ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಿ: ಮಹಿಳೆಯರ ಸಂಭ್ರಮದ ಹಬ್ಬ

Last Updated 23 ಜುಲೈ 2012, 7:30 IST
ಅಕ್ಷರ ಗಾತ್ರ

ಬಸವಕಲ್ಯಾಣ:  ಶ್ರಾವಣ ತಿಂಗಳು ಹಬ್ಬಗಳ ಮಾಸ. ಇಡೀ ತಿಂಗಳು ಮನೆ, ಮಠ, ಮಂದಿರಗಳಲ್ಲಿ ದೇವರ ಪೂಜೆ, ಭಜನೆ, ಉಪವಾಸ ವ್ರತಾಚರಣೆ ನಡೆಯುತ್ತದೆ. ಈ ಮಾಸದಲ್ಲಿ ಪ್ರಥಮವಾಗಿ ಅಂದರೆ ಐದನೇ ದಿನ ಪಂಚಮಿ ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ಹಾವಿನ ಹುತ್ತಕ್ಕೆ ಅಥವಾ ನಾಗ ಶಿಲ್ಪಕ್ಕೆ ಪೂಜೆ ಸಲ್ಲಿಸುತ್ತಾರೆ. ಕೆಲವೆಡೆ ಜೀವಂತ ಹಾವುಗಳನ್ನು ಹಿಡಿದು ಪೂಜೆ ಸಲ್ಲಿಸುವ ಪರಿಪಾಠವೂ ಇದೆ.

ಭಾರತೀಯರು ನಿಸರ್ಗದ ಆರಾಧಕರು. ದಸರಾಕ್ಕೆ ಬನ್ನಿ ಮರದ ಪೂಜೆ, ಕಾರಹುಣ್ಣಿಮೆಗೆ ಮತ್ತು ಹೋಳಾಕ್ಕೆ ಎತ್ತುಗಳ ಪೂಜೆ, ದೀಪಾವಳಿಗೆ ಗೋವುಗಳ ಪೂಜೆ, ವಟಸಾವಿತ್ರಿ ಪೂರ್ಣಿಮೆಗೆ ವಟವೃಕ್ಷದ ಪೂಜೆ ನಡೆಯುತ್ತದೆ.

ಆದರೆ ನಾಗರ ಪಂಚಮಿ ಇವುಗಳಲ್ಲಿ ವಿಶಿಷ್ಟವಾದದ್ದು. ನಾಡಿಗೆ ದೊಡ್ಡದು ಎನಿಸಿಕೊಳ್ಳುವ ಹಬ್ಬ. ಶ್ರೀಕೃಷ್ಣನು ಕಾಳಿಂಗಸರ್ಪವನ್ನು ಮಣಿಸಿ ವಿಜಯಸಾಧಿಸಿದ ದಿನದ ಪ್ರತೀಕವಾಗಿಯೂ ಇದನ್ನು ಅಚರಿಸಲಾಗುತ್ತದೆ.

ನಾಗದೇವರ ಆರಾಧನೆ ಪ್ರಾಚೀನವಾದದ್ದು, ಬೌದ್ಧ, ಜೈನ್ ಧರ್ಮಗಳಲ್ಲಿಯೂ ನಾಗಪೂಜೆಗೆ ಮಹತ್ವವಿದೆ. ಮಳೆಗಾಲದ ತಂಪು ವಾತಾವರಣದಲ್ಲಿ ಹಾವುಗಳು ಹೆಚ್ಚಾಗಿ ಓಡಾಡುತ್ತವೆ.

ಅವು ಯಾರಿಗೂ ಕಚ್ಚಬಾರದು ಎಂದು ಅವುಗಳನ್ನು ಪೂಜೆಮಾಡುವ ಸಂಪ್ರದಾಯ ಬೆಳೆದಿದೆ ಎಂದೂ ಹೇಳಲಾಗುತ್ತದೆ.ಪಂಚಮಿಯ ದಿನ ಅನ್ನ, ಹೋಳಿಗೆ, ಪಾಯಸ ಮಾಡಿ ಹಾವಿನ ಹುತ್ತಕ್ಕೆ ಹಾಲೆರೆದು ಕುಂಕುಮ, ಅರಿಶಿಣ ಹಚ್ಚಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಗುತ್ತದೆ.

ನವವಧುಗಳು ತಪ್ಪದೇ ತವರು ಮನೆಗೆ ಹೋಗಿ ತವರಿನ ಮತ್ತು ಗಂಡನಮನೆಯವರ ಹಿತ ಬಯಸಿ ನಾಗಪೂಜೆ ಸಲ್ಲಿಸುತ್ತಾರೆ. ಜೋಳ ಮತ್ತು ಅಕ್ಕಿಯ ಅಳ್ಳು ಹುರಿದು ಹಂಚುವ ಸಂಪ್ರದಾಯವೂ ಇದೆ. ಸಂಜೆ ಮಹಿಳೆಯರೆಲ್ಲರೂ ಕೂಡಿ ಜೋಕಾಲಿ ಆಡುತ್ತಾರೆ. ಭುಲಾಯಿ ಹಾಕಿ ಪದ ಹಾಡುತ್ತಾರೆ.

ಇದು ಅಣ್ಣ ತಂಗಿಯರ ಮಧ್ಯದ ಸಂಬಂಧ ವೃದ್ಧಿಸುವ ಹಬ್ಬವೂ ಆಗಿದೆ ಎಂದು ಜಾನಪದಗೀತೆಗಳು ಹೇಳುತ್ತವೆ. ಅಕ್ಕ ತಂಗಿಯರು ತವರಿಗೆ ಹೋದೊಡನೆ ಹೊಲಕ್ಕೆ ಹೋಗಿ ಮಳೆ, ಬೆಳೆ ಸರಿಯಾಗಿದೆಯೋ ಎಂಬುದನ್ನು ನೋಡಿ ಎಲ್ಲರೂ ಸಂತಸದಿಂದಿದ್ದರೆ ಹಿರಿಹಿರಿ ಹಿಗ್ಗುತ್ತಾರೆ.
 
ಒಂದುವೇಳೆ ಬರಗಾಲದ ಛಾಯೆ ಆವರಿಸಿದರೆ ಮಮ್ಮಲ ಮರಗುತ್ತಾರೆ. ಮುಂದೆ ದೀಪಾವಳಿಗೆ ಅಣ್ಣನ ಮನೆ ತುಂಬುವಂತಾಗಲಿ, ಸಿರಿ ಸಮೃದ್ಧಿ ಹೆಚ್ಚಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಅಲ್ಲಿಂದ ಬಂದು ತಮ್ಮ ಪತಿರಾಯನಿಗೆ ತವರಿನ ವಾರ್ತೆ ತಿಳಿಸುತ್ತಾರೆ ಎಂಬುದು ಜಾನಪದ ಹಾಡುಗಳಲ್ಲಿ ಚಿತ್ರಿತವಾಗಿದೆ.

ಈ ಸಲ ಮಳೆರಾಯ ಸ್ವಲ್ಪ ತಡವಾಗಿಯೇ ಆಗಮಿಸಿದ್ದರಿಂದ ಕೆಲವೆಡೆ ಬಿತ್ತನೆ ಆಗಿಲ್ಲ. ಆದ್ದರಿಂದ ಪಂಚಮಿ ಹಬ್ಬದ ಸಂಭ್ರಮ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT