ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಮೃತ

Last Updated 17 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಹತ್ತು ಕಥೆಗಳನ್ನು ಒಂದೇ ನೇಯ್ಗೆಯಲ್ಲಿ ಹೆಣೆದಂಥ ‘ದಸ್ ಕಹಾನಿಯಾ’ ಎಂಬ ಹಿಂದಿ ಸಿನಿಮಾ ಬಂದಿತ್ತು. ಆ ಧಾಟಿ ಕನ್ನಡದಲ್ಲೂ ಹೊಸತೇನಲ್ಲ. ಪುಟ್ಟಣ್ಣ ಕಣಗಾಲ್ ‘ಕಥಾ ಸಂಗಮ’ ನಿರ್ದೇಶಿಸಲಿಲ್ಲವೇ? ‘ಐದೊಂದ್ಲ ಐದು’ ಎಂಬ ಚಿತ್ರದಲ್ಲೂ ಇತ್ತೀಚೆಗೆ ಇಂಥ ಪ್ರಯತ್ನ ನಡೆದಿತ್ತು. ನಿರ್ದೇಶಕ ಟಿ.ಎನ್.ನಾಗೇಶ್ ಆರು ವಿಷಯಗಳನ್ನು ಇಟ್ಟುಕೊಂಡು ಒಂದೇ ಸಿನಿಮಾ ಮಾಡಹೊರಟಿದ್ದಾರೆ. ಹಾಲು, ಬಾಳೆಹಣ್ಣು, ಜೇನು, ಸಕ್ಕರೆ, ಮೊಸರಿನಿಂದ ದೇವರಿಗೆ ಪಂಚಾಮೃತಾಭಿಷೇಕ ಮಾಡುತ್ತಾರಲ್ಲ; ಹಾಗೆಯೇ ತಮ್ಮ ಸಿನಿಮಾ ಎಂದ ನಾಗೇಶ್, ಅದನ್ನೇ ಚಿತ್ರಕ್ಕೆ ಶೀರ್ಷಿಕೆಯಾಗಿಟ್ಟಿದ್ದಾರೆ. ಅವರ ‘ಪಂಚಾಮೃತ’ದಲ್ಲಿರುವುದು ಆರು ಕಥೆಗಳು.

ಆರು ಕಥೆಗಳು ಒಂದಕ್ಕೊಂದು ಬೆಸೆದುಕೊಂಡಿಲ್ಲದಿದ್ದರೂ ಪ್ರೇಕ್ಷಕರ ಜೊತೆ ಅವು ಸಂವಾದಕ್ಕಿಳಿಯುತ್ತವೆ. ದೀಪಾವಳಿ ಎಲ್ಲಾ ಕಥೆಗಳಲ್ಲೂ ಇರುತ್ತದೆ. ಅದೇ ತಮ್ಮ ಚಿತ್ರಕಥೆಯ ವಿಶೇಷ ಎಂಬುದು ನಾಗೇಶ್ ನಂಬಿಕೆ. ತಮ್ಮ ಚಿತ್ರದ ಎಲ್ಲಾ ಕಲಾವಿದರನ್ನು ನಾಗೇಶ್ ಔಪಚಾರಿಕವಾಗಿ ಪರಿಚಯಿಸಿದರು. ಮೇಲುಕೋಟೆ ಶಾಸಕ ಪುಟ್ಟರಾಜು, ಆರ್.ವಿ.ದೇವರಾಜ್ ಅವರ ಪುತ್ರ ಯುವರಾಜ್, ಕರಕುಶಲ ವಸ್ತುಗಳ ಅಭಿವೃದ್ಧಿ ಮಂಡಲಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ದೀಪ ಬೆಳಗುವ ಮೂಲಕ ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದರು.

ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾದ ಗವಿಪುರಂ ಮರಿಸ್ವಾಮಿ ಆರು ಕಥೆಗಳ ಈ ಅಪರೂಪದ ಪ್ರಯತ್ನಕ್ಕೆ ಒಂದೂವರೆ ಕೋಟಿ ರೂಪಾಯಿ ಬಜೆಟ್ ವಿನಿಯೋಗಿಸಲಿದ್ದಾರೆ. ಶ್ರೀನಗರ ಕಿಟ್ಟಿ, ರಘು ಮುಖರ್ಜಿ, ಪೂಜಾ ಗಾಂಧಿ, ರಾಧಿಕಾ ಗಾಂಧಿ, ನೀತು, ರವಿಶಂಕರ್, ದಿಲೀಪ್ ರಾಜ್, ರಮ್ಯಾ ಬಾರ್ನಾ, ಅಚ್ಯುತಕುಮಾರ್, ತಾರಾ, ಯಜ್ಞಾ ಶೆಟ್ಟಿ, ಸುಪ್ರೀತಾ, ದೇವರಾಜ್ ಹೀಗೆ ದೊಡ್ಡ ತಾರಾಬಳಗದ ಚಿತ್ರವಿದು. ಇವರಲ್ಲಿ ಅನೇಕರು ಮುಹೂರ್ತದ ಸಂಭ್ರಮದ ಕ್ಷಣಗಳಲ್ಲಿ ಭಾಗಿಯಾದರು.

ಎ.ಸಿ.ಮಹೇಂದ್ರನ್ ಚಿತ್ರದ ಕ್ಯಾಮೆರಾಮನ್. ಕ್ರಿಶ್ ಜೋಶಿ ಸಂಭಾಷಣೆ ಬರೆದಿದ್ದು, ಆ್ಯಷ್ಲೆ-ಅಭಿಲಾಶ್ ನಾಲ್ಕು ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ನಾಗೇಂದ್ರ ಪ್ರಸಾದ್, ಕವಿರಾಜ್, ಅರ್ಜುನ್ ಗೀತಸಾಹಿತ್ಯ ಬರೆದಿದ್ದು, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT