಕಲ್ಲಪ್ಪಣ್ಣ ಯಲಿವಾಳ, ಶಿವಣ್ಣ ಹಳಿಯಾಳ, ಮಲ್ಲಿಕಾರ್ಜುನ ಉಳಿಕೇರಿ, ದೊಡ್ಡೇಶಪ್ಪ ನಲವಡಿ, ನಂದಕುಮಾರ ಪಾಟೀಲ, ಶರಣಪ್ಪ,  ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಪ್ಪ ಕೊಂಬಳಿ, ಗದಗ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಸಪ್ಪ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ದಾನಣ್ಣವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT